ಹಿಂದಿ ಹೇರಿಕೆ ಎಂಬುದು ಈಗ ದೊಡ್ಡ ಮಟ್ಟದ ಚರ್ಚೆಗೆ ಈಡಾಗಿರುವ ಸಂಗತಿ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಹಿಂದಿ ಹೇರಿಕೆ ದಬ್ಬಾಳಿಕೆ, ಹಿಂದಿ ಮತ್ತು ಹಿಂದುತ್ವದ ಸಮೀಕರಣ ಮತ್ತು ಹಿಂದಿ, ಹಿಂದುತ್ವದೊಂದಿಗೆ ರಾಷ್ಟ್ರೀಯತೆ, ದೇಶಪ್ರೇಮವನ್ನು ತಳಕುಹಾಕುವ ಪ್ರವೃತ್ತಿಯ ವಿರುದ್ಧ ದೊಡ್ಡ ಮೊಟ್ಟದ ಆಕ್ರೋಶ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಿಂದಿ ಪ್ರಚಾರ ಮತ್ತು ವಿಸ್ತರಣೆಯ ಉದ್ದೇಶದ ‘ಹಿಂದಿ ದಿವಸ್’ ಆಚರಣೆಯ ಹಿನ್ನೆಲೆಯಲ್ಲಿ ಈ ವಿವಾದ ಮತ್ತೆ ಕಾವೇರಿದ್ದು, ರಾಜ್ಯಾದ್ಯಂತ ಕನ್ನಡಪರ ಮತ್ತು ಹಿಂದಿ ವಿರೋಧಿ ಅಭಿಯಾನ ಭುಗಿಲೆದ್ದಿದೆ. ಜೊತೆಗೆ ಬಿಜೆಪಿ ಸರ್ಕಾರ ಜಾರಿಗೆ ತರಲು ಸಿದ್ಧತೆ ನಡೆಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020(NEP)ಯಲ್ಲಿ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಸಿರುವ ಹಿನ್ನೆಲೆಯಲ್ಲೂ ಹಿಂದಿ ಹೇರಿಕೆಯ ವಿಷಯ ಚರ್ಚೆಯ ವಸ್ತುವಾಗಿದೆ. ಈ ಹಿನ್ನೆಲೆಯಲ್ಲಿ ‘ಪ್ರತಿಧ್ವನಿ’ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಾರರೂ ಆದ ಡಾ ಎಸ್ ಎಂ ಜಾಮದಾರ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದಭಾಗ ಇಲ್ಲಿದೆ;
ಹಿಂದಿಯೇತರರ ಮೇಲೆ ಹಿಂದಿ ಹೇರಿಕೆಯ ಅವಕಾಶವಾಗಿ ತ್ರಿಭಾಷಾ ಸೂತ್ರ ಬಳಕೆಯಾಗುತ್ತದೆ ಎಂಬ ಅಭಿಪ್ರಾಯ ಇದೆ. ಆ ಹಿನ್ನೆಲೆಯಲ್ಲಿ; ತ್ರಿಭಾಷಾ ಸೂತ್ರದ ವಿಷಯದಲ್ಲಿ ಇರುವ ಗೊಂದಲದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದು ಅಭಿಪ್ರಾಯದ ಮಾತಲ್ಲ. ಇದು ವಾಸ್ತವಿಕ ಸಮಸ್ಯೆ. ಆ ಬಗ್ಗೆ ಮಾತನಾಡುವೆ. ಸಂವಿಧಾನದಲ್ಲಿ ಸ್ಪಷ್ಟವಾಗಿ ಭಾಷಾ ನೀತಿಯ ಬಗ್ಗೆ ಪ್ರತ್ಯೇಕ ಪರಿಚ್ಛೇದವೇ ಇರುವಾಗ ಅಲ್ಲಿ ಅಭಿಪ್ರಾಯದ ಪ್ರಶ್ನೆ ಬರುವುದಿಲ್ಲ. ವಾಸ್ತವವಾಗಿ ಸಂವಿಧಾನದಲ್ಲಿ ತ್ರಿಭಾಷಾ ಸೂತ್ರ ಎಂಬುದಿಲ್ಲ. ಅಲ್ಲಿರುವುದು ಹಿಂದಿ ಹೇರಿಕೆ ಮಾತ್ರ. ಇದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.
ಹಾಗಾಗಿ ತ್ರಿಭಾಷಾ ಸೂತ್ರ ದುರ್ಬಳಕೆಯಾಗುತ್ತಿದೆ ಎನ್ನುವ ಅಭಿಪ್ರಾಯವೇ ಸರಿಯಲ್ಲ. ಜೊತೆಗೆ ವಾಸ್ತವಿಕತೆಯಿಂದ ವಿಷಯವನ್ನು ಹಾದಿತಪ್ಪಿಸಿದಂತಾಗುತ್ತದೆ. ಸಂವಿಧಾನದಲ್ಲಿ ಹೀಗೆ ಮಾಡಬೇಕು ಎಂದು ಹೇಳಿದ್ದಾರೆ. ಅವರು ಮಾಡುತ್ತಿದ್ದಾರೆ. ಅದರಲ್ಲಿ ದುರುಪಯೋಗದ ಪ್ರಶ್ನೆ ಎಲ್ಲಿ ಬಂತು? ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಜನತಾದಳವಿರಲಿ, ಸಂಯುಕ್ತ ರಂಗವಿರಲಿ, ಸಂವಿಧಾನದ ಅಂಶಗಳನ್ನು ಪಾಲಿಸುವುದು ಅನಿವಾರ್ಯ. ಅದು ಅವರ ತಪ್ಪಲ್ಲ. ಕೆಲವರು ಅದರ ಸೂಕ್ಷ್ಮಗಳನ್ನು ಗಮನಿಸಿ ಮೃದು ಧೋರಣೆಯೊಂದಿಗೆ ಜಾರಿಗೊಳಿಸಬಹುದು, ಮತ್ತೆ ಕೆಲವರು ಬಹಳ ಉಗ್ರವಾಗಿ ಜಾರಿಗೊಳಿಸಬಹುದು ಅಷ್ಟೇ. ಹಾಗಾಗಿ ಆಗ ಯಾಕೆ ಮೃದು ಧೋರಣೆ ತಳೆದಿದ್ದಿರಿ, ಮತ್ತು ಈಗ ಯಾಕೆ ಉಗ್ರಧೋರಣೆ ತಳೆದಿದ್ದೀರಿ ಎಂದು ಪ್ರಶ್ನಿಸುವುದು ಸಮಂಜಸ. ಇದು ಮೊದಲನೆ ಅಂಶ.
