ಆರ್ಥಿಕತೆಯ ನೆಲೆಗಟ್ಟಿನಲ್ಲಿ ನೋಡುವುದಾದರೆ ಸ್ವಾತಂತ್ರದ ನಂತರ ಭಾರತವು ಇಂದು ಅತ್ಯಂತ ದೊಡ್ಡ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. 2008-09 ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಅತ್ಯಂತ ದೊಡ್ಡಮಟ್ಟದ ಆಘಾತ ನೀಡಿತ್ತು , ಅದಾಗ್ಯೂ ನಮ್ಮ ದೇಶದ ಕಾರ್ಮಿಕರಿಗೆ ಕೆಲಸವಿತ್ತು. ನಮ್ಮ ಸಂಸ್ಥೆಗಳ ಬೆಳವಣಿಗೆ ಕುಂಠಿತಗೊಂಡಿರಲಿಲ್ಲ, ನಮ್ಮ ಹಣಕಾಸು ವ್ಯವಸ್ಥೆ ಉತ್ತಮವಾಗಿತ್ತು. ನಮ್ಮ ಸರಕಾರದ ಹಣಕಾಸು ಸ್ಥಿರವಾಗಿತ್ತು. ಕರೋನಾ ಸೋಂಕಿನ ಹೋರಾಟದ ಈ ಸಂಧರ್ಭದಲ್ಲಿ ಇದ್ಯಾವುದು ಹೀಗಿಲ್ಲ. ಆದರೂ ನಿರಾಶೆಯಾಗಬೇಕಂದಿಲ್ಲ. ಪ್ರಬುದ್ಧ ನಿರ್ಧಾರಗಳಿಂದ ನಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಸೋಂಕನ್ನು ಹಿಮ್ಮೆಟ್ಟಿಸಬಹುದು. ಭರವಸೆಯ ನಾಳೆಗಳಿಗೆ ಇನ್ನೂ ಅವಕಾಶವಿದೆ.
ಕಠಿಣ ಸಂಪರ್ಕ ತಡೆ, ಸಾಮಾಜಿಕ ಅಂತರ ಮುಂತಾದ ಕ್ರಮಗಳ ಮೂಲಕ ಸೋಂಕು ಹರಡದಂತೆ ತಡೆಯುವುದು ತಕ್ಷಣದ ಆದ್ಯತೆಯಾಗಿದೆ. ಪರಿಸ್ಥಿತಿಯ ಸುಧಾರಣೆಗೆ 21 ದಿನಗಳ ಲಾಕ್ಡೌನ್ ಮೊದಲ ಹೆಜ್ಹೆ. ಸಾರ್ವಜನಿ, ಖಾಸಗಿ, ರಕ್ಷಣಾ ಮತ್ತು ನಿವೃತ್ತರಾಗಿರುವವರು ಸೇರಿದಂತೆ ಲಭ್ಯವಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸರಕಾರ ಸರಿಯಾಗಿ ಬಳಸಿಕೊಳ್ಳುತ್ತಿದೆ. ಸೌಲಭ್ಯ ಕೊರತೆಯಿರುವ ಪ್ರದೇಶಗಳಲ್ಲಿ ಸಹಾಯವಾಗುವಂತೆ ಮೊಬೈಲ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದು ಸಂಧಿಗ್ಧ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ತಿಳಿಯಾಗಿಸುತ್ತದೆ.
