ಮಾಟ ಮಂತ್ರ, ರಾಜಿ ಪಂಚಾಯ್ತಿ, ಕಷ್ಟ- ಸಂಕಷ್ಟ ಪರಿಹಾರದ ನಂಬಿಕೆಯ ಕಾರಣಕ್ಕೆ ಹೆಸರಾಗಿರುವ ಸಿಗಂದೂರು ದೇವಾಲಯ, ಇದೀಗ ಸ್ವತಃ ವಿವಾದದ ಕೇಂದ್ರವಾಗಿದೆ. ಅಮಾಯಕ ಭಕ್ತರ ತಟ್ಟೆಕಾಸಿನ ವಿಷಯದಲ್ಲಿ ದೇವಾಲಯದ ಇಬ್ಬರು ಪ್ರಮುಖರ ನಡುವೆ ಭುಗಿಲೆದ್ದಿರುವ ಸಂಘರ್ಷ ಪರಸ್ಪರ ತೊಡೆ ತಟ್ಟುವ ಮಟ್ಟಕ್ಕೆ ಬೆಳೆದುನಿಂತಿದೆ. ಹಾಗಾಗಿ ಕರೋನಾ ಲಾಕ್ ಡೌನ್ ನಡುವೆಯೂ ಸಿಗಂದೂರು ಭಾರೀ ಸುದ್ದಿಯಲ್ಲಿದೆ.
ಶರಾವತಿ ಹಿನ್ನೀರಿನ ದ್ವೀಪ ತುಮರಿ ಭಾಗದಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯ, ಕಳೆದ ಎರಡು ದಶಕಗಳಿಂದ ರಾಜ್ಯದ ಪ್ರಮುಖ ಪೂಜಾ ಸ್ಥಳವಾಗಿ, ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಅಲ್ಲಿನ ದೇವರ ಮೇಲಿ ಭಕ್ತಿ ಮತ್ತು ಶಕ್ತಿಯ ಕುರಿತ ಪ್ರಭಾವಳಿಯ ಕಾರಣಕ್ಕೆ ನಿತ್ಯ ಸಾವಿರಾರು ಮಂದಿ ರಾಜ್ಯದ ಮೂಲೆಮೂಲೆಯಿಂದ ದೇವಾಲಯಕ್ಕೆ ಆಗಮಿಸುವುದು, ಪೂಜೆಪುನಸ್ಕಾರ ನಡೆಸುವುದು, ಹೋಮಹವನ ಮಾಡಿಸುವುದು, ಹರಕೆ ತೀರಿಸುವುದು ಹೀಗೆ ಹಲವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ದೇವಾಲಯಕ್ಕೆ ನೂರಾರು ಕೋಟಿ ಆದಾಯ ಹರಿದು ಬರುತ್ತಿದೆ. ಹೀಗೆ ಹರಿದು ಬರುವ ಭಕ್ತರ ದುಡ್ಡೇ ಈಗ ದೇವಾಲಯದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಭಕ್ತರ ಎಲ್ಲಾ ಕಷ್ಟ ಪರಿಹಾರ ಮಾಡುವ ಕ್ಷೇತ್ರವೇ ಈಗ ಸಂಕಷ್ಟಕ್ಕೆ ಸಿಲುಕಿದೆ!
