ಈಗ ವಿವಾದದ ಸ್ವರೂಪ ಪಡೆದಿರುವ ಹಿಂದಿ ಕುರಿತ ಮಾತನ್ನು ಮುಗಿಸುವ ಕೆಲವೇ ಸೆಕೆಂಡ್ ಗಳ ಮೊದಲೇ ಗೃಹ ಮಂತ್ರಿ ಅಮಿತ್ ಶಾ ಅವರು ಕೇವಿಯಟ್ ಹಾಕಿದ್ದರು. ಈ ದೇಶದ ಹಲವು ಭಾಷೆಗಳು ಮತ್ತು ಉಪಭಾಷೆಗಳು “ಹಲವರು ಭಾವಿಸಿರುವಂತೆ ಹೊರೆ ಅಲ್ಲ”, ವಾಸ್ತವವಾಗಿ ಅದೊಂದು ಬೃಹತ್ ಶಕ್ತಿ ಎಂಬುದಾಗಿ ಅವರು ಹೇಳಿದ್ದಾರೆ.
ಆದಾಗ್ಯೂ, “ನಮ್ಮ ಮಣ್ಣಿನಲ್ಲಿ ಇತರ ಯಾವುದೇ ವಿದೇಶಿ ಭಾಷೆಯು ನಮ್ಮ ಭಾಷೆಯ ಸ್ಥಾನವನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯಲು ದೇಶಕ್ಕೆ ಒಂದು ಭಾಷೆಯ ಅಗತ್ಯವಿದೆ” ಎಂಬ ಸಮರ್ಥನೆಯನ್ನೂ ನೀಡಿದ್ದಾರೆ. ಈ ಕಾರಣದಿಂದಲೇ ನಮ್ಮ ರಾಷ್ಟ್ರ ನಿರ್ಮಾಪಕರು ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು ಎಂಬುದಾಗಿ ಅವರು ತರ್ಕಿಸಿದ್ದಾರೆ. (ಅಮೆರಿಕ ಸಂಯುಕ್ತ ಸಂಸ್ಥಾನದ ಹೂಸ್ಟನ್ ನಲ್ಲಿ ನಡೆದ ಹೌಡಿ ಮೊದಿ ಕಾರ್ಯಕ್ರಮದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸಹ ತಮ್ಮ ಭಾಷಣದಲ್ಲಿ ಭಾಷೆಯ ವಿಷಯವನ್ನು ಎತ್ತಿದರು. ಭಾಷೆ ಕುರಿತಾದ ಹೋರಾಟಗಳು ಅಂತ್ಯಗೊಳ್ಳಲಿ ಎಂಬ ವಿಶ್ವಾಸದೊಂದಿಗೆ ಎಂಟು ಭಾಷೆಗಳಲ್ಲಿ “ಆಲ್ ಈಸ್ ವೆಲ್” ಹೇಳಿದರು.)
ಅಮಿತ್ ಶಾ ಅವರ ಹಿಂದಿ ಕುರಿತಾದ ಹೇಳಿಕೆ ವಿರೋಧಿಸಿ ಹುಟ್ಟಿಕೊಂಡ ಪ್ರತಿಕ್ರಿಯೆಗಳ ಮಹಾಪೂರದಲ್ಲಿ ‘ಹಿಂದಿ’ ಭಾಗವನ್ನು ಮಾತ್ರ ಆಯ್ದಕೊಳ್ಳಲಾಗಿದೆ, ಆದರೆ ಉಳಿದ ಎಲ್ಲವನ್ನೂ ಕೈಬಿಡಲಾಗಿದೆ. ಶಾ ಅವರ ಮನಸ್ಸಿನಲ್ಲಿ ಮತ್ತು ಹೇಳಿಕೆಯ ವಿಧಾನದಲ್ಲಿ ಯಾವೆಲ್ಲಾ ಅಂಶಗಳು ಒಳಗೊಂಡಿವೆ ಎಂಬುದನ್ನು ಮರೆಯಲಾಗಿದೆ. ಶಾ ಅವರು ಆಡಿರುವ ಮಾತುಗಳನ್ನು ವಿಂಗಡಿಸಿ ಅರಿಯುವುದಾದರೆ, ಅವರು ಶತ್ರು ಎಂದು ಭಾವಿಸಿರುವ ವಿದೇಶಿ ಭಾಷೆಗಳ ಸಂಭಾವ್ಯ ಅತಿಕ್ರಮಣವನ್ನು ತಡೆಯುವ ‘ಸಂರಕ್ಷಕ’ ಸ್ಥಾನದಲ್ಲಿ ಹಿಂದಿ ಇದೆ ಎಂಬರ್ಥದ ಮಾತುಗಳನ್ನಾಡಿದ್ದಾರೆ. ಇತರ ಭಾರತೀಯ ಭಾಷೆಗಳು ‘ಹೊರೆ’ ಅಲ್ಲ ಎಂದು ಸಹ ಹೇಳಿದ್ದಾರೆ. ಅಂದರೆ, ರಾಷ್ಟ್ರೀಯ ದೊಡ್ಡಣ್ಣ ಎಂಬಂತೆ ಹಿಂದಿ ಭಾಷೆಯ ಆಶ್ರಯ ಪಡೆಯುತ್ತಿರುವವರೆಗೆ ಪ್ರತ್ಯೇಕ ಭಾಷಾ ಪ್ರಾಂತ್ಯಗಳಿಂದ ಯಾವುದೇ ಧಕ್ಕೆ ಇಲ್ಲ ಎಂಬುದು ಅವರ ಮಾತಿನ ಇಂಗಿತವಾಗಿದೆ. ಅಲ್ಲದೆ, ಅವರು ಈ ವಿಷಯದಲ್ಲಿ ಬಹುಸಂಖ್ಯಾತರ ಗ್ರಹಿಕೆಯ ಪ್ರಸ್ತಾಪ ಮಾಡಿದ್ದಾರೆ. ಅಂದರೆ, ತಾನು ಬಹುಸಂಖ್ಯಾತರ ಅಭಿಪ್ರಾಯವನ್ನಷ್ಟೇ ಹೇಳುತ್ತಿದ್ದೇನೆಯೇ ಹೊರತು ತನ್ನ ಸ್ವಂತ ಪ್ರಸ್ತಾಪವಲ್ಲ ಎಂಬುದಾಗಿ ತೋರಿಸಿಕೊಳ್ಳುವುದು ಸಹ ಅವರ ಉದ್ದೇಶವಾಗಿದೆ. ಹಾಗಾಗಿ, ಅವರ ಹೇಳಿಕೆಯು ಹಿಂದಿ ಭಾಷೆಗೆ ಅಗಾಧ ಬೆಂಬಲವಿದೆ ಎಂಬುದನ್ನು ನೆನಪಿಸುವ ಪರೋಕ್ಷ ವಿಧಾನವಲ್ಲದೆ ಮತ್ತೇನಲ್ಲ.
ಆಶ್ಚರ್ಯಕರ ಸಂಗತಿ ಎಂದರೆ, ಶಾ ಅವರ ಹೇಳಿಕೆಯ ಒಟ್ಟಂಶವು ನಮಗೀಗ ಚಿರಪರಿಚಿತವಾಗಿರುವ ರಾಷ್ಟ್ರೀಯತಾವಾದಿ ಯೋಜನೆಯ ಜಗತ್ತಿಗೆ ಕರೆದೊಯ್ಯುತ್ತದೆ. ಹಿಂದಿ ರಾಷ್ಟ್ರೀಯತೆಯಾದರೆ, ಇತರ ಎಲ್ಲಾ ಭಾರತೀಯ ಭಾಷೆಗಳು ಅಧೀನ ಉಪ-ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತವೆ. ಇದನ್ನು ಅತ್ಯಂತ ನಾಜೂಕಾದ, ಒಪ್ಪಿತ ವ್ಯವಸ್ಥೆಯ ರೀತಿ ಕಾಣುವಂತೆ ಮಾಡಲಾಗಿದೆ. ಅಂದರೆ, ಅಂಗಸಂಸ್ಥೆ ಆಡಳಿತಗಳ ಒಂದು ಕೇಂದ್ರೀಕೃತ ಅಧಿಕಾರ ವ್ಯವಸ್ಥೆ. ಆದ್ದರಿಂದ, ಈಗ ನಾವು ಕಾಣುತ್ತಿರುವ ಭಾಷಾ ಹೆಮ್ಮೆ ಕುರಿತ ಆಕ್ರೋಶವು ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದ ಸಣ್ಣ ವಾದ ವಿವಾದವೋ ಅಥವಾ ಮತ್ತಾವುದಾದರ (ಪರ್ಯಾಯ ಸಾಂಸ್ಕೃತಿಕ ಲೋಕಗಳು ಹಾಗೂ ಭಾರತೀಯ ಭಾಷೆಗಳ ಪರಂಪರೆ ಮತ್ತು ಅಸ್ಮಿತೆಗಳಿಂದ ಒಡಮೂಡಿರುವ ಜಾಗತಿಕ ದೃಷ್ಟಿಯ ನಿರಾಕರಣೆ) ಕುರಿತ ಪ್ರತಿರೋಧವೋ ಎಂಬ ಬಗ್ಗೆ ನಾವು ಖಚಿತ ನಿಲುವು ತಳೆಯುವ ಅಗತ್ಯವಿದೆ.
