ಬೆಂಗಳೂರು ಅಭಿವೃದ್ಧಿಯ ವೇಗಕ್ಕೆ ಮಿತಿ ಹೇರಬೇಕು, ಮಹಾನಗರ ಮೇಲಿನ ಜನಸಂಖ್ಯಾ ಒತ್ತಡ ಕಡಿಮೆ ಮಾಡಬೇಕು, ಅದಕ್ಕೆ ಬೇಕಾದ ವಿದ್ಯುತ್, ನೀರು, ನೆಲ, ಹೀಗೆ ಎಲ್ಲವುದರ ತೀವ್ರ ಕೊರತೆ ಮತ್ತು ಭವಿಷ್ಯದ ಹಾಹಾಕಾರಕ್ಕೆ ಈಗಲೇ ಕಡಿವಾಣ ಹಾಕಬೇಕು ಎಂಬ ಮಾತುಗಳು ದಶಕಗಳಿಂದ ಕೇಳುತ್ತಲೇ ಇವೆ. ಆದರೂ, ಕೆರೆ ಮುಚ್ಚಿ, ಮರ ಕಡಿದು, ಹಳ್ಳ-ಕಣಿವೆ ನೆಲಸಮ ಮಾಡಿ ನಗರ ವಿಸ್ತರಿಸುವ ಅಭಿವೃದ್ಧಿ ಮುಂದುವರಿಯುತ್ತಲೇ ಇದೆ.
ಇದೀಗ ಇಂತಹ ಅಭಿವೃದ್ಧಿಗೆ ಮತ್ತೆ ಕೊರಳೊಡ್ಡುವ ಸರದಿ ಮರಗಳದ್ದು. ಹೌದು, ಬೆಂಗಳೂರು ನಗರದ ಹೊರ ವರ್ತುಲ ರಸ್ತೆ ನಿರ್ಮಾಣ ಮತ್ತು ಸುತ್ತಮುತ್ತಲ ಪ್ರದೇಶಗಳ ಸಂಪರ್ಕ ರಸ್ತೆಗಳ ಅಗಲೀಕರಣ ಯೋಜನೆಗಾಗಿ ಸರಿಸುಮಾರು 50 ಸಾವಿರ ಮರ ಕಡಿಯಲು ವಿವಿಧ ಹಂತಗಳಲ್ಲಿ ಯೋಜನೆ ಸಿದ್ಧವಾಗಿದೆ. ಈಗಾಗಲೇ ಕೆಲವೇ ದಿನಗಳ ಹಿಂದೆ 8500 ಕ್ಕೂ ಅಧಿಕ ಮರ ಕಡಿತಲೆಗೆ ಸ್ವತಃ ಅರಣ್ಯ ಇಲಾಖೆಯೇ ಅನುಮತಿ ನೀಡಿದ್ದರೆ, ಇದೀಗ ಹೊರವರ್ತುಲ ರಸ್ತೆ ನಿರ್ಮಾಣಕ್ಕಾಗಿ ಬಲಿಯಾಗುವ ಮರಗಳ ಸಂಖ್ಯೆ ಈ ಮೊದಲು ಬಿಡಿಎ ಹೇಳಿದಂತೆ 200-500 ಮರಗಳಲ್ಲ; ಬದಲಾಗಿ ಬರೋಬ್ಬರಿ 33 ಸಾವಿರ ಮರಗಳು ನೆಲಕ್ಕುರಳಿವೆ ಎಂದು ಹೊಸ ಪರಿಸರ ಪರಿಣಾಮ ಅಧ್ಯಯನ ವರದಿ(ಇಐಎ) ಹೇಳಿದೆ.
