ಇತ್ತೀಚೆಗೆ ಕಾರ್ಪೊರೆಟ್ ವಲಯಕ್ಕೆ 1.40 ಲಕ್ಷ ಕೋಟಿ ರುಪಾಯಿ ತೆರಿಗೆ ಕಡಿತದ ‘ಉಡುಗೊರೆ’ ನೀಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರಿಗಾಗಿ ಏನು ಮಾಡಿದೆ ಗೊತ್ತೇ? ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶಾಲಾ ಶಿಕ್ಷಣಕ್ಕಾಗಿ ಮೀಸಲಾಗಿಟ್ಟಿದ್ದ ಮೊತ್ತದಲ್ಲಿ 3,000 ಕೋಟಿ ರುಪಾಯಿಗಳನ್ನು ಕಡಿತ ಮಾಡಿದೆ. ಸಾಮಾನ್ಯವಾಗಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೀಸಲಿಟ್ಟ ಹಣಕ್ಕಿಂತ ಹೆಚ್ಚಿನ ಅನುದಾನ ನೀಡುವುದು ಜನಪರ ಸರ್ಕಾರದ ಸೌಜನ್ಯದ ನಡವಳಿಕೆ. ಆದರೆ, ಮೋದಿ ಸರ್ಕಾರ ಈ ಸೌಜನ್ಯದ ನಡವಳಿಕೆಗೆ ವ್ಯತಿರಿಕ್ತವಾಗಿ ಬಜೆಟ್ ನಲ್ಲಿ ಮೀಸಲಿಟ್ಟ ಮೊತ್ತದಲ್ಲೇ 3,000 ಕೋಟಿ ರುಪಾಯಿ ಕಡಿತ ಮಾಡಿದೆ.
‘ದಿ ಪ್ರಿಂಟ್’ ವರದಿ ಪ್ರಕಾರ, ಮೋದಿ ಸರ್ಕಾರವು ಹಣದ ಕೊರತೆಯ ನೆಪವೊಡ್ಡಿ ಬಜೆಟ್ ನಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟಿದ್ದ ಮೊತ್ತದಲ್ಲಿ 3,000 ಕೋಟಿ ರುಪಾಯಿಗಳನ್ನು ಕಡಿತ ಮಾಡಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ (2019-20) ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಕಡಿತ ಮಾಡಲಾಗುತ್ತಿದೆ.
ಶಿಕ್ಷಣದ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯದ ಉನ್ನತ ಮೂಲಗಳ ಪ್ರಕಾರ- ಹಣಕಾಸು ಸಚಿವಾಲಯವು 3,000 ಕೋಟಿ ಹಣ ಕಡಿತ ಮಾಡುವುದರ ಪ್ರಸ್ತಾಪದ ಹಿಂದಿನ ಕಾರಣವು ಹಣದ ಕೊರತೆಯಾಗಿದೆ. 2019-20ರ ವಿತ್ತೀಯ ವರ್ಷದಲ್ಲಿ 56,536.63 ಕೋಟಿ ರೂ.ಗಳನ್ನು ಶಾಲಾ ಶಿಕ್ಷಣ ಇಲಾಖೆಗೆ ಮಂಜೂರು ಮಾಡಲಾಗಿದೆ. ಎರಡು ವಾರಗಳ ಹಿಂದೆ ಮಾನವ ಸಂಪನ್ಮೂಲ ಇಲಾಖೆ ಮತ್ತು ಹಣಕಾಸು ಸಚಿವಾಲಯಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ಹಣ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ವರದಿ ಮಾಡಿದೆ.
‘ಹಣಕಾಸು ಸಚಿವಾಲಯದ ಅಧಿಕಾರಿಗಳು ಶಾಲಾ ಶಿಕ್ಷಣಕ್ಕಾಗಿ ಬಜೆಟ್ ಅನ್ನು 3,000 ಕೋಟಿ ರೂ.ಗಳಷ್ಟು ಕಡಿಮೆಗೊಳಿಸಬೇಕಾಗಿದೆ’ ಎಂದು ಮಾನವಸಂಪನ್ಮೂಲ ಇಲಾಖೆಗೆ ತಿಳಿಸಿದ್ದಾರೆಂದು ಸಚಿವಾಲಯದ ಮೂಲಗಳು ತಿಳಿಸಿವೆ. ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಪ್ರಸಕ್ತ ವಿತ್ತೀಯ ವರ್ಷದ ಬಜೆಟ್ ನಲ್ಲಿ ಮೀಸಲಾಗಿರುವಷ್ಟೂ ಅನುದಾನವನ್ನು ಒದಗಿಸುವಂತೆ ಹಣಕಾಸು ಸಚಿವಾಲಯಕ್ಕೆ ಕೋರಿದ್ದಾರೆ, ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ಪೂರ್ಣ ಅನುದಾನ ಪಡೆಯುವ ಪ್ರಯತ್ನವನ್ನು ಮುಂದುವರಿಸಿದ್ದರೆ ಎಂದು ‘ದಿ ಪ್ರಿಂಟ್’ ಹೇಳಿದೆ.
