ಕೇಂದ್ರ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ರಾಜ್ಯ ಸರ್ಕಾರಗಳಿಗೆ ನ್ಯಾಯಯುತವಾಗಿ ಪಾವತಿಸಬೇಕಾದ ಸರಕು ಮತ್ತು ಸೇವಾ ತೆರಿಗೆಯ (GST) ಪರಿಹಾರದ ಪಾಲನ್ನು ಪಾವತಿಸಲೂ ಹಣವಿಲ್ಲದಂತಾಗಿದೆ. ಈಗಾಗಲೇ ವಿತ್ತೀಯ ಕೊರತೆ ತೀವ್ರವಾಗಿ ಹಿಗ್ಗಿದೆ. ಬಂಡವಾಳ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಾಗಿದೆ. 2020-21ನೇ ಸಾಲಿನ ಘೋಷಿತ ಬಜೆಟ್ ಯೋಜನೆಗಳ ಪೈಕಿ ಹಲವು ಯೋಜನೆಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ.
ಇಂತಿಪ್ಪ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಈಗ ಜನರ ಬಳಿ ಇರುವ ಚಿನ್ನದ ಮೇಲೆ ಕಣ್ಣು ಬಿದ್ದಿದೆ. ಮೋದಿ ಕಣ್ಣು ಬಿತ್ತೆಂದರೆ ಗೊತ್ತಲ್ಲಾ! ಯಾರ್ಯಾರ ಬಳಿ ಎಷ್ಟೆಷ್ಟು ಚಿನ್ನ ಇದೆಯೋ ಅಷ್ಟನ್ನೂ ಘೋಷಿಸಿಕೊಳ್ಳಬೇಕು. ತೆರಿಗೆ ಕಟ್ಟದ ಚಿನ್ನ ಅಥವಾ ದಾಖಲೆಯೇ ಇಲ್ಲದ ಚಿನ್ನ ಇದ್ದರೆ, ಅದಕ್ಕೆ ತೆರಿಗೆ ಮತ್ತು ದಂಡವನ್ನು ಕಟ್ಟಿ ಘೋಷಣೆ ಮಾಡಿಕೊಳ್ಳಬೇಕು. ಅಂದರೆ, ನಿಮ್ಮ ಬಳಿ ಇರುವ ಚಿನ್ನಕ್ಕೆ ಅಧಿಕೃತ ದಾಖಲೆ ಇರಬೇಕು. ದಾಖಲೆ ಇಲ್ಲದಿದ್ದರೆ, ಅದನ್ನು ತೆರಿಗೆ ವಂಚಿಸಿರುವ ಚಿನ್ನವೆಂದು ಪರಿಗಣಿಸುವ ಸಾಧ್ಯತೆ ಇದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿತ್ತ ಪತ್ರಿಕೆ ಮಿಂಟ್ ವರದಿ ಪ್ರಕಾರ, ಮೋದಿ ಸರ್ಕಾರದ ಮುಂದೆ ಚಿನ್ನ ಕ್ಷಮಾದಾನ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾಪ ಇದೆ. ಈ ಪ್ರಸ್ತಾಪದ ಪ್ರಕಾರ, ದೇಶದ ಜನರು ತಮ್ಮ ಬಳಿ ದಾಖಲೆ ಇಲ್ಲದ ಚಿನ್ನವನ್ನು ತೆರಿಗೆ ಅಧಿಕಾರಿಗಳ ಮುಂದೆ ಘೋಷಿಸಿಕೊಂಡು ತೆರಿಗೆ ಕಟ್ಟಬೇಕು ಜತೆಗೆ ದಂಡವನ್ನು ಕಟ್ಟಬೇಕು. ತೆರಿಗೆ ಮತ್ತು ದಂಡದ ಪ್ರಮಾಣ ಎಷ್ಟೆಂಬುದನ್ನು ತೆರಿಗೆ ಇಲಾಖೆ ಮತ್ತು ಆರ್ಥಿಕ ಇಲಾಖೆಗಳು ಸಮಾಲೋಚಿಸಿ ನಿರ್ಧರಿಸುತ್ತವೆ. ಮಿಂಟ್ ವರದಿ ಪ್ರಕಾರ, ಚಿನ್ನ ಕ್ಷಮಾದಾನ ಯೋಜನೆಯು ಈಗಿನ್ನು ಪ್ರಾಥಮಿಕ ಹಂತದಲ್ಲಿದೆ. ಅಂದರೆ, ಯೋಜನೆ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಅವರ ಪ್ರತಿಕ್ರಿಯೆ ಪಡೆಯಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಲು ವಿತ್ತಸಚಿವಾಲಯದ ವಕ್ತಾರರು ಲಭ್ಯವಾಗಿಲ್ಲ ಎಂದೂ ತಿಳಿಸಿದೆ.