ರಾಷ್ಟ್ರೀಯತೆಯ ತಾಂತ್ರಿಕ ಸಂರಚನೆಯು, ವಿಶೇಷವಾಗಿ ಕಳೆದ ಕೆಲ ವರ್ಷಗಳಿಂದ ಇದನ್ನು ಅನ್ವಯಿಸುತ್ತಿರುವ ವಿಧಾನವು, ಬಹುತೇಕ ವಿಷಯಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ರಾಷ್ಟ್ರವೆಂಬಂತೆ ಚಿಂತಿಸಲು ನಮ್ಮ ಮೇಲೆ ಒತ್ತಡ ಹೇರಿದೆ. ನಾವು ಭಿನ್ನ ಲಿಪಿಗಳು ಮತ್ತು ಪದಗಳ ಆಯ್ಕೆಗಳನ್ನು ಹೊಂದಿರಬಹುದು, ನಮ್ಮ ನುಡಿಗಟ್ಟುಗಳು ಸುಲಭ ಗ್ರಾಹ್ಯವಲ್ಲದಿರಬಹುದು, ಆದರೆ ಒಬ್ಬ ಶತ್ರು ಅಥವಾ ಹೀರೊ ಕುರಿತಾಗಿ ಇರಬಹುದು, ಸರ್ಜಿಕಲ್ ಸ್ಟ್ರೈಕ್ ಅಥವಾ ಚಂದ್ರಯಾನ ಯೋಜನೆ ಇರಬಹುದು, ಅಥವಾ ದೇವರುಗಳ ಕುರಿತಾಗಿರಬಹುದು – ನಾವು ಒಂದು ಹಿಡಿತಕ್ಕೊಳಪಟ್ಟ ಹಾಗೆ ಒಂದೇ ರೀತಿಯ ವರ್ತನೆಗೆ ತಳ್ಳಲ್ಪಟ್ಟಿದ್ದೇವೆ. ಇದೇ ಒಂದು ರಾಷ್ಟ್ರ ಮತ್ತು ಒಂದು ವರ್ತನೆ. ಭಾಷೆ ಯಾವುದಾದರೂ ಇರಲಿ ಬಿಟ್ಟುಹಾಕಿ.
ಹೀಗಿರುವಾಗ, ಕಾನೂನುಬದ್ಧ ಪ್ರಶ್ನೆಯೊಂದನ್ನು ಕೇಳಬಹುದು: ರಾಷ್ಟ್ರೀಯತೆ ಮತ್ತು ಉಪ-ರಾಷ್ಟ್ರೀಯತೆಗಳು ಪರಸ್ಪರ ಪ್ರತಿಬಿಂಬಕವೇ? ಹಿಂದಿಯೂ ಸೇರಿದಂತೆ ಭಾರತೀಯ ಭಾಷೆಗಳ ವೈವಿಧ್ಯಮಯ ಪರ್ಯಾಯ ಲೋಕಗಳನ್ನು ರಾಷ್ಟ್ರೀಯತೆಯು ಒಂದು ಹಿಡಿತಕ್ಕೆ ತೆಗೆದುಕೊಳ್ಳುತ್ತದೆಯೇ ಅಥವಾ ಸಪಾಟು ಮಾಡುತ್ತದೆಯೇ? 2011ರ ಜನಗಣತಿ ಪ್ರಕಾರ, ‘ಹಿಂದಿ’ ಎಂಬುದಾಗಿ ಹಣೆಪಟ್ಟಿ ಹಚ್ಚುವ ಭಾಷೆಯೊಳಗೇ 56 ವಿಭಿನ್ನ ಮಾತೃನುಡಿಗಳ ದಾಖಲು ಮಾಡಲಾಗಿದೆ.