ಲಾಕ್ಡೌನ್ ನಂತರವೂ ವೈರಸನ್ನು ಸಂಪೂರ್ಣ ಸೋಲಿಸಲು ಸಾಧ್ಯವಾಗದಿದ್ದರೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕೆಂದು ನಾವು ಈಗಲೇ ಯೋಜನೆ ಹಾಕಬೇಕು. ದೇಶವನ್ನು ದೀರ್ಘ ಕಾಲದಲ್ಲಿ ಲಾಕ್ಡೌನಲ್ಲಿಡುವುದು ಇಡೀ ದೇಶಕ್ಕೆ ಅಪಾಯಕಾರಿಯಾಗಿದೆ. ಸೋಂಕು ಕಡಿಮೆ ಪ್ರಮಾಣದಲ್ಲಿ ನಡೆಸುತ್ತಿರುವ ಕೆಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕಯೊಂದಿಗೆ ದಿನನಿತ್ಯದ ಕೆಲವು ಕಾರ್ಯ ಚಟುವಟಿಕೆಗಳನ್ನು ಪುನರಾರಂಭಿಸಬೇಕು. ಸೋಂಕಿನ ಅಂಕಿ ಅಂಶ ಪರೀಕ್ಷಿಸಿ, ಕಾರ್ಮಿಕರಿಗೆ ಹೆಚ್ಚಿನ ಸುರಕ್ಷತೆಯ ಕ್ರಮಗಳು, ಅವರ ದೇಹದ ತಾಪಮಾನ ತಪಾಸಣೆ, ಜನಸಂದಣಿಯಿಲ್ಲದ ಸಾರಿಗೆ, ವೈಯಕ್ತಿಕ ರಕ್ಷಣಾ ಸಾಧನಗಳು, ಕೆಲಸ ನಿರ್ವಹಿಸುವಾಗ ಸಾಕಷ್ಟು ದೂರವಿರುವುದು ಮುಂತಾದ ಜಾಗೃತಿಗಳನ್ನು ಕೈಗೊಂಡು ಚಟುವಟಿಕೆಗಳನ್ನು ಪುನರಾರಂಭಿಸಬಹುದು.
ತಮ್ಮ ಕೆಲಸದ ಸಂಸ್ಥೆಯಿಂದ ಹತ್ತಿರವಿರುವ ಹಾಸ್ಟೆಲ್ ಮುಂತಾದವುಗಳಲ್ಲಿ ಸಾಕಷ್ಟು ತಯಾರಿಯೊಂದಿಗೆ ನಿಲ್ಲುವ ಆರೋಗ್ಯವಂತ ಯುವಜನಾಂಗವು ಕೆಲಸಗಳನ್ನು ಪುನರಾರಂಭಿಸಲು ಸೂಕ್ತವಾದ ಕಾರ್ಮಿಕರಾಗಬಹುದು. ಬೆರಳೆಣಿಕೆಯ ಕಾರ್ಮಿಕರಿಗಷ್ಟೇ ಹೀಗೆ ಸಂಪೂರ್ಣ ಸುರಕ್ಷಾ ಕ್ರಮದೊಂದಿಗೆ ಕೆಲಸ ಪುನರಾರಂಭಿಸಲು ಸಾಧ್ಯವಾಗಬಹುದು.ಆದರೂ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಪೂರೈಕೆ ಸರಪಳಿಯನ್ನು ಪುನರಾರಂಭಿಸಲು ಇದು ದೊಡ್ಡ ಸಂಖ್ಯೆಯೇ ಆಗಿರುತ್ತದೆ. ತ್ವರಿತವಾಗಿ ಅದಕ್ಕೆ ಬೇಕಾದಂತಹ ಯೋಜನೆಗಳನ್ನು ಸಂಸ್ಥೆಯ ಆಡಳಿತ ಸಂಸ್ಥೆಗಳು ಈಗಲೇ ಹಾಕಿಕೊಳ್ಳಬೇಕು.
ಇದರ ನಡುವೆ, ಅಗತ್ಯವಾಗಿಯೂ ಭಾರತ ಸಂಬಳರಹಿತ ಕೆಳ, ಮಧ್ಯಮ ಹಾಗೂ ಬಡ ವರ್ಗದವರ ಬಗ್ಗೆ ಕಾಳಜಿ ವಹಿಸಬೇಕು. ಮನೆಗಳಿಗೆ ನೇರವಾಗಿ ಸಂಪರ್ಕಿಸುವುದರ ಮೂಲಕ ಎಲ್ಲರಿಗೂ ಅಲ್ಲವಾದರೂ ಹೆಚ್ಚಿನ ಜನರಿಗೆ ಅಗತ್ಯತೆಗಳನ್ನು ಪೂರೈಸಬಹುದು. ಸಣ್ಣ ಪ್ರಮಾಣದ ವರ್ಗಾವಣೆಗಳಿಂದ ಎಲ್ಲಾ ಮನೆಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಒಟ್ಟಾಗಿ ನಿಗಾ ವಹಿಸಬೇಕು.
