ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ತಂದಿರಿಸಿ ಆತಂಕಕ್ಕೆ ಕಾರಣವಾಗಿದ್ದ ಬಾಂಬರ್ ಆದಿತ್ಯ ರಾವ್ ಪ್ರಕರಣದ ತನಿಖೆಯಲ್ಲಿ ಬಹು ಮುಖ್ಯವಾದ ತನಿಖಾ ಅಂಶವನ್ನೇ ತನಿಖಾ ತಂಡ ಕೈ ಬಿಟ್ಟ ಪರಿಣಾಮ ಇದೀಗ ರಾಜ್ಯ ಗೃಹ ಇಲಾಖೆ ಕೇಂದ್ರ ಸರಕಾರದ ಅನುಮತಿ ಪಡೆಯಲೆಂದು ಮುಂದಾಗಿದೆ. ಕಾರಣ, ತನಿಖಾ ತಂಡ ಮಹತ್ವದ ವಿಚಾರಗಳನ್ನೇ ತನ್ನ ಕಡತದಲ್ಲಿ ಉಲ್ಲೇಖಿಸಿಲ್ಲ ಅನ್ನೋದನ್ನ ಕಾನೂನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಆ ಎಲ್ಲಾ ತನಿಖೆಗೆ ಕೇಂದ್ರ ಸರಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ಕಾರಣ, ವಿಮಾನ ನಿಲ್ದಾಣ ಅನ್ನೋದು ಕೇಂದ್ರ ಸರಕಾರಕ್ಕೆ ಸಂಬಂಧಪಟ್ಟ ವಿಚಾರವಾಗಿದ್ದರಿಂದ ಮತ್ತು ಪ್ರಕರಣ ಅಲ್ಲೇ ನಡೆದಿದ್ದರಿಂದ ಈ ರೀತಿಯ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ.
ಘಟನೆ ಹಿನ್ನೆಲೆ:
ಇದೇ ವರ್ಷದ ಜನವರಿ 20 ರಂದು ಬೆಳಿಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾಥ ಬ್ಯಾಗ್ ವೊಂದು CISF ಸಿಬ್ಬಂದಿಗಳ ಕಣ್ಣಿಗೆ ಬಿದ್ದಿತ್ತು. ತಕ್ಷಣ ಎಚ್ಚೆತ್ತುಕೊಂಡಿದ್ದ ಭದ್ರತಾ ಅಧಿಕಾರಿಗಳು ಆ ಬ್ಯಾಗ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಬಾಂಬ್ ಎಂದು ಗೊತ್ತಾಗಿತ್ತು. ಆ ನಂತರ ಮಂಗಳೂರು ನಗರ ಪೊಲೀಸ್ ಆಯುಕ್ತ ಪಿಎಸ್ ಹರ್ಷ ನೇತೃತ್ವದಲ್ಲಿ ಅದನ್ನ ಅಲ್ಲೇ ಸಮೀಪದ ಬಜ್ಪೆಯ ಕೆಂಜಾರುವಿನ ಮೈದಾನದಲ್ಲಿ ಸ್ಫೋಟಿಸಲಾಗಿತ್ತು. ಅನಂತರ ತನಿಖೆಯ ಜವಾಬ್ದಾರಿಯನ್ನ ಪಣಂಬೂರು ಎಸಿಪಿ ಬೆಳ್ಳಿಯಪ್ಪ ಅವರಿಗೆ ವಹಿಸಿಕೊಡಲಾಗಿತ್ತು. ಪೊಲೀಸರ ಅದೃಷ್ಟವೆಂದರೆ ಬಾಂಬ್ ಇರಿಸಿ ಹೋಗಿದ್ದ ಆರೋಪಿ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ನೇರವಾಗಿ ಅಂದಿನ ಡಿಜಿಪಿ ಆಗಿದ್ದ ನೀಲಮಣಿ ರಾಜು ಅವರ ಮುಂದೆ ಹಾಜರಾಗಿ ತಾನೇ ಬಾಂಬ್ ಇರಿಸಿದ್ದಾಗಿ ತಿಳಿಸಿದ್ದ. ಆ ಮೇಲೆ ಬಂಧಿಸಿ ಕರೆ ತಂದಿದ್ದ ಪೊಲೀಸರು ಉಡುಪಿ, ಮಂಗಳೂರು ಅಂತೆಲ್ಲಾ ಸ್ಥಳ ಮಹಜರು ನಡೆಸಿ ಅಗತ್ಯ ದಾಖಲೆಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಇದೀಗ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ತನಿಖಾಧಿಕಾರಿಗಳ ನಡೆಸಿದ ತನಿಖೆಯ ಕಡತವನ್ನ ಕಾನೂನು ಅಧಿಕಾರಿಗಳ ಕೈಗಿತ್ತಿದ್ದಾರೆ ಇದರಲ್ಲಿ ತನಿಖಾ ತಂಡದ ಎಡವಟ್ಟು ಬಯಲಾಗಿದೆ.