‘ಮಾನವ ಸಂಪನ್ಮೂಲ ಸಚಿವಾಲಯವು ಪೂರ್ಣ ಮೊತ್ತವನ್ನು ಬಿಡುಗಡೆ ಮಾಡಲು ಹಣಕಾಸು ಸಚಿವಾಲಯಕ್ಕೆ ಒತ್ತಾಯಿಸುತ್ತಿದೆ, ಏಕೆಂದರೆ ಶಾಲಾ ಶಿಕ್ಷಣ ಇಲಾಖೆಗೆ ಹಣವನ್ನು ಹೊಂದಿಸಿಕೊಳ್ಳಲು ಬೇರೆ ಮಾರ್ಗಗಳಿಲ್ಲ. ಉನ್ನತ ಶಿಕ್ಷಣ ಇಲಾಖೆಯು ಹೆಫಾ (ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ) ಯಂತಹ ವಿಷಯಗಳನ್ನು ಹೊಂದಿದೆ, ಅದರ ಮೂಲಕ ಅವರು ಹಣವನ್ನು ಸಂಗ್ರಹಿಸಬಹುದು, ಆದರೆ ಶಾಲಾ ಶಿಕ್ಷಣಕ್ಕೆ (ಇಲಾಖೆ) ಅಂತಹ ಯಾವುದೇ ಮಾರ್ಗಗಳಿಲ್ಲ’ ಎಂದು ಸಚಿವಾಲಯದ ಮತ್ತೊಂದು ಮೂಲ ತಿಳಿಸಿದೆ. ಉದ್ದೇಶಿತ ನಿಧಿ ಕಡಿತದ ಬಗ್ಗೆ ಕೇಳಿದಾಗ, ಮಾನವ ಸಂಪನ್ಮೂಲ ಸಚಿವಾಲಯದ ಅಧಿಕೃತ ವಕ್ತಾರರು ‘ಇದು ನಿಜವಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆಂದೂ, ಆದರೆ ಮುಂದಿನ ವಾರ ಈ ವಿಷಯದಲ್ಲಿ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಹಣಕಾಸು ಸಚಿವಾಲಯದ ಅಧಿಕೃತ ವಕ್ತಾರ ರಾಜೇಶ್ ಮಲ್ಹೋತ್ರಾ ಅವರಿಗೆ ಕಳುಹಿಸಿದ ಇಮೇಲ್ ಈ ವರದಿಯನ್ನು ಪ್ರಕಟಿಸುವ ಸಮಯದವರೆಗೆ ಉತ್ತರಿಸಿರಲಿಲ್ಲ ಎಂದೂ ‘ದಿ ಪ್ರಿಂಟ್’ ವರದಿ ಮಾಡಿದೆ.
ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಉದ್ದೇಶಿತ ಅನುದಾನ ಕಡಿತವು ಶಾಲಾ ಶಿಕ್ಷಣ ಇಲಾಖೆಯು ಹಮ್ಮಿಕೊಂಡಿರುವ ಅನೇಕ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ‘ಶಾಲಾ ಶಿಕ್ಷಣ ಇಲಾಖೆಯು ಅದರ ವಿವಿಧ ಯೋಜನೆಗಳನ್ನು ನಡೆಸಲು ಹಣದ ಅಗತ್ಯವಿದೆ. ಕೇಂದ್ರೀಯ ವಿದ್ಯಾಲಯಗಳಿಗೆ ಹಣ ಬೇಕು, ನವೋದಯ ವಿದ್ಯಾಲಯಗಳಿಗೆ ಹಣ ಬೇಕು, ಅನೇಕ ಶಿಕ್ಷಕರಿಗೆ ಸಂಬಳ ಕೂಡ ಸಿಕ್ಕಿಲ್ಲ. ಅನುದಾನದ ಪೈಕಿ 3,000 ಕೋಟಿ ರೂ.ಗಳನ್ನು ಕಡಿತಗೊಳಿಸಿದರೆ, ಏನಾಗುತ್ತದೆ ಎಂದು ನಮಗೆ ಖಚಿತವಿಲ್ಲ, ಆದ್ದರಿಂದ, ನಮಗೆ ಪೂರ್ಣ ಬಜೆಟ್ ನೀಡುವಂತೆ ನಾವು ಹಣಕಾಸು ಸಚಿವಾಲಯವನ್ನು ಕೋರುತ್ತಿದ್ದೇವೆ’ ಎಂದು ಮೂಲಗಳು ತಿಳಿಸಿವೆ. ಶಾಲಾ ಶಿಕ್ಷಣ ಇಲಾಖೆಯ ಹೆಚ್ಚಿನ ಹಣವನ್ನು ಸಮಗ್ರ ಶಿಕ್ಷಣ ಅಭಿಯಾನದಂತಹ ಕೇಂದ್ರ ಸರ್ಕಾರದ ಯೋಜನೆಗಳನ್ನು ನಡೆಸಲು ಬಳಸಲಾಗುತ್ತದೆ, ಇದು ‘ಶಾಲಾ ಶಿಕ್ಷಣ ಮತ್ತು ಸಮಾನ ಕಲಿಕೆಯ ಫಲಿತಾಂಶಗಳಿಗೆ ಸಮಾನ ಅವಕಾಶಗಳ ದೃಷ್ಟಿಯಿಂದ ಅಳೆಯುವ ಶಾಲಾ ಪರಿಣಾಮಕಾರಿತ್ವವನ್ನು ಸುಧಾರಿಸುವ’ ಗುರಿಯನ್ನು ಹೊಂದಿದೆ.