ನಮ್ಮ ಸೀಮಿತ ಹಣಕಾಸಿನ ವ್ಯವಸ್ಥೆ ಚಿಂತಾಜನಕವಾಗಿದ್ದರೂ ಅಗತ್ಯವಿರುವವರಿಗೆ ಖರ್ಚುಮಾಡಲು ಸಾಕಷ್ಟು ಪ್ರಯತ್ನಿಸಬೇಕು. ನಮ್ಮ ಬಳಿಯಿರುವ ಸಾಕಷ್ಟು ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರಿಂದ ನಮ್ಮ ದೇಶವನ್ನು ಹೆಚ್ಚು ಮಾನವೀಯ ದೇಶವನ್ನಾಗಿ ಮಾಡಬಹುದು. ಇದು ಕೂಡ ವೈರಸ್ಸಿನ ವಿರುದ್ಧದ ಹೋರಾಟದ ಭಾಗವೇ ಆಗಿರುತ್ತದೆ. ಹಾಗೆಂದು ಇದು ನಮ್ಮ ಬಜೆಟಿನ ನಿರ್ಲಕ್ಷವಾಗಬೇಕಂದಲ್ಲ, ವಿಶೇಷವಾಗಿ ಈ ವರ್ಷವೂ ನಮ್ಮ ಆದಾಯದ ಮೇಲೆ ತೀವ್ರವಾದ ಪರಿಣಾಮ ಬೀರಬಹುದು. ಅಮೇರಿಕಾ, ಯುರೋಪಿಗಿಂತ ಭಿನ್ನವಿಲ್ಲದೆ ನಾವೂ ನಮ್ಮ 10% ಜಿಡಿಪಿಯನ್ನು ಖರ್ಚು ಮಾಡಬಹುದು.
ನಾವು ಈಗಾಗಲೇ ತೀವ್ರ ಆರ್ಥಿಕ ಮುಗ್ಗಟ್ಟನ್ನು ಪ್ರವೇಶಿಸಿದ್ದೇವೆ. ಹಾಗೂ ನಾವು ಹಿಂದಿಗಿಂತ ಹೆಚ್ಚು ಖರ್ಚು ಮಾಡಲೇಬೇಕಾಗುತ್ತದೆ. ಕೆಳಮುಖವಾಗುತ್ತಿರುವ ರೇಟಿಂಗ್ಗಳಿಂದ ಕುಸಿಯುತ್ತಿರುವ ಹೂಡಿಕೆದಾರರ ಆತ್ಮವಿಶ್ವಾಸವು ವಿನಿಮಯ ದರ ಕುಸಿಯಲೂ ಕಾರಣವಾಗುತ್ತಿದೆ ಮುಂದೆ ಇದು ಹೆಚ್ಚಳವಾಗಬಹುದು. ಈ ಪರಿಸ್ಥಿತಿಯಲ್ಲಿ ನಮ್ಮ ಹಣಕಾಸು ಸಂಸ್ಥೆಗಳಿಗೆ ಸಾಕಷ್ಟು ನಷ್ಟ ಎದುರಾಗಬಹುದು. ಹಾಗಾಗಿ ಅಗತ್ಯತೆಗಳ ನಿರ್ವಹಣೆಯಲ್ಲಿ ಕಡಿಮೆ ಖರ್ಚಾಗುವಂತೆ ಯೋಜಿಸಲು ನಾವು ಈಗಲೇ ಕಾರ್ಯಪೃವೃತ್ತರಾಗಬೇಕು.ಅದೇ ಸಮಯದಲ್ಲಿ ಹೂಡಿಕೆದಾರಿಗೆ ಸ್ಥೈರ್ಯ ತುಂಬಲು, ಹಣಕಾಸು ನಿಖರತೆಗೆ ಮರಳಲು ಸರಕಾರವು ತನ್ನ ಬದ್ಧತೆಯನ್ನು ವ್ಯಕ್ತಪಡಿಸಬೇಕು.NK Singh ಸಮಿತಿಯು ಸೂಚಿಸಿದಂತೆ ಸ್ವತಂತ್ರ ಹಣಕಾಸಿನ ಮಂಡಳಿಯ ಸ್ಥಾಪನೆಯನ್ನು ಅಂಗೀಕರಿಸುವ ಮೂಲಕ ಮಧ್ಯಮ ಅವಧಿಯ ಸಾಲಗಳನ್ನು ಉದ್ದೇಶಿಸಬಹುದು.