ಚಿನ್ನದ ಬೆಲೆ ಸರ್ವಕಾಲಿಕ ಗರಿಷ್ಠಮಟ್ಟಕ್ಕೆ ಏರಿರುವ ಮತ್ತು ದೇಶದ ಹಣಕಾಸು ಸ್ಥಿತಿ ಹೀನಾಯ ಮಟ್ಟಕ್ಕೆ ಇಳಿದಿರುವ ಹೊತ್ತಿನಲ್ಲಿ ಚಿನ್ನ ಕ್ಷಮಾದಾನ ಯೋಜನೆಗೆ ಜೀವ ಬಂದಿರುವುದು ಕಾಕಾತಾಳೀಯವೇನಲ್ಲ. ಪ್ರಧಾನಿ ನರೇಂದ್ರಮೋದಿ ಚಿನ್ನದ ಮೇಲೆ ಕಣ್ಣು ಹಾಕುತ್ತಿರುವುದು ಇದು ಮೋದಲೇನಲ್ಲ. 2015ರಲ್ಲಿ ನಾಗರಿಕರು ತಮ್ಮ ಬಳಿ ಇರುವ ಚಿನ್ನದ ಪ್ರಮಾಣ ಘೋಷಿಸಿಕೊಳ್ಳುವ ಮತ್ತು ದಾಖಲೆ ಇಲದ ಚಿನ್ನದ ಮೇಲೆ ತೆರಿಗೆ ಮತ್ತು ದಂಡ ಹೇರುವ ಪ್ರಸ್ತಾಪ ಮಾಡಿದ್ದರು. ಆದರೆ, ಆಗ ನಾಗರಿಕರಿಂದಾಗಲಿ ತೆರಿಗೆ ಇಲಾಖೆಯಿಂದಾಗಲೀ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
ಈಗ ಚಿನ್ನ ಕ್ಷಮಾದಾನ ಯೋಜನೆ ಚಾಲನೆಗೆ ಬಂದಿರುವುದಕ್ಕೆ ಹೆಚ್ಚಿನ ಮಹತ್ವ ಇದೆ. ಏಕೆಂದರೆ 2015ರಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ಮೋದಿ ಅಧಿಕಾರಕ್ಕೆ ಬಂದು ಒಂದು ವರ್ಷವಷ್ಟೇ ಆಗಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿತ್ತು. ಜತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಗೆ 25 ಡಾಲರ್ ಗೆ ಕುಸಿದಿತ್ತು. ಕಚ್ಚಾ ತೈಲ ಆಮದು ಮೊತ್ತದಲ್ಲೇ ಸುಮಾರು 6 ಲಕ್ಷ ಕೋಟಿ ರುಪಾಯಿ ವಾರ್ಷಿಕ ಉಳಿತಾಯವಾಗುತ್ತಿತ್ತು.
ಆಗ ಮೋದಿ ಸರ್ಕಾರವು ಆಡಳಿತ ವ್ಯವಸ್ಥೆಯಲ್ಲಿ, ಆರ್ಥಿಕ ನೀತಿಯಲ್ಲಿ ಬದಲಾವಣೆ ಮಾಡುವ ಯಾವುದೇ ದುಸ್ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ, ಎಲ್ಲೆಲ್ಲಿ ಕೈಹಾಕಬಹುದು ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿತ್ತಷ್ಟೇ!

