ಕಳೆದ ಐದು ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದುಗೊಳಿಸಿದ್ದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಜೊತೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿ ಆರ್) ಜಾರಿಗೊಳಿಸಿಯೇ ಸಿದ್ದ ಎನ್ನುತ್ತಿರುವ ನರೇಂದ್ರ ಮೋದಿ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಬಲವಾಗಿ ಕೇಳಲಾರಂಭಿಸಿವೆ.
ನೋಟು ರದ್ದತಿ ಹಾಗೂ ಸರಕು ಮತ್ತು ಸೇವಾ ತೆರಿಗೆಯನ್ನು (ಜಿ ಎಸ್ ಟಿ) ವಿವೇಚನಾರಹಿತವಾಗಿ ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಮೋದಿ ಸರ್ಕಾರವು ಸಂಕಟಕ್ಕೆ ಸಿಲುಕಿಸಿದೆ ಎನ್ನುವ ಮಾತುಗಳನ್ನು ಪ್ರಖ್ಯಾತ ಅರ್ಥಶಾಸ್ತ್ರಜ್ಞರೇ ಹೇಳುತ್ತಿದ್ಧಾರೆ. ನಿರುದ್ಯೋಗ ಸಮಸ್ಯೆ ವ್ಯಾಪಕವಾಗುತ್ತಿದ್ದು, 45 ವರ್ಷಗಳಲ್ಲೇ ಮೊದಲ ಬಾರಿಗೆ ನಿರುದ್ಯೋಗ ಹೆಚ್ಚಾಗಿದೆ ಎಂಬ ಆತಂಕಕಾರಿ ಬೆಳವಣಿಗೆಯನ್ನು ನಿವಾರಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿಲ್ಲ. ದಿನದಿಂದ ಬೇಡಿಕೆ ಕುಸಿಯುತ್ತಿದ್ದು, ಗ್ರಾಹಕರ ಕೊಳ್ಳುವ ಶಕ್ತಿ ಕ್ಷೀಣಿಸುತ್ತಿದೆ. ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಾಮಾಣಿಕ ಕೆಲಸ ಮೋದಿ ಸರ್ಕಾರದಿಂದ ಆಗಿಲ್ಲ.
ಕಳೆದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ ದೇಶದ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕಾದ ಮೋದಿ ಸರ್ಕಾರವು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ವಿವಾದಿತ ವಿಚಾರಗಳನ್ನು ಜಾರಿಗೊಳಿಸುವ ಕೆಲಸಕ್ಕೆ ಮುಂದಾಗಿದ್ದು, ಬಹುಸಂಖ್ಯಾತ ಹಿಂದೂಗಳ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ. ವಿಶ್ವಮಟ್ಟದಲ್ಲಿ ಜಾಗರೂಕತೆಯಿಂದ ವ್ಯವಹರಿಸುತ್ತಿರುವ ಭಾರತವು ಹಲವು ದಶಕಗಳ ಪರಿಶ್ರಮದಿಂದ ತನ್ನದೇ ಆದ ಅಂತಾರಾಷ್ಟ್ರೀಯ ನೀತಿಗಳನ್ನು ರೂಪಿಸಿಕೊಂಡಿದೆ. ದೇಶದ ಸಂವಿಧಾನ, ಜಾತ್ಯತೀತವಾದ ನಿಲುವುಗಳಿಂದ ಭಾರತವು ಜಾಗತಿಕವಾಗಿ ಪ್ರಶ್ನಾತೀತ ಸ್ಥಾನದಲ್ಲಿದೆ.
