ಕರೋನಾ ಲಾಕ್ಡೌನ್ ನಿಂದಾಗಿ ದೇಶಾದ್ಯಂತ ಕೋಟ್ಯಾಂತರ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ ಅನ್ನೋದು ದೇಶಕ್ಕೇ ತಿಳಿದಿರೋ ಸತ್ಯ. ಅದರಲ್ಲೂ ಕೆಲವು ದಿನಗಳ ಹಿಂದೆ ಮುಂಬೈಯಲ್ಲಿ ಹರಡಿದ ವದಂತಿಯಿಂದ ತಮ್ಮ ಊರಿಗೆ ತೆರಳಲು ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಮಾತ್ರವಲ್ಲದೇ ಕರೋನಾ ಸೋಂಕಿನ ಭೀತಿಯೂ ಎದುರಾಗಿತ್ತು. ವಿಶೇಷವಾಗಿ ವಲಸೆ ಕಾರ್ಮಿಕರು ಅಗಾಧ ಸಂಖ್ಯೆಯಲ್ಲಿ ದೇಶದಲ್ಲಿದ್ದು ತಮ್ಮ ಊರು ತಲುಪುವ ಇರಾದೆಯಲ್ಲಿದ್ದಾರೆ. ಮೊದಲನೆಯದಾಗಿ ಕಾರ್ಮಿಕರು ತಾವು ವಲಸೆ ಬಂದು ನೆಲೆ ನಿಂತ ಪ್ರದೇಶಗಳೆಲ್ಲವೂ ನಗರ ಪ್ರದೇಶಗಳಾಗಿದ್ದು ಅಲ್ಲೆಲ್ಲ ಕಟ್ಟುನಿಟ್ಟಿನ ಲಾಕ್ಡೌನ್ ಅಳವಡಿಸಲಾಗಿದೆ. ಆದ್ದರಿಂದ ಮಹಾನಗರದಲ್ಲಿ ಒಂದು ಕಡೆ ಕೆಲಸವಿಲ್ಲದೇ, ಇನ್ನೊಂದು ಕಡೆ ಹಸಿವು ತಣಿಸೋದಕ್ಕೆ ಅನ್ನ ಆಹಾರವಿಲ್ಲದೇ ಪರದಾಡುವಂತಾಗಿದೆ.
ಇದೀಗ ಕೇಂದ್ರ ಸರಕಾರ ಲಾಕ್ಡೌನ್ ಮುಂದುವರೆಸಿದರೂ ವಲಸೆ ಕಾರ್ಮಿಕರ ಬವಣೆಗೆ ಸ್ಪಂದಿಸುವ ಕೆಲಸ ಮಾಡಲು ಮುಂದಾಗಿದೆ. ಬಾಕಿಯಾಗಿರುವ ಕಾರ್ಮಿಕರನ್ನು ಅವರು ಊರಿಗೆ ತಲುಪಿಸಲು ಮುಂದಾಗಿದೆ. ಅದಕ್ಕಾಗಿ ರೈಲುಗಳನ್ನ ಬಳಸಿದ್ದು, ಮೊದಲನೆಯದಾಗಿ ಈ ʼವಿಶೇಷ ರೈಲುʼ ತೆಲಂಗಾಣದಿಂದ ʼಕಾರ್ಮಿಕ ದಿನʼದ ಮುಂಜಾವವೇ 1200 ಮಂದಿ ಕಾರ್ಮಿಕರನ್ನ ಹೊತ್ತೊಯ್ದು ಝಾರ್ಖಂಡ್ ತಲುಪಿಸಿದೆ. 24 ಬೋಗಿಗಳಲ್ಲಿ ಸರಕಾರದ ಮಾರ್ಗಸೂಚಿಯಂತೆ ʼಸಾಮಾಜಿಕ ಅಂತರʼ ಕಾಯ್ದುಕೊಂಡೇ ಅವರನ್ನ ಝಾರ್ಖಂಡ್ಗೆ ತಲುಪಿಸಲಾಗಿದೆ. ಇನ್ನು ಮೇ 1ರ ಸಂಜೆ ಕೇರಳದ ಎರ್ನಾಕುಲಂ ನಿಂದ ಒರಿಸ್ಸಾಕ್ಕೆ ಅಷ್ಟೇ ಸಂಖ್ಯೆಯ ವಲಸೆ ಕಾರ್ಮಿಕರನ್ನ ಈ ʼವಿಶೇಷ ರೈಲುʼ ಕರೆದೊಯ್ದಿದೆ.