ಎರಡನೆಯದು; ಈ ತ್ರಿಭಾಷಾ ಸೂತ್ರ ದೇಶದಲ್ಲಿ ಎಲ್ಲಿ ಜಾರಿಯಲ್ಲಿದೆ ಎಂಬುದು. ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ನೂರಕ್ಕೆ ನೂರು ಜಾರಿಯಲ್ಲಿದೆ. ಅದೇ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕೇರಳ, ಪಾಂಡಿಚೇರಿ, ಗೋವಾದಲ್ಲಿ ಇದೆಯಾ? ಇಲ್ಲ. ಉತ್ತರಭಾರತದ ರಾಜ್ಯಗಳಲ್ಲಿ ಕೂಡ ದ್ವಿಭಾಷಾ ಸೂತ್ರವೇ ಜಾರಿಯಲ್ಲಿದೆ. ಹಾಗಾಗಿ ತ್ರಿಭಾಷಾ ಸೂತ್ರ ಎಂಬುದು ಕೇವಲ ಥಿಯರಿಯಾಗಿಯಷ್ಟೇ ಇದೆ.
ಮೂರನೆಯದು; ಸಂವಿಧಾನದಲ್ಲಿ ಇರುವ ಮತ್ತೊಂದು ಅಂಶ ಎಂದರೆ; ಪ್ರಾದೇಶಿಕ ಭಾಷೆಗಳನ್ನು ಕೂಡ ಬೆಳೆಸಬೇಕು ಎಂಬುದು. ಆದರೆ, ಇಂಗ್ಲಿಷಿಗೆ ಮೊದಲಿನಷ್ಟು ಪ್ರಾಮುಖ್ಯತೆಯನ್ನು ಸ್ವತಂತ್ರ ಭಾರತದಲ್ಲಿ ಕೊಡಬಾರದು ಎಂದೇ ಇದೆ. ಸಂವಿಧಾನ ಜಾರಿಗೆ ಬಂದ ಹದಿನೈದು ವರ್ಷಗಳ ಕಾಲ ಮಾತ್ರ ಇಂಗ್ಲಿಷನ್ನು ಸಂಪರ್ಕ ಭಾಷೆಯಾಗಿ ಉಳಿಸಿಕೊಳ್ಳಬೇಕು ಎಂದು ಕಾಲಮಿತಿಯನ್ನೂ ಹಾಕಲಾಗಿತ್ತು. ಆ ಬಳಿಕ ಇಂಗ್ಲಿಷ್ ಬದಲಿಗೆ ಹಿಂದಿಯೇ ಸಂಪರ್ಕ ಭಾಷೆಯಾಗಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ, ಸಂವಿಧಾನ ರಚನೆಕಾರರ ಮುಖ್ಯ ಆಶಯ ಇರುವುದು ಎರಡೇ. ಒಂದು; ದೇಶದಲ್ಲಿ ಇಂಗ್ಲಿಷ್ ಬದಲಾಗಿ ಹಿಂದಿ ಬೆಳೆಯಬೇಕು ಮತ್ತು ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳು ಬೆಳೆಯಬೇಕು ಎಂಬುದು. ಹಾಗಾಗಿ ಇಂಗ್ಲಿಷ್ ಇರಲೇಬೇಕು ಎಂದೇನೂ ಅವರ ಧೋರಣೆಯಾಗಿರಲಿಲ್ಲ. ಬದಲಾಗಿ ಒಂದು ರಾಷ್ಟ್ರಭಾಷೆ, ಮತ್ತೊಂದು ರಾಜ್ಯಭಾಷೆ ಎಂಬುದು ಅವರ ಧೋರಣೆಯಾಗಿತ್ತು ಎಂದುಕೊಳ್ಳಬಹುದು. ಆದರೆ, ರಾಷ್ಟ್ರಭಾಷೆ, ರಾಜ್ಯಭಾಷೆ ಎಂಬ ಶಬ್ಧ ಬಳಕೆ ಕೂಡ ಸಂವಿಧಾನದಲ್ಲಿ ಆಗಿಲ್ಲ. ಬಹಳಷ್ಟು ಜನ ತಪ್ಪು ತಿಳಿದುಕೊಂಡಿದ್ದಾರೆ; ಹಿಂದಿ ರಾಷ್ಟ್ರಭಾಷೆ ಎಂದು. ಆದರೆ ಸಂವಿಧಾನದಲ್ಲಿ ರಾಷ್ಟ್ರಭಾಷೆ ಎಂಬ ವ್ಯಾಖ್ಯಾನವಾಗಲೀ, ಪ್ರಸ್ತಾಪವಾಗಲೀ ಇಲ್ಲ. ಆಡಳಿತ ಭಾಷೆ ಎಂದು ಬಳಸಲಾಗಿದೆಯೇ ವಿನಃ ರಾಷ್ಟ್ರಭಾಷೆ ಎಂದಲ್ಲ. ಆಡಳಿತ ನಿರ್ವಹಣೆಯ ಅಧಿಕೃತ ಭಾಷೆ ಎಂದು ಹೇಳಲಾಗಿದೆ ಅಷ್ಟೇ. ಹಾಗಾಗಿ ಇಂತಹ ವಾಸ್ತವಿಕ ಸಂಗತಿಗಳ ಮೇಲೆ ನಾವು ಚರ್ಚೆ ಮಾಡಬೇಕಾಗಿದೆ.