ತನಿಖಾ ತಂಡ ಮಾಡಿದ ಎಡವಟ್ಟುಗಳೇನು..?
ವಿಮಾನ ನಿಲ್ದಾಣಗಳು ಕೇಂದ್ರ ಸರಕಾರದ ವ್ಯಾಪ್ತಿಗೆ ಬರೋದರಿಂದ ಅಲ್ಲಿ ನಡೆದಿರುವ ದುಷ್ಕೃತ್ಯ ಸಂಚು ಸಂಬಂಧ ಕೇಂದ್ರ ಸರಕಾರದ ಅನುಮತಿ ಪಡೆದು ತನಿಖಾ ತಂಡ ತನಿಖೆ ನಡೆಸಬೇಕಿತ್ತು. ಆದರೆ ಅದನ್ನು ಕೈ ಬಿಟ್ಟು ಹೊರಗಿನ ವಿಚಾರಣೆ ಎಲ್ಲವನ್ನೂ ತನಿಖಾ ತಂಡ ಕೈಗೆತ್ತಿಕೊಂಡಿತ್ತು. ಅದರಲ್ಲೂ ಇಂತಹ ಗಂಭೀರ ಪ್ರಕರಣದಲ್ಲಿ ತನಿಖಾ ತಂಡ ಮಹತ್ವದ ಅಂಶವನ್ನ ತನಿಖಾ ಕಡತದಲ್ಲಿ ಬಿಟ್ಟು ಹೋಗಿದೆ ಅನ್ನೋದನ್ನ ಕಾನೂನು ಅಧಿಕಾರಿಗಳು ರಾಜ್ಯ ಗೃಹ ಇಲಾಖೆ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತುಗೊಂಡ ರಾಜ್ಯ ಗೃಹ ಇಲಾಖೆ ಇದೀಗ ಮುಂದಿನ ಹಂತದ ವಿಚಾರಣೆ ನಡೆಸಲು ಕೇಂದ್ರ ಸರಕಾರದ ಅನುಮತಿ ಕೇಳಲು ಮುಂದಾಗಿದೆ. ಈ ಕುರಿತು The File ಎಂಬ ಕನ್ನಡ ಸುದ್ದಿ ಜಾಲತಾಣ ವಿಸ್ತೃತವಾದ ವರದಿ ಮಾಡಿತ್ತು.
ಸದ್ಯ ತನಿಖಾ ತಂಡ ಸಿದ್ಧಪಡಿಸಿರುವ ದೋಷಾರೋಪಣ ಪಟ್ಟಿಯಲ್ಲಿಯೇ ದೋಷಗಳನ್ನ ಗೃಹ ಇಲಾಖೆಯ ಕಾನೂನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದು ತನಿಖಾ ತಂಡದ ಉದಾಸೀನತೆಯೋ ಅಥವಾ ಗೊತ್ತಿಲ್ಲದೇ ನಡೆದ ಅಚಾತುರ್ಯವೋ ತಿಳಿಯದು. ಏನೇ ಇರಲಿ ತನಿಖಾ ತಂಡ ಆರೋಪ ಪಟ್ಟಿ ಸಲ್ಲಿಸಬೇಕಾದರೆ ಅದಕ್ಕೆ ಪೂರಕ ಸಾಕ್ಷ್ಯ ಒದಗಿಸಬೇಕಾಗುತ್ತದೆ. ಆದರೆ ಇಲ್ಲಿ ಅದೇ ಇಲ್ಲದಾಗಿದೆ. ಕಾರಣ, ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದರಿಂದ ದೋಷಾರೋಪಣ ಪಟ್ಟಿ ಸಲ್ಲಿಸುವ ಮುನ್ನ ಕೇಂದ್ರದ ಅನುಮತಿ ಅತ್ಯಗತ್ಯವಾಗುತ್ತದೆ.
