ಮಹಿಳಾ ಸುರಕ್ಷತೆಗೆ ಈಗಾಗಲೇ ಕರ್ನಾಟಕದಾದ್ಯಂತ ಪೊಲೀಸ್ ಇಲಾಖೆ ಚೆನ್ನಮ್ಮ ಪಡೆ, ಓಬವ್ವ ಪಡೆ ಹೀಗೆ ಹಲವು ಹೆಸರುಗಳಲ್ಲಿ ತರಬೇತಿ ನೀಡಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ ಒಂಟಿ ಮಹಿಳೆಗೆ ಸುರಕ್ಷತಾ ಭಾವ ನೀಡಲು ಹಾಗೂ ನಿಮ್ಮ ಸಹೋದರರು ನಾವಿದ್ದೇವೆ ಎಂಬ ಬೆಚ್ಚಗಿನ ಭಾವ ನೀಡಲು, ಸುರಕ್ಷತೆ ನೀಡಲು ಗದಗ್ ಪೊಲೀಸರು ಮುಂದಾಗಿದ್ದಾರೆ.
ಗದಗ್ ಹೊಸ ಬಸ್ ನಿಲ್ದಾಣಕ್ಕೆ ಮಹಿಳೆಯರು ರಾತ್ರಿ 10ರ ನಂತರ ಹಾಗೂ ಬೆಳಿಗ್ಗೆ 6 ಗಂಟೆಯ ಒಳಗಡೆ ಬಂದರೆ, ಪೊಲೀಸ್ ಸಿಬ್ಬಂದಿಗಳೇ ಅವರ ಹತ್ತಿರ ಹೋಗಿ, ಅವರ ಜೊತೆಗೆ ನಿಲ್ಲುತ್ತಾರೆ. ಸಂಬಂಧಿಕರು ಹಾಗೂ ಕುಟುಂಬದವರು ಬರುವ ತನಕ ಕಾಯುತ್ತಾರೆ. ಮಹಿಳೆಯರಷ್ಟೇ ಇದ್ದರೆ ಅವರ ವಿಳಾಸ ಪಡೆದುಕೊಂಡು ಅಟೋ ರಿಕ್ಷಾವನ್ನು ಕರೆದು ಕಡಿಮೆ ದರದಲ್ಲಿ ಅವರಿಗೆ ಮನೆಗೆ ಬಿಟ್ಟು ಬರುವಂತೆ ಸೂಚಿಸುತ್ತಾರೆ. ಜೊತೆಗೆ ಆ ರಿಕ್ಷಾದ ನಂಬರ್ ಬರೆದುಕೊಂಡು , ವೇಳೆಯನ್ನು ಬರೆದುಕೊಂಡು, ಆ ರಿಕ್ಷಾದವರಿಗೆ ಮನೆಗೆ ಬಿಟ್ಟು ಸುರಕ್ಷಿತ ವಾಗಿ ತಲುಪಿದರೆಂದು ಖಚಿತಗೊಂಡ ನಂತರ ವಾಪಸ್ಸು ಬಂದು ತಿಳಿಸಬೇಕು ಎಂದು ಸೂಚಿಸುತ್ತಾರೆ.
ಹೊಸ ಸಹಾಯ ವಾಣಿ:
ಈಗಾಗಲೇ 100, 112 ಸಹಾಯವಾಣಿ ಚಾಲ್ತಿಯಲ್ಲಿದೆ. ಅದರ ಜೊತೆಗೆ ಗದಗ್ ಪೊಲೀಸರು ಇನ್ನೊಂದು ಸಹಾಯ ವಾಣಿ ಆರಂಭಿಸಿದ್ದಾರೆ. ಅದರ ನಂಬರ್ 94808-04400. ಈ ನಂಬರ್ ಫೋನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪೊಲೀಸರು ನಿಮ್ಮ ಮುಂದಿರುತ್ತಾರೆ. ಇದೊಂದು ನೂತನ ಸಹಾಯವಾಣಿಯಾಗಿದ್ದು, ಗದಗ್ ನಲ್ಲಿ ಮೊದಲು ಪ್ರಾರಂಭಿಸಲಾಗಿದೆ. ಮಹಿಳೆಯರು ಈ ನಂಬರ್ ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಲು ತಿಳಿಸಲಾಗಿದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗದಗ್ ಎಸ್ ಪಿ ಶ್ರೀನಾಥ ಜೋಶಿಯವರ ಹೇಳಿಕೆ ಜೊತೆಗೆ ಸಂದೇಶ ಇರುವ ಚಿತ್ರಗಳನ್ನು ಹರಿಬಿಡಲಾಗಿದ್ದು ಇದೀಗ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಓದಿ ಹಲವು ಮಹಿಳೆಯರು ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ ಹಾಗೂ ಈ ವಿನೂತನ ಕಾರ್ಯಕ್ಕೆ ಶ್ಲಾಘಿಸುತ್ತಿದ್ದಾರೆ.