ಆದರೆ, ನರೇಂದ್ರ ಮೋದಿ ಸರ್ಕಾರವು ಕಾಶ್ಮೀರ ಹಾಗೂ ಸಿಎಎ ವಿಚಾರದಲ್ಲಿ ನಡೆದುಕೊಂಡಿರುವ ರೀತಿಯು ತನ್ನದೇ ನೀತಿಗಳಿಗೆ ವಿರುದ್ಧವಾಗಿ ಭಾರತ ತಂತಾನೆ ಜಾಗತಿಕ ಸಮುದಾಯದಿಂದ ಅಂತರ ಕಾಯ್ದುಕೊಳ್ಳುವ ಮಟ್ಟಕ್ಕೆ ತಲುಪಿದೆ ಎನ್ನುವ ವಿಶ್ಲೇಷಣೆ ತಜ್ಞರಿಂದ ಹೊರಹೊಮ್ಮುತ್ತಿದೆ. ಇದು ಉತ್ತಮವಾದ ಬೆಳವಣಿಗೆಯಲ್ಲ. ದೀರ್ಘಾವಧಿಯಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳು ಭಾರತದ ಮೇಲೆ ನಿರ್ಬಂಧ ಹೇರುವ ಕಟು ನಿರ್ಧಾರ ಕೈಗೊಳ್ಳಬಹುದು ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಸೇರಿದಂತೆ ಹಲವು ನಿವೃತ್ತ ರಾಯಭಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದ ಮುಸ್ಲಿಮ್ ಪ್ರಾಬಲ್ಯ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಮೋದಿ ಸರ್ಕಾರವು ಇಡೀ ರಾಜ್ಯವನ್ನು ಅಕ್ಷರಶಃ ಜಗತ್ತಿನಿಂದ ತುಂಡರಿಸಿದೆ. ಸಿಎಎ ಅಡಿಯಲ್ಲಿ ಮುಸ್ಲಿಮೇತರ ಆರು ಸಮುದಾಯಗಳಿಗೆ ಪೌರತ್ವ ಕಲ್ಪಿಸುವ ಸಂವಿಧಾನಬಾಹಿರ ನಿರ್ಧಾರವನ್ನು ಕೈಗೊಂಡಿರುವ ಮೋದಿ ಸರ್ಕಾರದ ವಿರುದ್ಧ ದೇಶಾದ್ಯಂತ ಅಸಾಧಾರಣ ವಿರೋಧ ವ್ಯಕ್ತವಾಗುತ್ತಿದೆ. ಹೋರಾಟಕ್ಕೆ ವಿಶ್ವ ಸಮುದಾಯಗಳ ಬೆಂಬಲದ ಬಗ್ಗೆ ನಿರಂತರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಯಾಗುತ್ತಿದ್ದು, ಜಾಗತಿಕ ಮಾಧ್ಯಮಗಳು ಮೋದಿ ಸರ್ಕಾರದ ನೀತಿಗಳನ್ನು ಕಟು ವಿಮರ್ಶೆಗೆ ಒಳಪಡಿಸಿವೆ. ಐದು ತಿಂಗಳಿನಿಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂಗಳನ್ನು ಗೃಹ ಬಂಧನದಲ್ಲಿಟ್ಟಿರುವುದು ಹಾಗೂ ಇಂಟರ್ನೆಟ್ ನಿರ್ಬಂಧ ಹೇರುವ ಮೂಲಕ ಜನರ ಸಂವಹನ ತುಂಡರಿಸಿರುವ ಕುರಿತು ಅಲ್ಲಿನ ಮಾಧ್ಯಮಗಳು ಕಟು ನಿಲುವು ತಳೆದಿದ್ದು, ಭಾರತವನ್ನು ಇಂಟರ್ನೆಟ್ ಬಂದ್ ಮಾಡುವಲ್ಲಿ ಅಗ್ರಮಾನ್ಯ ರಾಷ್ಟ್ರ ಎಂಬ ಅಪಖ್ಯಾತಿಗೆ ಗುರಿಯಾಗಿಸಿವೆ. ಇವೆಲ್ಲವೂ ಮಾನವ ಹಕ್ಕುಗಳ ದಮನಕಾರಿ ನೀತಿಗಳಿಗೆ ಪೂರಕವಾಗಲಿವೆ. ಇದೇ ವಿಚಾರವನ್ನು ಇಟ್ಟುಕೊಂಡು ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಏಕಾಂಗಿಯಾಗಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ಆರೋಪಕ್ಕೆ ಬಲತಂದುಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ತವರಿನಲ್ಲಿ ವಿರೋಧ ಪಕ್ಷಗಳನ್ನು ಅಣಿಯಲು ಪಾಕಿಸ್ತಾನದ ಪರ ಪ್ರತಿಪಕ್ಷಗಳು ಸಹಾನುಭೂತಿ ತೋರುತ್ತಿವೆ ಎಂದು ಮುಗಿಬೀಳುವ ಮೋದಿ, ಜನರ ದೃಷ್ಟಿಯಲ್ಲಿ ಅವರನ್ನು ದೇಶದ್ರೋಹಿಗಳನ್ನಾಗಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ತಾವೇ ಪಾಕಿಸ್ತಾನದ ಬಲೆಯಲ್ಲಿ ಬಿದ್ದು ಭಾರತವನ್ನು ಜಾಗತಿಕವಾಗಿ ಅಪಾಯದ ಸ್ಥಾನಕ್ಕೆ ತಂದಿಟ್ಟದ್ದಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಜರ್ಮನಿಯ ಛಾನ್ಸೆಲರ್ ಏಂಜೆಲಾ ಮಾರ್ಕೆಲ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್, ಭಾರತೀಯ ಸಂಜಾತೆ ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಪ್ರಮಿಳಾ ಜೈಪಾಲ್ ಸೇರಿದಂತೆ ಹಲವರು ಧ್ವನಿ ಎತ್ತಿದ್ದಾರೆ. ಇದನ್ನೇ ಮುಂದಿಟ್ಟು ಅಮೆರಿಕಾ ಪ್ರವಾಸ ಕೈಗೊಂಡಿದ್ದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಪ್ರಮೀಳಾ ಭೇಟಿ ಮಾಡಿರಲಿಲ್ಲ. ಭಾರತದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ ಟರ್ಕಿ ಪ್ರವಾಸವನ್ನು ಮೋದಿ ರದ್ದುಗೊಳಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇನ್ನು ಸಿಎಎ ವಿಚಾರದಲ್ಲಿ ಮಲೇಷ್ಯಾ, ಟರ್ಕಿ ಸೇರಿದಂತೆ ಹಲವು ಮುಸ್ಲಿಮ್ ರಾಷ್ಟ್ರಗಳು ವಿರೋಧಿಸಿವೆ. ಅಮೆರಿಕಾದ ಧಾರ್ಮಿಕ ಒಕ್ಕೂಟವು ಕೇಂದ್ರ ಸಚಿವ ಅಮಿತ್ ಶಾಗೆ ನಿರ್ಬಂಧ ವಿಧಿಸಬೇಕು ಎಂದೂ ಹೇಳಿತ್ತು. ವಿಶ್ವಸಂಸ್ಥೆಯೂ ಭಾರತದ ಬೆಳವಣಿಗೆಗಳ ಮೇಲ ಕಣ್ಣಿಟ್ಟಿರುವುದಾಗಿ ಹೇಳಿದೆ. ಆದರೆ, ಇದ್ಯಾವುದನ್ನು ಲೆಕ್ಕಿಸದ ಮೋದಿ-ಶಾ ಜೋಡಿಯು ಸಿಎಎ ಜಾರಿಗೊಳಿಸುವ ತೀರ್ಮಾನಕ್ಕೆ ಬದ್ಧ ಎಂದು ಘಂಟಾಘೋಷವಾಗಿ ಹೇಳುತ್ತಿದೆ. ವಿರೋಧ ಪಕ್ಷಗಳ ಮೇಲೆ ಮುಗಿಬೀಳುತ್ತಿರುವ ಬಿಜೆಪಿ ನಾಯಕತ್ವವು ಜಾಗತಿಕವಾಗಿ ಕಳೆಗುಂದುತ್ತಿರುವ ಭಾರತದ ವರ್ಚಸ್ಸನ್ನು ಮರುಸ್ಥಾಪಿಸಲು ಯಾವ ಪ್ರಯತ್ನ ಮಾಡಲಿದೆ? ಮತಾಂಧತೆಯ ನಂಜನ್ನು ದೇಶಕ್ಕೆ ಹರಡುವ ಮೂಲಕ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿಯು ತಾನೇ ಸೃಷ್ಟಿಸಿದ ವಿಪರೀತಗಳಿಗೆ ಹೇಗೆ ಅಂಕುಶವಾಕಲಿದೆ? ಆರ್ಥಿಕ ವಿಫಲತೆಗಳನ್ನು ಸರಿದೂಗಿಸುವ ಹಾದಿ ಯಾವುದು? ಒಂದೊಮ್ಮೆ ಅಂತಾರಾಷ್ಟ್ರೀಯ ಸಮುದಾಯ ಭಾರತದ ಮೇಲೆ ನಿರ್ಬಂಧ ಹೇರುವ ಕಟು ನಿರ್ಧಾರ ಕೈಗೊಂಡರೆ ಅದನ್ನು ಎದುರಿಸುವ ಬಗೆ ಹೇಗೆ? ದೇಶ ಎದುರಿಸುತ್ತಿರುವ ಇಂಥ ಗಂಭೀರ ಸವಾಲುಗಳಿಗೆ ಎದುರಾಗಬೇಕಾದ ಸರ್ಕಾರವು ವಿಭಜನಕಾರಿ ನೀತಿಗಳನ್ನು ಬಲಪ್ರಯೋಗಿಸಿ ಜಾರಿಗೊಳಿಸಲು ಮುಂದಡಿ ಇಟ್ಟಿದೆ. ಇದು ದೇಶದ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುವುದರಲ್ಲಿ ಅನುಮಾನವೇ ಇಲ್ಲ.