‘ಕೋವಿಡ್-19’ ಸೋಂಕಿನಿಂದ ಉದ್ಭವಿಸಿರುವ ಸಂಕಷ್ಟಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರುಪಾಯಿ ಪರಿಹಾರ ಕ್ರಮಗಳನ್ನು ಪ್ರಕಟಿಸಿದ ಬೆನ್ನಲ್ಲೆ, ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕತೆ ಚೇತರಿಕೆಗಾಗಿ ರೆಪೊದರ ಕಡಿತ, ಎಲ್ಲಾ ರೀತಿಯ ಸಾಲಗಳ ಪಾವತಿಗೆ ಮೂರು ತಿಂಗಳ ವಿನಾಯಿತಿ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ.
ರೆಪೊದರವನ್ನು 75 ಅಂಶಗಳಷ್ಟು ಅಂದರೆ ಶೇ. 0.75ರಷ್ಟು ಕಡಿತಮಾಡಿದೆ. ಇದರೊಂದಿಗೆ ರೆಪೊದರವು ಐತಿಹಾಸಿಕ ಕನಿಷ್ಟ ಮಟ್ಟ ಶೇ.4.40ಕ್ಕೆ ಇಳಿದಿದೆ. ಇದೇ ವೇಳೆ ಆರ್ಬಿಐ ರಿವರ್ಸ್ ರೆಪೊದರವನ್ನು 90 ಅಂಶಗಳಷ್ಟು ಅಂದರೆ ಶೇ.0.90ರಷ್ಟು ತಗ್ಗಿಸಿದ್ದು ಶೇ.4ಕ್ಕೆ ಇಳಿದಿದೆ. ನಗದು ಮೀಸಲು ಪ್ರಮಾಣವನ್ನು(ಸಿಆರ್ಆರ್) ಶೇ.1ರಷ್ಟು ತಗ್ಗಿಸಿದ್ದು ಶೇ.3ಕ್ಕೆ ಇಳಿದಿದೆ. ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲದ ಮೇಲಿನ ಬಡ್ಡಿದರವೇ ರೆಪೊದರ. ಬ್ಯಾಂಕುಗಳು ಆರ್ಬಿಐನಲ್ಲಿ ಇಟ್ಟಿರುವ ಹಣಕ್ಕೆ (ನಗದು ಮೀಸಲು) ಆರ್ಬಿಐ ನೀಡುವ ಬಡ್ಡಿದರವೇ ರಿವರ್ಸ್ ರೆಪೊದರ.
ರೆಪೊದರ ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಗ್ಗಿರುವುದರಿಂದ ಬ್ಯಾಂಕುಗಳಿಗೆ ಅತಿ ಕಡಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗಲಿದ್ದು, ಗ್ರಾಹಕರಿಗೆ ಅದರಿಂದ ಹೆಚ್ಚಿನ ಲಾಭವಾಗಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಗ್ರಾಹಕರಿಗೆ ಕಡಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದೆ. ಈಗಾಗಲೇ ಸಾಲ ಮಾಡಿರುವ ಗ್ರಾಹಕರ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳ ಮೇಲಿನ ಇಎಂಇ (ಮಾಸಿಕ ಸಮಾನ ಕಂತು) ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ. ಇದು ದೀರ್ಘಕಾಲದಲ್ಲಿ ಗ್ರಾಹಕರು ಹೆಚ್ಚಿನ ಹಣವನ್ನು ವಿನಿಯೋಗಿಸಲು ಅನುವು ಮಾಡಿಕೊಡಲಿದ್ದು, ಉಪಬೋಗವು ವೃದ್ಧಿಸುವುದರಿಂದ ಆರ್ಥಿಕತೆಗೆ ಚೇತರಿಕೆ ಬರುತ್ತದೆ.
