ಕರೋನಾ ಸೋಂಕು ಸಾಂಕ್ರಾಮಿಕ ಕಾಯಿಲೆ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮಾಡಿ ಆಗಿದೆ. ಭಾರತ ಸೇರಿದಂತೆ ಎಲ್ಲಾ ದೇಶಗಳು ಈ ಪಿಡುಗನ್ನು ಮಟ್ಟ ಹಾಕುವ ದಾರಿ ಯಾವುದು ಎಂದು ಚಿಂತಾಕ್ರಾಂತವಾಗಿವೆ. ತನ್ನ ಜನರಿಗೆ ಬೇಕಾದಷ್ಟು ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ಸ್ಪೇಯ್ನ್ ನಂತಹ ರಾಷ್ಟ್ರಗಳೇ ಕೋವಿಡ್-19 ವಿರುದ್ಧ ಮಂಡಿಯೂರಿದ್ದು, ʼಸಾಮಾಜಿಕ ಅಂತರʼ ಒಂದೇ ಕರೋನಾ ವೈರಸ್ ನಿಂದ ದೂರ ಇರುವ ಅಸ್ತ್ರ ಎಂದು ಸಾರುತ್ತಿವೆ. ಇಡೀ ವಿಶ್ವವೇ ಲಾಕ್ಡೌನ್ ಘೋಷಣೆ ಮಾಡಿದ್ದರೂ ಕರೋನಾ ವೈರಸ್ ಹರಡುವಿಕೆ ಕಡಿಮೆ ಆಗಿಲ್ಲ. ಪ್ರತಿದಿನ ಸುಮಾರು 1 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಕನಿಷ್ಠ ಏಳೆಂಟು ಸಾವಿರ ಮಂದಿ ಸಾಯುತ್ತಿದ್ದಾರೆ. ಆದರೆ ಭಾರತ ಹೆಸರಿಗೆ ಮಾತ್ರ ಲಾಕ್ಡೌನ್ ಘೋಷಣೆ ಮಾಡುತ್ತಿದ್ದು, ಎಲ್ಲಾ ಕಾರ್ಯಚಟುವಟಿಯನ್ನೂ ಘೋಷಣೆ ಮಾಡಲು ಮುಂದಾಗಿದೆ.
ಕರೋನಾ ಸೋಂಕು ಕಾಣಿಸಿಕೊಂಡ ಏಳೆಂಟು ದಿನಗಳ ಬಳಿಕ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 14 ದಿನಗಳ ಕಾಲ ಕೋವಿಡ್ 19 ಸೋಂಕಿನ ಯಾವುದೇ ಲಕ್ಷಣ ಕಾಣಿಸಿಲ್ಲ ಎಂದರೆ ಕರೋನಾ ವೈರಸ್ ಸೋಂಕು ಹರಡಿಲ್ಲ ಎನ್ನುವ ನಿರ್ಧಾರಕ್ಕೆ ವೈದ್ಯರು ಬರುತ್ತಿದ್ದರು. ಆದರೆ ಇದೀಗ ಕರೋನಾ ವೈರಸ್ ತನ್ನ ಕರಾಳ ಮುಖ ತೋರಿಸಿದೆ. ದೊಡ್ಡಬಳ್ಳಾಪುರದಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿದ್ದು, ದೆಹಲಿಯಿಂದ ವಾಪಸ್ ಬಂದ 23 ದಿನಗಳು ಕಳೆದ ಬಳಿಕ. ಇಲ್ಲಿವರೆಗೂ ಯಾವುದೇ ಸೋಂಕು ಕಾಣಿಸಿಕೊಂಡಿರಲಿಲ್ಲ. ಈಗಲೂ ಯಾವುದೇ ಸೋಂಕಿನ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಆದರೆ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಸಭೆಯಲ್ಲಿ ಭಾಗಿಯಾಗಿದ್ದ ಎನ್ನುವ ಕಾರಣಕ್ಕೆ ತಪಾಸಣೆ ನಡೆಸಿದಾಗ ಕರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಅಂದರೆ 14 ದಿನಗಳ ಕಾಲ ಕ್ವಾರಂಟೈನ್ ಮಾಡುವ ಸರ್ಕಾರದ ನಿರ್ಧಾರ ತಪ್ಪು ಎನ್ನುವುದು ಇದರಿಂದ ಸಾಬೀತಾದಂತಾಗಿದೆ.
