ಕರೋನಾ ಸೋಂಕು ದಿನೇ ದಿನೇ ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತಿದ್ದು ಜನರು ಆತಂಕಿತರಾಗುತಿದ್ದಾರೆ. ಇನ್ನೇನು ಒಂದೆರಡು ದಿನಗಳಲ್ಲಿ ಭಾರತದ ಕೋವಿಡ್ 19 ಸೋಂಕಿತರ ಸಂಖ್ಯೆ ಒಂದು ಮಿಲಿಯನ್ ಮೀರಲಿದೆ. ಅಷ್ಟೇ ಅಲ್ಲ ಇದೇ ರೀತಿ ಮುಂದುವರಿದರೆ ಕೋವಿಡ್ ಪ್ರಕರಣಗಳಲ್ಲಿ ಮುಂದೆ ಭಾರತ ವಿಶ್ವದ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶ ಕೂಡ ಆಗಲಿದೆ. ಕೋವಿಡ್ 19 ಸೋಂಕಿಗೆ ಲಸಿಕೆ ಕಂಡು ಹಿಡಿಯದಿದ್ದರೆ 2021ರ ಮಾರ್ಚ್ ಅಂತ್ಯದೊಳಗೆ ಇಂಡಿಯಾದಲ್ಲಿ 6 ಕೋಟಿಗೂ ಅಧಿಕ ಕೊರೊನಾ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಅಧ್ಯಯನ ನಡೆಸಿರುವುದು ಸಣ್ಣ ಪುಟ್ಟ ಸಂಸ್ಥೆಗಳೋ ಅಥವಾ ದಿನಾಲೂ ಟಿವಿಗಳಲ್ಲಿ ಭವಿಷ್ಯ ಹೇಳುವವರಲ್ಲ , ಬದಲಿಗೆ ದೇಶದ ಪ್ರತಿಷ್ಟಿತ ವಿಜ್ಞಾನ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ .
ಜುಲೈ 16 ವರದಿ ಪ್ರಕಾರ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಹತ್ತು ಲಕ್ಷ (9,68,876) ಗಡಿಯ ಸಮೀಪ ಬಂದಿದೆ. ಈ ಪೈಕಿ 6,12,815 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. 3,31,146 ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೇಶದಲ್ಲಿ 24,915 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 1.36 ಕೋಟಿ ಆಗಿದೆ.

ಅಧ್ಯಯನ ತಂಡ ಹೇಳಿರುವ ಪ್ರಕಾರ, ಪ್ರಸ್ತುತ ಅಂಕಿ ಅಂಶಗಳ ಆಧಾರದಲ್ಲಿ ಸೆಪ್ಟೆಂಬರ್ ಆರಂಭದ ವೇಳೆಗೆ ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಕೊವಿಡ್ ಸೋಂಕಿತರು ಪತ್ತೆಯಾಗಲಿದ್ದಾರೆ. ಸೆಪ್ಟೆಂಬರ್ ಆರಂಭದ ವೇಳೆಗೆ ದೇಶವು ಒಟ್ಟು 20 ಲಕ್ಷ ಪ್ರಕರಣಗಳು, 4.75 ಲಕ್ಷ ಸಕ್ರಿಯ ಪ್ರಕರಣ ಮತ್ತು 88,000 ಸಾವುಗಳ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ತಿಳಿಸಿದೆ. ಕರೋನಾ ವೈರಸ್ ಹರಡುವುದನ್ನು ತಡೆಯುವಲ್ಲಿ ಲಾಕ್ಡೌನ್ ಮಾಡುವುದು ಪರಿಣಾಮಕಾರಿಯಾಗಬಹುದು ಎಂದು ಐಐಎಸ್ ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದೆ. ವಾರಕ್ಕೆ ಒಂದು ಅಥವಾ ಎರಡು ದಿನ ಲಾಕ್ಡೌನ್ ಮಾಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಸೋಂಕಿನ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಬಹುದು ಎಂದಿದೆ.
ಈ ಅಧ್ಯಯನದ ನಡುವೆಯೂ ಒಂದಷ್ಟು ಸಮಾಧಾನಕರ ಸುದ್ದಿಯೂ ಇದೆ. ಅದೇನೆಂದರೆ ಭಾರತದ ಭೂ ಪ್ರದೇಶ ಲಕ್ಷ ದ್ವೀಪದಲ್ಲಿ ಒಂದೇ ಒಂದು ಕೋವಿಡ್ 19 ಪ್ರಕರಣ ಈ ತನಕವೂ ವರದಿ ಆಗಿಲ್ಲ. ಇದಕ್ಕೆ ಬಹು ಮುಖ್ಯ ಕಾರಣ ಇದೊಂದು ದ್ವೀಪ ಆಗಿರುವುದು ಅಷ್ಟೇ ಅಲ್ಲ ಲಕ್ಷ ದ್ವೀಪದ ಆಡಳಿತ ಸೋಂಕು ಹರಡುವುದ್ನು ತಡೆಗಟ್ಟಲು ಕೈಗೊಂಡಿರುವ ಕಠಿಣ ಕ್ರಮಗಳು. ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪದ ಜನಸಂಖ್ಯೆ 64,473 ಆಗಿದ್ದು ಈ ದ್ವೀಪದಲ್ಲಿ ಈವರೆಗೆ ನಡೆಸಿರುವ ಸೋಂಕಿತರ ಪರೀಕ್ಷೆ ಕೇವಲ 61 ಮಾತ್ರ. ಇದನ್ನೂ ಕೂಡ ಐಸಿಎಂಆರ್ ನಿಗದಿಪಡಿಸಿರುವ ಮಾನದಂಡದ ಅಡಿಯಲ್ಲೆ ಪರೀಕ್ಷೆ ನಡೆಸಲಾಗಿದೆ. ಅಂದರೆ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಮಾತ್ರ ಪರೀಕ್ಷಿಸಲಾಗಿದೆ. ಇವರೆಲ್ಲರಿಗೂ ನೆಗೆಟಿವ್ ವರದಿ ಬಂದಿದೆ ಎಂದು ಲಕ್ಷ ದ್ವೀಪದ ಆರೋಗ್ಯ ಕಾರ್ಯದರ್ಶಿ ಡಾ ಸುಂದರ ವಡಿವೇಲು ಹೇಳುತ್ತಾರೆ.

ಲಕ್ಷ ದ್ವೀಪವು ಕೇರಳದ ಕೊಚಿನ್ ಗೆ ನಿಕಟವಾಗಿದ್ದು ಎಲ್ಲ ಅಗತ್ಯ ವಸ್ತುಗಳು ಇಲ್ಲಿಂದಲೇ ಸರಬರಾಜು ಅಗಬೇಕಿದೆ. ಎಲ್ಲ ಹಡಗುಗಳು ಮತ್ತು ವಿಮಾನಗಳೂ ಕೂಡ ಕೊಚಿನ್ ನಿಂದಲೇ ಹೊರಡುತ್ತಿರುವುದರಿಂದ ಇಲ್ಲಿಯೇ ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಸೋಂಕು ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ. ವಡಿವೇಲು ಅವರ ಪ್ರಕಾರ ಒಂದು ವೇಳೇ ದ್ವೀಪ ಕ್ಕೆ ಸೋಂಕು ಹರಡಿದರೆ ಅದನ್ನು ನಿಭಾಯಿಸಲು ತುರ್ತು ಸೂಕ್ತ ವೈದ್ಯಕೀಯ ಸೌಲಬ್ಯಗಳು ಇಲ್ಲ ಹಾಗಾಗಿ ಮುನ್ನೆಚ್ಚರಿಕೆಯಾಗಿ ಹೊರಗಿನಿಂದ ಬರುವವರನ್ನು ಪರೀಕ್ಷಿಸಿದ ನಂತರವೇ ಪ್ರಯಾಣಕ್ಕೆ ಅನುಮತಿಸಲಾಗುತ್ತಿದೆ. ಅನೇಕ ರಾಜ್ಯಗಳು ವಿಮಾನ ಪ್ರಯಾಣಿಕರಿಗೆ ಅನೇಕ ದಿನಗಳ ನಂತರ ಕೋವಿಡ್ ಪರೀಕ್ಷೆಯನ್ನು ಮಾಡಲು ತೊಡಗಿದವು. ಆದರೆ ದೇಶದಲ್ಲಿ ಕೋವಿಡ್ ಪ್ರಕರಣ ಪತ್ತೆ ಆದ ಮೊದಲ ದಿನದಿಂದಲೇ ಕೊಚಿನ್ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಿದ ನಂತರವೇ ಪ್ರಯಾಣಕ್ಕೆ ಅನುಮತಿ ನೀಡಲಾಯಿತು.