ಪ್ರಧಾನಿ ಮೋದಿ ಪ್ರೈಮ್ ಟೈಮ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, 2016 ನವೆಂಬರ್ 8ರಂದು ಏಕಾಏಕಿ 1000 ಮತ್ತು 500 ರುಪಾಯಿ ನೋಟುಗಳನ್ನು ಅಪನಗದೀಕರಣ (Note Ban) ಯೋಜನೆ ಜಾರಿಗೆ ತಂದು ಇಡೀ ದೇಶಕ್ಕೆ ಆಘಾತ ನೀಡಿದ್ದರು. 50 ದಿನಗಳಲ್ಲಿ ನೋಟ್ ಬ್ಯಾನ್ ಸಂಕಷ್ಟ ಪರಿಹಾರವಾಗುತ್ತದೆಂದು ಹೇಳಿಕೊಂಡಿದ್ದರು. 500 ದಿನಗಳಲ್ಲ, ಈ ಹೊತ್ತಿಗೆ 1360 ದಿನಗಳು ಕಳೆದರೂ ಸಂಕಷ್ಟ ಪರಿಹಾರವಾಗಲಿಲ್ಲ. ನೋಟ್ ಬ್ಯಾನ್ ಮಾಡಿ ದೇಶವ್ಯಾಪಿ ಆರ್ಥಿಕ ಸಂಕಷ್ಟ ತಂದು ಇನ್ನು 100 ದಿನ ಕಳೆದರೆ ನಾಲ್ಕು ವರ್ಷ ಪೂರ್ಣವಾಗುತ್ತದೆ. ಸಂಕಷ್ಟಗಳು ಮಾತ್ರ ಹೆಚ್ಚುತ್ತಲೇ ಇವೆ.
ಅದಾದ ನಂತರ ಮೋದಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅತ್ಯಂತ ವೈಫಲ್ಯತೆ ಕಂಡಿತು. ಹಿಂದಿನ ತೆರಿಗೆ ವ್ಯವಸ್ಥೆಯೂ ಹಾಳಾಗಿದೆ, ಹೊಸ ತೆರಿಗೆ ವ್ಯವಸ್ಥೆಯೂ ಸರಿದಾರಿಗೆ ಬಂದಿಲ್ಲ. ಆದರೆ, ಮೋದಿ ಆಪ್ತರಾದ ತೆರಿಗೆ ವಂಚಕ ಸಮುದಾಯಕ್ಕೆ ಮಾತ್ರ ಜಿಎಸ್ಟಿಯಿಂದ ಅನುಕೂಲವಾಗಿದೆ. ಗೌರವಯುತವಾಗಿ ತೆರಿಗೆ ಪಾವತಿಸುತ್ತಿದ್ದ ಕೋಟ್ಯಂತರ ನಾಗರಿಕರು ಸಂಕಷ್ಟ ಎದುರಿಸುತ್ತಲೇ ಇದ್ದಾರೆ.