ಈ ನಡುವೆ ಕರ್ನಾಟಕದಲ್ಲಿ ಕರೋನಾ ಸೋಂಕಿತರ ಪ್ರಮಾಣ ಕಡಿಮೆ ಇದೆ. ಆದರೆ ವಿದೇಶದಿಂದ ಬಂದಿರುವ ಲಕ್ಷಾಂತರ ಜನರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಿ ಬಿಟ್ಟು ಬಿಡಲಾಗಿದೆ. ಆ ಲಕ್ಷಾಂತರ ಜನರಿಗೆ ಒಂದು ವೇಳೆ ಈಗ ಸೋಂಕಿನ ಲಕ್ಷಣಗಳು ಈಗ ಕಂಡು ಬಂದರೆ ಸರ್ಕಾರಕ್ಕೆ ದೊಡ್ಡ ಆತಂಕ ಶುರುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ಮಸೀದಿಯಿಂದ ಬಂದವರಿಗೆ ಸೋಂಕಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಕಡೆಗಳಲ್ಲಿ ಮನೆಯಲ್ಲೆ ಬಿಡಲಾಗಿತ್ತು. ಕಾಲ ಕ್ರಮೇಣ ಸೋಂಕಿನ ಲಕ್ಷ ಕಾಣಿಸಿಕೊಂಡರೆ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ. ಅದರಲ್ಲೂ ಕೇವಲ ದೆಹಲಿ ಪ್ರವಾಸ ಮಾಡಿ ಬಂದವರು ಅಥವಾ ವಿದೇಶದಿಂದ ಬಂದಿರುವ ಲಕ್ಷಾಂತರ ಜನರಿಗೆ ಮಾತ್ರ ಕರೋನಾ ಸೋಂಕು ಕಾಣಿಸುವುದಿಲ್ಲ. ಅವರ ಜೊತೆಗೆ ನೂರಾರು ಜನರಿಗೂ ಸೋಂಕು ಹರಡಿಸಿರುತ್ತಾರೆ. ಯಾಕಂದ್ರೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿದ್ದವರು ಅಂತಿಮವಾಗಿ ಕರೋನಾ ಸೋಂಕಿನ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇವೆ ಎನ್ನುವ ಸಂತಸದಲ್ಲಿ ಇಡೀ ಸಂಬಂಧಿಕರು ಸೇರಿದಂತೆ ಬೇಕಾದವರು, ನನ್ನವರು, ತನ್ನವರು ಎಲ್ಲರನ್ನೂ ಭೇಟಿ ಮಾಡಿರುತ್ತಾರೆ. ಅವರಿಗೂ ಸೋಂಕು ಕಾಣಿಸಿಕೊಂಡರೂ ಅಚ್ಚರಿಯಿಲ್ಲ.
ಕೇಂದ್ರ ಸರ್ಕಾರದ ಲಾಕ್ಡೌನ್ ಆದೇಶ ಏಪ್ರಿಲ್ 14 ಮಂಗಳವಾರದಂದು ಅಂತ್ಯವಾಗಿತ್ತು. 2ನೇ ಲಾಕ್ಡೌನ್ ಅವಧಿ ಏಪ್ರಿಲ್ 14ರಿಂದ ಮೇ 3 ರ ತನಕ ಶುರುವಾಗಿದೆ, ಈ ನಡುವೆ ಮೋದಿ ಸರ್ಕಾರ ಹೊಸದಾಗಿ ಲಾಕ್ಡೌನ್ ಮಾರ್ಗಸೂಚಿ ಹೊರಡಿಸಿದ್ದು, ಗ್ರಾಮೀಣ ಭಾರತಕ್ಕೆ ಸಾಧ್ಯವಾದಷ್ಟು ಲಾಕ್ಡೌನ್ ಸಡಿಲಿಕೆ ಮಾಡಲು ಸೂಚಿಸಿದೆ. ನಗರ ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಮಾಡುವಂತೆ ಸೂಚಿಸಿದೆ. ವಿಮಾನಯಾನ, ರೈಲು ಸಂಚಾರ, ಸಾರ್ವಜನಿಕ ಸಾರಿಗೆ ಸಂಚಾರ, ಎಲ್ಲಾ ಧಾರ್ಮಿಕ ಕೇಂದ್ರಗಳು, ಮದ್ಯ ಮಾರಾಟ, ಸಾರ್ವಜನಿಕ ಸಮಾರಂಭಗಳು, ಶಿಕ್ಷಣ ಸಂಸ್ಥೆಗಳು, ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಆದರೆ ತುರ್ತು ಪರಿಸ್ಥಿತಿಗಳಲ್ಲಿ ಖಾಸಗಿ ವಾಹನ ಬಳಕೆ, ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರ ಪ್ರಯಾಣ, ಬೈಕ್ ನಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬೇಕು ಎಂದು ಸೂಚಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಅವಕಾಶ, ಟೀ ತೋಟಗಳಲ್ಲಿ ಶೇಕಡ 50ರಷ್ಟು ಕಾರ್ಮಿಕರು, ಅಂತಾರಾಜ್ಯ ಸರಕು ಸಾಗಾಟ, ಕೃಷಿ ಉಪಕರಣಗಳು, ರಿಪೇರಿ ಕೇಂದ್ರಗಳು, ಮೀನುಗಾರಿಕೆಗೆ ಷರತ್ತುಬದ್ಧ ಅನುಮತಿ ಕೊಡಲಾಗಿದೆ.