ವಾಸ್ತವವಾಗಿ ದೇವಾಲಯದಲ್ಲಿ ಎರಡು ಬಣಗಳಾಗಿದ್ದು, ದೇವಾಲಯದ ಧರ್ಮದರ್ಶಿ ಎಂದು ಹೇಳಲಾಗುವ ರಾಮಪ್ಪ ಮತ್ತು ಅವರ ಕುಟುಂಬ ಒಂದು ಕಡೆಯಾದರೆ, ಪ್ರಧಾನ ಅರ್ಚಕರೆಂದು ಹೇಳಲಾಗುವ ಶೇಷಗಿರಿ ಭಟ್ ಮತ್ತು ಅವರ ಕಡೆಯುವರು ಮತ್ತೊಂದು ಬಣವಾಗಿದ್ದಾರೆ. ಈ ಎರಡು ಬಣಗಳ ನಡುವೆ ಕಳೆದ ಎರಡು ಮೂರು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ತಟ್ಟೆಕಾಸಿನ ಕುರಿತ ಕಿತ್ತಾಟ, ಇದೀಗ ವ್ಯಾಪಕ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆಯುವರ ನಡುವೆ ದೇವಾಲಯದ ಆವರಣದಲ್ಲಿಯೇ ಕೈಕೈ ಮಿಲಾವಣೆಯ ವರೆಗೆ ಸಂಘರ್ಷ ಬೆಳೆದಿದ್ದು, ಸದ್ಯ ಪರಸ್ಪರರು ಬಾಡಿಗೆ ಬಂಟರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖವಾಗಿ ದೇವಾಲಯದ ಆಡಳಿತ, ಅಭಿವೃದ್ಧಿ ನೋಡಿಕೊಳ್ಳುವ ರಾಮಪ್ಪ ಮತ್ತು ಅವರದೇ ಕೌಟುಂಬಿಕ ಟ್ರಸ್ಟ್, ದೇವಾಲಯದ ಆದಾಯದಲ್ಲಿ ಹುಂಡಿ ಕಾಸು, ಹರಕೆ, ರಶೀದಿ ಸೇವೆಗಳ ಹಣ, ಮನಿ ಆರ್ಡರ್, ವಸ್ತು-ಒಡವೆ ಕಾಣಿಕೆಗಳು ತನಗೆ ಸಲ್ಲಬೇಕು ಎಂದು ಅವುಗಳನ್ನೆಲ್ಲಾ ಪಡೆಯುತ್ತಿತ್ತು. ದೇವಾಲಯದ ಪ್ರಧಾನ ಅರ್ಚಕ ಶೇಷಗಿರ ಭಟ್, ಆರತಿ ತಟ್ಟೆಗೆ ಹಾಕುವ ತಟ್ಟೆಕಾಸು, ರಶೀದಿ ರಹಿತ ಸೇವೆಗಳ ಹಣ, ಹೋಮ-ಹವನದ ವೆಚ್ಚ, ವಿಶೇಷ ಮಂಗಳಾರತಿ, ಮಹಾ ಮಂಗಳಾರತಿಯ ಹಣವನ್ನು ತನ್ನ ಪಾಲು ಎಂದು ಪಡೆಯುತ್ತಿದ್ದರು. ಇದು ದಶಕಗಳಿಂದ ನಡೆದುಕೊಂಡ ಪದ್ಧತಿಯಾಗಿತ್ತು. ಆದರೆ, ಇದೀಗ ಕಳೆದ ಕೆಲವು ವರ್ಷಗಳಿಂದ ಹೋಮ-ಹವನಗಳ ಮೂಲಕ ಭಟ್ಟರು ನಿತ್ಯ ಲಕ್ಷಾಂತರ ರೂಪಾಯಿ ಆದಾಯ ಪಡೆಯತೊಡಗಿದ ಮೇಲೆ ಧರ್ಮದರ್ಶಿ ಮತ್ತು ಅರ್ಚಕರ ನಡುವೆ ಹಣಕಾಸಿನ ವಿಷಯದಲ್ಲಿ ವೈಮನಸ್ಯ ಹೆಡೆ ಎತ್ತಿತ್ತು.
