ಮಾನ್ಯ ಅಧ್ಯಕ್ಷರೆ, ದಿಸ್ ಈಸ್ ಟೂ ಮಚ್. ಯು ಕಾಂಟ್ ಸಪ್ರೆಸ್ ಅವರ್ ಡೆಮಾಕ್ರಸಿ, ಯು ಕಾಂಟ್ ಸಪ್ರೆಸ್ ಅವರ್ ವಾಯ್ಸ್. ನೋ ನೋ ನೊ… ಪ್ಲೀಸ್ ಟೆಲ್ ಹಿಮ್. ಮಾನ್ಯ ಅಧ್ಯಕ್ಷರೆ, ಈ ರಾಜ್ಯದಲ್ಲಿ ಪ್ರವಾಹದಿಂದ ಅರ್ಧ ಭಾಗ ಜನ ತತ್ತರಿಸಿದ್ದಾರೆ. ಒಂದು ಕಡೆ ಬರಗಾಲ ಇದೆ. ಏಳು ಲಕ್ಷ ಜನ ಬೀದಿ ಪಾಲಾಗಿದ್ದಾರೆ. ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ಕೊಡಿ. ನೋ ನೋ.. ನೀವು ಹೊಸ ಸಂಪ್ರದಾಯಗಳನ್ನು ಮಾಡಲು ಹೋಗಬೇಡಿ. ಪೇಪರ್ ಮಂಡಿಸೋದು, ರಿಪೋರ್ಟ್ ಮಂಡಿಸೋದು ಪ್ರವಾಹಕ್ಕಿಂತ ಇಂಪಾರ್ಟೆಂಟ್ ಅಲ್ಲ. ಮಾನ್ಯ ಅಧ್ಯಕ್ಷರೆ ಯು ಕಾಂಟ್ ಪುಲ್ ಡೌನ್ ಲೈಕ್ ದೇಟ್. ಯು ಕಾಂಟ್ ಟೇಕ್ ಅವೇ ದ ರೈಟ್ಸ್ ಆಫ್ ದಿ ಅಪೋಸಿಷನ್. ನೀವು ಇಲ್ಲಿ ಇಂಪಾರ್ಷಿಯಲ್ ಆಗಿ, ನಿಸ್ಪಕ್ಷಪಾತವಾಗಿ, ನಿಯಮಾವಳಿಗಳ ಪರ ಕೆಲಸ ಮಾಡಬೇಕು. ನಿಮಗೆ, ಸರ್ಕಾರಕ್ಕೆ ಪ್ರವಾಹದ ಬಗ್ಗೆ ಚರ್ಚೆ ಮಾಡೋಕಾಗಲ್ಲ ಅಂದ್ರೆ ಯಾಕೆ ಬರಬೇಕು ಇಲ್ಲಿಗೆ. ಯಾಕೆ ಸದನ ಕರೆದಿದ್ದೀರಿ. ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಕೇಂದ್ರ, ರಾಜ್ಯ ಸರ್ಕಾರಗಳು ಎರಡೂ ವಿಫಲವಾಗಿವೆ. ಇವತ್ತು ರಾಜ್ಯದ ಜನ ಕಣ್ಣೀರಲ್ಲಿ ಕೈತೊಳೀತಿದ್ದಾರೆ. ಇಂತಹ ವಿಷಯ ಚರ್ಚೆಗೆ ಒಪ್ಪಲ್ಲ ಅಂದ್ರೆ ನೀವು ಸರ್ಕಾರದೊಂದಿಗೆ ಶಾಮೀಲಾಗಿದ್ದೀರಿ ಅಂತ ವಿಧಿ ಇಲ್ಲದೆ ಹೇಳಬೇಕಾಗುತ್ತದೆ……
ಈ ರೀತಿ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಮೊದಲ ದಿನವೇ ತನ್ನ ಗಟ್ಟಿ ದನಿಯ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನನ್ನೇಕೆ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಬೇಕಿತ್ತು ಎಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ಸಾಬೀತುಪಡಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಆಯ್ಕೆಯನ್ನು ಮೊದಲ ದಿನವೇ ಸಮರ್ಥಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪಕ್ಷದೊಳಗೆ ಲಾಬಿ ಮಾಡಿದವರಿಗೂ ತಿರುಗೇಟು ಕೊಟ್ಟಿದ್ದಾರೆ.
ಇವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಚಿವ ಕೃಷ್ಣ ಬೈರೇಗೌಡ ಕೂಡ ದನಿ ಸೇರಿಸಿದ್ದಾರೆ. ಇವರಿಬ್ಬರು ಕೂಡ ಇಷ್ಟೊಂದು ತೀವ್ರವಾಗಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರೆ ಅದಕ್ಕೆ ಕಾರಣವೂ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿರುವುದು. ಒಂದೊಮ್ಮೆ ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರ ಒತ್ತಡ, ಲಾಬಿಗೆ ಮಣಿದು ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ನೇಮಕ ಮಾಡದೇ ಇದ್ದಲ್ಲಿ ಇವರಿಬ್ಬರು ಇಷ್ಟೊಂದು ಪರಿಣಾಮಕಾರಿಯಾಗಿ ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಮೇಲಾಗಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅಥವಾ ಜತೆಗೆ ಕರೆದೊಯ್ಯುವ ಕಲೆ ಸಿದ್ದರಾಮಯ್ಯ ಅವರಷ್ಟು ಚೆನ್ನಾಗಿ ಬಲ್ಲವರು ಬೇರೊಬ್ಬರಿಲ್ಲ.
ಪ್ರತಿಪಕ್ಷ ನಾಯಕನ ನೇಮಕ- ಪ್ರಯೋಗಕ್ಕೆ ಅವಕಾಶ ಕೊಡದ ಕಾಂಗ್ರೆಸ್
ಕೇಂದ್ರ ಮತ್ತು ರಾಜ್ಯಗಳಲ್ಲಿ ಸೋಲಿನ ಸರಮಾಲೆಯಲ್ಲೇ ಮುಂದುವರಿಯುತ್ತಿರುವ ಕಾಂಗ್ರೆಸ್, ಕರ್ನಾಟಕದ ವಿಚಾರದಲ್ಲಿ ಹೊಸ ಪ್ರಯೋಗಗಳಿಗೆ ಅವಕಾಶ ನೀಡದೆ ಬಿಜೆಪಿ ಜತೆ ನೇರಾ ನೇರ ಹೋರಾಟಕ್ಕಿಳಿಯುತ್ತಿರುವ ಮುನ್ಸೂಚನೆಯೇ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ನೇಮಕ ಮಾಡಿರುವುದು. ಸಿದ್ದರಾಮಯ್ಯ ಅವರನ್ನು ಈ ಸ್ಥಾನಕ್ಕೆ ನೇಮಿಸುವುದರ ವಿರುದ್ಧ ಸಾಕಷ್ಟು ಲಾಬಿ ನಡೆಸಲಾಗಿತ್ತು. ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿರುವ ರಾಜ್ಯದ ಕೆಲವೇ ಕೆಲವು ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಮಾಜಿ ಸಂಸದ ಕೆ. ಎಚ್. ಮುನಿಯಪ್ಪ ಅವರೇ ಇದರ ನೇತೃತ್ವ ವಹಿಸಿದ್ದರು. ಆದರೆ, ನಾಯಕತ್ವ ಬದಲಾವಣೆ ಮೂಲಕ ಹೊಸ ಪ್ರಯೋಗಗಳನ್ನು ನಡೆಸಲು ಇಚ್ಛಿಸದ ಸೋನಿಯಾ ಗಾಂಧಿ ಯಾವ ಲಾಬಿಗೂ ಸೊಪ್ಪು ಹಾಕದೆ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ನೇಮಿಸಿದರು.
ಇಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಾತ್ರವಲ್ಲ, ಈ ಹಿಂದೆ ಮಿತ್ರಪಕ್ಷವಾಗಿದ್ದ ಜೆಡಿಎಸ್ ಅನ್ನು ಕೂಡ ತೀವ್ರವಾಗಿ ಪರಿಗಣಿಸಿದ್ದಾರೆ ಎಂಬುದು ಸ್ಪಷ್ಟ. ಮೈತ್ರಿ ಸರ್ಕಾರ ಉರುಳಿದ ಬಳಿಕ ಜೆಡಿಎಸ್ ನಾಯಕರು ಕಾಂಗ್ರೆಸ್ ಜತೆಗಿನ ಮೈತ್ರಿ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದರೂ ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾವ ಕಾಂಗ್ರೆಸ್ ನಾಯಕರೂ ಜೆಡಿಎಸ್ ನಾಯಕರ ವಿರುದ್ಧ ದನಿ ಎತ್ತಿರಲಿಲ್ಲ. ಅವರೆಲ್ಲರೂ ಜೆಡಿಎಸ್ ಜತೆ ಹೊಂದಾಣಿಕೆ ಮುಂದುವರಿಸುವ ಆಸಕ್ತಿ ಹೊಂದಿದ್ದರು. ಅಷ್ಟೇ ಅಲ್ಲ, ಎಚ್. ಡಿ. ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಅವರ ಬಗ್ಗೆ ಮೃದು ಧೋರಣೆ ತಳೆದಿದ್ದರು. ಆದರೆ, ಜೆಡಿಎಸ್ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಏಕಕಾಲದಲ್ಲಿ ಹೋರಾಟ ನಡೆಸುವ ನಾಯಕತ್ವದ ಅಗತ್ಯ ಕಾಂಗ್ರೆಸ್ ಗೆ ಇತ್ತು. ಇದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯವೇ ಹೊರತು ಬೇರೆಯವರಿಂದ ಅಲ್ಲ ಎಂಬ ತೀರ್ಮಾನಕ್ಕೆ ಬಂದ ಪಕ್ಷದ ವರಿಷ್ಠರು, ಪ್ರಬಲ ನಾಯಕರ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿದ್ದಾರೆ.
2008-13ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸದನದ ಒಳಗೆ ಮತ್ತು ಹೊರಗೆ ಮಾಡಿದ ಹೋರಾಟ, ಅಕ್ರಮ ಗಣಿಗಾರಿಕೆ ವಿರುದ್ಧ ಕೈಗೊಂಡ ಪಾದಯಾತ್ರೆಯಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿನ ಶಕ್ತಿ ಹೆಚ್ಚಿಸಲಿಲ್ಲ. ಅವರ ಕೆಲವು ನಿರ್ಧಾರಗಳಿಂದಾಗಿಯೇ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತಾಯಿತು ಎಂಬುದೇನೋ ನಿಜ.
ಆದರೆ, ಕಳೆದುಕೊಂಡ ಅಧಿಕಾರವನ್ನು ಮತ್ತೆ ಪಡೆಯಬೇಕಾದರೆ ಅದಕ್ಕೆ ಆಕ್ರಮಣಕಾರಿ ಹೋರಾಟದ ಅಗತ್ಯವಿದೆ. ಆ ಆಕ್ರಮಣಕಾರಿ ಮನೋಭಾವ ಸಿದ್ದರಾಮಯ್ಯ ಅವರಲ್ಲಿ ಹೆಚ್ಚಾಗಿದೆ. ಜತೆಗೆ ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ಎಂ. ಬಿ. ಪಾಟೀಲ್ ಮುಂತಾದವರು ಸಿದ್ದರಾಮಯ್ಯ ಜತೆಗಿರುತ್ತಾರೆ. ಮತ್ತೊಂದೆಡೆ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಆಗಿದ್ದ ಡಿ. ಕೆ. ಶಿವಕುಮಾರ್ ಇಡಿ ಕುಣಿಕೆಯಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ. ಹೀಗಿರುವಾಗ ನಾಯಕತ್ವ ಬದಲಾವಣೆ ಮೂಲಕ ಪ್ರಯೋಗಗಳನ್ನು ಮಾಡುವ ಬದಲು ಈಗಿನಿಂದಲೇ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಪ್ರಬಲ ಹೋರಾಟಕ್ಕಿಳಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವುದು ಕಷ್ಟವಲ್ಲ. ಈ ಎಲ್ಲಾ ಕಾರಣಗಳೇ ಕಾಂಗ್ರೆಸ್ ವರಿಷ್ಠರು ಲಾಬಿಗಳಿಗೆ ಮಣಿಯದೆ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಕುಳ್ಳಿರಿಸಿರುವುದರ ಹಿಂದಿರುವ ಸತ್ಯ.