ಬೆಂಗಳೂರು ಮಹಾನಗರದ ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕಿಸುವ ಫೆರಿಫೆರಲ್ ರಿಂಗ್ ರೋಡ್(ಹೊರ ವರ್ತುಲ ರಸ್ತೆ) ನಿರ್ಮಾಣ ಯೋಜನೆ ಕುರಿತ ಪರಿಸರ ಪರಿಣಾಮ ಅಂದಾಜು ಕರಡು ವರದಿಯ ಪ್ರಕಾರ,ಈ ರಸ್ತೆ ನಿರ್ಮಾಣಕ್ಕಾಗಿ ಒಟ್ಟು 33,838 ಮರಗಳನ್ನು ಕಡಿಯಬೇಕಾಗುತ್ತದೆ. ಆ ಪೈಕಿ ಟಿ ಜಿ ಹಳ್ಳಿ(ತಿಪ್ಪಗೊಂಡನಹಳ್ಳಿ) ಜಲಾಶಯದ ಜಲಾನಯನ ಪ್ರದೇಶದಲ್ಲಿಯೇ 9304 ಮರಗಳನ್ನು ಕಡಿಯಬೇಕಾಗುತ್ತದೆ. ಜಾರಕಬಂಡೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 631 ಮರಗಳನ್ನು ಕಡಿಯಬೇಕಾಗುತ್ತದೆ. ಅಲ್ಲದೆ ಮೀಸಲು ಅರಣ್ಯದ ಸುಮಾರು 25 ಎಕರೆ ಪ್ರದೇಶವನ್ನು ಯೋಜನೆಗೆ ಬಳಸಿಕೊಳ್ಳಬೇಕಾಗುತ್ತದೆ ಎಂದು ಕಳೆದ ತಿಂಗಳು ಸಲ್ಲಿಸಿರುವ ಹೊಸ ಇಐಎ ಕರಡು ವರದಿ ಹೇಳಿದೆ.
ಆದರೆ, ಈ ಮೊದಲು, ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆಯ ಕುರಿತು ತಪ್ಪು ಮಾಹಿತಿಯನ್ನೇ ನೀಡುತ್ತಿದ್ದ ಬಿಡಿಎ, ಯೋಜನೆಗಾಗಿ ಕೇವಲ 200 – 500 ಮರಗಳನ್ನಷ್ಟೇ ಕಡಿಯಬೇಕಾಗುತ್ತದೆ ಎಂದು ಹೇಳುತ್ತಿತ್ತು. ಯೋಜನೆಯ ಪರಿಸರ ಪರಿಣಾಮದ ಕುರಿತ ತಪ್ಪು ಮಾಹಿತಿಯನ್ನೊಳಗೊಂಡ ವರದಿಯನ್ನು ಮುಂದಿಟ್ಟುಕೊಂಡು ಬಿಡಿಎ ಹೂಡುತ್ತಿದ್ದ ಮೊಂಡು ವಾದವನ್ನು ಪ್ರಶ್ನಿಸಿ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್(ಎನ್ ಜಿಟಿ)ಗೆ ದೂರು ನೀಡಲಾಗಿತ್ತು. ಆ ವೇಳೆ ಕೂಡ ಯೋಜನೆಗಾಗಿ ಕೇವಲ 16,685 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗಳು ಸಲ್ಲಿಸಿದ್ದ ವರದಿಯನ್ನು ನ್ಯಾಯಪೀಠದ ತಿರಸ್ಕರಿಸಿತ್ತು. ಇದೇ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚಿನಲ್ಲಿ ಸುಪ್ರೀಂಕೋರ್ಟ್ ಕೂಡ ಬಿಡಿಎಗೆ ಚಾಟಿ ಬೀಸಿತ್ತು. ಯೋಜನೆಗಾಗಿ ಬಳಕೆಯಾಗುವ ಅರಣ್ಯ ಪ್ರದೇಶದ ಕುರಿತ ವರದಿಯಲ್ಲಿನ ವಿರೋಧಭಾಸ ಮತ್ತು ಹಾದಿತಪ್ಪಿಸುವ ಮಾಹಿತಿಯನ್ನು ಪ್ರಶ್ನಿಸಿದ್ದ ನ್ಯಾಯಾಲಯ, ಹೊಸದಾಗಿ ಇಐಎ ವರದಿ ತಯಾರು ಮಾಡುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಇದಿಗ ಕಳೆದ ಜೂನ್ ನಲ್ಲಿ ಹೊಸ ಇಐಎ ಕರಡು ವರದಿ ಸಲ್ಲಿಸಲಾಗಿದ್ದು, ವಾಸ್ತವವಾಗಿ ಯೋಜನೆ ನುಂಗಿ ಹಾಕಲಿರುವ ಮರ ಮತ್ತು ಅರಣ್ಯ ಪ್ರದೇಶದ ಆಘಾತಕಾರಿ ನೈಜ ಚಿತ್ರಣ ಹೊರಬಿದ್ದಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು ರಸ್ತೆಯಿಂದ, ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಮೂಲಕವಾಗಿ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 65.5 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕಿನಿಂದ 7.21 ಕಿ.ಮೀ ಅಂತರದಲ್ಲಿ ಮತ್ತು ಪುಟ್ಟೇನಹಳ್ಳಿ ಪಕ್ಷಿಧಾಮದಿಂದ 1.49 ಕಿ.ಮೀ ದೂರದಲ್ಲಿ ಹಾದುಹೋಗಲಿದೆ. ಈ ನಡುವೆ, ಮಾರ್ಗಮದ್ಯದಲ್ಲಿ ಬರುವ 6 ಕೆರೆಗಳ ಮೇಲೆ ಫ್ಲೈಓವರ್ ನಿರ್ಮಾಣಕ್ಕೂ ಯೋಜಿಸಲಾಗಿದ್ದು, ಇದು ಕೆರೆ ಪರಿಸರದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಹಾಗೇ ಟಿಜಿ ಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಒಂಭತ್ತು ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯುವುದರಿಂದಾಗಿ, ಬೆಂಗಳೂರಿನ ನೀರಿನ ಮೂಲಗಳಲ್ಲಿ ಒಂದಾಗಿರುವ ಜಲಾಶಯದ ನೀರಿ ಗುಣಮಟ್ಟದ ಮೇಲೆಯೂ ದುಷ್ಪರಿಣಾಮ ಬೀರಲಿದೆ ಎಂದೂ ಉಲ್ಲೇಖಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿಯಲ್ಲಿ ಹೇಳಲಾಗಿದೆ.