ಈ ಕುರಿತು ಗೃಹ ಸಚಿವಾಲಯದ ಅಧಿಕೃತ ವಕ್ತಾರರು ಕೂಡಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಯಾತ್ರಿಕರು, ಪ್ರವಾಸಿಗರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇನ್ನಿತರ ಕಾರಣದಿಂದ ಸಿಲುಕಿಕೊಂಡ ಕಾರ್ಮಿಕರನ್ನ ಅವರ ರಾಜ್ಯಕ್ಕೆ ತಲುಪಿಸಲು ಸೂಚಿಸಿದೆ. ಇದಾಗುತ್ತಲೇ ಆಯಾಯ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡಿದ್ದು, ʼವಿಶೇಷ ರೈಲುʼವಿಗೆ ಸೋಂಕು ನಿವಾರಕ ಸಿಂಪಡಿಸಿ, ಪ್ರಯಾಣಿಸುವ ಕಾರ್ಮಿಕರನ್ನ ಮಾರ್ಗಸೂಚಿಯಂತೆ ಪರೀಕ್ಷೆಗೊಳಪಡಿಸಿ ರೈಲಿನ ಮೂಲಕ ಕಳುಹಿಸಿಕೊಡಲಾಗಿದೆ.
ಇನ್ನು ರಾಜ್ಯದ ಎಲ್ಲೆಡೆ ಚದುರಿದ್ದ ಕಾರ್ಮಿಕರನ್ನು ಕೇರಳ ಹಾಗೂ ತೆಲಂಗಾಣ ರಾಜ್ಯ ಸರಕಾರಗಳೇ ಬಸ್ಗಳ ಮೂಲಕ ರೈಲು ನಿಲ್ದಾಣದವರೆಗೆ ಕರೆತಂದಿದೆ. ಈ ರೀತಿ ಬೀಡು ಬಿಟ್ಟ ವಲಸೆ ಕಾರ್ಮಿಕರ ಸಂಖ್ಯೆ ತೆಲಂಗಾಣದಲ್ಲಿ 15 ಲಕ್ಷವಿದ್ದರೆ, ಕೇರಳದಲ್ಲಿ 35 ಲಕ್ಷವಿರುವುದಾಗಿ ಅಲ್ಲಿನ ಸರಕಾರದ ಅಧಿಕೃತ ಅಂಕಿ ಅಂಶ ತಿಳಿಸಿದೆ. ಆದರೆ ಮಾರ್ಚ್ 24 ರಂದು ಲಾಕ್ ಡೌನ್ ಘೋಷಣೆಯಾಗುತ್ತಲೇ ಸಾವಿರ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರಿನತ್ತ ಹೆಜ್ಜೆ ಹಾಕಿದ್ದರು. ನೂರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಹೊರಟು ನಿಂತಿದ್ದರು. ಹೀಗೆ ಹೊರಟವರು ಅದೆಷ್ಟೋ ಮಂದಿ, ಹಸಿವು, ದಣಿವು ತಾಳಲಾರದೆ ಸಾವನ್ನಪ್ಪಿದ ಸುದ್ದಿಯೂ ವರದಿಯಾಗಿತ್ತು.
ಇದೆಲ್ಲವನ್ನ ಗಂಭೀರವಾಗಿ ಪರಿಗಣಿಸಿದ್ದ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ತಲುಪಿಸುವುದೇ ಕಷ್ಟವೆಂದರಿತ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ನಿರ್ಧಾರಕ್ಕೆ ಬಂದಿದ್ದಾವೆ. ಇದಕ್ಕೂ ಮುನ್ನವೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಹೊರ ಜಿಲ್ಲೆಯಲ್ಲಿ ಬಾಕಿಯಾದ ಕೂಲಿ ಕಾರ್ಮಿಕರನ್ನು ಸರಕಾರಿ ಬಸ್ಸುಗಳನ್ನ ಬಳಸಿ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಹೊರ ರಾಜ್ಯದಲ್ಲಿ ಸಿಕ್ಕಾಕಿಕೊಂಡವರನ್ನ ರೈಲು ಬಳಸಿ ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ಕೇಂದ್ರ ಸರಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ರಕ್ಷಣಾ ಇಲಾಖೆಗೆ ಸೇರಿದ ನೌಕಾಸೇನೆ ಹಾಗೂ ಭಾರತೀಯ ವಾಯಸೇನೆಯ ಸಹಾಯದಿಂದ ವಿಮಾನ ಹಾಗೂ ನೌಕೆ ಮೂಲಕ ಗಲ್ಫ್ ರಾಷ್ಟ್ರದಲ್ಲಿ ಸಿಕ್ಕಾಕಿಕೊಂಡ ಅನಿವಾಸಿ ಭಾರತೀಯರನ್ನ ದೇಶಕ್ಕೆ ವಾಪಾಸ್ ಕರೆತರುವ ಪ್ರಯತ್ನಕ್ಕೆ ಸಿದ್ಧತೆಗಳು ನಡೆಸಿಕೊಂಡಿದ್ದಾವೆ. ಈ ಮೂಲಕ ಲಾಕ್ಡೌನ್ ನಿಂದ ಸಿಲುಕಿಕೊಂಡವರ ರಕ್ಷಣೆಗೆ ಕೇಂದ್ರ ಸರಕಾರ ಹಂತ ಹಂತವಾಗಿ ರಕ್ಷಣೆಗೆ ಇಳಿದಂತಾಗಿದೆ.