ಹಾಗಾದರೆ, ಹಿಂದಿ ಹೇರಿಕೆಯನ್ನು ವಿರೋಧಿಸಲು ಕನ್ನಡಿಗರಿಗೆ ಇರುವ ದಾರಿಗಳೇನು?
ನಿಜವಾಗಿಯೂ ನಿಮಗೆ ನಿಮ್ಮ ಭಾಷೆಯ ಬಗ್ಗೆ ಕಾಳಜಿ ಇದ್ದರೆ, ಹಿಂದಿ ಹೇರಿಕೆಗೆ ಕಾರಣವಾಗಿರುವ ಸಂವಿಧಾನದ ಪರಿಚ್ಛೇದಗಳಿಗೆ ತಿದ್ದುಪಡಿ ತರಲು ಒತ್ತಾಯಿಸಬೇಕು. ಹಿಂದಿಯನ್ನು ಇಂಗ್ಲಿಷ್ ಸ್ಥಾನದಲ್ಲಿ ಬೆಳೆಸಬೇಕು, ಅದು ರಾಷ್ಟ್ರವ್ಯಾಪಿ ವಿಸ್ತರಿಸಬೇಕು ಎಂಬುದು ಸಂವಿಧಾನದಲ್ಲಿಯೇ ಇದೆ. ಪ್ರಾದೇಶಿಕ ಭಾಷೆಗಳನ್ನು ಆಯಾ ರಾಜ್ಯಗಳಲ್ಲಿ ಬೆಳೆಸುವ ಬಗ್ಗೆ ಪ್ರಸ್ತಾಪವಿದ್ದರೂ, ಸಂವಿಧಾನವು ಕೆಲವು ನಿರ್ಣಾಯಕ ಭಾಗಗಳಲ್ಲಿ ಹಿಂದಿಯ ಬಗ್ಗೆಯೇ ಹೆಚ್ಚಿನ ಆದ್ಯತೆ ನೀಡಿದೆ. ಅಂತಹ ಭಾಗಗಳಲ್ಲಿ, ಪ್ರಮುಖವಾಗಿ ಸಂವಿಧಾನದ ಪರಿಚ್ಛೇಧ 343, 344 ಮತ್ತು 351ರಲ್ಲಿ ಸ್ಪಷ್ಟವಾಗಿ ಹಿಂದಿ ಹೇರಿಕೆಯ ಪ್ರಸ್ತಾಪವಿದೆ. ಆಡಳಿತ ಭಾಷೆಗೆ ಸಂಬಂಧಿಸಿದ ಆ ಭಾಗಗಳಲ್ಲಿ ಪ್ರಾದೇಶಿಕ ಭಾಷೆಗಳ ಪ್ರಸ್ತಾಪವೇ ಇಲ್ಲ. ಹಾಗಾಗಿ ನಾವು ಹಿಂದಿ ಹೇರಿಕೆಯನ್ನು ವಿರೋಧಿಸುವುದೇ ಆದರೆ, ಯಾವುದೇ ರಾಜಕಾರಣಿಗಳನ್ನಾಗಲೀ, ರಾಜಕೀಯ ಪಕ್ಷಗಳನ್ನಾಗಲೀ, ಆಳುವ ಸರ್ಕಾರಗಳನ್ನಾಗಲೀ ಪ್ರಶ್ನಿಸಿ ಪ್ರಯೋಜನವಿಲ್ಲ. ಬದಲಾಗಿ ಸಂವಿಧಾನದ ಈ ಮೂರು ಪರಿಚ್ಛೇಧಗಳನ್ನೇ ಪ್ರಶ್ನಿಸಿ, ರಾಜಕೀಯ ಪಕ್ಷಗಳನ್ನೇ ಹುರಿದುಂಬಿಸಬೇಕು.
ಅಂದರೆ; ಹಿಂದಿ ಹೇರಿಕೆಯಿಂದ ನಮಗೆ ಬಿಡುಗಡೆ ಸಿಗಬೇಕೆಂದರೆ; ಅದು ಸಂವಿಧಾನ ತಿದ್ದುಪಡಿಯ ಮೂಲಕವೇ ಎಂಬುದು ನಿಮ್ಮ ಅಭಿಪ್ರಾಯವೆ?
ಹೌದು, ಸಂವಿಧಾನ ತಿದ್ದುಪಡಿಯೊಂದೇ ಇದಕ್ಕೆ ಇರುವ ಪರಿಹಾರ. ಹೇಗೆ ಪರಿಹಾರವಾಗಬೇಕು, ಯಾವ ರೀತಿ ಅಭಿಪ್ರಾಯ ಮೂಡಿಸಬೇಕು ಎಂಬುದು ಬೇರೆ ವಿಷಯ. ಅದು ಜನರಿಗೆ, ರಾಜ್ಯ ನಾಯಕರಿಗೆ ಮತ್ತು ರಾಷ್ಟ್ರ ನಾಯಕರಿಗೆ ಬಿಟ್ಟ ವಿಷಯ. ಆ ಬಗ್ಗೆ ಇವರು ಹೀಗೆ ಮಾಡಬೇಕು, ಅವರು ಹಾಗೆ ಮಾಡಬೇಕು ಎಂದು ನಾನು ಸಾಹಿತಿಗಳ ರೀತಿಯಲ್ಲಿ ಮಾತನಾಡಲಾರೆ. ಆದರೆ, ತಿದ್ದುಪಡಿಯಾಗಬೇಕು ಎಂಬುದರಲ್ಲಿ ಯಾವ ಅನುಮಾನವೇ ಇಲ್ಲ. ಇದು ನನ್ನ ಸ್ಪಷ್ಟ ಅಭಿಪ್ರಾಯ.