ಈ ಎರಡು ಕಾರಣಗಳು ಮತ್ತು ಮೋದಿ ಸರ್ಕಾರವು ಕಾರ್ಪೊರೆಟ್ ವಲಯಕ್ಕೆ 1.40 ಲಕ್ಷ ಕೋಟಿ ರುಪಾಯಿ ವಾರ್ಷಿಕ ತೆರಿಗೆ ವಿನಾಯಿತಿ ನೀಡುವುದು ಸೇರಿದಂತೆ ಹಲವು ಆರ್ಥಿಕ ನೀತಿ ನಿರ್ಧಾರಗಳು ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ಮೋದಿಪ್ರಣೀತ ಆರ್ಥಿಕ ನೀತಿಯಿಂದಾಗಿ, ಪ್ರಸ್ತುತ ಕರೊನಾ ಸೋಂಕು ಹರಡಿ ಇಡೀ ಆರ್ಥಿಕ ವ್ಯವಸ್ಥೆ ಸ್ಥಗಿತಗೊಳ್ಳುವ ಮುಂಚೆಯೇ ದೇಶದ ಆರ್ಥಿಕತೆಗೆ ಪಾರ್ಶ್ವವಾಯು ಬಡಿದಿತ್ತು. ಈ ನಡುವೆ ರಿಸರ್ವ್ ಬ್ಯಾಂಕಿನಿಂದ 1.70 ಲಕ್ಷ ಕೋಟಿ ರುಪಾಯಿಗಳ ಬಳಸಿಕೊಂಡ ನರೇಂದ್ರ ಮೋದಿ ಸರ್ಕಾರವು ಮತ್ತಷ್ಟು ಪಾಲಿಗಾಗಿ ಬೇಡಿಕೆ ಇಟ್ಟಿದೆ. ಆರ್ಥಿಕ ತಜ್ಞರಲ್ಲದ ಶಕ್ತಿಕಾಂತ ದಾಸ್ ಅವರನ್ನು ನೇಮಕ ಮಾಡಿದ್ದೇ ಈ ಕಾರಣಕ್ಕೆ ಎಂದು ಆರ್ಥಿಕತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಬೊಕ್ಕಸ ಬರಿದು ಮಾಡಿಕೊಂಡಿರುವ ಪ್ರಧಾನಿ ಮೋದಿಗೆ ಈಗ ಉಳಿದಿರುವುದು ಭಾರತೀಯ ರಿಸರ್ವ್ ಬ್ಯಾಂಕ್ ನ ನಿಧಿ ಮಾತ್ರ. ಅದರಲ್ಲಿ ಈಗಾಗಲೇ ಪಾಲು ಪಡೆದಿರುವುದರಿಂದ ಬೇರೆ ಮೂಲವನ್ನು ಹುಡುಕಬೇಕಾಗಿದೆ. ಹೀಗಾಗಿ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿರುವ ಚಿನ್ನದ ಮೇಲೆ ಮೋದಿ ಕಣ್ಣಿಟ್ಟಿದ್ದಾರೆ.
ಚಿನ್ನ ಕ್ಷಮಾದಾನ ಯೋಜನೆಯ ಸ್ವರೂಪ ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯೋಜನೆಯನ್ನು ಜಾರಿ ಮಾಡಬೇಕಾದ ವಿತ್ತ ಸಚಿವಾಲಯವು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದು ಮಿಂಟ್ ವರದಿ ಹೇಳಿದೆ. ಆದರೆ, ನಮ್ಮಲ್ಲಿ ಬಹುತೇಕ ಚಿನ್ನದ ಒಡವೆಗಳು ಪೂರ್ವಜರಿಂದ ಉಡುಗೊರೆಯಾಗಿ ಬಂದಿರುವಂತಹವು. ಅಂತಹ ಒಡವೆಗಳಿಗೆ ದಾಖಲೆಯನ್ನು ಎಲ್ಲಿಂದ ತರುವುದು? ಇಂತಹ ಒಡವೆಗಳು ಅಕ್ರಮ ಸಂಪಾದನೆಯಲ್ಲ, ಸಕ್ರಮವಾದುವು ಎಂದು ಮೋದಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಹೇಗೆ? ಬೊಕ್ಕಸ ಖಾಲಿ ಮಾಡಿಕೊಂಡಿರುವ ಪ್ರಧಾನಿ ಮೋದಿ ಸರ್ಕಾರವು ಚಿನ್ನದ ಕ್ಷಮಾದಾನ ಯೋಜನೆ ಮೂಲಕ ತೆರಿಗೆ ಮತ್ತು ದಂಡ ರೂಪದಲ್ಲಿ ಬೊಕ್ಕಸ ತುಂಬಿಕೊಳ್ಳಲು ಯೋಜನೆ ರೂಪಿಸರಬಹುದು. ಆದರೆ, ದಾಖಲೆಯೇ ಇಲ್ಲದ ಚಿನ್ನದ ಮಾಲೀಕರ ಗತಿ ಏನು ಎಂಬುದು ಈಗ 5 ಟ್ರಿಲಿಯನ್ ಡಾಲರ್ ಪ್ರಶ್ನೆ!