ಇದೀಗ ರಾಜ್ಯ ಸರ್ಕಾರ ಕೂಡ ಏಪ್ರಿಲ್ 20ರ ನಂತರ ಶೇಕಡ 50 ರಷ್ಟು ನೌಕರರು ಕೆಲಸ ಮಾಡಲು ಅವಕಾಶ ಕಲ್ಪಿಸಲು ಮುಂದಾಗಿದೆ. ಶೇಕಡ 50 ರಷ್ಟು ನೌಕರರು ಕೆಲಸ ಮಾಡಬಹುದು. ಅವರ ಓಡಾಟಕ್ಕೆ ಯಾವುದೇ ಪಾಸ್ ಅವಶ್ಯಕತೆ ಇಲ್ಲ. ಬದಲಾಗಿ ಅವರು ಆ ಕಂಪನಿಯ ಬಸ್ಸುಗಳಲ್ಲಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಓಡಾಡಬಹುದು. ಕಚೇರಿಯಲ್ಲಿ ಕೆಲಸಕ್ಕೆ ಹೋಗಬಹುದು. ಆದರೆ ಸಾರಿಗೆ ಅವಶ್ಯಕತೆ ಕೇಳಿದ್ರೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ತೀರ್ಮಾನ ಮಾಡಿದ್ದು, ಕಂಪನಿಯಲ್ಲಿ ಕೆಲಸ ಮಾಡುವರಿಗೆ ಪಾಸ್ ವ್ಯವಸ್ಥೆ ಇಲ್ಲ. ಏಪ್ರಿಲ್ 20 ರ ನಂತರ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ಐಟಿ ಬಿಟಿ ಸಚಿವ ಡಿಸಿಎಂ ಅಶ್ವಥ್ ನಾರಾಯಣ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಒಟ್ಟಾರೆ, ಏಪ್ರಿಲ್ 20ರ ಬಳಿಕ ರಾಜ್ಯದ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿರುವ ಬೆಂಗಳೂರು, ಮೈಸೂರಿನಲ್ಲಿ ಅರ್ಧದಷ್ಟು ಕಾರ್ಯಚಟುವಟಿಕೆ ಶುರುವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಈ ನಡುವೆ ಏಪ್ರಿಲ್ 20 ರ ಬಳಿಕ ಇಷ್ಟೆಲ್ಲಾ ಕಾರ್ಯ ಚಟುವಟಿಕೆ ಆರಂಭ ಮಾಡಿದ ಮೇಲೆ ಲಾಕ್ಡೌನ್ ಮಾಡಿದರೂ ಪ್ರಯೋಜನೆಕ್ಕೆ ಬಾರದು ಎನಿಸುತ್ತದೆ. ಈ ನಡುವೆ ರಾಜಕಾರಣಿಗಳು ಪ್ರಚಾರದ ಹಂಗಿಗಾಗಿ ಆಹಾರ ಪೊಟ್ಟಣ ಹಂಚಲು ಗುಂಪುಗೂಡುವುದು ಸೇರಿದಂತೆ ಕರೋನಾ ಏರಿಕೆ ಸಾಕಷ್ಟು ಸಹಕಾರಿ ಆಗುತ್ತದೆ ಸರ್ಕಾರಿ ನೀತಿ ಏನಿಸುತ್ತದೆ.