ನೆರೆಯ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿಲ್ಲ. ಅವರು ಮಾತೃಭಾಷೆ ಮತ್ತು ಸಂಪರ್ಕ ಭಾಷೆಯ ದ್ವಿಭಾಷಾ ನೀತಿಯನ್ನೇ ಈಗಲೂ ಪಾಲಿಸಿಕೊಂಡುಬರುತ್ತಿದ್ದಾರೆ. ಆ ಮಾದರಿ ಅನುಸರಿಸುವುದು ನಮಗೆ ಯಾಕೆ ಸಾಧ್ಯವಾಗಿಲ್ಲ?
ಅವರು ಆರಂಭದಿಂದಲೂ ತ್ರಿಭಾಷಾ ಸೂತ್ರವನ್ನು ವಿರೋಧಿಸಿಕೊಂಡೇ ಬಂದರು. 1954ರ ಮೊದಲಿಯಾರ್ ಆಯೋಗದ ವರದಿಯ ಪ್ರಕಾರ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ತ್ರಿಭಾಷಾ ಸೂತ್ರ, ಶಿಕ್ಷಣ ಪದ್ಧತಿಯಲ್ಲಿ ಅಳವಡಿಕೆಯಾದಾಗಲೇ ತಮಿಳುನಾಡು ಅದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿತು. ಆ ಬಳಿಕವೂ 1968ರ ಕೊಠಾರಿ ಆಯೋಗದ ಶಿಫಾರಸಿಗೂ ಅವರು ವಿರೋಧ ವ್ಯಕ್ತಪಡಿಸಿದರು.
ಅದು ಯಾಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ತಮಿಳುನಾಡಿನ ಇತಿಹಾಸವನ್ನು ಗಮನಿಸಬೇಕು. ಹಿಂದಿ, ಹಿಂದುತ್ವ ಮತ್ತು ಹಿಂದೂರಾಷ್ಟ್ರ ಎಂಬ ಉತ್ತರಭಾರತೀಯರ ಅಜೆಂಡಾವನ್ನು ವಿರೋಧಿಸಿದ ಅಲ್ಲಿನ ಪೆರಿಯಾರ್ ರಾಮಸ್ವಾಮಿ ಅವರ ದ್ರಾವಿಡ ಚಳವಳಿ, ಸ್ವತಂತ್ರ ಪಾರ್ಟಿ ಹುಟ್ಟು, ಬೆಳವಣಿಗೆಯ ಹಿನ್ನೆಲೆಯನ್ನು ಗಮನಿಸಬೇಕಾಗುತ್ತದೆ. ಬ್ರಾಹ್ಮಣಶಾಹಿ, ಪುರೋಹಿತಶಾಹಿಯ ಯಜಮಾನಿಕೆಯ ವಿರುದ್ಧ ಸಿಡಿದೆದ್ದ ಚಳವಳಿ ಮತ್ತು ರಾಜಕೀಯ ಹೋರಾಟಗಳು ಅವು. ಆರಂಭದಲ್ಲಿ ದಲಿತ ಚಳವಳಿಯಾಗಿದ್ದ ದ್ರಾವಿಡ ಚಳವಳಿ, ಚಾತುರ್ವರ್ಣ ವ್ಯವಸ್ಥೆಯ ವಿರುದ್ಧದ, ಹಿಂದುತ್ವದ ವಿರುದ್ಧದ ಸೈದ್ಧಾಂತಿಕ ಹೋರಾಟವಾಗಿತ್ತು.
ಹಾಗಾಗಿ ಅದರ ಪ್ರಭಾವದಿಂದಾಗಿ ಅವರು, ತ್ರಿಭಾಷಾ ಸೂತ್ರ ಪ್ರಸ್ತಾಪವಾದಾಗ, ಹಿಂದಿ, ಹಿಂದುತ್ವ ಮತ್ತು ‘ಹಿಂದೂಸ್ಥಾನ’ದ ವಿರುದ್ಧ ತಿರುಗಿಬಿದ್ದರು. ನಾವು ದ್ರಾವಿಡರು, ದಕ್ಷಿಣ ಭಾರತೀಯರು ಮತ್ತು ಭಾರತದ ಮೂಲನಿವಾಸಿಗಳು. ನಮಗೆ ನಿಮ್ಮ ಹಿಂದಿಯಾಗಲೀ, ಹಿಂದುತ್ವವಾಗಲೀ, ‘ಹಿಂದೂಸ್ತಾನ’ವಾಗಲೀ ಬೇಡ ಎಂದು ಖಡಾಖಂಡಿತವಾಗಿ ತಿರಸ್ಕರಿಸಿದರು. ದೊಡ್ಡ ಸಾಂಸ್ಕೃತಿಕ ಮತ್ತು ರಾಜಕೀಯ ಚಳವಳಿ ಅದಕ್ಕೆ ಕಾರಣವಾಯಿತು. ಆ ಚಳವಳಿಗಳ ಫಲವಾದ ಅಂದಿನ ಕಾಂಗ್ರೆಸ್ ವಿರುದ್ಧದ ಪ್ರಬಲ ರಾಜಕಾರಣ ಆ ನೆಲದಲ್ಲಿ ಗಟ್ಟಿಯಾಗಿದ್ದುದು ಮತ್ತೊಂದು ಕಾರಣ.
ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಅವಧಿಯಲ್ಲಿ ಆ ಚಳವಳಿಗಳ ಪ್ರಭಾವ ಆಯಿತು. ಆದರೆ, ಅಲ್ಲಿನ ಮಟ್ಟಿನ ಪ್ರಬಲ ಹೋರಾಟವಾಗಲೀ, ಸೈದ್ಧಾಂತಿಕ ಸ್ಪಷ್ಟತೆಯಾಗಲೀ ಸಿಗಲಿಲ್ಲ. ಆಗ ಮೈಸೂರು ಬಹಳ ಸಣ್ಣ ರಾಜ್ಯವಾಗಿದ್ದುದು ಒಂದು ಕಾರಣ. ಏಕೀಕರಣದ ಬಳಿಕ ಸಂಯುಕ್ತ ಕರ್ನಾಟಕ ರಚನೆಯಾದರೂ ಭಾಷೆಯ ವಿಷಯದಲ್ಲಿ ದೊಡ್ಡ ಶಕ್ತಿಯಾಗಿ ಅದು ಹೊರಹೊಮ್ಮಿರಲಿಲ್ಲ.
ಜೊತೆಗೆ, ಆ ಬಳಿಕ ಕೂಡ ನಮ್ಮಲ್ಲಿ, ನಾವು ಕನ್ನಡಿಗರು ಬಹಳ ಆಜ್ಞಾನುಪಾಲಕ ಜನ. ಹೇಳಿದ್ದನ್ನೆಲ್ಲಾ ಕೇಳಿಕೊಂಡು ಹೋಗುವವರು. ಬಹಳ ಮುಗ್ಧರು ಮತ್ತು ಮೊದ್ದುಗಳು ಎಂದರೂ ತಪ್ಪಿಲ್ಲ. ಅದನ್ನು ನೀವು ಬಹಳ ವಿಧೇಯರು, ಸುಸಂಸ್ಕೃತರು, ಕಾನೂನು ಪಾಲಕರು ಎಂದೂ ಹೇಳಬಹುದು. ನಮ್ಮ ಈ ಹೆಚ್ಚುಗಾರಿಕೆಯಿಂದಾಗಿ ನಾವು ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿದೆವು. ಹಾಗಾಗಿ ತಮಿಳುನಾಡಿನಲ್ಲಿ ಆಗಿದ್ದು ನಮ್ಮಲ್ಲಿ ಸಾಧ್ಯವಾಗಲಿಲ್ಲ.
ಅಂದರೆ ತಮಿಳುನಾಡಿನಲ್ಲಿ ಸಾಧ್ಯವಾಗಿದ್ದು ನಮ್ಮಲ್ಲಿ ಸಾಧ್ಯವಾಗಿಲ್ಲ ಎಂದರೆ ಅದಕ್ಕೆ ನಮ್ಮ ಎಲ್ಲವನ್ನೂ ‘ಶಿರಸಾವಹಿಸಿ ಪಾಲಿಸುವ’ ಸಭ್ಯತೆಯ ಗುಣವೇ ಕಾರಣವೆ?
ಹೌದು, ಆದರೆ, ಕನ್ನಡಿಗರಿಗೆ ಇಷ್ಟು ಮೃದು ಸ್ವಭಾವ ಯಾವಾಗ ಬಂತು ಮತ್ತು ಏಕೆ ಬಂತು ಎಂಬುದು ನನಗೆ ಒಗಟಿನ ವಿಷಯ. ಏಕೆಂದರೆ; ಕಾವೇರಿಯಿಂದ ಗೋದಾವರಿಯವರೆಗೆ ಆಳಿದ ನಮ್ಮವರು ಶೌರ್ಯ, ಕೆಚ್ಚು, ಸ್ವಾಭಿಮಾನವಿಲ್ಲದೆ ಬಹುತೇಕ ಭಾರತದ ಮುಕ್ಕಾಲು ಭಾಗವನ್ನೆಲ್ಲಾ ಆಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾವು ಬಹಳ ಸಭ್ಯ, ಆಜ್ಞಾನುಪಾಲಕ ಜನ ಎಂಬುದು ಐತಿಹಾಸಿಕ ಸತ್ಯವಲ್ಲ. ರಾಷ್ಟ್ರಕೂಟರು, ಚಾಲುಕ್ಯರು ಮತ್ತು ವಿಜಯನಗರ ಸಾಮ್ರಾಟರು ಅಂದೇ ಇಂದಿನ ಕರ್ನಾಟಕದ ಮೂರು ಪಟ್ಟು ರಾಜ್ಯ ವಿಸ್ತರಿಸಿದ್ದರು. ಅದನ್ನೆಲ್ಲವನ್ನೂ ಹೇಡಿಗಳಿಂದ ಮಾಡಲಾಗುತ್ತಿತ್ತೆ? ಶೌರ್ಯ, ಛಲವಿಲ್ಲದೆ ಅದನ್ನು ಸಾಧಿಸಲಾಗುತ್ತಿತ್ತೆ? ಆದರೆ, ಆ ನಂತರ ಆಧುನಿಕ ಕಾಲಘಟ್ಟದಲ್ಲಿ ಕನ್ನಡಿಗರ ಆ ಶೌರ್ಯ, ಕೆಚ್ಚೆದೆ ಎಲ್ಲಿ ಹೋಯಿತು? ಯಾಕೆ ಹೋಯಿತು? ಎಂಬುದು ನನಗೆ ಆಶ್ಚರ್ಯವೆನಿಸುತ್ತದೆ. ಒಂದು ಕಾಲದಲ್ಲಿ ಅತ್ತ ನೇಪಾಳದವರೆಗೆ, ಇತ್ತ ಬಂಗಾಳದವರೆಗೆ ಆಳಿದವರು ಕನ್ನಡಿಗರು. ಬಂಗಾಳಿಗರ ದುರ್ಗಾಪೂಜೆ ಕರ್ನಾಟಕದ್ದು, ಬಂಗಾಳದ ಸೇಣ ರಾಜರು ಇಲ್ಲಿಯವರು. ಒರಿಸ್ಸಾದ ಕೋನಾರ್ಕ್, ಪುರಿ ದೇವಾಲಯಗಳನ್ನು ಕಟ್ಟಿದವರು ಕನ್ನಡಿಗ ಗಂಗರು. ಮಹಾರಾಷ್ಟ್ರ, ಗುಜರಾತಿನಲ್ಲೂ ನಮ್ಮವರು ಆಡಳಿತ ನಡೆಸಿದ್ದರು. ಅದನ್ನೇ ಪಂಪ ಹೇಳಿದ್ದು. ಹಾಗಾದರೆ ಅಂದು ಅಷ್ಟೊಂದು ವೀರ ಸೇನಾನಿಗಳಾಗಿದ್ದವರು, ಶೂರರಾಗಿದ್ದವರು, ಏಕಾಏಕಿ ವಿಜಯನಗರ ಸಾಮ್ರಾಜ್ಯದ ನಂತರ ಏನಾದರು ಎಂಬುದು ಪ್ರಶ್ನೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ತ್ರಿಭಾಷಾ ಸೂತ್ರವನ್ನು ಮತ್ತೆ ಕಡ್ಡಾಯಗೊಳಿಸುವ ಪ್ರಸ್ತಾಪವಿದೆ. ಆ ಬಗ್ಗೆ ಏನು ಹೇಳುತ್ತೀರಿ.
