ರಾಜ್ಯದಲ್ಲಿ ಕರೋನಾ ಸಾಂಕ್ರಾಮಿಕ ರೋಗ ವಿಪರೀತ ಹರಡುತ್ತಿರುವ ನಡುವೆಯೂ ಬಿಜೆಪಿ ನಾಯಕರು ಅಧಿಕಾರದ ವ್ಯಾಮೋಹದಲ್ಲಿ ಮಗ್ನರಾಗಿದ್ದಾರೆ. ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯತ್ತ ಬಿಜೆಪಿ ಶಾಸಕರು ತಮ್ಮ ಸಂಪೂರ್ಣ ಗಮನವಿಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿಯೇ ನಡೆಯುತ್ತಿದೆ.
ಈ ನಡುವೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ದೆಹಲಿಗೆ ಹೊರಟಿದ್ದು, ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ. ರಾಜ್ಯಕ್ಕೆ ಬರಬೇಕಾದ ನೆರೆ ಪರಿಹಾರ, ಜಿಎಸ್ಟಿ ಪಾಲು ಕುರಿತಂತೆ ವಿಸ್ಕೃತ ಚರ್ಚೆ ನಡೆಸಲಿದ್ದಾರೆ. ವಿಧಾನಸಭಾ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ಸುದ್ದಿಯ ಹಿನ್ನಲೆಯಲ್ಲಿ ಯಡಿಯೂರಪ್ಪ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅದಾಗ್ಯೂ ರಾಜ್ಯ ಸರ್ಕಾರದ ಬೇಡಿಕೆಗೆ ಇದುವರೆಗೂ ಸ್ಪಂದಿಸದ ಮೋದಿ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಪರಿಹಾರ ನಿಧಿ ತರಲು ನಡೆಸುವ ಬಿಎಸ್ವೈ ಚರ್ಚೆ ಪರಿಣಾಮಕಾರಿಯಾಗುವುದು ಸಂದೇಹ. ಮೋದಿ ಹುಟ್ಟಿದ ದಿನದ ಹಿನ್ನಲೆಯಲ್ಲಿ ಹಾಗೂ ರಾಜ್ಯ ಸರ್ಕಾರ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಯಡಿಯೂರಪ್ಪ ಪ್ರಧಾನಿಯನ್ನು ಭೇಟಿಯಾಗಲು ಉತ್ಸುಕರಾಗಿದ್ದಾರೆ. ಆದರೆ ಕರೋನಾ ಕಾರಣವಾಗಿಟ್ಟುಕೊಂಡು ಮೋದಿ ಬಿಎಸ್ವೈರನ್ನು ಭೇಟಿಯಾಗಲು ಅವಕಾಶ ನೀಡುವ ಸಾಧ್ಯತೆ ಕಡಿಮೆ. ಅದೂ ಅಲ್ಲದೆ, ಗೃಹಮಂತ್ರಿ ಅಮಿತ್ ಶಾ ಅನಾರೋಗ್ಯದ ಹಿನ್ನಲೆಯಲ್ಲಿ ಸಚಿವ ಸಂಪುಟದ ವಿಸ್ತರಣೆಯ ಚರ್ಚೆಯೂ ನಿರ್ಣಾಯಕವಾಗುವುದು ಬಹುತೇಕ ಅನುಮಾನ.
