ಕೇಂದ್ರ ಸರ್ಕಾರವು ಬಿಹಾರದಲ್ಲಿ ಉತ್ಪತ್ತಿಯಾದ ಗೋಧಿಯ ಶೇ. 1ರಷ್ಟನ್ನು ಕೂಡಾ ಖರೀದಿಸಲಿಲ್ಲ ಎಂಬ ವಿಚಾರ RTI ಮೂಲಕ ಬಹಿರಂಗವಾಗಿದೆ. 2020-21 ವರ್ಷದ ರಾಬಿ ಮಾರುಕಟ್ಟೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖರೀದಿಸಿದ ಕುರಿತು ಆರ್‌ಟಿಐ ಮಾಹಿತಿ ಕೇಳಿದ್ದ ದ ವೈರ್ ತಂಡಕ್ಕೆ ಸಿಕ್ಕ ಮಾಹಿತಿ ಇಲ್ಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಹಾರದಲ್ಲಿ ಒಟ್ಟು 61 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಗೋಧಿಯನ್ನು ಬೆಳೆಸಲಾಗಿದೆ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಕೇವಲ ಶೇ 0.081ರಷ್ಟು ಅಂದರೆ 5000 ಟನ್‌ಗಳಷ್ಟು ಗೋಧಿಯನ್ನು ಮಾತ್ರ ಸರ್ಕಾರ ಖರೀದಿಸಿದೆ. ಬಿಹಾರ ಸರ್ಕಾರ ಘೊಷಿಸಿದ್ದಂತೆ, 7 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಗೋಧಿಯನ್ನು ಖರೀದಿಸುವ ಭರವಸೆ ನೀಡಿತ್ತು. ಅದರ 0.71%ದಷ್ಟು ಗೋಧಿಯನ್ನು ಕೂಡಾ ಸರ್ಕಾರ ಖರೀದಿಸಲಿಲ್ಲ.
ಕೋವಿಡ್ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆಂಬ ಕಾರಣಕ್ಕೆ ಸಿಎಂ ನಿತೀಶ್ ಕುಮಾರ್ ಅವರು ಹೆಚ್ಚುವರಿಯಾಗಿ 2 ಲಕ್ಷ ಟನ್ ಗೋಧಿಯನ್ನು ಖರೀದಿಸುವ ಭರವಸೆಯನ್ನು ಕೂಡಾ ನೀಡಿದ್ದರು. ಆದರೆ, ಈಗ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ದತ್ತಾಂಶಗಳ ಪ್ರಕಾರ ಕೇವಲ 1002 ರೈತರಿಂದ ಗೋಧಿಯನ್ನು ಖರೀದಿಸಲಾಗಿದೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಬಿಹಾರದಲ್ಲಿ ಗೋಧಿ ಉತ್ಪಾದನೆಯೂ ಸಾಕಷ್ಟು ಇಳಿತ ಕಂಡಿದೆ. 2018-19ರಲ್ಲಿ ಸರ್ಕಾರವು 17,504ಟನ್‌ಗಳಷ್ಟು ಗೋಧಿಯನ್ನು ಖರೀದಿಸಿತ್ತು. 2017-18ರಲ್ಲಿ 20,000 ಟನ್‌ಗಳಷ್ಟು ಗೋಧಿಯನ್ನು ಖರೀದಿಸಿತ್ತು. ಆದರೂ, ಆಯಾ ವರ್ಷಗಳಲ್ಲಿ ಬೆಳದ ಒಟ್ಟು ಬೆಳೆಯ ಪ್ರಮಾಣದ 1%ದಷ್ಟು ಕೂಡಾ ಸರ್ಕಾರ ಖರೀದಿಸಿರಲಿಲ್ಲ. ಇನ್ನು 2019-20ರಲ್ಲಿ ಸರ್ಕಾರವು ಕೇವಲ 2,815 ಟನ್ ಗೋಧಿಯನ್ನು ಖರೀದಿ ಮಾಡಿತ್ತು.

“ಕಳೆದ ಐದರಿಂದ ಆರು ವರ್ಷಗಳಲ್ಲಿ ಬಿಹಾರದಲ್ಲಿ ಗೋಧಿ ಖರೀದಿಯು ಶೂನ್ಯ ಮಟ್ಟಕ್ಕೆ ಕುಸಿದಿದೆ. ರಾಜ್ಯಕ್ಕೆ ಬೇಕಾಗುವ ಗೋಧಿಯನ್ನು ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ,” ಎಂದು ಬಿಹಾರ ಎಫ್‌ಸಿಐ ಜನರಲ್ ಮ್ಯಾನೇಜರ್ ಆಗಿರುವ ಸಂದೀಪ್ ಕುಮಾರ್ ಪಾಂಡೆ ಹೇಳಿದ್ದಾರೆ.