ನಾನು ವೈಯಕ್ತಿಕವಾಗಿ ತ್ರಿಭಾಷಾ ಸೂತ್ರದ ವಿರೋಧಿಯಲ್ಲ. ಹಾಗೆ ನೋಡಿದರೆ ಬಹುಭಾಷಾ ಸೂತ್ರದ ಪ್ರತಿಪಾದಕ. ನಾನು ಆರು ಭಾಷೆ ಮಾತನಾಡಬಲ್ಲೆ. ಭಾಷೆಗಳ ಬಗ್ಗೆ ನನ್ನ ವಿರೋಧವಿಲ್ಲ. ಆದರೆ ಅದನ್ನು ಒತ್ತಾಯಪೂರ್ವಕವಾಗಿ ಎಲ್ಲರ ಮೇಲೆ ಹೇರುವುದಕ್ಕೆ ನನ್ನ ಪ್ರಬಲ ವಿರೋಧವಿದೆ.
1976ರವರೆಗೆ ಶಿಕ್ಷಣ ಎನ್ನುವುದು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿತ್ತು. ರಾಜ್ಯ ಪಟ್ಟಿಯಲ್ಲಿತ್ತು. ಆದರೆ, ಇಂದಿರಾಗಾಂಧಿಯವರು ಸಂವಿಧಾನ ತಿದ್ದುಪಡಿ ಮೂಲಕ ಅದನ್ನು ರಾಜ್ಯಪಟ್ಟಿಯಿಂದ ಸಮವರ್ತಿತ ಪಟ್ಟಿಗೆ ಸೇರಿಸಿದರು. ಆ ಮೂಲಕ ಶಿಕ್ಷಣಕ್ಕೆ ಸಂಬಂಧಿಸಿಂತೆ ಕಾಯ್ದೆ-ಕಾನೂನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಅವಕಾಶ ಸಿಕ್ಕಿತು. ಆದರೆ, ರಾಜ್ಯ ಮತ್ತು ಕೇಂದ್ರದ ಸಂಬಂಧ ಸೌಹಾರ್ದಯುತವಾಗಿರುವವರೆಗೆ ಇಂತಹ ವಿಷಯದಲ್ಲಿ ಪರಸ್ಪರ ಸಹಮತದಿಂದ ಕೆಲಸ ಮಾಡಬಹುದು. ಎರಡನೆಯದಾಗಿ, ಸಮವರ್ತಿತ ಪಟ್ಟಿಯಲ್ಲಿರುವ ವಿಷಯಗಳ ಕುರಿತ ಕಾಯ್ದೆ-ಕಾನೂನು ವಿಷಯದಲ್ಲಿ ರಾಜ್ಯಗಳ ಸಹಮತ ಪಡೆಯುವುದು ಕಡ್ಡಾಯ. ಕನಿಷ್ಟ ಮೂರನೇ ಎರಡಷ್ಟು ರಾಜ್ಯಗಳಾದರೂ ಅಂತಹದ್ದಕ್ಕೆ ಒಪ್ಪಿಗೆ ಸೂಚಿಸಬೇಕು. ಆಗ ಮಾತ್ರ ಅದು ಕಾನೂನು ಪ್ರಕಾರ ಸಿಂಧುವಾಗುತ್ತದೆ. ಈಗ ಈ NEP ವಿಷಯದಲ್ಲಿ ಕೂಡ ದೇಶದ ಒಟ್ಟು 29 ರಾಜ್ಯಗಳ ಪೈಕಿ ಕನಿಷ್ಟ 20 ರಾಜ್ಯಗಳಾದರೂ ಒಪ್ಪಿಗೆ ಸೂಚಿಸಬೇಕು. ಆಗ ಮಾತ್ರ ಅದು ಕಾಯ್ದೆಯಾಗಿ ಸಿಂಧುವಾಗುತ್ತದೆ. ಹೆಚ್ಚಿನ ರಾಜ್ಯಗಳು ಒಂದಾಗಿ ತಿದ್ದುಪಡಿಗೆ ಸೂಚಿಸಿದರೆ ಕೇಂದ್ರ ಸರ್ಕಾರವು ಆ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ.