ದೇವಿಯ ಪ್ರಭಾವಳಿಯ ಕುರಿತ ದಂತಕಥೆಗಳು ಬೆಳೆದು, ಚೌಡೇಶ್ವರಿ ಚಾಮುಂಡೇಶ್ವರಿಯಾಗಿ ಅವತಾರವೆತ್ತಿದ್ದಂತೆಯೇ, ದೇವಾಲಯದ ಅಂಗಳದಲ್ಲಿ ಆದಾಯದ ವಾರಸುದಾರಿಕೆಯ ಕಲಹ ಕೂಡ ಬೆಳೆಯುತ್ತಲೆ ಹೋಯಿತು. ದೇವಾಲಯದ ಪ್ರಧಾನ ಅರ್ಚಕರಿಗೆ ಟ್ರಸ್ಟಿನಿಂದ ವೇತನ ನೀಡುವುದರಿಂದ ದೇವಾಲಯದ ಎಲ್ಲಾ ರೀತಿಯ ಆದಾಯವೂ ಸಂಪೂರ್ಣವಾಗಿ ಟ್ರಸ್ಟ್ ಅಥವಾ ಧರ್ಮದರ್ಶಿಗೇ ಸೇರಬೇಕು. ನೀವು ಸಂಬಳ ಪಡೆದು ಪೂಜೆ ಮಾಡಿಕೊಂಡು ಇರುವುದಾದರೆ ಇರಿ, ಇಲ್ಲವಾದರೆ ಬಿಟ್ಟು ಹೊರಡಿ ಎಂದು ಹುಕುಂ ಹೊರಡಿಸಿದ ಧರ್ಮದರ್ಶಿಗಳು ಮತ್ತು ಹಿಂದಿನ ಪದ್ಧತಿಯಿಂದ ತಮಗೆ ಸಲ್ಲಬೇಕಾದ ಹಣ ಸಲ್ಲಬೇಕು ಎಂಬ ಹಠಕ್ಕೆ ಬಿದ್ದ ಪ್ರಧಾನ ಅರ್ಚಕರ ನಡುವಿನ ಕದನ ಕೆಲವು ದಿನಗಳ ಹಿಂದೆ ಅಕ್ಷರಶಃ ಮಾರಾಮಾರಿಯ ಮಟ್ಟಕ್ಕೆ ಹೋಗಿತ್ತು. ಧರ್ಮದರ್ಶಿಗಳ ಕಡೆಯವರು ಬಲಪ್ರಯೋಗದ ಮೂಲಕ ತಮ್ಮನ್ನು ಹೊರಗಟ್ಟಲು ಮುಂದಾದಾಗ, ಭಟ್ಟರೂ ಹುಬ್ಬಳ್ಳಿ ಕಡೆಯಿಂದ ಕೆಲವರು ಭಂಟರನ್ನು ಕರೆಸಿಕೊಂಡು ತಾವೂ ಬಲಪ್ರದರ್ಶನಕ್ಕೆ ಮುಂದಾದರು. ಅಷ್ಟೇ ಅಲ್ಲದೆ, ತಮ್ಮ ಸಮುದಾಯದ ರಾಮಚಂದ್ರಾಪುರ ಮಠದ ಮೊರೆಹೋಗಿ, ಧರ್ಮದರ್ಶಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದರು. ಆದರೆ, ಮಠದವರು ಮಧ್ಯಸ್ಥಿಕೆ ಹೊಂದಾಣಿಕೆಯ ಸೂತ್ರ ಯಶಸ್ವಿಯಾಗಲಿಲ್ಲ. ಹಾಗಾಗಿ ಭಟ್ಟರು ನೇರವಾಗಿ ಮುಖ್ಯಮಂತ್ರಿಗಳ ಮುಂದೆ ದೂರು ತೋಡಿಕೊಂಡಿದ್ದರು. ಸಿಎಂ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸುವಂತೆ ಸ್ಥಳೀಯ ಶಾಸಕ ಹಾಗೂ ಸ್ವತಃ ಧರ್ಮದರ್ಶಿ ರಾಮಪ್ಪ ಅವರ ಅಳಿಯ ಹರತಾಳು ಹಾಲಪ್ಪ ಅವರಿಗೆ ಸೂಚಿಸಿದ್ದರು. ಆದರೆ, ಶಾಸಕರ ಪ್ರಯತ್ನ ಕೂಡ ಫಲ ನೀಡಿಲ್ಲ. ಹಾಗಾಗಿ ತಟ್ಟೆಕಾಸಿನ ಜುಗಲ್ ಬಂಧಿ ಯಥಾ ಪ್ರಕಾರ ಮುಂದುವರಿದಿದೆ.