ಏನಿದು? ಹೇಗೆ ಸಹಾಯ ಮಾಡುತ್ತಾರೆ?
ಒಂದು ವೇಳೆ ಮಹಿಳೆ ಒಬ್ಬಂಟಿಯಾಗಿ ಗದಗ್ ಗೆ ರಾತ್ರಿ 10 ಗಂಟೆಯ ಮೇಲೆ ಬಂದರೆ ಒಂದು ರಕ್ಷಣೆ ಪ್ರಶ್ನೆ ಹಾಗೂ ಇನ್ನೊಂದು ಅಟೋ ದವರು ಎದ್ವಾ ತದ್ವಾ ಹಣ ಪೀಕುವ ಭಯ. ಒಬ್ಬರೇ ಬಂದರೆ ಬಸ್ ನಿಲ್ದಾಣದಲ್ಲಿ ಸ್ನೇಹಿತರು ಅಥವಾ ಸಂಬಂಧಿಗಳು ಬರುವ ತನಕ ಕಾಯುವ ಚಿಂತೆ. ಒಬ್ಬರೇ ಹೊರಗಡೆ ಹೋದರೆ ರಾತ್ರಿ ಏನಾದರೂ ಆದೀತು ಎಂಬ ಹೆದರಿಕೆ. ಇದಕ್ಕೆಂದೇ ಪೊಲೀಸ್ ಸಿಬ್ಬಂದಿಗಳು ಇಲ್ಲಿ ಬೀಡು ಬಿಟ್ಟಿದ್ದಾರೆ. ಒಬ್ಬರೆ ಮಹಿಳೇಯರು ಇದ್ದರೆ ಅವರತ್ತ ಪೊಲೀಸ್ ವಾಹನ ಬಂದು ನಿಲ್ಲುತ್ತದೆ. ಅವರನ್ನು ವಿಚಾರಿಸುತ್ತದೆ. ಯಾರಾದರು ಒಬ್ಬರು ಬರುವವರೆಗೂ ಅವರ ಜೊತೆಗೆ ನಿಲ್ಲುತ್ತಾರೆ.
ಅಟೋ ದಲ್ಲಿ ಹೋಗಬೇಕೆಂದರೆ ಪೊಲೀಸರೇ ಅಟೋ ಕರೆಯುತ್ತಾರೆ ಹಾಗೂ ಸೂಕ್ತ ದರ ನಿಗದಿಪಡಿಸಿ ಅಟೋ ಚಾಲಕರಿಗೆ ಸುರಕ್ಷಿತವಾಗಿ ಮನೆಗೆ ಬಿಟ್ಟು ಅವರು ಒಳಗೆ ಹೋಗಿ ಬಾಗಿಲು ಹಾಕಿಕೊಳ್ಳುವವರೆಗೆ ಕಾದು ನಂತರ ಬನ್ನಿ ಎಂದು ತಿಳಿಸುತ್ತಾರೆ. ಅಟೋ ನಂಬರ್ ಹಾಗೂ ಚಾಲಕರ ವಿವರಗಳನ್ನು ಬರೆದುಕೊಳ್ಳುತ್ತಾರೆ.