ಆದರೆ, ಈಗ ಕೇಂದ್ರ ಸರ್ಕಾರ ಇಂತಹ ಒಕ್ಕೂಟ ವ್ಯವಸ್ಥೆಗೆ ಮಾನ್ಯತೆ ನೀಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆಯೇ ಎಂಬುದು ಪ್ರಶ್ನೆ. ತಮ್ಮದೇ ಸಾರ್ವಭೌಮತ್ವ ಆಡಳಿತದ ರೀತಿ ವರ್ತಿಸುತ್ತಿದ್ದಾರೆ. ಇದು ಖಂಡಿತವಾಗಿಯೂ ಸರಿಯಾದ ರೀತಿಯಲ್ಲ. ನಮ್ಮದು ಸರ್ವಾಧಿಕಾರಿ ವ್ಯವಸ್ಥೆಯಲ್ಲ; ಪ್ರಜಾಪ್ರಭುತ್ವ ವ್ಯವಸ್ಥೆ. ಹಾಗಾಗಿ ರಾಜ್ಯಗಳ ಅಭಿಪ್ರಾಯ ಕೇಳಬೇಕು ಮತ್ತು ಮನ್ನಣೆ ನೀಡಬೇಕು. ಸಂವಿಧಾನ ತಿದ್ದುಪಡಿ ಮೂಲಕ ಈ ಬಿಕ್ಕಟ್ಟಿಗೆ ಪರಿಹಾರ ಇದೆ ಎಂದಾದರೆ, ಆ ಮೂರು ಪರಿಚ್ಛೇಧಗಳನ್ನ ಯಾಕೆ ಬದಲಾವಣೆ ಮಾಡಬಾರದು? ನೀವು ಇಷ್ಟು ದಿನ ಹೇಳುತ್ತಿರುವುದು ಸಂವಿಧಾನ ಬದಲಾಯಿಸಲೆಂದೇ ಅಧಿಕಾರಕ್ಕೆ ಬಂದಿರುವುದು ಎಂದು ತಾನೆ? ಹಾಗಾದರೆ, ಈ ಬದಲಾವಣೆಗೆ ಯಾಕೆ ಸಿದ್ಧರಿಲ್ಲ? ಭಾಷೆಯ ವಿಷಯದಲ್ಲಿ ಯಾಕೆ ಒತ್ತಾಯ ಮಾಡುವುದು? ಯಾಕೆ ಹೇರಿಕೆ ಮಾಡುವುದು?
ಭಾಷೆಯ ವಿಷಯದಲ್ಲಿ ನಾವು ಪ್ರಚೋದನಕಾರಿಯಾಗಿ ಮಾತನಾಡುವುದಕ್ಕಿಂತ ಸಂವಿಧಾನ ಬದಲಾವಣೆಯಂತಹ ರಚನಾತ್ಮಕ ಕೆಲಸ ಮುಖ್ಯ ಎಂಬುದು ನಿಮ್ಮ ನಿಲುವು ಅಲ್ಲವಾ?
ಹೌದು, ಮೂಲಭೂತವಾಗಿ ಆಗಬೇಕಿರುವುದು ಅದೇ. ಸಮಸ್ಯೆಯ ಮೂಲವೆಲ್ಲಿದೆ ಎಂಬುದನ್ನು ಅರಿತು, ಅಲ್ಲಿ ಬದಲಾವಣೆಯಾಗಬೇಕು. ಅದನ್ನು ಬಿಟ್ಟು ಬೀದಿ ಬೀದಿ ಹೋರಾಟಗಳಿಂದ ಪ್ರಯೋಜನವಿಲ್ಲ. ಇದು ನಡೆಯಬೇಕಿರುವುದು ಸಂಸತ್ತಿನಲ್ಲಿ.
ಇದೇ ಸಂದರ್ಭದಲ್ಲಿ ಮತ್ತೊಂದು ಸೂಕ್ಷ್ಮ ಸಂಗತಿ ಇದೆ. ಅದನ್ನು ನಾವು ಮರೆಯಬಾರದು. ನಾವು ಹಿಂದಿ, ಹಿಂದಿ ಹೇರಿಕೆ, ತ್ರಿಭಾಷಾ ಸೂತ್ರ, ಕಲಿಕೆ ಮಾಧ್ಯಮ ಮುಂತಾದ ಭಾಷಾ ವಿಷಯಗಳು ಬಂದಾಗೆಲ್ಲಾ ಮಾತೃಭಾಷೆ, ಮಾತೃಭಾಷಾ ಕಲಿಕೆ, ಮಾತೃಭಾಷಾ ಶಿಕ್ಷಣ ಎಂದು ಹೇಳುತ್ತೇವೆ. ಎಲ್ಲಾ ಚಳವಳಿಗಾರರು, ಸಾಹಿತಿ-ಹೋರಾಟಗಾರರೂ ಹೇಳುತ್ತಾರೆ. ಆದರೆ, ಈ ‘ಮಾತೃಭಾಷೆ’ ಎಂಬುದು ಎಷ್ಟು ಸೂಕ್ಷ್ಮ ಮತ್ತು ಸಂಕೀರ್ಣ ಎಂಬುದರ ಪರಿವೆಯೇ ನಮಗಿರುವುದಿಲ್ಲ. ಮಾತೃಭಾಷೆ ಎಂದರೇನು? ಮಗುವಿನ ತಾಯಿಭಾಷೆ. ಅಂತಹ ಭಾಷೆಗಳು ಈ ದೇಶದಲ್ಲಿ ಎಷ್ಟಿವೆ? 2011ನೇ ಜನಗಣತಿ ಪ್ರಕಾರ, 19500ಕ್ಕೂ ಹೆಚ್ಚು ಮಾತೃಭಾಷೆಗಳು ಭಾರತದಲ್ಲಿ ಇವೆ. ಅಂದರೆ, ಇಡೀ ಜಗತ್ತಿನಲ್ಲಿ ಇಷ್ಟೊಂದು ಭಾಷೆಗಳ ಸಂಕೀರ್ಣ ಸಮಸ್ಯೆ ಇರುವುದು ಭಾರತ ದೇಶದಲ್ಲಿ ಮಾತ್ರ. ಆ ಭಾಷೆಗಳನ್ನು ಕ್ಲಾಸಿಫೈಡ್, ಅನ್ ಕ್ಲಾಸಿಫೈಡ್ ಮತ್ತು ಷೆಡ್ಯೂಲ್ಡ್ ಎಂದು ವಿಭಜಿಸಲಾಗಿದೆ. ಅದರಲ್ಲಿ 1,436 ಅನ್- ಕ್ಲಾಸಿಫೈಡ್ ಭಾಷೆಗಳಾದರೆ, 146 ಕ್ಲಾಸಿಫೈಡ್ ಭಾಷೆಗಳಾಗಿವೆ ಮತ್ತು 22 ಷೆಡ್ಯೂಲ್ಡ್ ಭಾಷೆಗಳಾಗಿವೆ (ಸಂವಿಧಾನದ ಷೆಡ್ಯೂಲ್ ಎಂಟರಂತೆ).