ಮತ್ತೊಂದು ಕಡೆ, ಬೆಂಗಳೂರು ಮಹಾನಗರ ವ್ಯಾಪ್ತಿಯ ಎರಡು ರಸ್ತೆ ಅಗಲೀಕರಣ ಯೋಜನೆಗಾಗಿ ಸುಮಾರು 8500 ಮರಗಳನ್ನು ಕಡಿತಲೆ ಮಾಡಲು ಅರಣ್ಯ ಇಲಾಖೆ ಈಗಾಗಲೇ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ. ಹೊಸಕೋಟೆ ಮೂಲಕವಾಗಿ ಅತ್ತಿಬೆಲೆ ಮತ್ತು ಸರ್ಜಾಪುರವನ್ನು ಸಂಪರ್ಕಿಸುವ ರಸ್ತೆ ವಿಸ್ತರಣೆ ಮತ್ತು ಕಂಚುಗಾರನಹಳ್ಳಿಯಿಂದ ಜಿಗಣಿವರೆಗಿನ ರಸ್ತೆ ಹಾಗೂ ಬನ್ನೇರುಘಟ್ಟದಿಂದ ಬೇಶಮನಹಳ್ಳಿ ಸಂಪರ್ಕ ರಸ್ತೆಯ ವಿಸ್ತರಣೆ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ಸಿದ್ಧವಾಗಿದ್ದು, ಈಗಾಗಲೇ ಮೇ ಮೊದಲ ವಾರವೇ ಮರ ಕಡಿತಲೆಗೆ ಅನುಮತಿ ನೀಡಲಾಗಿದೆ.
ಒಟ್ಟು ಬೆಂಗಳೂರು ಹೊರ ವಲಯದಲ್ಲಿ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಒಟ್ಟು ಆರು ರಸ್ತೆಗಳ ವಿಸ್ತರಣೆ, ಅಗಲೀಕರಣಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಈಗಾಗಲೇ ವಿವಿಧ ಹಂತದ ಕಾಮಗಾರಿಗಳನ್ನು ಕೈಗೊಂಡಿದ್ದು, ಕಡಿತಲೆ ಮಾಡಲಿರುವ ಮರಗಳನ್ನೂ ಕೆಲವು ಕಡೆ ಗುರುತು ಮಾಡಲಾಗಿದೆ. ಈ ನಡುವೆ, ರಾಜ್ಯ ಹೈಕೋರ್ಟಿನಲ್ಲಿ ಈ ಪೈಕಿ ಕೆಲವು ಕಾಮಗಾರಿಗಳನ್ನು ಪ್ರಶ್ನಿಸಿದ್ದು, ಆ ಕುರಿತ ತೀರ್ಪು ಬರುವವರೆಗೆ ಸದ್ಯ ಮರಗಳಿಗೆ ಜೀವದಾನ.
