ಕರೋನಾ ಎಂಬ ಸಾಂಕ್ರಾಮಿಕ ವೈರಾಣುವಿಗೆ ಇಡೀ ವಿಶ್ವವೇ ತಲ್ಲಣಿಸುತ್ತಿದೆ. ಚಿಕಿತ್ಸೆ ಇಲ್ಲದೆ ಪರಿತಪಿಸುತ್ತಿರುವ ಜಗತ್ತಿಗೆ ಅಮೃತ ಬಿಂದುವಿನಂತೆ ಕಾಣುತ್ತಿರುವುದು ಕರೋನಾ ಲಸಿಕೆ. ಈ ಲಸಿಕೆಯನ್ನು ಪ್ರಪಂಚದ ಹಲವಾರು ರಾಷ್ಟ್ರಗಳು ಸಂಶೋಧನೆ ಮಾಡುತ್ತಿವೆ. ಒಬ್ಬರ ಗುಟ್ಟನ್ನು (ಫಾರ್ಮುಲಾ) ಮತ್ತೊಬ್ಬರು ಕದಿಯುವುದಕ್ಕೂ ಯತ್ನಿಸುತ್ತಿರುವುದು ರಹಸ್ಯವೇನು ಅಲ್ಲ. ಅದರ ಜೊತೆಗೆ ಕಳೆದ ವಾರ ಆಶಾಭಾವನೆ ಮೂಡಿಸಿರುವುದು ರಷ್ಯಾದಲ್ಲಿ ನೋಂದಣಿ ಆಗಿರುವ ಲಸಿಕೆ. ಆದರೆ ರಷ್ಯಾ ಮೊದಲಿಗೆ ಭಾರತಕ್ಕೆ ಲಸಿಕೆ ಕೊಡುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಯಾಕಂದರೆ ರಷ್ಯಾ ಜೊತೆಗೆ ಮೊದಲೇ ಒಪ್ಪಂದ ಮಾಡಿಕೊಂಡಿದ್ದ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡುತ್ತೇವೆ ಎಂದಿದ್ದಾರೆ. ಆ ಬಳಿಕ ಅಷ್ಟೆ ಬೇರೆ ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲು ಸಾಧ್ಯ. ಈ ನಡುವೆ ಭಾರತಕ್ಕೆ ಭರವಸೆಯ ಬೆಳಕೊಂದು ಮೂಡಿದೆ. ಭಾರತದಲ್ಲೇ ಮೊದಲು ಲಸಿಕೆ ಪೂರೈಕೆ ಆಗಲಿದೆ ಎನ್ನಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಂಗ್ಲೆಂಡ್ ನ ಆಕ್ಸ್ ಫರ್ಡ್ ಯೂನಿವರ್ಸಿಟಿ ಹಾಗೂ ಆಸ್ಟ್ರಾ ಜೆನೆಕಾ ವಿಜ್ಞಾನಿಗಳು ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದ ಪುಣೆ ಮೂಲದ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಪ್ರಯೋಗಕ್ಕೆ ಒಳಪಡಿಸಿದೆ. ಭಾರತದಲ್ಲಿ ಈ ವಾರದಿಂದ 2ನೇ ಹಂತದ ಪ್ರಯೋಗ ಶುರುವಾಗಿದೆ ಎಂದು ಕಂಪನಿ ಮೂಲಗಳು ಮಂಗಳವಾರ 18/08/2020 ರಂದು ತಿಳಿಸಿವೆ. ಇಡೀ ವಿಶ್ವದಲ್ಲಿ ಕೋವಿಡ್ – 19 ಸೋಂಕಿನ ವಿರುದ್ಧ ಲಸಿಕೆ ಕಂಡುಹಿಡಿಯುವ ಸ್ಪರ್ಧೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಈ ಸ್ಪರ್ಧೆಯು ತೀವ್ರವಾಗುತ್ತಿದೆ. ಮಾರಕ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಅತಿ ಶೀಘ್ರದಲ್ಲೇ ಸಿಗುವ ಸಾಧ್ಯತೆಗಳಿವೆ.
ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಈ ವರ್ಷದ ಅಂತ್ಯದ ವೇಳೆಗೆ ಪ್ರಯೋಗಗಳನ್ನು ಮುಗಿಸಿ ಅಗತ್ಯವಾದ ಅನುಮತಿಗಳನ್ನು ಪಡೆದರೆ ಭಾರತೀಯ ಜನಸಂಖ್ಯೆಗೆ ಲಭ್ಯವಿರುವ ಲಸಿಕೆಯನ್ನು ಪುಣೆ ಮೂಲದ ಲಸಿಕೆ ತಯಾರಕ ಸಂಸ್ಥೆ Serum Institute of India (SII) ವರ್ಷಾಂತ್ಯದಲ್ಲಿ ಉತ್ಪಾಧಿಸಲಿದೆ. ಈಗಾಗಲೇ ಆಕ್ಸ್ ಫರ್ಡ್ ಕೋವಿಡ್ – 19 ಲಸಿಕೆಯ ಮೇಲೆ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಭಾರತದ ಉನ್ನತ ಔಷಧ ನಿಯಂತ್ರಕ ಸಂಸ್ಥೆ ಅನುಮೋದನೆ ನೀಡಿದೆ. ಪ್ರಯೋಗ ಮುಗಿಯುತ್ತಿದ್ದಂತೆ ಭಾರತದಲ್ಲಿ ತಯಾರಾಗಿ ಇಲ್ಲಿನ ಜನರಿಗೆ ಲಸಿಕೆ ಸಿಗುವಂತಾಗುತ್ತದೆ.
ಕಳೆದ ವಾರ, ಅಮೆರಿಕದ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅಮೆರಿಕದ ಹಿರಿಯ ತಜ್ಞ ಆಂಥೋನಿ ಫೌಸಿ, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ಲಸಿಕೆ ಹೊರಬರುವ ಸಾಧ್ಯತೆ ಇದೆ. ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ. 2021 ರ ಅಂತ್ಯದ ವೇಳೆಗೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಣದಲ್ಲಿಡಲು ಅರ್ಧದಷ್ಟು ಪರಿಣಾಮಕಾರಿ ಲಸಿಕೆ ಆದರೂ ಸಾಕು ಎಂದು ಫೌಸಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಕೂಡ ಆಸ್ಟ್ರಾ ಜೆನಿಕಾ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಈ ವರ್ಷಾಂತ್ಯ ಲಸಿಕೆ ಲಭ್ಯವೆಂದು ಅಲ್ಲಿನ ಪ್ರಧಾನಿ ಎಲ್ಲರಿಗೂ ಲಸಿಕೆ ಉಚಿತ ಎಂದು ಘೋಷಣೆ ಮಾಡಿದ್ದಾರೆ. ಭಾರತದಲ್ಲೂ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು, ಕೋವಿಶೀಲ್ಡ್ ವರ್ಷಾಂತ್ಯಕ್ಕೆ ಲಸಿಕೆ ಲಭ್ಯವಾಗಲಿದ್ದು, 224 ರೂಪಾಯಿಗೆ ಒಂದು ಡೋಸ್ ಸಿಗಲಿದೆ. ಇನ್ನೂ ಚೀನಾ ಕೂಡ ಸಿನೋಫಾರ್ಮ್ ಕಂಪನಿ ಮೂಲಕ ಲಸಿಕೆ ಹೊರ ತರುತ್ತಿದ್ದು 1 ಸಾವಿರ ರೂಪಾಯಿ ಒಳಗೆ ದರ ಇರಲಿದೆ ಎನ್ನಲಾಗಿದೆ. 28 ದಿನಗಳ ನಂತರ 2ನೇ ಡೋಸ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದೆ. ಭಾರತದಲ್ಲಿ ಕೋವಿಶೀಲ್ಡ್ ಅಲ್ಲದೆ ICMR & Bharat Biotech’s ಸಂಸ್ಥೆಯ COVAXIN ಹಾಗೂ Zydus Cadila’s ಸಂಸ್ಥೆಯ ZyCov-D ಕೂಡ ಪ್ರಯೋಗ ಹಂತದಲ್ಲಿದ್ದು ಭಾರತೀಯರ ಕರೋನಾ ಭಯ ಹೋಗಲಾಡಿಸಲಿವೆ.
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ಕೂಡ ವಿಶ್ವಾದ್ಯಂತ ಸಾಮೂಹಿಕವಾಗಿ ಲಸಿಗೆ ಹಾಕಲು ಸಿದ್ಧತೆ ಮಾಡಿಕೊಳ್ತಿದೆ. ಮುಂದಿನ ವರ್ಷಾಂತ್ಯದೊಳಗೆ ಲಸಿಕೆ ಹಾಕುವ ಉದ್ದೇಶ ಹೊಂದಿದ್ದು ಶ್ರೀಮಂತ ದೇಶಗಳು ಫಂಡ್ ನೀಡುವಂತೆ ಮನವಿ ಮಾಡಿಕೊಂಡಿದೆ.