ಇನ್ನು ಕರ್ನಾಟಕಕ್ಕೆ ಬಂದರೆ, ಕರ್ನಾಟಕದ ಮಾತೃಭಾಷೆ ಕನ್ನಡ ಇರಬೇಕು ಅಲ್ಲವಾ?, ಹೌದು. ಹಾಗಾದರೆ ಕೊಡವರ ಮಾತೃಭಾಷೆ ಯಾವುದು? ಕೊಡವ. ದಕ್ಷಿಣ ಕನ್ನಡದ ಬಹುತೇಕರ ಮಾತೃಭಾಷೆ ಯಾವುದು? ತುಳು. ಉತ್ತರಕನ್ನಡದ ಕೆಲವರ ಮಾತೃಭಾಷೆ ಯಾವುದು? ಕೊಂಕಣಿ. ಉತ್ತರ ಕನ್ನಡದ ಇನ್ನೂ ಕೆಲವರ ಮಾತೃಭಾಷೆ? ಹವ್ಯಕ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರೆಭಾಷೆಯೂ ಇದೆ, ಜೇನುಕುರುಬ, ಕಾಡುಕುರುಬ, ಹಾಲಕ್ಕಿ ಒಕ್ಕಲಿಗರ ಮಾತೃಭಾಷೆಗಳೂ ಬೇರೆಬೇರೆ ಇವೆ. ಬಡಗರ ಮಾತೃಭಾಷೆ ಬಡಗು. ಇದಲ್ಲದೆ, ನವಾಯತಿ ಭಾಷೆ ಇದೆ. ಕುಣಬಿ ಇದೆ. ಅದರಲ್ಲೂ ಬುಡಕಟ್ಟು ಭಾಷೆ ಮತ್ತು ಬುಡಕಟ್ಟುಯೇತರ ಭಾಷೆ, ಪ್ರಾದೇಶಿಕ, ಸಮುದಾಯಿಕ ಭಾಷೆಗಳಿವೆ. ಹಾಗಾದರೆ, ಕನಿಷ್ಟ ಇಪ್ಪತ್ತು ಮಾತೃಭಾಷೆಗಳಲ್ಲಿ ಕರ್ನಾಟಕದಲ್ಲಿ ಶಿಕ್ಷಣ ನೀಡಲು ಸಾಧ್ಯವೆ?
ಹೀಗಾಗಿ ಭಾಷೆಯ ವಿಷಯದಲ್ಲಿ ವಾಸ್ತವಾಂಶಗಳು, ಸೂಕ್ಷ್ಮ ಸಂಗತಿಗಳನ್ನು ಪರಿಗಣಿಸಬೇಕೇ ವಿನಃ, ಭಾವನಾತ್ಮಕವಾಗಿ, ಪ್ರಚೋದನಕಾರಿಯಾಗಿ ಸಮಸ್ಯೆ ಬಗೆಹರಿಸಲಾಗದು. ಮತ್ತು ಅಂತಹ ಪ್ರಯತ್ನಗಳು ಭಾಷಾ ಅಲ್ಪಸಂಖ್ಯಾತ ಸಮುದಾಯಗಳಲ್ಲಿ, ಧಾರ್ಮಿಕ, ಜಾತಿ, ಸಮುದಾಯ, ಬುಡಕಟ್ಟು ಭಾಷಿಗರಲ್ಲಿ ಆತಂಕಕ್ಕೂ, ಒಂದು ರೀತಿಯ ಪ್ರಚೋದನೆಗೂ ಕಾರಣವಾಗಬಹುದು ಎಂಬ ಎಚ್ಚರ ಇರಬೇಕಾಗುತ್ತದೆ. ಸಂವಿಧಾನ ರಚನಾ ಸಭೆಯಲ್ಲಿ ಸ್ವತಃ ನೆಹರೂ ಅವರು ಹಿಂದಿ ವಿಷಯದಲ್ಲಿ ಈ ಎಚ್ಚರಿಕೆ ನೀಡಿದ್ದರು. ಹಿಂದಿ, ಹಿಂದೂ, ಹಿಂದೂಸ್ತಾನದಂತಹ ಪ್ರಸ್ತಾಪಗಳನ್ನು ಮುಂದಿಟ್ಟು ರಾಜ್ಯಗಳನ್ನು ಮಣಿಸಲು ಯತ್ನಿಸಿದರೆ ದೇಶದ ಸಮಗ್ರತೆಗೇ ಅಪಾಯ ಎಂದು ಎಚ್ಚರಿಕೆ ನೀಡಿದ್ದರು. ಅದೇ ಕಾರಣಕ್ಕಾಗಿ ನೆಹರು ಅವರನ್ನು ವಿರೋಧಿಸುವ ಬಿಜೆಪಿಯವರು, ಹಿಂದಿ, ಹಿಂದುತ್ವ, ಹಿಂದೂರಾಷ್ಟ್ರದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ, ಈ ದೇಶಕ್ಕೆ ಇದು ಅಗತ್ಯವೆ ಎಂಬುದನ್ನು ನಾವು ಪ್ರಶ್ನಿಸಬೇಕಿದೆ. ಐದು ಸಾವಿರ ವರ್ಷಗಳ ದೇಶದ ಇತಿಹಾಸದಲ್ಲಿ ಎಂದೆಂದೂ ಇರದ ಅಸತ್ಯಗಳನ್ನು ಇವರು ಸತ್ಯ ಮಾಡಲು ಹೊರಟಿದ್ದಾರೆ.