ಕಾನೂನು ಬಾಹಿರ ಚಟುವಟಿಕೆಯ ನಾಗರಿಕ ವಿಮಾನಯಾನ ಸುರಕ್ಷತೆ ಮತ್ತು ಕಾನೂನು ಬಾಹಿರ ಕೃತ್ಯವನ್ನ ನಿಗ್ರಹಿಸುವ Suppression of unlawful Act against safety of civil aviation Act 1982 ಕಾಯ್ದೆಯಡಿ ಆದಿತ್ಯ ರಾವ್ ತಪ್ಪೆಸಗಿದ್ದು ತನಿಖೆಯಲ್ಲಿ ಸಾಬೀತಾಗಿದೆ. ಆದರೆ ಇದರ ದೋಷಾರೋಪಣಾ ಪಟ್ಟಿಯಲ್ಲಿ ದಾಖಲಿಸಲು ಕೇಂದ್ರ ಸರಕಾರದ ಅನುಮತಿ ಅಗತ್ಯವಿದೆ. ಆ ಕಾರಣಕ್ಕಾಗಿಯೇ ತನಿಖಾ ತಂಡ ಇದನ್ನು ಕೈ ಬಿಟ್ಟಿತ್ತೇ? ಅಥವಾ ಅದೇ ಕಾರಣಕ್ಕಾಗಿ ಕಾನೂನು ಅಧಿಕಾರಿಗಳ ಮೊರೆ ಹೋಗಿತ್ತೇ ಅನ್ನೋದು ದೃಢಪಟ್ಟಿಲ್ಲ.
ಆದರೆ ʼಪ್ರತಿಧ್ವನಿʼ ಗೆ ಲಭ್ಯವಾಗಿರುವ ಪ್ರತಿಯ ಪ್ರಕಾರ ಇಂತಹದ್ದೊಂದು ಅನುಮಾನ ಸಹಜವಾಗಿ ಕಾಡುತ್ತದೆ. ಯಾಕೆಂದರೆ ಗೃಹ ಇಲಾಖೆ ಕಾನೂನು ಅಧಿಕಾರಿಗಳು ರಾಜ್ಯ ಗೃಹ ಸಚಿವಾಲಯಕ್ಕೂ ಈ ಬಗ್ಗೆ ಮಾಹಿತಿ ನೀಡಿದ್ದು ರಾಜ್ಯ ಡಿಜಿ&ಐಜಿಪಿ ಅವರ ಮೂಲಕವೇ ಈ ಕುರಿತು ಕೇಂದ್ರ ಸರಕಾರಕ್ಕೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಆದ್ದರಿಂದ ಕೇಂದ್ರ ಸರಕಾರದ ಅನುಮತಿ ಪಡೆದ ಬಳಿಕ ಮತ್ತೊಮ್ಮೆ ಆದಿತ್ಯ ರಾವ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನ ಕಡತದಲ್ಲಿ ದಾಖಲಿಸಿ ಸಮಗ್ರ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.


ಆರಂಭದಿಂದಲೂ ಆದಿತ್ಯ ರಾವ್ ಬಾಂಬ್ ಇರಿಸಿದ ಪ್ರಕರಣ ಒಂದಿಲ್ಲೊಂದು ಗೊಂದಲ, ರಾಜಕೀಯ ಜಂಗೀಕುಸ್ತಿಗೂ ಕಾರಣವಾಗಿತ್ತು. ರಾಜ್ಯ ಗೃಹ ಸಚಿವರು ತನಿಖೆ ಆರಂಭಕ್ಕೂ ಮುನ್ನವೇ ʼಆದಿತ್ಯ ರಾವ್ ಮಾನಸಿಕʼ ಎಂದು ಘೋಷಿಸಿದ್ದರು. ಅಲ್ಲದೇ ಸಿಎಎ ವಿರೋಧಿ ಪ್ರತಿಭಟನೆಗೂ, ಬಾಂಬ್ ಇರಿಸುವಿಕೆ ಪ್ರಕರಣಕ್ಕೂ ಸಂಬಂಧ ಕಲ್ಪಿಸಿ ನಾಡಿನ ಪತ್ರಿಕೆಯೊಂದು ಹೆಡ್ ಲೈನ್ ಹಾಕಿ ಕೋಮು ವೈಷಮ್ಯ ಹುಟ್ಟಿಸಲು ಪ್ರಯತ್ನಿಸಿತ್ತು. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರಂತೂ, ತನಿಖೆಗೂ ಮುನ್ನವೇ “ಏರ್‌ಪೋರ್ಟ್ ನಲ್ಲಿ ನಡೆದಿದ್ದು ಪೊಲೀಸರ ಅಣಕು ಕಾರ್ಯಾಚರಣೆ” ಎಂದಿದ್ದರು. ಅಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಅಲ್ಲಿ ಇದ್ದಿದ್ದು ಸ್ಫೋಟಕವಲ್ಲ, ಮಿಣಿ ಮಿಣಿ ಪೌಡರ್” ಎನ್ನುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದರು. ಇನ್ನು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಬಾಂಬ್ ಇರಿಸಿರುವ ಪ್ರಕರಣಕ್ಕೂ ಸಿರಿಯಾ, ಕಾಶ್ಮೀರದ ಭಯೋತ್ಪಾದನಾ ಸಂಘಟನೆಗಳಿಗೂ ಲಿಂಕ್ ಮಾಡಿದ್ದರು.