ಈ ನಿಟ್ಟಿನಲ್ಲಿ ರಾಜಸ್ತಾನ, ಝಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಸರಕಾರದ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಮೇಲೆ ಸಾಕಷ್ಟು ಒತ್ತಡವೇರಿದ್ದರು. ಅದರಲ್ಲೂ ಉತ್ತರ ಪ್ರದೇಶ ಸರಕಾರವಂತೂ ಸಾವಿರ ಬಸ್ಗಳನ್ನ ನಿಯೋಜಿಸಿ ತಮ್ಮ ತಮ್ಮ ಹಳ್ಳಿಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದು, ಕೇಂದ್ರ ಸಚಿವರ ಕೆಂಗಣ್ಣಿಗೂ ಗುರಿಯಾಗಿತ್ತು. ಇದೀಗ ಕೇಂದ್ರದ ಮೇಲೆ ಒತ್ತಡವೇರಿದ ಹಿನ್ನೆಲೆ ಆಯಾಯ ರಾಜ್ಯದ ವಲಸೆ ಕಾರ್ಮಿಕರು ಮತ್ತೆ ವಾಪಾಸ್ ಆ ರಾಜ್ಯಗಳನ್ನ ಸೇರುವಂತಾಗಿದೆ. ಆದರೆ ಯಾವುದೇ ಕಾರಣಕ್ಕೂ ಕರೋನಾ ಸೋಂಕಿನ ಲಕ್ಷಣ ಹೊಂದಿದವರನ್ನ ರೈಲು ಹತ್ತಲು ಬಿಡದೇ ಅವರು ಇರುವಲ್ಲಿಯೇ ಕ್ವಾರೆಂಟೈನ್ ವಿಧಿಸಲಾಗುತ್ತದೆ.
ಒಟ್ಟಿನಲ್ಲಿ ದಿಕ್ಕು ತೋಚದಂತಾಗಿದ್ದ ವಲಸೆ ಕಾರ್ಮಿಕರಿಗೆ ಕೇಂದ್ರ ಗೃಹ ಸಚಿವಾಲಯದ ಈ ನಿರ್ಧಾರ ತುಸು ನಿಟ್ಟುಸಿರು ಬಿಡುವಂತಾಗಿದೆ. ಮಾಡೋಕೆ ಕೆಲಸವಿಲ್ಲದ ಪರಿಣಾಮ ತುತ್ತು ಅನ್ನಕ್ಕೂ ಪರದಾಡುತ್ತಾ, ಅದ್ಯಾವುದೋ ಸಂಘ-ಸಂಸ್ಥೆಗಳನ್ನ, ಆಳುವ ಸರಕಾರದ ಮುಂದೆ ದಯನೀಯ ಸ್ಥಿತಿ ಅನುಭವಿಸುತ್ತಿದ್ದ ಕೂಲಿ ಕಾರ್ಮಿಕರು ಈಗ ತವರನ್ನ ತಲುಪಬಹುದು. ಆದರೆ ತವರಲ್ಲೂ ಸಂಕಷ್ಟಕ್ಕೆ ಒಳಗಾಗದಂತೆ ಆಯಾಯ ರಾಜ್ಯ ಸರಕಾರಗಳು ಕ್ರಮಕೈಗೊಳ್ಳದೇ ಹೋದರೆ ಅಲ್ಲೂ ಹಸಿವಿನಿಂದ ಇನ್ನಷ್ಟು ಸಂಕಷ್ಟ ಎದುರಿಸಬೇಕಾದೀತು ಅನ್ನೋದು ಸ್ಪಷ್ಟ.