ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ 25ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಹೋರಾಟಕ್ಕೆ ದೇಶ ಮಾತ್ರವಲ್ಲದೇ ವಿದೇಶದಿಂದಲೂ ವ್ಯಾಪಕ ಬೆಂಬಲ ದೊರೆಯುತ್ತಿದೆ. ಹಲವು ವಿದೇಶಿಗರು ರೈತರ ಹೋರಾಟ ಬೆಂಬಲಿಸಿ ದೇಣಿಗೆ ನೀಡುತ್ತಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರವೂ ಹೋರಾಟದ ಜವಾಬ್ದಾರಿ ಹೊತ್ತ ಭಾರತೀಯ ಕಿಸಾನ್ ಯೂನಿಯನ್ ವಿರುದ್ಧ ಅಕ್ರಮ ವಿದೇಶಿ ನಿಧಿ ಪಡೆಯುತ್ತಿರುವ ಆರೋಪ ಮಾಡಿದೆ. ಕೂಡಲೇ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಹೋದರೆ ಕ್ರಮ ತೆಗೆದುಕೊಳ್ಳುವುದಾಗಿ ರೈತರಿಗೆ ಬ್ಯಾಂಕ್ ಮೂಲಕ ಕೇಂದ್ರ ಸರ್ಕಾರ ಬೆದರಿಕೆ ಹಾಕಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಸುಖದೇವ್ ಸಿಂಗ್ ಕೋಕರಿ, ರೈತರ ಹೋರಾಟಕ್ಕೆ ವಿದೇಶಿಗರಿಂದಲೂ ಉತ್ತಮ ಬೆಂಬಲ ಸಿಗುತ್ತಿದೆ. ನಮ್ಮನ್ನು ಬೆಂಬಲಿಸಿ ವಿದೇಶಗಳಲ್ಲಿ ನೆಲೆಸಿರುವ ಪಂಜಾಬ್ ಮೂಲದವರು ಸಾಮಾಜಿಕ ಉದ್ದೇಶಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ನಾವ್ಯಾರು ಕಮೀಷನ್ ಏಜೆಂಟ್ಗಳಿಂದ ಸಹಾಯ ಪಡೆಯುತ್ತಿಲ್ಲ. ಬದಲಿಗೆ ರೈತರ ಅನ್ನ ತಿಂದ ಜನರಿಂದ ದೇಣಿಗೆ ಪಡೆಯುತ್ತಿದ್ದೇವೆ. ಕೇಂದ್ರ ಸರ್ಕಾರ ಈ ವಿಚಾರ ಇಟ್ಟುಕೊಂಡ ಬೆದರಿಕೆ ಹಾಕುತ್ತಿದೆ. ಬ್ಯಾಂಕ್ ಈ ಕುರಿತು ಲಿಖಿತ ರೂಪದಲ್ಲಿ ನೋಟಿಸ್ ನೀಡಿದಾಗ ಅದಕ್ಕೆ ಉತ್ತರಿಸುತ್ತೇವೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರಂಭದಿಂದಲೂ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಈಗ ರೈತ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಭಾರತೀಯ ಕಿಸಾನ್ ಯೂನಿಯನ್ಗೆ ತನ್ನ ನೋಂದಣಿ ವಿವರ ಸಲ್ಲಿಸುವಂತೆ ಕೇಂದ್ರ ಸೂಚಿಸಿದೆ. ಈ ಮೂಲಕ ತನಗೆ ವಿದೇಶದಿಂದ ದೇಣಿಗೆ ಸಲ್ಲಿಕೆಯಾಗಿದೆಯೇ ಎಂಬುದರ ಕುರಿತು ಪರಿಶೀಲಿಸಿ ಹೋರಾಟ ದಿಕ್ಕಿ ತಪ್ಪಿಸುವ ಯತ್ನ ನಡೆಸುತ್ತಿದೆ.
ಸದ್ಯ ವಿದೇಶಿ ದೇಣಿಗೆ ಹೆಸರಿನಲ್ಲಿ ಭಾರತೀಯ ಕಿಸಾನ್ ಯೂನಿಯನ್ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿರುವ ಕೇಂದ್ರ ಬಲಪ್ರಯೋಗವೂ ನಡೆಸಿದೆ. ವಿದೇಶಿ ದೇಣಿಗೆ ಸಂಗ್ರಹಿಸುವ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು ಎಂದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಹೇಳುತ್ತದೆ. ಈ ವಿಚಾರವನ್ನೇ ಹಿಡಿದು ಹೋರಾಟ ಹತ್ತಿಕ್ಕುವ ಪ್ರಯತ್ನ ಕೇಂದ್ರದ್ದಾಗಿದೆ.
ಇದುವರೆಗೂ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರೊಂದಿಗೆ ನಡೆಸಿದ ಎಲ್ಲಾ ಮಾತುಕತೆ ಸಭೆಗಳು ವಿಫಲವಾಗಿದೆ. ಹೀಗಾಗಿ ಸರ್ಕಾರದೊಂದಿಗೆ ಇನ್ನೂ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸಿದ ರೈತ ಸಂಘಟನೆಗಳು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ರೈತರ ಈ ಹೋರಾಟಕ್ಕೆ ಕೇವಲ ಕಾಂಗ್ರೆಸ್, ಎಎಪಿ, ಡಿಎಂಕೆ, ಎಸ್ಪಿ, ಸಿಪಿಎಂ, ಸಿಪಿಐ, ಟಿಆರ್ಎಸ್, ಟಿಎಂಸಿ, ಆರ್ಜೆಡಿ, ಎಸ್ಎಡಿ ರೀತಿಯ ರಾಜಕೀಯ ಪಕ್ಷಗಳು ಮಾತ್ರವಲ್ಲ ವಿದೇಶದ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.
ರಾಜಕೀಯ ಪಕ್ಷಗಳ ಜತೆಗೆ ಪಂಜಾಬ್ನ ಕ್ರೀಡಾ ಕ್ಷೇತ್ರದ ಕೆಲವು ಪ್ರಖ್ಯಾತರು ಮತ್ತು ಸಿನಮಾ ನಟರು ತಮ್ಮ ಸಾಧಕ ಪ್ರಶಸ್ತಿಗಳನ್ನು ಹಿಂತಿರುಗಿಸುವ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ರೈತ ಸಮಸ್ಯೆಗಳನ್ನು ಇತ್ಯರ್ಥಪಡಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
ಎಂಎಸ್ಪಿ ಹಾಗೂ ಎಪಿಎಂಸಿ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ನಿರ್ಧಾರ ಸರ್ಕಾರ ಬದಲಿಸಬೇಕು. ಹಾಗೆಯೇ ಹೊಸ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ.






