ಕರೋನಾ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಮೊಂಬತ್ತಿ ಹೊತ್ತಿಸಿ ಬೆಂಬಲ ನೀಡಿ ಎಂಬ ಪ್ರಧಾನಿ ಮೋದಿಯವರ ಕರೆಗೆ ದೇಶಾದ್ಯಂತ ಭಾನುವಾರ ರಾತ್ರಿ 9ಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೀಪ ಬೆಳಗಿಸಿ, ಮೊಂಬತ್ತಿ ಹೊತ್ತಿಸಿ, ಮೊಬೈಲ್ ಟಾರ್ಚ್ ಬೆಳಗಿಸಿ ಜನ ಕರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆದರೆ, ಪ್ರಧಾನಿ ಮೋದಿಯವರು ಒಂದನ್ನು ಹೇಳಿದರೆ, ಅವರ ಅಭಿಮಾನಿ ಭಕ್ತರು ಮತ್ತೊಂದನ್ನು ಮಾಡುವುದು ವಾಡಿಕೆ. ಹಲವು ಸಂದರ್ಭಗಳಲ್ಲಿ ಭಕ್ತರ ಅಂತಹ ನಡೆ ಹಲವು ಅವಾಂತರ ಸೃಷ್ಟಿಸಿದೆ. ಸ್ವತಃ ಮೋದಿಯವರೂ ಸೇರಿದಂತೆ ಅವರ ಪಕ್ಷಕ್ಕೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೂ ಮುಜಗರ ತಂದಿದೆ. ಲಾಕ್ ಡೌನ್ ಆರಂಭದಲ್ಲಿ ಪ್ರಧಾನಿಗಳು ಕರೆ ನೀಡಿದ್ದ ಜನತಾ ಕರ್ಫ್ಯೂ ದಿನದ ಚಪ್ಪಾಳಿ ತಟ್ಟುವ ಅಭಿಯಾನದ ವೇಳೆ ಕೂಡ, ಜನ ಚಪ್ಪಾಳೆ ತಟ್ಟುವುದನ್ನು ಬಿಟ್ಟು ಶಂಖ-ಜಾಗಟೆ, ಘಂಟೆ- ಪಾತ್ರೆ ಮುಂತಾದ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಬಾರಿಸಿ, ರಸ್ತೆಗಿಳಿದು ಮೆರವಣಿಗೆ, ನೃತ್ಯ ಮಾಡುವ ಮೂಲಕ ಅಂಧಭಕ್ತಿಯ ಮೂರ್ಖತನ ಪ್ರದರ್ಶಿಸಿದ್ದರು. ಆ ಮೂಲಕ ಜನತಾ ಕರ್ಫ್ಯೂ ಮತ್ತು ಸಾಮಾಜಿಕ ಅಂತರದ ಉದ್ದೇಶವನ್ನೇ ನಗೆಪಾಟಲಿಗೀಡು ಮಾಡಿದ್ದರು.
ಇದೀಗ ಲಾಕ್ ಡೌನ್ ಮಧ್ಯದಲ್ಲಿ ಮೋದಿಯವರು ಕರೆ ನೀಡಿದ ಮೊಂಬತ್ತಿ ಬೆಳಗಿಸುವ ಅಭಿಯಾನ ಕೂಡ ಅಂತಹದ್ದೇ ಎಡವಟ್ಟು, ಪ್ರಹಸನಗಳಿಗೆ ಸಾಕ್ಷಿಯಾಯಿತು. ಮೊದಲನೆಯದಾಗಿ ಮೋದಿಯವರು ಈ ಮೊಂಬತ್ತಿ ಅಭಿಯಾನಕ್ಕೆ ಕರೆ ನೀಡುವಾಗ ಕರೋನಾದ ವಿರುದ್ಧ ಮುಂಚೂಣಿಯಲ್ಲಿದ್ದು ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಬಗ್ಗೆಯಾಗಲೀ, ಇತರೆ ಇಲಾಖೆಗಳ ಸಿಬ್ಬಂದಿಗಳ ಬಗ್ಗೆಯಾಗಲೀ ಒಂದೂ ಕೃತಜ್ಞತೆಯ ಮಾತನಾಡಲಿಲ್ಲ. ಕರೋನಾ ವಿರುದ್ಧದ ಹೋರಾಟಕ್ಕೆ ದೇಶ ಹೇಗೆ ಸಜ್ಜಾಗಿದೆ. ಈವರೆಗೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ನೀಡಿ ಜನರಲ್ಲಿ ವಿಶ್ವಾಸ- ಭರವಸೆ ಹುಟ್ಟಿಸುವ ಯತ್ನವನ್ನೂ ಮಾಡಲಿಲ್ಲ ಎಂಬ ಅಸಮಾಧಾನ ವ್ಯಾಪಕವಾಗಿ ಕೇಳಿಬಂದಿತ್ತು. ಆ ಬಳಿಕ ಭಾನುವಾರ ರಾತ್ರಿ ಮನೆಯ ದೀಪ ಆರಿಸಿ ಮೊಂಬತ್ತಿ, ದೀಪಗಳನ್ನು ಬೆಳಗಿಸುವ ವೇಳೆ ಕೂಡ ಮೋದಿಯವರ ಕರೆಯನ್ನು ಪಾಲಿಸಿದ ಬಹುತೇಕರು ಇಡೀ ಅಭಿಯಾನವನ್ನು ಒಂದು ಅಪಹಾಸ್ಯದ, ತಮಾಷೆಯ ವಸ್ತುವಾಗಿಸಿದರು.