ನಗದು ಮೀಸಲು ಪ್ರಮಾಣವನ್ನು ಶೇ.1ರಷ್ಟು ತಗ್ಗಿಸಿರುವುದರಿಂದ ಬ್ಯಾಂಕುಗಳಿಗೆ ಹೆಚ್ಚುವರಿಯಾಗಿ 1.30 ಲಕ್ಷ ಕೋಟಿ ರುಪಾಯಿ ನಗದು ಲಭ್ಯವಾಗಲಿದ್ದು, ಈ ಬೃಹತ್ ಮೊತ್ತವನ್ನು ಬ್ಯಾಂಕುಗಳು ಸಾಲ ವಿತರಣೆಗೆ ಬಳಸುವುದರಿಂದ ಮಾರುಕಟ್ಟೆಗೆ ನಗದು ಹರಿವಿನ ಪ್ರಮಾಣ ಹೆಚ್ಚಲಿದೆ. ಇದು ಸಂಕಷ್ಟದಲ್ಲಿರುವ ಆರ್ಥಿಕತೆ ಚೇತರಿಕೆಗೆ ಕೀಲೆಣ್ಣೆಯಂತೆ ಕಾರ್ಯನಿರ್ವಹಿಸಲಿದೆ. ನಗದು ಹೊಂದಾಣಿಕೆ ಸೌಲಭ್ಯ (ಎಲ್ಎಎಫ್)ವನ್ನು 90 ಅಂಶಗಳಷ್ಟು ಅಂದರೆ ಶೇ.0.9ರಷ್ಟು ತಗ್ಗಿಸಿದ್ದು, ಶೇ.4ಕ್ಕೆ ಇಳಿದಿದೆ. ಈ ಕ್ರಮದಿಂದಾಗಿ ನಗದು ಹರಿವು ಮತ್ತಷ್ಟು ಸಲೀಸಾಗಲಿದೆ.
ಕೋವಿಡ್-19 ಸೋಂಕು ದೇಶವ್ಯಾಪಿ ತ್ವರಿತಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಗಿದತ ಸಮಯಕ್ಕಿಂತ ಹತ್ತು ದಿನ ಮುಂಚಿತವಾಗಿಯೇ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆ ನಡೆಸಿದ ಆರ್ಬಿಐ ರೆಪೊದರ, ರಿವರ್ಸ್ ರೆಪೊದರ, ಸಿಆರ್ಆರ್ ಮತ್ತು ಎಲ್ಎಎಫ್ ಕಡಿತ ಮಾಡುವ ಮಹತ್ತರವಾದ ನಿರ್ಧಾರಗಳನ್ನು ಕೈಗೊಂಡಿದೆ. ಶುಕ್ರವಾರ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದರು.
ಹಣಕಾಸು ನೀತಿ ಸಮಿತಿಯು ಕೈಗೊಂಡಿರುವ ಮತ್ತೊಂದು ಪ್ರಮುಖ ನಿರ್ಧಾರ ಎಂದರೆ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಗ್ರಾಹಕರು ಪಡೆದಿರುವ ಎಲ್ಲಾ ರೀತಿಯ ಸಾಲಗಳ ಮೇಲಿನ ಅಸಲು ಮತ್ತು ಬಡ್ಡಿ ಪಾವತಿಗೆ ಮೂರು ತಿಂಗಳ ವಿನಾಯಿತಿ ನೀಡಲಾಗಿದೆ. ಅಂದರೆ, ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಗ್ರಾಹಕರು ಪಾವತಿಸಬೇಕಾದ ಸಾಲ ಮತ್ತು ಬಡ್ಡಿಯನ್ನು ಜುಲೈ ನಂತರ ಪಾವತಿಸಬಹುದಾಗಿದೆ. ಅಷ್ಟರ ಮಟ್ಟಿಗೆ ಸಂಕಷ್ಟದಲ್ಲಿರುವ ಸಾಲಿಗರಿಗೆ ಆರ್ಬಿಐ ಆಸರೆ ನೀಡಿದಂತಾಗಿದೆ. ಈ ಸೌಲಭ್ಯವು ಎಲ್ಲಾ ರೀತಿಯ ರೀಟೇಲ್ ಸಾಲಗಳಿಗೆ ಅನ್ವಯವಾಗುತ್ತದೆ. ಆದರೆ, ಕಾರ್ಪೊರೆಟ್ ಮತ್ತು ಉದ್ದಿಮೆಗಳು ಪಡೆದ ಸಾಲಗಳಿಗೆ ಅನ್ವಯಿಸುವುದಿಲ್ಲ.