ಅದೇನೇ ಇದ್ದರೂ ಯಡಿಯೂರಪ್ಪ ದೆಹಲಿ ಭೇಟಿ ಸಚಿವಾಕಾಂಕ್ಷಿ ಶಾಸಕರಲ್ಲಿ ಕುತೂಹಲಭರಿತ ತಲ್ಲಣ ಉಂಟುಮಾಡಿದೆ. ಅಮಿತ್ ಶಾ ಅನುಪಸ್ಥಿತಿಯ ನಡುವೆಯೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾಗಲಿರುವ ಬಿಎಸ್ವೈ ಸಚಿವ ಸಂಪುಟದ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಆದರೆ ಬಿಜೆಪಿಯ ಅನಭಿಶಕ್ತ ʼಮಂತ್ರಿʼ ಯಾಗಿರುವ ಅಮಿತ್ ಶಾ ಹಸಿರು ನಿಶಾನೆಯಿಲ್ಲದೆ, ನವೀಕೃತ ಸಚಿವ ಪಟ್ಟಿಯನ್ನು ಯಡಿಯೂರಪ್ಪ ಅಂತಿಮಗೊಳಿಸುವುದು ಅನುಮಾನವಾದರೂ ಸಿಪಿ ಯೋಗೇಶ್ವರ್, ಉಮೇಶ್ ಕತ್ತಿ ಮೊದಲಾದ ನಾಯಕರು ಈಗಾಗಲೇ ಬಂಡಾಯ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ತೀವ್ರ ಇಕ್ಕಟ್ಟಿನಲ್ಲಿದ್ದಾರೆ.
ಅತ್ತ ಯಡಿಯೂರಪ್ಪ ದೆಹಲಿ ಪ್ರಯಾಣ ಯೋಜನೆ ಹಾಕುತ್ತಿದ್ದಂತೆಯೇ ರಾಜ್ಯ ಬಿಜೆಪಿ ನಾಯಕರು ಸಚಿವ ಸ್ಥಾನಕ್ಕೆ ಪೂಜೆ ಪುನಸ್ಕಾರಗಳ ಮೊರೆ ಹೋಗಿದ್ದಾರೆ. ಪ್ರಸ್ತುತ ಆರೋಗ್ಯ ಮಂತ್ರಿಯಾಗಿರುವ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ತನಗೆ ಉನ್ನತ ಸ್ಥಾನ ಸಿಗಲಿ ಎಂಬ ಕಾರಣಕ್ಕೇ ಯಾದಗಿರಿಯ ದುರ್ಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಸಚಿವರ ಭೇಟಿಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ದೇವಸ್ಥಾನದ ಅರ್ಚಕ ಮರಿಸ್ವಾಮಿ, ಸಚಿವ ಶ್ರೀರಾಮುಲು ಕರೋನಾ ಮುಕ್ತಿಗಾಗಿ ಹಾಗೂ ತಮಗೆ ರಾಜಕೀಯದಲ್ಲಿ ಒಳಿತಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ʼಉನ್ನತಸ್ಥಾನ ಸಿಗಲಿದೆʼ ಎಂದಿದ್ದಾರೆ.
ಒಂದು ವೇಳೆ ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರ ಅಸ್ತು ಸಿಕ್ಕರೆ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ಗೆ ಸಚಿವಸ್ಥಾನ ದೊರಕುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಉಮೇಶ್ ಕತ್ತಿ ಹಾಗೂ ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದ ಸಿ.ಪಿ ಯೋಗೇಶ್ವರ್ಗೆ ಕೂಡಾ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ. ಈ ಪೈಕಿ ಉಮೇಶ್ ಕತ್ತಿ ಈಗಾಗಲೇ ಬಿಎಸ್ವೈ ಸರ್ಕಾರದ ವಿರುದ್ಧ ಅಸಮಾಧಾನದ ಹೊಂದಿದ್ದಾರೆ. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಬಿಜೆಪಿ ರಾಜ್ಯಸಭಾ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಅವಕಾಶವಂಚಿತರಾಗಿದ್ದರು. ಇದೇ ಅಸಮಾಧಾನ ಉಮೇಶ್ ಕತ್ತಿಯೊಳಗೆ ಇದೆ.