Also Read: ಮಂಗಳೂರು ವಿಮಾನ ನಿಲ್ದಾಣದ “ಸ್ಪೋಟಕ ಸುದ್ದಿ”ಯ ಹಿಂದು ಮುಂದೇನು ?
ಅದಾಗಲೇ 2019ರ ಡಿಸೆಂಬರ್ 19 ರಂದು ಸಿಎಎ ವಿರೋಧಿ ಪ್ರತಿಭಟನೆ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆಯಿಂದಾಗಿ ಕರಾವಳಿಯಾದ್ಯಂತ ಮುಸ್ಲಿಂ ಸಮುದಾಯದಲ್ಲಿ ಪೊಲೀಸರು ವಿರುದ್ಧ ಬಹಿರಂಗ ಆಕ್ರೋಶಗಳೂ ವ್ಯಕ್ತವಾಗಿದ್ದವು. ಈ ಘಟನೆ ಮಾಸುವ ಮುನ್ನವೇ ಬಾಂಬ್ ಪತ್ತೆ ಪ್ರಕರಣ ನಡೆದಿತ್ತು. ಇದನ್ನ ವ್ಯವಸ್ಥಿತವಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರ ತಲೆಗೆ ಕಟ್ಟಲು ಸಂಚು ಕೂಡಾ ನಡೆದಿತ್ತು. ಆದರೆ ಕೊನೆಗೇ ಬಾಂಬ್ ಇರಿಸಿದ್ದ ಆದಿತ್ಯ ರಾವ್ ಶರಣಾಗತಿಯಿಂದ ಅದಕ್ಕೊಂದು ಪೂರ್ಣ ವಿರಾಮ ಬೀಳುವಂತಾಗಿತ್ತು.
Also Read: ಮಂಗಳೂರು ಗೋಲಿಬಾರ್: ಪ್ರತಿಭಟನೆಯ ಹಾದಿಯ ಕಲ್ಲು ಮುಳ್ಳುಗಳು
ಆದರೆ ದಿನಗಳು ಉರುಳಿದಂತೆ ಆದಿತ್ಯ ರಾವ್ ಪ್ರಕರಣದ ತನಿಖೆ ಹಾದಿ ಜನರಿಗೆ ಮರೆತು ಹೋಗಿದೆ. ಆದ್ದರಿಂದ ಕೇಂದ್ರ ಸರಕಾರದ ಕದ ತಟ್ಟುವ ಈ ಹೊತ್ತಿನಲ್ಲಿ ಮತ್ತೆ ಆದಿತ್ಯ ರಾವ್ ಮಾಡಿದ ಕೃತ್ಯ ಹಾಗೂ ರಾಜಕೀಯವಾಗಿ ಅದು ಪಡೆದುಕೊಂಡ ತಿರುವುಗಳೆಲ್ಲ ಮತ್ತೆ ಮುನ್ನೆಲೆ ಬರುವಂತದ್ದೇ. ಒಟ್ಟಿನಲ್ಲಿ ತನಿಖಾ ತಂಡ ಮಾಡಿದ ಎಡವಟ್ಟೋ, ಅಥವಾ ಕಾನೂನು ಅಧಿಕಾರಿಗಳ ಸಲಹೆಗೆ ಮೊರೆ ಹೋಗಿತ್ತೇ ಅನ್ನೋದಕ್ಕೆ ರಾಜ್ಯ ಸರಕಾರವೇ ಉತ್ತರ ನೀಡಬೇಕಿದೆ.