ಕಳೆದ ಮೂರು ವರ್ಷಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಬಜೆಟ್ ಅನ್ನು 9,000 ಕೋಟಿ ರೂ.ಗಳಷ್ಟು ಹೆಚ್ಚಿಸಲಾಗಿದೆ. 2017-18ನೇ ಸಾಲಿನಲ್ಲಿ ಸುಮಾರು 46,000 ಕೋಟಿ ರುಪಾಯಿಗಳಷ್ಟು ಇದ್ದದ್ದು 2019-20ನೇ ಸಾಲಿನಲ್ಲಿ 56536 ಕೋಟಿ ರುಪಾಯಿಗಳಿಗೆ ಏರಿಸಲಾಗಿದೆ. 2016-17ರ ಬಜೆಟ್ ಅಂದಾಜು 43,554 ಕೋಟಿ ರುಪಾಯಿ. ಪರಿಷ್ಕೃತ ಅಂದಾಜು 43,896 ಕೋಟಿ ರುಪಾಯಿ. 2017-18ರಲ್ಲಿ ಬಜೆಟ್ ಅಂದಾಜು 46,356 ಕೋಟಿ ರುಪಾಯಿ ಮತ್ತು ಪರಿಷ್ಕೃತ ಅಂದಾಜು 47,008 ಕೋಟಿ ರುಪಾಯಿ. 2018-19 ರಲ್ಲಿ ಬಜೆಟ್ ಅಂದಾಜು 50,000 ಕೋಟಿ ಮತ್ತು ಪರಿಷ್ಕೃತ 50,113 ಕೋಟಿ ರುಪಾಯಿಗಳಾಗಿವೆ.
ಸಾಮಾನ್ಯವಾಗಿ ಪರಿಷ್ಕೃತ ಅಂದಾಜು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ, ಪರಿಷ್ಕೃತ ಅಂದಾಜುಗಳು ಒಂದೇ ಆಗಿರುತ್ತವೆ ಅಥವಾ ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಬಜೆಟ್ ಅಂದಾಜು ಎಂಬುದು ಆಯ ವಿತ್ತೀಯ ವರ್ಷದಲ್ಲಿ ನಿಗದಿತ ಸಚಿವಾಲಯಕ್ಕೆ ಎಷ್ಟು ಅಗತ್ಯವಿರುತ್ತದೆ ಎಂಬುದರ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಲಾಗುತ್ತದೆ. ಆದರೆ ಪರಿಷ್ಕೃತ ಅಂದಾಜು ಎಂದರೆ ಆ ವರ್ಷದಲ್ಲಿ ಸಚಿವಾಲಯವು ಮಾಡುವ ಒಟ್ಟು ಖರ್ಚಿನ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ. ಬಹುತೇಕ ಸಚಿವಾಲಯಗಳಲ್ಲಿ ಬಜೆಟ್ ಅಂದಾಜಿಗಿಂತಲೂ ಪರಿಷ್ಕೃತ ಅಂದಾಜು ಶೇ.10ಕ್ಕಿಂತಲೂ ಹೆಚ್ಚಿರುತ್ತದೆ. ಹೀಗಾಗಿ ಬಜೆಟ್ ಅಂದಾಜಿನಲ್ಲಿ ಮೀಸಲಿಟ್ಟ ಅನುದಾನವನ್ನೇ ಕಡಿತ ಮಾಡಿದರೆ, ನಿಭಾಯಿಸುವುದು ಕಷ್ಟವಾಗುತ್ತದೆ. ಪ್ರಸ್ತುತ ಶಾಲಾ ಶಿಕ್ಷಣ ಇಲಾಖೆಗೆ ಅನುದಾನ ಕಡಿತ ಮಾಡಿರುವುದರಿಂದ ಹಲವು ಯೋಜನೆಗಳಿಗೆ ಹಿನ್ನಡೆಯಾಗಲಿದೆ.