ಲಿಂಗಾಯತ ವೀರಶೈವ ಸಮುದಾಯವನ್ನು ಒಬಿಸಿಗೆ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸಿಎಂ ಮುಂದಾಗಿರುವಾಗಲೇ ಮೀಸಲಾತಿಗಾಗಿ ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಿ ಎಂಬ ಆಗ್ರಹ ಕೇಳಿ ಬರುತ್ತಿದೆ. ಈಗಾಗಲೇ ಕುರುಬ ಸಮುದಾಯದ ಮುಂಖಡರು ಇದಕ್ಕಾಗಿ ರಾಜ್ಯಾದ್ಯಂತ ಬೃಹತ್ ಸಮಾವೇಶಗಳನ್ನು ನಡೆಸಲು ಮುಂದಾಗಿದ್ದಾರೆ. ಜನವರಿ 15ರಿಂದ ಫೆಬ್ರವರಿ 7ರವರೆಗೆ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲಿದ್ದಾರೆ. ಹಾಗೆಯೇ ದೆಹಲಿಗೊಂದು ನಿಯೋಗ ಹೋಗಿ ಕೇಂದ್ರ ಸರ್ಕಾರದ ಮೇಲೂ ಒತ್ತಡ ಹಾಕಲಿದ್ದಾರೆ. ರಾಜ್ಯದ ಪ್ರತಿ ವಿಭಾಗ, ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಕುರುಬರ ಸಮಿತಿ ರಚಿಸಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಕೊನೆಗೊಂದು ಬೃಹತ್ ಸಮಾವೇಶ ಮಾಡಲಿದ್ದಾರೆ. ಇದಕ್ಕಾಗಿ ಕುರುಬ ಸಮಾಜದ ಎಲ್ಲಾ ರಾಜಕೀಯ ಗಣ್ಯರು, ಸಚಿವರು, ಶಾಸಕರು ತಮ್ಮ ಪಕ್ಷಗಳ ಮೇಲೆ ಒತ್ತಡ ಹೇರಬೇಕು ಎಂದು ಕರೆ ನೀಡಿದ್ದಾರೆ.
ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಪಡೆಯಬೇಕು. ಇದಕ್ಕಾಗಿ ಅಗತ್ಯ ಬಿದ್ದರೆ ಸಮಾಜದ ಸಚಿವರು ಹಾಗೂ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕನಕ ಗುರುಪೀಠದ ಹೊಸದುರ್ಗ ಪೀಠದ ಜಗದ್ಗುರು ಈಶ್ವರನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ. ಈ ಸಂಬಂಧ ಮಾತಾಡಿರುವ ಇವರು, ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಸಿಗಲೇಬೇಕು. ಒಂದು ವೇಳೆ ಸಮುದಾಯಕ್ಕಾಗಿ ಶಾಸಕರು, ಮಂತ್ರಿಗಳು ಅಧಿಕಾರ ತ್ಯಾಗ ಮಾಡಬೇಕೆಂದರೆ ಮಾಡಲೇಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನು, ಕುರುಬ ಸಮಾಜದ ಎಚ್. ವಿಶ್ವನಾಥ, ಎಂ.ಟಿ.ಬಿ ನಾಗರಾಜ್ ಹಾಗೂ ಆರ್. ಶಂಕರ್ಗೆ ಸಚಿವ ಸ್ಥಾನ ನೀಡಬೇಕು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನಮ್ಮ ಸಮಾಜದ ನಾಲ್ವರು ಶಾಸಕರ ಪಾತ್ರ ಹೆಚ್ಚಿದೆ. ಇವರು ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿಗೆ ಬಂದಿದ್ದರಿಂದಲೇ ಅಧಿಕಾರಕ್ಕೆ ಬಂದರು. ಹೀಗಾಗಿ ಕೊಟ್ಟ ಮಾತನ್ನು ಯಡಿಯೂರಪ್ಪ ಉಳಿಸಿಕೊಳ್ಳಬೇಕು. ನಮ್ಮ ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಈ ಸರ್ಕಾರದಲ್ಲಿ ನಮಗೆ ನ್ಯಾಯ ಸಿಗದಿದ್ದರೆ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಮೀಸಲಾತಿ ಹೋರಾಟದ ಹಿಂದಿನ ಉದ್ದೇಶ ಈಶ್ವರಪ್ಪ ಅವರ ಪುತ್ರ ಕಾಂತೇಶ ಅವರನ್ನು ಮುನ್ನಲೆಗೆ ತರುವುದು ಎಂದು ಹೇಳಲಾಗುತ್ತಿದೆ. ಇದರ ಹಿಂದೆ ಈಶ್ವರಪ್ಪ ಅವರ ಹಿತಾಸಕ್ತಿ ಇದೆ ಎಂಬ ಆರೋಪ ಕೇಳಿ ಬಂದಿದೆ. ಆದ್ದರಿಂದಲೇ ಸಿದ್ದರಾಮಯ್ಯ ಕುರುಬ ಸಮಾಜದ ಮೀಸಲಾತಿ ಹೋರಾಟಕ್ಕೆ ಬರುತ್ತಿಲ್ಲ ಎನ್ನಲಾಗುತ್ತಿದೆ.