ಇನ್ನು ನಗರದ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದ ಮೆಟ್ರೋ ಕಾಮಗಾರಿ ಕೂಡ ಈಗಾಗಲೇ ಹಲವು ಮರಗಳನ್ನು ಬಲಿತೆಗೆದುಕೊಂಡಿದ್ದು, ಇನ್ನು ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕ ಮಾರ್ಗಕ್ಕಾಗಿ ಸುಮಾರು ಮೂರು ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ಯೋಜಿಸಲಾಗಿದೆ. ಕೆ ಆರ್ ಪುರಂನಿಂದ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊ ಯೋಜನೆಯಿಂದಾಗಿ ಸುಮಾರು 3541 ಮರಗಳಿಗೆ ಹಾನಿಯಾಗಲಿದೆ. ಆ ಪೈಕಿ 1961 ಮರಗಳನ್ನು ಸಂಪೂರ್ಣ ಕಡಿದುಹಾಕಬೇಕಾಗುತ್ತದೆ ಎಂದು ಯೋಜನೆಯ ಪರಿಸರ ಪರಿಣಾಮ ಅಧ್ಯಯನ ವರದಿ ಹೇಳಿದೆ.
ಅಂದರೆ, ಸುಮಾರು 50 ಸಾವಿರ ಮರಗಳಿಗೆ ಬೆಂಗಳೂರಿನ ವಿವಿಧ ಅಭಿವೃದ್ಧಿ ಯೋಜನೆಗಳು ತತಕ್ಷಣಕ್ಕೆ ಜೀವಕಂಟಕವಾಗಿ ಪರಿಣಮಿಸಿವೆ. ಈ ನಡುವೆ, ಸರ್ಕಾರಿ ಯೋಜನೆಗಳೂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳೂ, ಉದ್ಯಮ ಚಟುವಟಿಕೆಗಳಿಗೆ ಮುನ್ನಕಡ್ಡಾಯವಾಗಿ ಕೈಗೊಳ್ಳಲೇಬೇಕಾದ ಪರಿಸರ ಪರಿಣಾಮ ಅಧ್ಯಯನ(ಇಐಎ) ವರದಿಯ ಮಹತ್ವವನ್ನೇ ಅಪ್ರಸ್ತುತಗೊಳಿಸುವ ದಿಕ್ಕಿನಲ್ಲಿ ಇಐಎ ಕರಡು ತಿದ್ದುಪಡಿಗೆ ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿದ್ದು, ಯಾವುದೇ ಯೋಜನೆಗೆ ಮುನ್ನ ಆ ಯೋಜನೆಯಿಂದಾಗಿ ಪರಿಸರದ ಮೇಲಾಗುವ ಪರಿಣಾಮ ಕುರಿತ ಅಧ್ಯಯನ ಮತ್ತು ಅಂದಾಜು ಪ್ರಕ್ರಿಯೆಯ ಅಗತ್ಯವೇ ಇಲ್ಲದೆ, ಯೋಜನೆ ಆರಂಭಿಸಲು ಅವಕಾಶ ನೀಡಲಾಗುತ್ತಿದೆ.
ಕಠಿಣ ಪರಿಸರ ನಿಯಮಗಳ ಹೊರತಾಗಿಯೂ ಅಭಿವೃದ್ಧಿಯ ಹೆಸರಲ್ಲಿ ಪರಿಸರವನ್ನು ಆಪೋಷನ ತೆಗೆದುಕೊಳ್ಳುವ ವಿವಿಧ ಲಾಬಿಗಳ ಹಕೀಕತ್ತು ರಾಜಾರೋಷವಾಗಿ ನಡೆದಿರುವಾಗ, ಅಂತಹ ಕಾನೂನುಗಳನ್ನು ದುರ್ಬಲಗೊಳಿಸುವ ಮೂಲಕ ಸರ್ಕಾರ ಯಾರ ಹಿತ ಕಾಯಲು ಬಯಸುತ್ತಿದೆ? ಪರಿಸರವನ್ನು ಬಲಿಕೊಟ್ಟು ಕಾರ್ಪೊರೇಟ್ ಕಂಪನಿಗಳು, ಟಿಂಬರ್, ಗಣಿ ಲಾಬಿಗಳು ಮತ್ತು ಗುತ್ತಿಗೆದಾರರ ಲಾಬಿಗಳನ್ನು ಕೊಬ್ಬಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವರಸೆಗಳು, ಕರೋನಾದಂತಹ ಸಂಕಷ್ಟದ ಹೊತ್ತಲ್ಲಿ ಹೇಗೆ ಸ್ಥಾಪಿತ ಹಿತಾಸಕ್ತಿಗಳು ಜನಹಿತವನ್ನು ಬಲಿಕೊಟ್ಟು, ತಮ್ಮದೇ ಹಿತ ರಕ್ಷಣೆಗೆ ಮುಂದಾಗಿವೆ ಎಂಬುದಕ್ಕೆ ನಿದರ್ಶನ.