ಕಳೆದ ಕೆಲವು ವರ್ಷಗಳಿಂದ ಅನೇಕ ಸಣ್ಣ ಹಾಗೂ ಮಧ್ಯಮ ಉದ್ಯಮಗಳು ನಷ್ಟದಲ್ಲಿದೆ. ಅವುಗಳಿಗೆ ಉಳಿಯಲು ಅಗತ್ಯವಿರುವ ಸಂಪನ್ಮೂಲಗಳು ಇಲ್ಲದಿರಬಹುದು. ನಮ್ಮ ಸೀಮಿತ ಹಣಕಾಸಿನ ಸಂಪನ್ಮೂಲಗಳನ್ನು ಗಮನದಲ್ಲಿಟ್ಟುಕೊಂಡು, ನಮಗೆ ಎಲ್ಲವನ್ನೂ ಮೇಲೆತ್ತಲು ಸಾಧ್ಯವಿಲ್ಲ. ಕೆಲವು ಸಣ್ಣ ಗೃಹಕೈಗಾರಿಕೆಗಳಿಗೆ ಸಹಾಯ ಮಾಡಬಹುದು. ದೊಡ್ಡ ಮಾನವ ಸಂಪನ್ಮೂಲ ಇರುವ ಸಂಸ್ಥೆಗಳಿಗೆ ಸಹಾಯ ಹಸ್ತ ಚಾಚುವುದರಿಂದ ದೊಡ್ಡ ಸಂಖ್ಯೆಯ ಜನರಿಗೆ ಅನುಕೂಲವಾಗುತ್ತದೆ. ಸಣ್ಣ-ಮಧ್ಯಮ ಉದ್ಯಮ(SME)ಗಳಿಗೆ ಅನುಕೂಲವಾಗುವಂತೆ SIDBI ಬ್ಯಾಂಕುಗಳಿಗೆ ತನ್ನ ನಿಯಮಗಳನ್ನು ಖಾತರಿಯನ್ನು ನೀಡಬಹುದು.ಆದರೆ ಬ್ಯಾಂಕುಗಳು ಹೆಚ್ಚಿನ ಸಾಲ ಹೊಂದಲು ಬಯಸುವುದಿಲ್ಲ. SME(small &medium sized enterprises)ಗಳಿಂದ ಹಿಂದಿನ ವರ್ಷಗಳಲ್ಲಿ ಸರಕಾರಗಳು ತೆಗದಿರಿಸಿದ ಹೆಚ್ಚುವರಿ ಆದಾಯ ತೆರಿಗೆಗಳಿಂದ; ಹೆಚ್ಚಳವಾಗುತ್ತಿರುವ ಬ್ಯಾಂಕ್ ಸಾಲಗಳನ್ನು ಮರುಪಾವತಿಸುವುದಾಗಿ ಸರಕಾರ ಹೊಣೆಹೊತ್ತುಕೊಳ್ಳಬೇಕು.ಸರಕಾರಿ ಬೊಕ್ಕಸಕ್ಕೆ ಭವಿಷ್ಯದಲ್ಲಿ SME ಗಳು ಕೊಡಬಹುದಾದ ಕೊಡುಗೆಗಳನ್ನು ಗುರುತಿಸಿದಂತಾಗುತ್ತದೆ.