ಶಿವಸೇನಾ ಮಾದರಿ:
ರಾಷ್ಟ್ರೀಯತೆ ಮತ್ತು ಉಪ-ರಾಷ್ಟ್ರೀಯತೆಯ ಒಡನಾಟವು ಕೆಲ ದಶಕಗಳಿಂದ ನಡೆಯುತ್ತಿರುವ ತಂತ್ರೋಪಾಯವಾಗಿದೆ. ಇದನ್ನು ಸೇನಾ-ಮಾದರಿ ಎಂಬುದಾಗಿ ಖಂಡಿತವಾಗಿ ಹೆಸರಿಸಬಹುದು. 1970ರ ದಶಕದಲ್ಲಿ ಹುಟ್ಟಿಕೊಂಡ ಶಿವಸೇನಾಗೆ ‘ಮಹಾರಾಷ್ಟ್ರದವರಿಗಾಗಿ ಮಾತ್ರ ಮಹಾರಾಷ್ಟ್ರ’ ಎಂಬ ವ್ಯವಸ್ಥೆ ನಿರ್ಮಿಸುವುದು ಆದರ್ಶವಾಗಿತ್ತು. ಅದು ಮೊದಮೊದಲು ಧಕ್ಷಿಣ ಭಾರತೀಯ ಮತ್ತು ಗುಜರಾತಿ ವಲಸಿಗರ ವಿರುದ್ಧ ದ್ವೇಷ ಕಾರುತ್ತಿತ್ತು. ಆದರೆ ಶಿವಸೇನಾಗೆ ರಾಜಕೀಯ ಪ್ರಾಮುಖ್ಯತೆ ದೊರೆಯಲಾರಂಭಿಸಿದ ಸಮಯದಲ್ಲಿ ಹೊಸದಾಗಿ ಬಿಹಾರ ಮತ್ತು ಉತ್ತರಪ್ರದೇಶದ ವಲಸಿಗರನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಲಾರಂಭಿಸಿತು.
ಅಲ್ಲದೆ, ಕಟ್ಟುನಿಟ್ಟಿನ ಪ್ರತ್ಯೇಕ ಭಾಷಾ ಪ್ರಾಂತ್ಯ ನಿರ್ಮಿಸಲುದ್ದೇಶಿಸಿದ್ದ ಸೇನಾ ಹೋರಾಟವು 1980ರ ದಶಕದ ವೇಳೆಗೆ ಭಾರತೀಯ ಜನತಾ ಪಾರ್ಟಿಯ ಅಖಂಡ ಭಾರತ ಹಿಂದುತ್ವ ವಾಹಿನಿಯ ಅಧಿಕೃತ ಭಾಗವಾಯಿತು. ಇದಾಗುತ್ತಿದ್ದಂತೆ, ಧಾರ್ಮಿಕ ಅಲ್ಪಸಂಖ್ಯಾತರು ಸಹ ಶಿವಸೇನಾ ಕಣ್ಣಿಗೆ ಹೊರಗಿನವರಂತೆ ಕಾಣಲಾರಂಭಿಸಿದರು. ರಾಜಕೀಯ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಇದಕ್ಕಿಂತ ಉತ್ತಮ ಮತ್ತು ಪ್ರಾಣಘಾತಕ ಸಂಯೋಜನೆ ಮತ್ತೊಂದಿರಲಾರದು.