ಶಿಥಿಲ ಕಾಲುಗಳ ಸಿಎಂ ಖುರ್ಚಿಯಲ್ಲಿ ಬಿಎಸ್ವೈ
ರೈತ ಚಳುವಳಿ ಮೂಲಕ ರಾಜಕೀಯಕ್ಕೆ ಬಂದ ಯಡಿಯೂರಪ್ಪ ಸಮಾಧಾನದಿಂದ ತನ್ನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತದ್ದೇ ಇಲ್ಲ. ಹಗರಣ, ಬಂಡಾಯ ಮೊದಲಾದವುಗಳಿಂದ ಯಡಿಯೂರಪ್ಪರ ಮುಖ್ಯಮಂತ್ರಿ ಖುರ್ಚಿಯ ಕಾಲು ಸದಾಕಾಲ ಅಲುಗಾಡುತ್ತಿರುತ್ತವೆ. ಸದ್ಯ ಕೋವಿಡ್ ಹಗರಣದ ಕುರಿತಂತೆ, ರಾಜ್ಯಾಡಳಿತದಲ್ಲಿ ಬಿ ವೈ ವಿಜಯೇಂದ್ರರ ಹಗರಣ ಹಾಗೂ ಅನಗತ್ಯ ಹಸ್ತಕ್ಷೇಪದ ಕುರಿತಂತೆ, ಜಿಎಸ್ಟಿ- ನೆರೆ ಪರಿಹಾರದ ಪಾಲು ಬರದಿರುವ ಕುರಿತಂತೆ ಅಧಿವೇಶನದಲ್ಲಿ ಬಿಎಸ್ವೈ ಸರ್ಕಾರಕ್ಕೆ ಛೀಮಾರಿ ಹಾಕಲು ವಿಪಕ್ಷ ಸಜ್ಜಾಗಿವೆ.
ಇನ್ನೊಂದು ಕಡೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯ ಬಿಜೆಪಿಯಲ್ಲಿ ತನ್ನ ಪ್ರಭಾವ ಬೀರಲು ಪ್ರಾರಂಭಿಸಿದ್ದಾರೆ. ಸಚಿವಾಕಾಂಕ್ಷಿ ಶಾಸಕರು ಬಿಎಸ್ವೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಪುತ್ರ ಹಾಗೂ ಬಿಜೆಪಿಯ ಉಪಾಧ್ಯಕ್ಷ ವೈ ಬಿ ವಿಜಯೇಂದ್ರ, ಯಾವುದೇ ಸಾಂವಿಧಾನಿಕ ಹುದ್ದೆಯಿಲ್ಲದಿದ್ದರೂ ಸರ್ಕಾರದಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸುತ್ತಿರುವುದು ಕೆಲವು ಬಿಜೆಪಿ ನಾಯಕರೊಳಗೂ ಇರುಸು-ಮುರುಸು ತಂದಿದೆ.
ಇದೆಲ್ಲದರ ನಡುವೆ ಕೇಂದ್ರ ನಾಯಕರ ಎದುರು ಯಡಿಯೂರಪ್ಪ ಕೈಕಟ್ಟಿ ನಿಲ್ಲಬೇಕಿದೆ. ಕೇಂದ್ರ ವಿರುದ್ಧ ಗಟ್ಟಿದನಿಯಲಿ ಮಾತನಾಡಿ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಹಾಗೂ ನೆರೆ ಪರಿಹಾರದ ಮೊತ್ತವನ್ನು ತರಲು ಸಾಧ್ಯವಾಗದೆ ವಿಪಕ್ಷಗಳ ವಾಗ್ದಾಳಿಗೆ ತುತ್ತಾಗಬೇಕು ಹಾಗೂ ಬಿ ಎಲ್ ಸಂತೋಷ್ ಪ್ರಭಾವಿ ಢಾಳಾಗಿರುವ ಹೈಕಮಾಂಡಿನಲ್ಲಿ ಸಚಿವ ಸಂಪುಟದ ವಿಸ್ತರಣೆಯ ತನ್ನ ಪಟ್ಟಿಗೆ ಹಸಿರು ನಿಶಾನೆ ಪಡೆಯಬೇಕು. ಒಟ್ಟಿನಲ್ಲಿ ಯಡಿಯೂರಪ್ಪ ಹಲವು ಸವಾಲುಗಳನ್ನು ನಾಜೂಕಾಗಿ ನಿಭಾಯಿಸಬೇಕಾದ ಅನಿವಾರ್ಯ ಒತ್ತಡದಲ್ಲಿದ್ದಾರೆ.