ಅಷ್ಟೇ ಅಲ್ಲ ಹೊರಗಿನಿಂದ ಬಂದವರು 7 ದಿನಗಳ ಪೋಲೀಸ್ ಕಣ್ಗಾವಲಿನಲ್ಲಿ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಲಕ್ಷ ದ್ವೀಪ ಆಡಳಿತ ಕೊಚಿನ್ ನಲ್ಲಿ ಎರಡು ಹೋಟೆಲ್ ಗಳನ್ನು ಬಾಡಿಗೆಗೆ ಪಡೆದಿದ್ದು ಪ್ರಯಾಣಿಕರಿಗೆ ವಿವಿಧ ಪರೀಕ್ಷೆಗಳ ನಂತರವೇ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಲಕ್ಷ ದ್ವೀಪಕ್ಕೆ ಹೋದ ನಂತರವೂ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತಿದೆ, ಇದನ್ನು ಕಳೆದ ಫೆಬ್ರುವರಿ ಒಂದರಿಂದಲೂ ಮಾಡಿಕೊಂಡು ಬರಲಾಗಿದೆ. ಅಂತರ್ರಾಷ್ಟ್ರೀಯ ಪ್ರಯಾಣಿಕರು ಕೇರಳದಲ್ಲಿ ಕಡ್ಡಾಯ 14 ದಿನಗಳ ಕ್ವಾರಂಟೈನ್ ನಂತರ ಲಕ್ಷ ದ್ವೀಪದಲ್ಲೂ 14 ದಿನಗಳ ಕಡ್ಡಾಯ ಕ್ವಾರಂಟೈನ್ ಇರಲೇಬೇಕಿದೆ. ಈ ಪುಟ್ಟ ದ್ವೀಪದಲ್ಲಿ ಇರುವ ಆಸ್ಪತ್ರೆಗಳೂ ಕೇವಲ ಮೂರು. ಕವರತ್ತಿಯಲ್ಲಿ ಇಂದಿರಾಗಾಂದಿ ಅಸ್ಪತ್ರೆ ಮತ್ತು ರಾಜೀವ್ ಗಾಂದಿ ಸ್ಪೆಷಾಲಿಟಿ ಅಸ್ಪತ್ರೆ ಮತ್ತು ಮಿನಿಕಾಯ್ ನಲ್ಲಿರುವ ಸರ್ಕಾರಿ ಆಸ್ಪತ್ರೆ. ಮೊದಲಿನ ಎರಡು ಆಸ್ಪತ್ರೆಗಳಲ್ಲಿ ಒಟ್ಟು ಹಾಸಿಗೆಗಳ ಸಂಖ್ಯೆ 70 ಆಗಿದ್ದರೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನೂರು ಹಾಸಿಗೆಗಳ ಸೌಲಭ್ಯ ಇದೆ. ಇದಲ್ಲದೆ ಮೂರು ಸಮುದಾಯ ಆರೋಗ್ಯ ಕೇಂದ್ರಗಳಿದ್ದು ಇದರಲ್ಲಿ ತಲಾ 10 ಹಾಸಿಗೆಗಳಂತೆ ಒಟ್ಟು 30 ಹಾಸಿಗೆ ಸೌಲಭ್ಯ ಇದೆ. ಅತ್ಯಂತ ಕನಿಷ್ಟ ಅರೋಗ್ಯ ಸೌಕರ್ಯ ಇರುವ ಈ ದ್ವೀಪದಲ್ಲಿ ಕೊಂಚ ಹೆಚ್ಚಿನ ಚಿಕಿತ್ಸೆ ಬೇಕಾದರೂ ಕೊಚಿನ್ ಗೆ ತೆರಳಬೇಕಿದೆ. ಅಷ್ಟೇ ಅಲ್ಲ ಇಲ್ಲಿನ ಮಕ್ಕಳು ಪರೀಕ್ಷೆಗಳನ್ನು ಬರೆಯಬೇಕಾದರೂ ಕೊಚಿನ್ ಗೆ ತೆರಳಬೇಕಿದೆ. ಪ್ರಯಾಣಿಕರ ಹಡಗಿನಲ್ಲೇ ಕೊಚಿನ್ ಗೆ ತೆರಳಬೇಕಿದ್ದು ಪ್ರಯಾಣದ ಅವಧಿ 14 ರಿಂದ 20 ಘಂಟೆಗಳವರೆಗೆ ಇರುತ್ತದೆ.
ಈ ಕೇಂದ್ರಾಡಳಿತ ಭೂಪ್ರದೇಶವನ್ನು 1956 ರಲ್ಲಿ ರಚಿಸಲಾಯಿತು ಮತ್ತು ಅದಕ್ಕೆ 1973 ರಲ್ಲಿ ಲಕ್ಷದ್ವೀಪ ಎಂದುಹೆಸರಿಸಲಾಯಿತು. ಇದು ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದೆ. ಇದೊಂದು 36 ದ್ವೀಪಗಳ ಗುಂಪು ಆಗಿದ್ದು ಒಟ್ಟು ವಿಸ್ತೀರ್ಣ 32 ಚದರ ಕಿ.ಮೀ ಮತ್ತು ಇಡೀ ಲಕ್ಷದ್ವೀಪದಲ್ಲಿ ಕೇವಲ ಒಂದುಜಿಲ್ಲೆ ಇದೆ. ಈ ಎಲ್ಲಾ ದ್ವೀಪಗಳು ಕರಾವಳಿ ನಗರವಾದ ಕೊಚ್ಚಿಯಿಂದ 220 ರಿಂದ 440 ಕಿ.ಮೀ ದೂರದಲ್ಲಿದೆ. ಕೊಚಿನ್ನಿಂದ ವಿಮಾನ ಸೇವೆಯ ಜತೆಗೇ 7 ಹಡಗುಗಳು ಓಡಾಟನಡೆಸುತ್ತಿವೆ. ಇಂತಹ ಬಿಗಿ ಕ್ರಮಗಳಿಂದ ಲಕ್ಷದ್ವೀಪ ಆಡಳಿತ ಕೋವಿಡ್ ಸೋಂಕನ್ನು ಸಂಪೂರ್ಣ ತಡೆಗಟ್ಟಿದ್ದು ದೇಶಕ್ಕೆ ಮಾದರಿ ಆಗಿದೆ.