ತಮ್ಮ ಸಣ್ಣ ಪೂರೈಕೆದಾರರಿಗೆ ಬಂಡವಾಳ ಹೂಡಲು ದೊಡ್ಡ ಉದ್ಯಮಗಳು ಕೂಡ ಒಂದು ಮಾರ್ಗವಾಗಿದೆ. ಅವರು ಬಾಂಡ್ ಮಾರುಕಟ್ಟೆಗಳಲ್ಲಿ ಸಹಜವಾಗಿ ಬಂಡವಾಳವನ್ನು ಕ್ರೂಢೀಕರಿಸಿ ಅದನ್ನು ಹಂಚಬಹುದು. ದುರದೃಷ್ಟವಶಾತ್, ಬಂಡವಾಳಶಾಹಿ ಬಾಂಡ್ ಮಾರುಕಟ್ಟೆ ಇಂದಿನ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸುವುದಿಲ್ಲ. ಬ್ಯಾಂಕು, ವಿಮೆ ಕಂಪೆನಿಗಳು ಮತ್ತು ಬಾಂಡ್ ಮ್ಯೂಚ್ಯುಯಲ್ ಫಂಡ್ ಗಳಿಗೆ ಹೂಡಿಕೆ ದರ್ಜೆಯ ಬಾಂಡ್ಗಳ ವಿತರಣೆ,ಹಾಗೂ RBI ಅದರ ದೊಡ್ಡಮಟ್ಟದ ಬಾಂಡಿಗೆ ಸಾಲ ನೀಡಲು ಒಪ್ಪುವುದರಿಂದ ಅದರ ದಾರಿ ಸರಾಗವಾಗುತ್ತದೆ. ಈ ವ್ಯವಹಾರವನ್ನು RBI ವಹಿಸಿಕೊಳ್ಳಲು RBI ಕಾಯ್ದೆ ಬದಲಾಯಿಸಬೇಕು. ಸಾಲದ ಅಪಾಯಗಳನ್ನು ಕಡಿಮೆಗೊಳಿಸಲು ಈ ಬಂಡವಾಳದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕು. ಇದು ಕಾರ್ಪೊರೇಟ್ ಸಾಲಗಳಿಗೆ ಬಹಳ ದೊಡ್ಡ ಸಹಾಯವಾಗಲಿವೆ. ಸರಕಾರ ತನ್ನ ರಾಜ್ಯ ಮಟ್ಟ ಸೇರಿದಂತೆ ಏಜೆನ್ಸಿ, PSU(public sector undertaking) ಗಳಿಂದ ತಮ್ಮ ಬಾಕಿ ಬಿಲ್ಗಳ ಮೊತ್ತವನ್ನು ಪಾವತಿಸಿಕೊಳ್ಳಬೇಕು. ಇದರಿಂದ ಖಾಸಗಿ ವಲಯಕ್ಕೆ ಅಮೂಲ್ಯವಾದ ಲಿಕ್ವಿಡಿಟಿ ಸಿಗುತ್ತದೆ .
ಕೊನೆಗೂ, ಗೃಹ ಮತ್ತು ಕಾರ್ಪೊರೇಟ್ ವಲಯದ ಸಂಕಷ್ಟಗಳು ಹಣಕಾಸು ಕ್ಷೇತ್ರದಲ್ಲಿ ತನ್ನ ಪ್ರಭಾವ ಬೀರುತ್ತದೆ. RBI ಈಗಾಗಲೇ ನಗದು ಹರಿವನ್ನು ಹೆಚ್ಚು ಮಾಡಿದೆ. ಅದಾಗ್ಯೂ ಉತ್ತಮವಾಗಿ ಕಾರ್ಯನಿರ್ವಹಿಸುವ NBFC ಗಳಿಂದ ದೊಡ್ಡ ಮಟ್ಟದ ಮೇಲಾಧಾರಗಳ ಮೇಲೆ ಸಾಲ ನೀಡಬೇಕಾಗುತ್ತದೆ. ಆದರೂ ಹೆಚ್ಚಿನ ಮಟ್ಟದ ಸಾಲದ ನಷ್ಟವನ್ನು ಸರಿಪಡಿಸಿಕೊಳ್ಳಲು ಇದು ಸಹಾಯವಾಗುವುದಿಲ್ಲ.
ನಿರುದ್ಯೋಗ ಹೆಚ್ಚಿದಂತೆ ಚಿಲ್ಲರೆ ಸಾಲಗಳು ಹಾಗು ಕಾರ್ಯನಿರ್ವಹಿಸದ ಆಸ್ತಿ ಪ್ರಮಾಣ ಹೆಚ್ಚುತ್ತದೆ. RBI ಹಣಕಾಸು ಸಂಸ್ಥೆಯ ಲಾಭಾಂಶ ಪಾವತಿಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸುವುದರಿಂದ ಅದರ ಮೂಲ ಬಂಡವಾಳವನ್ನು ಹೆಚ್ಚಿಸಲು ಅವಕಾಶ ಮಾಡಿಕೊಡಬಹುದು. ಅದೇನೇ ಇದ್ದರೂ ಕೆಲವು ಸಂಸ್ಥೆಗಳಿಗೆ ಹೆಚ್ಚು ಬಂಡವಾಳ ಬೇಕಾಗುತ್ತದೆ ಹಾಗೂ ಅದಕ್ಕಾಗಿ ನಿಯಂತ್ರಕರು ಯೋಜನೆ ಹಾಕಬೇಕು.