ಇದೀಗ ಈ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದ್ದು, ಸಾಗರ ದಸಂಸ(ದಲಿತ ಸಂಘರ್ಷ ಸಮಿತಿ) ಮತ್ತು ಮಲೆನಾಡಿನ ಹಲವು ಜನಪರ ಸಂಘಟನೆಗಳು ಭಕ್ತರ ಹಣದ ವಿಷಯದಲ್ಲಿ ದೇವಾಲಯದಲ್ಲಿ ಎರಡು ಬಣಗಳ ನಡುವೆ ಸಂಘರ್ಷ ಉಂಟಾಗಿದ್ದು, ಪರಸ್ಪರರು ರೌಡಿ ಪಡೆಗಳನ್ನು ಜೊತೆಗಿಟ್ಟುಕೊಂಡು ಕತ್ತಿ ಮಸೆಯುತ್ತಿದ್ದಾರೆ. ಹಾಗಾಗಿ, ದೇವಾಲಯವನ್ನು ಕೂಡಲೇ ಮುಜರಾಯಿ ಇಲಾಖೆಯ ವಶಕ್ಕ ಪಡೆಯಬೇಕು. ಅಮಾಯಕ ಭಕ್ತರು ದೇವಾಲಯದ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿಯಾಗದಂತೆ ಸ್ವಚ್ಛ, ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯವಸ್ಥೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.
“ಮುಖ್ಯವಾಗಿ ಜನರ ಕಾಣಿಕೆಯ ಹಣ ಮತ್ತು ಹರಕೆಯ ನಗ-ನಗದುಗಳು ಇಬ್ಬರು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ವಾರ್ಷಿಕ ನೂರಾರು ಕೋಟಿ ಹಣ ಮತ್ತು ವಸ್ತು ಒಡೆವೆ ಸಂದಾಯವಾಗುತ್ತಿದ್ದರೂ, ಅದಾವುದಕ್ಕೂ ಲೆಕ್ಕಪತ್ರವಿಲ್ಲ, ಹೊಣೆಗಾರಿಕೆ ಇಲ್ಲ, ಉತ್ತರದಾಯಿತ್ವವೂ ಇಲ್ಲ. ತೆರಿಗೆಯಾಗಲೀ, ಸರ್ಕಾರಕ್ಕೆ ಲೆಕ್ಕಪತ್ರವಾಗಲೀ ಸಲ್ಲಿಸುತ್ತಿಲ್ಲ. ಕನಿಷ್ಟ ದೇವಾಲಯದ ಸುತ್ತಮುತ್ತಲ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಕನಿಷ್ಟ ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು ಮುಂತಾದ ನಾಗರಿಕ ಸೌಲಭ್ಯಗಳಿಗೂ ಚಿಕ್ಕಾಸು ಬಳಕೆಯಾಗುತ್ತಿಲ್ಲ. ಹಾಗಾಗಿ, ಕೂಡಲೇ ದೇವಾಲಯದ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನೂರಾರು ಕೋಟಿ ಅಕ್ರಮ ಆಸ್ತಿ ಪತ್ತೆ ಮಾಡಿ, ವಶಪಡಿಸಿಕೊಳ್ಳಬೇಕು ಮತ್ತು ದೇವಾಲಯವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು” ಎಂದು ದಸಂಸ ನಾಯಕ ದೂಗೂರು ಪರಮೇಶ್ವರ ಆಗ್ರಹಿಸಿದ್ದಾರೆ. ಸೋಮವಾರ ಸಾಗರದಲ್ಲಿ ಈ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆಗ್ರಹ ಮುಂದಿಟ್ಟಿದ್ದಾರೆ.
‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಅವರು, “ಭಕ್ತರ ಹಣ ಸಂಪೂರ್ಣ ದುರುಪಯೋಗವಾಗುತ್ತಿದೆ. ದುಡ್ಡಿನ ವಿಷಯದಲ್ಲಿಯೇ ಇದೀಗ ಇಬ್ಬರ ನಡುವೆ ಸಂಘರ್ಷ ಉಂಟಾಗಿದೆ. ಅಕ್ರಮ ಗಳಿಕೆಯ ಹಣ ದೇವಾಲಯ ಅಥವಾ ಆ ದ್ವೀಪ ಪ್ರದೇಶದ ಒಳಿತಿಗೆ ಬಳಕೆಯಾಗುವ ಬದಲು ರಾಮಪ್ಪ ಮತ್ತು ಭಟ್ಟರ ಖಜಾನೆ ಪಾಲಾಗುತ್ತಿದೆ. ಇಬ್ಬರೂ ರಾಜ್ಯದ ಮೂಲೆಮೂಲೆಯಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ, ತೋಟ- ಜಮೀನು ಖರೀದಿಸಿದ್ದಾರೆ. ನೂರಾರು ಕೋಟಿ ಮೌಲ್ಯದ ಈ ಆಸ್ತಿಪಾಸ್ತಿ ಸಂಪೂರ್ಣ ಅಕ್ರಮ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಕ್ಕೆ ದೂರು ಸಲ್ಲಿಸಿದ್ದೇವೆ. ಜೊತೆಗೆ ಸಿಎಂ ಅವರಿಗೂ ಮನವಿ ಮಾಡಿದ್ದೇವೆ. ದೇವಾಲಯದ ಹೆಸರಿನಲ್ಲಿ ಅರಣ್ಯ ಭೂಮಿ ಕಬಳಿಕೆ, ಸರ್ಕಾರಿಜಮೀನು ಒತ್ತುವರಿಯಂತಹ ಅಕ್ರಮಗಳನ್ನೂ ಈ ಇಬ್ಬರು ಎಸಗಿದ್ದಾರೆ. ಆ ಬಗ್ಗೆ ಕೂಡ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದರು.
ಈ ನಡುವೆ, ಇಬ್ಬರ ನಡುವಿನ ವಿವಾದ ಬಗೆಹರಿಯದೇ ಇದ್ದಲ್ಲಿ, ದೇವಾಲಯವನ್ನು ಮುಜರಾಯಿ ಇಲಾಖೆಯ ವಶಕ್ಕೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಸಾಗರದ ಜನಪ್ರತಿನಿಧಿಗಳ ಕಡೆಯಿಂದಲೇ ಸರ್ಕಾರದ ಉನ್ನತ ಮಟ್ಟಕ್ಕೆ ರವಾನೆಯಾಗಿದೆ. ಸ್ಥಳೀಯವಾಗಿ ಎರಡು ಪ್ರಬಲ ಸಮುದಾಯಗಳ ನಡುವಿನ ಸಂಘರ್ಷವಾಗಿ ಈ ವಿವಾದ ಬೆಳೆಯುವ ಸಾಧ್ಯತೆ ಇದ್ದು, ಹಾಗೇನಾದರೂ ಆದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೇ ಕೊಡಲಿ ಪೆಟ್ಟು ಎಂಬುದನ್ನು ಊಹಿಸಿರುವ ಸ್ಥಳೀಯ ನಾಯಕರು, ಸರಳ ಪರಿಹಾರವಾಗಿ ಮುಜರಾಯಿ ಇಲಾಖೆಯ ಅಸ್ತ್ರ ಪ್ರಯೋಗಕ್ಕೆ ಮುಂದಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಈ ನಡುವೆ, ಧರ್ಮದರ್ಶಿ ಮತ್ತು ಭಟ್ಟರ ನಡುವಿನ ಸಂಘರ್ಷ, ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಹಲವು ಅಕ್ರಮಗಳ ಬಗ್ಗೆಯೂ ಸಾರ್ವಜನಿಕ ಚರ್ಚೆಗೆ ಚಾಲನೆ ನೀಡಿದ್ದು, ವಿವಾದ ದೇವಾಲಯದ ಖ್ಯಾತಿಯ ರೀತಿಯಲ್ಲೇ ಬಿರುಗಾಳಿಯಂತೆ ಹಬ್ಬತೊಡಗಿದೆ.