ಆಸಕ್ತಿಕರ ಸಂಗತಿಯೆಂದರೆ, ಹಿಂದಿ ಹೇರಿಕೆ ವಿರುದ್ಧ ತೀವ್ರವಾಗಿ (#hindiimposition) ಚಳವಳಿ ನಡೆಯುತ್ತಿರುವಾಗ, ಹಿಂದುತ್ವ ಆಂದೋಲನದ ಜೊತೆಗೂಡಲು ಶಿವಸೇನಾ ತನ್ನ ಮರಾಠಿ ಕಳಕಳಿಯನ್ನು ಬದಿಗಿಟ್ಟಿದೆ. ಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ, ಕಳೆದ ಸೆಪ್ಟೆಂಬರ್ 18 ರಂದು ಹಿಂದುತ್ವದ ಪ್ರತಿಮಾ ಪುರುಷ ಸಾವರ್ಕರ್ ಗೆ ಭಾರತ ರತ್ನ ಪ್ರದಾನ ಮಾಡುವಂತೆ ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಮಿತ್ ಶಾ ಅವರಿಗೆ ಗುಜರಾತಿ ತಾಯಿ ನುಡಿಯಾಗಿರುವಂತೆ, ಸಾವರ್ಕರ್ ಗೆ ಮರಾಠಿ ತಾಯಿ ನುಡಿಯಾಗಿತ್ತು. ಆದರೆ ಹಿಂದುತ್ವದ ಬೃಹತ್ ಉದ್ದೇಶದ ಗದ್ದಲದೊಳಗೆ ಇದೆಲ್ಲಾ ಅಪ್ರಸ್ತುತ.
ಅದೇನೇ ಇರಲಿ, ಸೇನಾ ಮಾದರಿಯು ಇತರ ಭಾಷೆಗಳ ಜನರಿಗೂ ಅನುಕರಣೆಯ ದಾರಿ ಮಾಡಿಕೊಟ್ಟಿದೆ. ಉದಾಹರಣೆಗೆ ಕರ್ನಾಟಕದಲ್ಲಿ, 1980ರ ದಶಕದಲ್ಲಿ ಸಾಹಿತಿಗಳಿಂದ ಆರಂಭವಾದ ಸೌಮ್ಯ ರೀತಿಯ ಭಾಷಾ ಚಳವಳಿಯನ್ನು ಕನ್ನಡ ರಕ್ಷಣಾ ವೇದಿಕೆಗಳು ಮತ್ತು ಬಗೆಬಗೆಯ ಸೇನೆಗಳು ಕೈಗೆತ್ತಿಕೊಂಡಿದ್ದು, ಬೀದಿ ಹೋರಾಟಗಳ ರೂಪ ನೀಡಿವೆ. ಹೊರಗಿಡುವಿಕೆಯ ಘೋಷಣೆಯನ್ನು ಅವು ಮುಖ್ಯವಾಹಿನಿಗೆ ತಂದಿವೆ. ತಮಿಳು, ಹಿಂದಿ ಮತ್ತು ಮರಾಠಿ ಮಾತನಾಡುವ ಜನರನ್ನು ಪದೇಪದೆ ಗುರಿಯಾಗಿಸಿಕೊಂಡು ಹೋರಾಟ ನಡೆಸಲಾಗಿದೆ. ಆದಾಗ್ಯೂ, ಈ ಸಂಘಟನೆಗಳು ಶಿವಸೇನಾ ರೀತಿಯಲ್ಲಿ ರಾಜಕೀಯ ಹೆಜ್ಜೆಯೂರಲು ಸಾಧ್ಯವಾಗಲಿಲ್ಲ ಮತ್ತು ಬಲಪಂಥೀಯ ಸಿದ್ಧಾಂತಗಳೊಂದಿಗೆ ಹೇಳಿಕೊಳ್ಳಬಹುದಾದ ಒಡನಾಟವನ್ನೂ ಬೆಳೆಸಿಕೊಳ್ಳಲಿಲ್ಲ. ಆದರೆ, ತಾತ್ವಿಕವಾಗಿ, ರಾಷ್ಟ್ರೀಯತಾವಾದಿ ತಂತ್ರೋಪಾಯದಿಂದ ಸವಕಲು ಕಾರ್ಯತಂತ್ರಗಳನ್ನು ಎರವಲು ಪಡೆದಿವೆ.
(ಮುಂದುವರಿಯುವುದು)
ಮೂಲ ಲೇಖನ www.livemint.com ನಲ್ಲಿ ಪ್ರಕಟವಾಗಿತ್ತು. ಲೇಖಕರು ಹಿರಿಯ ಪತ್ರಕರ್ತ ಹಾಗೂ ಬರಹಗಾರ ಸುಗತ ಶ್ರೀನಿವಾಸರಾಜು