ದೀಪ- ಮೊಂಬತ್ತಿ ಬೆಳಗಿಸಿದವರು, ಟಾರ್ಚ್ ಹೊತ್ತಿಸಿದವರು ಒಂದು ಪಾಲಾದರೆ, ಆ ನೆಪದಲ್ಲಿ ಪಟಾಕಿ ಸಿಡಿಸಿದವರು, ರಿವಾಲ್ವರ್ ಗುಂಡು ಹಾರಿಸಿದವರು, ದೊಂದಿ ಹಿಡಿದು ಸಾಮೂಹಿಕವಾಗಿ ರಸ್ತೆಗಿಳಿದು ಗೋ ಕರೋನಾ ಗೋ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದವರು ಹಲವರು. ಬಿಜೆಪಿ ಶಾಸಕರೊಬ್ಬರು ಉತ್ತರಪ್ರದೇಶದಲ್ಲಿ ಸ್ವತಃ ಪಂಜು ಹಿಡಿದು ರಾತ್ರಿ ನೂರಾರು ಜನರೊಂದಿಗೆ ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದಾರೆ. ಮತ್ತೊಬ್ಬ ಬಿಜೆಪಿಯ ಯುವ ಘಟಕದ ನಾಯಕಿ ರಿವಾಲ್ವರ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ಹಲವು ಕಡೆ ಪಟಾಕಿ ಸಿಡಿಸುವ ವೇಳೆ ಮನೆಗಳಿಗೇ ಬೆಂಕಿ ತಗಲಿದ ವರದಿಗಳಿವೆ. ಬೀದಿಗಳಿದು ಘೋಷಣೆ ಕೂಗಿದ, ನೃತ್ಯ ಮಾಡಿದ ಹಲವು ಘಟನೆಗಳು ದೇಶದ ಉದ್ದಗಲಕ್ಕೆ ನಡೆದಿವೆ.
