ಸಿಎಂ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಚುನಾವಣಾ ಪ್ರಚಾರದ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು.ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ.
ಚಾಮರಾಜನಗರ ಲೋಕಸಭಾ ಚುನಾವಣಾ ಹಿನ್ನೆಲೆ ಅಭ್ಯರ್ಥಿ ಸುನಿಲ್ ಬೋಸ್ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಮುಗಿಸಿ ಅದೇ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಮುಂಭಾಗ ಕಳೆದ ಎರಡು ತಿಂಗಳುಗಳಿಂದ ತಮ್ಮ ಬೇಡಿಕೆಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಸಂದರ್ಭ ಪ್ರತಿಭಟನಾಕಾರರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಪ್ರತಿಭಟನಾಕಾರರನ್ನು ಭೇಟಿ ಮಾಡಿ ಓಲೈಸಲು ಮುಂದಾದ ಯತೀಂದ್ರ ಅವರಿಗೆ ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು
ಚುನಾವಣೆ ಗೋಸ್ಕರ ಇಲ್ಲಿಗೆ ಬಂದಿದ್ದೀರಿ ಇಲ್ಲದಿದ್ದರೆ ನೀವು ಯಾವುದೇ ಕಾರಣಕ್ಕೂ ಬರುತ್ತಿರಲಿಲ್ಲ ಎಂದು ಛೇಡಿಸಿದ ಪ್ರತಿಭಟನಾಕಾರರು,ಕಾರ್ಖಾನೆಯವರು ನಮ್ಮ ಮಾತನ್ನು ಕೇಳುತ್ತಿಲ್ಲ ಇದನ್ನು ನಮ್ಮ ತಂದೆ ಯವರ ಗಮನಕ್ಕೆ ತರುವುದಾಗಿ ಎಂದು ಹೇಳುತ್ತಿದ್ದಂತೆ ಕುಪಿತಗೊಂಡ ಪ್ರತಿಭಟನಾಕಾರರು ಇನ್ನೂ ಈ ವಿಚಾರವನ್ನು ನಿಮ್ಮ ತಂದೆಯವರ ಗಮನಕ್ಕೆ ತಂದಿಲ್ಲವಾ ಎಂದು ಅವರ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನು ಖಂಡಿಸಿ ನಮ್ಮ ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನಕಾರರ ವಾಗ್ದಾಳಿಗೆ ತತ್ತರಿಸಿದ ಯತೀಂದ್ರ ಸಿದ್ದರಾಮಯ್ಯ ಬಂದ ದಾರಿಗೆ ಸುಂಕವಿಲ್ಲದಂತೆ ಅಲ್ಲಿಂದ ತರಾತುರಿಯಲ್ಲಿ ಕಾಲ್ಕಿತ್ತರು.





