ಕೇಂದ್ರ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸಿದ ರೀತಿಯನ್ನು ಈ ಹಿಂದಿನಿಂದಲೇ ಟೀಕಿಸುತ್ತಲೇ ಬಂದಿರುವ ರಾಹುಲ್ ಗಾಂಧಿ ಈಗ ಮತ್ತೊಮ್ಮೆ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ದೇಶದ ಜನರು ತಮ್ಮ ಜೀವದ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು, ಏಕೆಂದರೆ ಪ್ರಧಾನ ಮಂತ್ರಿಗಳು ನವಿಲಿನೊಂದಿಗೆ ನಿರತರಾಗಿದ್ದಾರೆ, ಎಂದು ಕುಟುಕಿದ್ದಾರೆ.
ಕಳೆದ ವಾರ ಸೋನಿಯಾ ಗಾಂಧಿ ಅವರೊಂದಿಗೆ ವಿದೇಶಕ್ಕೆ ತೆರಳಿರುವ ರಾಹುಲ್ ಗಾಂಧಿ, ಅಲ್ಲಿಂದಲೇ ಟ್ವಟರ್ ಮೂಲಕ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಭಾರತದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ ಈ ವಾರದಲ್ಲಿ 50 ಲಕ್ಷ ದಾಟಲಿದೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷಕ್ಕೇರಲಿದೆ. ದೇಶದಲ್ಲಿ ಜಾರಿಗೆ ತರಲಾಗಿದ್ದ ಲಾಕ್ಡೌನ್ ಒಬ್ಬ ವ್ಯಕ್ತಿಯ ʼಅಹಂʼನ ಉಡುಗೊರೆ. ಮೋದಿ ಸರ್ಕಾರ ಜನರಿಗೆ ʼಆತ್ಮ ನಿರ್ಭರʼರಾಗಲು ಹೇಳಿದೆ. ಅಂದರೆ, ನಿಮ್ಮ ಜೀವವನ್ನು ನೀವೆ ಉಳಿಸಿಕೊಳ್ಳಬೇಕು. ಪ್ರಧಾನ ಮಂತ್ರಿಗಳು ನವಿಲಿನೊಂದಿಗೆ ಬ್ಯುಸಿಯಾಗಿದ್ದಾರೆ,” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇವರ ಟೀಕೆಗೆ ಉತ್ತರಿಸಿರುವ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್, “ರಾಹುಲ್ ಗಾಂಧಿ ಪ್ರತಿದಿನ ಟ್ವೀಟ್ ಮಾಡುತ್ತಿರುತ್ತಾರೆ. ಕಾಂಗ್ರೆಸ್ ಈಗ ಟ್ವಿಟರ್ ಪಾರ್ಟಿ ಆಗಿರುವಂತೆ ಕಾಣುತ್ತಿದೆ. ಜನರೊಂದಿಗೆ ಬೆರೆತು ಏನೂ ಕೆಲಸ ಮಾಡುತ್ತಿಲ್ಲ ಹಾಗೂ ಒಬ್ಬರ ನಂತರ ಒಬ್ಬರು ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಒಂದು ನಿರಾಶೆಗೊಂಡ ಹಾಗೂ ಖಿನ್ನತೆಗೆ ಒಳಗಾದ ಪಕ್ಷವು ಎಲ್ಲಾ ವಿಚಾರಗಳಲ್ಲಿಯೂ ಸರ್ಕಾರ ಮೇಲೆ ದಾಳಿ ಮಾಡುತ್ತಿದೆ,” ಎಂದು ಹೇಳಿದ್ದಾರೆ.