ಅದರಲ್ಲೂ ಮುಖ್ಯವಾಗಿ ದೀಪ ಬೆಳಗಿಸಿ ಎಂದರೆ, ಈ ಹಿಂದಿನ ಕೋರ್ಟ್ ಆದೇಶಗಳನ್ನು ಗಾಳಿಗೆ ತೂರಿ ರಾತ್ರಿ ಹತ್ತು-ಹನ್ನೊಂದು ಗಂಟೆಯವರೆಗೆ ಪಟಾಕಿ ಸಿಡಿಸಿದ್ದು, ಲಾಕ್ ಡೌನ್ ಕಾನೂನು ಉಲ್ಲಂಘಿಸಿ ಗುಂಪಾಗಿ ನೂರಾರು ಜನರು ರಸ್ತೆಗಿಳಿದು ಮೆರವಣಿಗೆ ನಡೆಸಿದ ಘಟನೆಗಳೂ ಉತ್ತರಪ್ರದೇಶವಷ್ಟೇ ಅಲ್ಲದೆ, ಕರ್ನಾಟಕವೂ ಸೇರಿ ಹಲವು ಕಡೆ ವರದಿಯಾಗಿವೆ. ಆದರೆ, ಪ್ರಶ್ನೆ ಇರುವುದು ಇಂಥವರ ಮೇಲೆ ಆಯಾ ವ್ಯಾಪ್ತಿಯ ಪೊಲೀಸರು ಏಕೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು. ಜನ ಔಷಧಿ, ಹಾಲು, ತರಕಾರಿಯಂಥ ಅಗತ್ಯ ವಸ್ತು ಖರೀದಿಗೆ ಹೋಗಿ ಪೊಲೀಸರ ಲಾಠಿ ಏಟು ತಿಂದು ಆಸ್ಪತ್ರೆ ಸೇರಿರುವ ನೂರಾರು ಘಟನೆಗಳ ನಡುವೆ, ಹೀಗೆ ತಮ್ಮ ಕಣ್ಣೆದುರೇ ಎಲ್ಲಾ ಕಾನೂನು ಮುರಿದು ಸಂಭ್ರಮಿಸಿದವರ ವಿರುದ್ಧ ಪೊಲೀಸರ ಲಾಠಿಗಳು ಮೌನಕ್ಕೆ ಜಾರಿದ್ದು ಯಾವ ಉದ್ದೇಶದಿಂದ ಎಂಬುದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಾಗೇ, ದೇಶದ ಉದ್ದಗಲಕ್ಕೆ ಜನ ಹೊತ್ತಿನ ಊಟದ ದಿನಸಿ, ತರಕಾರಿ ತರಲು ಪರದಾಡುತ್ತಿರುವಾಗ, ಔಷಧ- ಹಾಲು ಮುಂತಾದ ವಸ್ತುಗಳ ಖರೀದಿಗೂ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಹೊತ್ತಲ್ಲಿ, ಭಾನುವಾರ ರಾತ್ರಿ ದೇಶದ ಪ್ರತಿ ನಗರ-ಪಟ್ಟಣ, ಊರು-ಕೇರಿಯಲ್ಲೂ ಆರ್ಭಟಿಸಿದ ಭಾರೀ ಪಟಾಕಿ ಮತ್ತು ಸಿಡಿಮದ್ದುಗಳನ್ನುಆ ಜನ ಹೇಗೆ ಕೊಂಡುತಂದರು? ಅಷ್ಟೊಂದು ಅಪಾರ ಪ್ರಮಾಣದ ಸಿಡಿಮದ್ದುಗಳನ್ನು ಯಾವ ವ್ಯಾಪಾರಿಗಳು, ಹೇಗೆ ಮಾರಾಟ ಮಾಡಿದರು? ಕಟ್ಟುನಿಟ್ಟಿನ ಲಾಕ್ ಡೌನ್ ನಡುವೆಯೂ ಈ ಸಾಮಗ್ರಿಗಳ ಮಾರಾಟ, ಸಾಗಣೆ ಹೇಗೆ ನಡೆಯಿತು? ಅಥವಾ ಯಾವುದಾದರೂ ‘ಸಂಘ’, ‘ಪರಿವಾರ’ಗಳು ವ್ಯವಸ್ಥಿತವಾಗಿ ಈ ಸಿಡಿಮದ್ದುಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಮೋದಿಯವರು ಕರೆ ನೀಡಿದ ಅಭಿಯಾನ ಅದ್ಧೂರಿಯ ಪ್ರದರ್ಶನವಾಗುವಂತೆ ನೋಡಿಕೊಂಡರೆ?
ಈ ಪ್ರಶ್ನೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿವೆ. ಪೊಲೀಸ್ ಇಲಾಖೆ ಮತ್ತು ಸರ್ಕಾರಗಳು ಜನರ ಈ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳಬೇಕಿದೆ. ಕಾನೂನು ಮತ್ತು ಕಾಯ್ದೆ ಉಲ್ಲಂಘಿಸಿ ತಮ್ಮದೇ ದುಂಡಾವರ್ತನೆ ಮೆರೆದ ಇಂಥ ಜನರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ತಮ್ಮ ಮೇಲೆ ದೇಶದ ಜನಸಾಮಾನ್ಯರು ಇಟ್ಟಿರುವ ವಿಶ್ವಾಸವನ್ನು ಪೊಲೀಸರು ಮತ್ತು ಕೇಂದ್ರ ಗೃಹ ಇಲಾಖೆ ಉಳಿಸಿಕೊಳ್ಳಬೇಕಿದೆ. ಇಂಥ ಸಂಕಷ್ಟದ ಹೊತ್ತಲ್ಲಿಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಜನರು ಮತ್ತು ಆಡಳಿತದ ನಡುವಿನ ವಿಶ್ವಾಸ ಮತ್ತು ಭರವಸೆಗಳು ಎಷ್ಟು ಮುಖ್ಯ ಎಂಬ ಸೂಕ್ಷ್ಮತೆಯ ಅರಿವಿದ್ದವರಿಗೆ ಇಂತಹ ನಿಷ್ಪಕ್ಷಪಾತ ಮತ್ತು ನಿರ್ದಾಕ್ಷಿಣ್ಯದ ಕಾನೂನು ಕ್ರಮಗಳ ಮಹತ್ವ ತಿಳಿಯದೇ ಇರಲಾರದು.
ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಯಲು ಆಹೋರಾತ್ರಿ ಶ್ರಮಿಸುತ್ತಿರುವುದು ಮತ್ತು ಲಾಕ್ ಡೌನ್ ಪರಿಣಾಮಕಾರಿ ಜಾರಿಯ ಮೂಲಕ ಜನರ ಜೀವ ರಕ್ಷಣೆಗೆ ಸ್ವತಃ ಜೀವ ಪಣಕ್ಕಿಟ್ಟು(ಸೋಂಕು ಭೀತಿ) ಹೋರಾಡುತ್ತಿರುವುದನ್ನು ಪ್ರಸಂಶಿಸುತ್ತಲೇ, ಇಂತಹ ಬಿಡಿಬಿಡಿ ಘಟನೆಯ ಸಂದರ್ಭದಲ್ಲಿ ನಿಷ್ಪಕ್ಷಪಾತ ಕ್ರಮ ಜಾರಿಯಾಗದೇ ಹೋದರೆ, ಅಂತಹ ಎಲ್ಲಾ ತ್ಯಾಗಕ್ಕೂ ಕಳಂಕ ಮೆತ್ತಿಕೊಳ್ಳುತ್ತದೆ. ಜನ ಇಲಾಖೆಯನ್ನು ನೋಡುವ ರೀತಿಯೇ ಬದಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆ ಹಿನ್ನೆಲೆಯಲ್ಲಿ ಕೂಡ ದೀಪ ಬೆಳಗುವ ಬದಲು ಪಟಾಕಿ ಸಿಡಿಸಿದವರು, ಮೊಂಬತ್ತಿ ಹೊತ್ತಿಸುವ ಬದಲು ದೊಂದಿ ಹಿಡಿದು ಮೆರವಣಿಗೆ ನಡೆಸಿದವರು, ಮೊಬೈಲ್ ಟಾರ್ಚ್ ಬೆಳಗಿಸುವ ಬದಲು ರಸ್ತೆಗಿಳಿದು ಪ್ರದರ್ಶನ ನಡೆಸಿದವರ ವಿರುದ್ಧ ಜಾರಿಯಾಗಲೇ ಬೇಕಾದ ಕಾನೂನು ಕ್ರಮಗಳು ಜಾರಿಯಾಗಬೇಕಿದೆ. ಇಲ್ಲವಾದರೆ, ಪ್ರಧಾನಿ ಮೋದಿಯವರ ಸದುದ್ದೇಶದಿಂದ ಕರೆ ನೀಡಿದ್ದರೂ, ಈ ಇಡೀ ಅಭಿಯಾನವನ್ನು ಇತರೆ ದುರುದ್ದೇಶಗಳಿಗೆ ಕೆಲವು ಸಂಘಟನೆಗಳು ಬಳಸಿಕೊಂಡಿರಬಹುದೇ? ಆ ಕಾರಣಕ್ಕಾಗಿಯೇ ಅಂತಹ ಸಂಘಟನೆಗಳೇ ಸಿಡಿಮದ್ದು- ಪಟಾಕಿ ವ್ಯವಸ್ಥೆ ಮಾಡಿ ರಾಜಕೀಯ ಬಲ ಪ್ರದರ್ಶನದ ವರಸೆ ಮೆರೆದಿರಬಹುದೇ ಎಂಬ ಗಂಭೀರ ಪ್ರಶ್ನೆಗಳಿಗೆ ವ್ಯವಸ್ಥೆಯೇ ಇಂಬು ನೀಡಿದಂತಾಗಲಿದೆ.