ಇದಕ್ಕೆ ಮೂಲ ಕಾರಣ, ಬಿಹಾರದಲ್ಲಿ ಸರ್ಕಾರಿ ಖರೀದಿ ಕೇಂದ್ರಗಳ ಸಂಖ್ಯೆಯಲ್ಲಿ ಆಗಿರುವ ಗಣನೀಯ ಇಳಿಕೆ. 2015-16ರಲ್ಲಿ 9000ದಷ್ಟಿದ್ದ ಸರ್ಕಾರಿ ಗೋಧಿ ಖರೀದಿ ಕೇಂದ್ರಗಳು 2019-20ರಷ್ಟರಲ್ಲಿ 1,619ಕ್ಕೆ ಇಳಿದಿವೆ. ಇದರಿಂದಾಗಿ, ಅತೀ ಕಡಿಮೆ ಪ್ರಮಾಣದ ರೈತರಿಗೆ ಮಾತ್ರ ಸರ್ಕಾರಿ ಗೋಧಿ ಖರೀದಿ ಕೇಂದ್ರಗಳಿಗೆ ತಮ್ಮ ಬೆಳೆಯನ್ನು ಮಾರಲು ಸಾಧ್ಯವಾಗುತ್ತಿದೆ.
“ಸರ್ಕಾರ ಗೋಧಿಯನ್ನು ಖರೀದಿಸುತ್ತದೆ ಎನ್ನುವ ನಂಬಿಕೆಯಲ್ಲಿ ನಾವು ಬದುಕಲು ಸಾಧ್ಯವಿಲ್ಲ. ಖಾಸಗಿಯವರಿಗೆ ಗೋಧಿಯನ್ನು ಮಾರುತ್ತಿದ್ದೇವೆ. ಈ ವರ್ಷ ಲಾಕ್‌ಡೌನ್ ಇದ್ದ ಕಾರಣದಿಂದಾಗಿ ಅದು ಕೂಡಾ ಸಾಧ್ಯವಾಗಲಿಲ್ಲ. ಹಾಗಾಗಿ, ಗೋಧಿಯ ವಾಸ್ತಾವಿಕ ಬೆಲೆಯ ಅರ್ಧ ಬೆಲೆಗೆ ನಮ್ಮ ಫಸಲನ್ನು ಮಾರಬೇಕಾಯಿತು,” ಎಂದು ರಾಜೇಶ್ ಯಾದವ್ ಎಂಬ ಮಧುಬನಿ ಜಿಲ್ಲೆಯ ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಕೃಷಿ ಇಲಾಖೆಯ ಮಾಜಿ ಕಾರ್ಯದರ್ಶಿ ಸಿರಾಜ್ ಹುಸೈನ್, ರೈತರು ಹೆಚ್ಚಿನ ಬೆಲೆಗೆ ಗೋಧಿಯನ್ನು ಮಾರಲು ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಧ್ಯಪ್ರದೇಶ, ಒಡಿಶಾ ಹಾಗೂ ಛತ್ತೀಸ್‌ಘಢಗಳಲ್ಲಿ ರೈತರಿಗೆ ಬೆಂಬಲ ಬೆಲೆ ಸಿಗುವ ರೀತಿ ಅಲ್ಲಿನ ಸರ್ಕಾರಗಳು ಕ್ರಮ ಕೈಗೊಂಡಿವೆ. ಆದರೆ, ಬಿಹಾರದಲ್ಲಿ ಮಾತ್ರ ಅದು ಸಾಧ್ಯವಾಗಲಿಲ್ಲ. ಇಲ್ಲಿ ಗೋಧಿ ಬೆಳೆಗಾರರು ಈ ವರ್ಷ ತುಂಬಾ ನೋವು ಅನುಭವಿಸಿದ್ದಾರೆ,” ಎಂದು ಹೇಳಿದ್ದಾರೆ.
ಹುಸೈನ್ ಅವರು ಹೇಳಿದಂತೆ, ಈ ಬಾರಿ ಮಧ್ಯಪ್ರದೇಶವು ಪಂಜಾಬ್‌ಗಿಂತ ಹೆಚ್ಚಿನ ಗೋಧಿಯನ್ನು ಖರೀದಿಸಿದೆ. ಪಂಜಾಬ್ ಸರ್ಕಾರ 127 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಗೋಧಿ ಖರೀದಿಸಿದರೆ, ಮಧ್ಯಪ್ರದೇಶ ಸರ್ಕಾರವು 129 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಗೋಧಿಯನ್ನು ಖರೀದಿಸಿ ದಾಖಲೆ ನಿರ್ಮಿಸಿದೆ.