ಕುರುಬ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಇಲ್ಲ. ಇವರ ಒಪ್ಪಿಗೆ ಪಡೆಯದೇ ಈ ಹೋರಾಟ ಮಾಡಲಾಗುತ್ತಿದೆ, ಹಾಗಾಗಿಯೇ ಸಿದ್ದರಾಮಯ್ಯ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಈಶ್ವರಪ್ಪ- ಸಿದ್ದರಾಮಯ್ಯ ಇಬ್ಬರು ವಿರುದ್ಧ ದಿಕ್ಕಿನಲ್ಲಿಯೇ ಇದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.
ಮೀಸಲಾತಿಗೆ ಆಗ್ರಹಿಸಿ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಆರಂಭಿಸಲಿದ್ದೇವೆ. ಪಾದಯಾತ್ರೆ ಫೆ.7ರಂದು ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ. ಈ ವೇಳೆ ಸಿದ್ದರಾಮಯ್ಯ- ಈಶ್ವರಪ್ಪರನ್ನು ಒಂದೇ ವೇದಿಕೆಗೆ ತರಲು ಪ್ರಯತ್ನಿಸಲಾಗುವುದು ಎಂದು ಕುರುಬ ಸಮುದಾಯದ ಹೋರಾಟಗಾರರು ಹೇಳುತ್ತಿದ್ದಾರೆ.
Also Read: ತಮ್ಮ ಅಸ್ತಿತ್ವಕ್ಕಾಗಿ ಕುರುಬರನ್ನು ST ಗೆ ಸೇರಿಸುವ ಹೋರಾಟದ ಮುಂಚೂಣಿಗೆ ಬಂದಿದ್ದಾರಾ ಈಶ್ವರಪ್ಪ?
ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಕುರುಬರನ್ನು ಬುಡಕಟ್ಟು ಜನಾಂಗವೆಂದು ಕರೆದಿದ್ದರು. ಜೊತೆಗೆ ದಕ್ಷಿಣ ಭಾರತದ ಅತ್ಯಂತ ಪುರಾತನ ಮೂಲ ನಿವಾಸಿಗಳು, ಅರೆನಾಗರಿಕ ಬುಡಕಟ್ಟು ಜನಾಂಗದವರೆಂದು ಅವರು ದಾಖಲಿಸಿದ್ದರು. ಸ್ವಾತಂತ್ರ್ಯಾನಂತರ ಕುರುಬ ಉಪಪಂಗಡದ ಕೆಲವು ಜಾತಿಗಳು ಪರಿಶಿಷ್ಟ ಜಾತಿಗೆ ಸೇರುವುದರೊಂದಿಗೆ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾದವು. ಆದರೆ ನಿಜವಾದ ಕುರುಬರಿಗೆ ಅನ್ಯಾಯವಾಗಿದೆ ಎಂಬುದು ಕುರುಬ ಸಮಾಜದ ಮುಖಂಡರ ಅಭಿಪ್ರಾಯ.
ಕುರುಬ ಸಮಾಜದಲ್ಲಿ ಕುರುಬ, ಗೊಂಡ, ಕಾಡು ಕುರುಬ, ಜೇನು ಕುರುಬ, ಕುರುಂಬನ್ ಮತ್ತು ಕಟ್ಟುನಾಯಕನ್ ಮೂಲ ಜಾತಿಗಳನ್ನು ಕೊಡಗು ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಅದನ್ನು ರಾಜ್ಯದಾದ್ಯಂತ ವಿಸ್ತರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು, ಕುರುಬರ ಎಸ್ಟಿ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟಕ್ಕೆ ಮುಂದಾಗಿದ್ದಾರೆ.