ದೇಶದ ಹಿತದೃಷ್ಟಿಯಿಂದ ಆರ್ಥಿಕ ವಲಯದಲ್ಲಿ ಸಾಕಷ್ಟು ಸಾಮರ್ಥ್ಯ ಹಾಗೂ ಪರಿಣತಿ ಹೊಂದಿರುವವರ ಬಳಿ ಸರಕಾರ ಸಮಾಲೋಚಿಸಬೇಕು. ರಾಜಕೀಯವನ್ನು ಬದಿಗಿಟ್ಟು ಜಾಗತಿಕ ಆರ್ಥಿಕ ಬಿಕ್ಕಟ್ಟಿನಂತಹ ಒತ್ತಡವನ್ನು ನಿಭಾಯಿಸಿದ ವಿರೋಧ ಪಕ್ಷದವರೊಂದಿಗೆ ಸೇರಿ ಸಮಾಲೋಚಿಸಬೇಕು. ಸರ್ಕಾರವು ಅತೀ ಹೆಚ್ಚು ಕೆಲಸ ಮಾಡುತ್ತಿರುವ ಪ್ರಧಾನಮಂತ್ರಿ ಕಾರ್ಯಾಲಯದ ಮೇಲೆ ಇನ್ನೂ ಹೆಚ್ಚಿನ ಒತ್ತಾಯ ಹಾಕುವುದರಿಂದ ಕೆಲಸ ಕಡಿಮೆಯಾಗುತ್ತಿದೆ ಹಾಗೂ ವಿಳಂಬಗೊಳ್ಳುತ್ತಿದೆ.
ಒಮ್ಮೆ ಸರಕಾರವು ಜನರ ಪ್ರತಿಕ್ರಿಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಹಾಗೂ ಭಾರತದ ಬಿಸಿ ತಾಪಮಾನವು ವೈರಸಿನ ಹರಡುವಿಕೆಯ ವೇಗವನ್ನು ತಗ್ಗಿಸಬಹುದು. ಇದು ಭರವಸೆಯನ್ನು ಹುಟ್ಟಿಸುತ್ತದೆ. ಕರೋನಾ ವೈರಸಿಗಿಂತ ಮೊದಲೇ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿತ್ತು. ಹಾಗೂ ಸಾಮಾಜಿಕ-ರಾಜಕೀಯ ಪರಿಸ್ಥಿತಿಯು ಕ್ಷೀಣಿಸಿತ್ತು. ಮೊದಲಿನ ಪರಿಸ್ಥಿತಿಗೆ ಬರಲು ಕೆಲವರಷ್ಟೇ ಉತ್ಸುಕರಾಗಿದ್ದರೆ. ಭಾರತವು ಬಿಕ್ಕಟ್ಟಿನ ಸಂಧರ್ಭದಲ್ಲಿ ಮಾತ್ರ ಸುಧಾರಣೆಗೊಳ್ಳುತ್ತದೆ. ಈ ದುರಂತ ಪರಿಸ್ಥಿತಿಯು ನಮ್ಮ ಸಮಾಜವಾಗಿ ನಾವು ಎಷ್ಟು ದುರ್ಬಲಗೊಂಡಿದ್ದೇ ಎಂದು ತೋರಿಸುತ್ತಿದೆ. ಹಾಗಾಗಿ ನಾವು ನಮ್ಮ ರಾಜಕೀಯ ಹಿತಾಸಕ್ತಿಯನ್ನು ಅಗತ್ಯವಿರುವ ಆರ್ಥಿಕ ಪರಿಸ್ಥಿತಿ ಮತ್ತು ಆರೋಗ್ಯ ಸುಧಾರಣೆಗಳ ಕಡೆಗೆ ಹರಿಸಬೇಕು.
ಮೂಲ ಲೇಖಕರು: ರಘುರಾಂ ರಾಜನ್, RBI ಮಾಜಿ ಗವರ್ನರ್