ಪಾರ್ವತಿ ಎಸ್. ಬೆಟಗೇರಿ ಮಹಿಳೆಯೊಬ್ಬರ ಅಭಿಪ್ರಾಯ, “ಮೊನ್ನೆ ನಾನು ಗದುಗಿಗೆ ಲೇಟಾಗಿ ಬಂದೆ. ಬಸ್ ನಿಂದ ಇಳಿದಾಗ ರಾತ್ರಿ ಒಂದು ಗಂಟೆ. ಮಗನಿಗೆ ಬಾ ಎಂದು ಹೇಳಿದ್ದೆ. ಅವನು ಬರುವ ತನಕ ಕಾಯಬೇಕಲ್ಲಾ ಎಂಬ ಭಯ. ಅಷ್ಟರಲ್ಲೇ ಪೊಲೀಸ್ ವಾಹನ ನನ್ನ ಕಡೆಗೆ ಬಂತು. ಯಾಕಪ್ಪಾ ಪೊಲೀಸರು ನನ್ನ ಹತ್ತಿರ ಬರುತ್ತಿದ್ದಾರೆ ಎಂದು ಕೊಂಚ ವಿಚಲಿತಳಾದೆ. ತಕ್ಷಣ ಒಬ್ಬ ಸಿಬ್ಬಂದಿ ನನ್ನ ಕಡೆಗೆ ಬಂದು ನನಗೆ ಅವರ ಹೊಸ ಸಹಾಯವಾಣಿ ಬಗ್ಗೆ ತಿಳಿಸಿ, ಮಗ ಬರುವ ತನಕ ನನ್ನ ಜೊತೆಗೆ ನಿಂತು ನಂತರ ಕಳುಹಿಸಿಕೊಟ್ಟರು. ವಾವ್ ಅದ್ಭುತ ಎನಿಸಿತು. ಪೊಲೀಸರು ನಮ್ಮವರು. ಗದಗ್ ಇನ್ನ ಮೇಲೆ ಸೇಫ್”.
ಗದುಗಿನ ಸಾಮಾಜಿಕ ಕಾರ್ಯಕರ್ತ ಮುತ್ತಣ್ಣ ಭರಡಿ ಹೇಳಿದರು, “ಪೊಲೀಸರ ಈ ಕಾರ್ಯ ಸ್ತುತ್ಯಾರ್ಹ. ಮಹಿಳೆಯರಿಗೆ ಹಾಗೂ ರಾತ್ರಿ ಒಡಾಡುವವರಿಗೆ ಇದು ನಿಜಕ್ಕೂ ಸಹಾಯವಾಗುತ್ತದೆ. ಸಹಾಯವಾಣಿಗೆ ಅದ್ಭುತ ಸ್ಪಂದನೆ ದೊರೆತಿದೆ. ಇದರಿಂದ ಬಹುತೇಕ ಕಿಡಿಗೇಡಿಗಳು ಭಯಭೀತರಾಗಿದ್ದಾರೆ”.
ಗದಗ್ ಎಸ್ ಪಿ ಶ್ರೀನಾಥ ಜೋಶಿ ಪ್ರತಿಧ್ವನಿ ತಂಡದೊಂದಿಗೆ ಮಾತನಾಡಿದರು, “ಮಹಿಳೆಯರ ಸುರಕ್ಷತೆ ನಮ್ಮೆಲ್ಲರ ಕರ್ತವ್ಯ. ಈಗಾಗಲೇ ಸಹಾಯವಾಣಿ ಇದ್ದು ಅದು ಜನರಿಗೆ ಸ್ಪಂದನೆ ನೀಡುತ್ತಿದೆ. ನಾವು ನೂತನ ಸಹಾಯವಾಣಿ ಆರಂಭಿಸಿದ್ದು, ಯಾರಾದರೂ ತೊಂದರೆ ಎದುರಾಗುತ್ತದೆ ಎನಿಸಿದಾಗ ಈ ನಂಬರ್ ಗೆ ಕರೆ ಮಾಡಿದಾಗ ತಕ್ಷಣ ನಮ್ಮ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಅವರ ಕಡೆಗೆ ಬರುತ್ತಾರೆ. ಈ ಯೋಜನೆಯ ಬಗ್ಗೆ ನನಗೆ ನಂಬಿಕೆ ಇತ್ತು ಹಾಗೂ ನಾಲ್ಕೈದು ದಿನಗಳಿಂದ ಚೆನ್ನಾಗಿ ನಡೆಯುತ್ತಿದೆ. ಮಹಿಳೆಯರಿಗೆ ಉಪಯೋಗವೂ ಆಗುತ್ತಿದೆ”.