ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಚಳವಳಿಯನ್ನು ತೀವ್ರಗೊಳಿಸಲಾಗುವುದು. ಸರ್ಕಾರ ಕನ್ನಡಿಗರ ಒಕ್ಕೊರಲ ಆಗ್ರಹಕ್ಕೆ ಕಿವುಡಾಗಿ ಕುಳಿತಿದೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ತನ್ನದೇ ಆದ ವಿಧಾನದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ಎಚ್ಚರಿಸಿದ್ದಾರೆ.
ಇನ್ನು ಐದು ದಿನಗಳೊಳಗೆ ರಾಜ್ಯ ಸರ್ಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡುವುದರ ಜತೆಗೆ ಅದರ ಪ್ರತ್ಯೇಕ ಅಸ್ತಿತ್ವವನ್ನು ಹಾಗೇ ಉಳಿಸಿಕೊಳ್ಳುವ ಘೋಷಣೆಯನ್ನು ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಬೀದಿಗೆ ಬಂದು ಪ್ರತಿಭಟಿಸಬೇಕಾಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪದೇ ಪದೇ ಚಳವಳಿ ಮಾಡಬೇಡಿ, ಮಾತುಕತೆಗೆ ಬನ್ನಿ, ಚಳವಳಿಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ. ಆದರೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೇಲೂ ಮೌನವಾಗಿದ್ದಾರೆ. ಉನ್ನತ ಶಿಕ್ಷಣ ಸಚಿವರು ನೀಡಿದ ಭರವಸೆ ಹುಸಿಯಾಗಿದೆ. ರಾಜ್ಯ ಸರ್ಕಾರ ಸಂವೇದನಾಶೀಲತೆಯನ್ನು ಕಳೆದುಕೊಂಡಿದೆ. ದಪ್ಪಚರ್ಮದ ರಾಜಕಾರಣಿಗಳು, ಅಧಿಕಾರಿಗಳು ರಾಜ್ಯದ ಜನರ ಕೂಗಿಗೆ ಬೆಲೆಕೊಡುತ್ತಿಲ್ಲ. ಹೀಗಾದಲ್ಲಿ ಸಾಮಾನ್ಯ ಜನರ ಸಿಟ್ಟು ಕಟ್ಟೆಯೊಡೆದು, ಅದರ ಪರಿಣಾಮವನ್ನು ಸರ್ಕಾರವೇ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಕ್ಷಣಾ ವೇದಿಕೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು #ಕನ್ನಡವಿವಿಉಳಿಸಿ ಟ್ವಿಟರ್ ಅಭಿಯಾನ ನಡೆಸಿತ್ತು. ಸುಮಾರು 11,800 ಟ್ವೀಟ್ ಗಳಲ್ಲಿ ಸರ್ಕಾರದ ಧೋರಣೆಯನ್ನು ಖಂಡಿಸಲಾಗಿತ್ತು. ಸುಮಾರು 40 ಲಕ್ಷಕ್ಕೂ ಹೆಚ್ಚು ಜನರಿಗೆ ಈ ಅಭಿಯಾನ ತಲುಪಿತ್ತು. ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರನ್ನು ನಾನು, ಕರವೇ ಮುಖಂಡರ ನಿಯೋಗದೊಂದಿಗೆ ಭೇಟಿಮಾಡಿ ಆಗ್ರಹಪತ್ರ ಸಲ್ಲಿಸಿದ್ದೆ. ಸಚಿವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿ, ಕೂಡಲೇ ಹಂಪಿ ಕನ್ನಡ ವಿವಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು.ಆದರೆ ಸರ್ಕಾರ ತನ್ನ ಮಾತು ನಡೆಸಿಕೊಳ್ಳಲಿಲ್ಲ. ಕರವೇ ನಾಡಿನ ವಿದ್ವಜ್ಜನರ ಹೇಳಿಕೆಗಳನ್ನು ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ‘ಭಿತ್ತಿಪತ್ರ ಚಳವಳಿ’ ನಡೆಸುತ್ತಿದೆ. ನಾಡಿನ ಹೆಸರಾಂತ ಸಾಹಿತಿಗಳು, ಸಂಶೋಧಕರು, ಸಮಾಜ ವಿಜ್ಞಾನಿಗಳು, ಮಠಾಧೀಶರು, ಚಿಂತಕರು, ಧರ್ಮಗುರುಗಳು ಈ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ ಎಂದು ಅವರು ತಿಳಿಸಿದ್ದಾರೆ.
ಇಷ್ಟಾದರೂ ಸರ್ಕಾರ ಬೇಜವಾಬ್ದಾರಿ ಮತ್ತು ಉದಾಸೀನ ಪ್ರವೃತ್ತಿಯನ್ನು ಮುಂದುವರೆಸಿದೆ. ಇಂಥ ಸಮಯದಲ್ಲಿ ನಮಗೆ ತೀವ್ರ ಸ್ವರೂಪದ ಚಳವಳಿ ನಡೆಸದೇ ಬೇರೆ ದಾರಿ ಉಳಿದಿಲ್ಲ. ಐದು ದಿನಗಳೊಳಗೆ ಸರ್ಕಾರ ಕಿವಿಗೊಡದೇ ಇದ್ದರೆ, ಕರವೇ ನಡೆಸುವ ಚಳವಳಿ ಮತ್ತು ಅದರ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಹೊರಬೇಕು ಎಂದು ನಾರಾಯಣಗೌಡ ಅವರು ಎಚ್ಚರಿಸಿದ್ದಾರೆ.