ಎಲ್ಲಾ ಬ್ಯಾಂಕುಗಳಲ್ಲೂ ನಗದು ಹರಿವು ಅಗತ್ಯ ಪ್ರಮಾಣದಲ್ಲಿದ್ದು, ಗ್ರಾಹಕರು ಆತಂಕದಿಂದ ಅನಗತ್ಯವಾಗಿ ಹೆಚ್ಚಾಗಿ ನಗದು ಹಿಂಪಡೆಯುವ ಅಗತ್ಯವಿಲ್ಲ. ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ. ಅವರ ಹಣ ಸುರಕ್ಷಿತವಾಗಿದೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯೂ ಸುರಕ್ಷಿತವಾಗಿದೆ ಎಂದೂ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದರು. ಆರ್ಥಿಕತೆ ಉತ್ತೇಜಿಸುವ ಸಲುವಾಗಿ ಹಣಕಾಸು ನೀತಿ ಸಮಿತಿ ಮತ್ತು ಆರ್ಬಿಐ ಕೈಗೊಂಡಿರುವ ನಿರ್ಧಾರಗಳನ್ನು ಸಮಗ್ರ ಚೇತರಿಕೆ ಕ್ರಮಗಳೆಂದು ಪರಿಗಣಿಸಬೇಕು. ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ನಗದು ಹರಿವು ಒದಗಿಸುವುದು, ಕೋವಿಡ್-19 ಹಾವಳಿಯಿಂದ ಉದ್ಭವಿಸಿರುವ ಹಣಕಾಸು ಮಾರುಕಟ್ಟೆ ಒತ್ತಡಗಳನ್ನು ತಗ್ಗಿಸುವುದಾಗಿದೆ ಎಂದು ವಿವರಿಸಿದರು.
ಆರ್ಥಿಕ ಮುನ್ನೋಟವು ಹೆಚ್ಚಿನ ಅಸ್ಥಿರತೆ ಮತ್ತು ನೇತ್ಯಾತ್ಮಕವಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ನಗದನ್ನು ಒದಗಿಸಲು ಆರ್ಬಿಐ ಹಲವು ಕ್ರಮಗಳನ್ನು ಕೈಗೊಂಡಿದೆ. ದೇಶೀಯ ಆರ್ಥಿಕತೆಯನ್ನು ಸಂರಕ್ಷಿಸುವುದಕ್ಕೆ ಆದ್ಯತೆ ಮೇಲೆ ಪ್ರಬಲ ಮತ್ತು ಗುರಿಯಾಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಭಾಗೀದಾರರು ಸೋಂಕಿನ ವಿರುದ್ಧ ಹೋರಾಡಬೇಕಿದೆ, ಬ್ಯಾಂಕುಗಳು ಸತತವಾಗಿ ಸಾಲ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಭಾರತದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಹಲವು ವಲಯಗಳ ಮೇಲೆ ತೀವ್ರ ಒತ್ತಡಬಿದ್ದಿದೆ ಎಂದೂ ಶಕ್ತಿಕಾಂತ ದಾಸ್ ವಿವರಿಸಿದ್ದಾರೆ.
ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಶೇ.0.75ರಷ್ಟು ಬಡ್ಡಿದರ ತಗ್ಗಿಸುವ ನಿರ್ಧಾರವನ್ನು 4:2ರ ಬಹುಮತದೊಂದಿಗೆ ಅಂಗೀಕರಿಸಲಾಗಿದೆ. ಆರ್ಬಿಐ ಗವರ್ನರ್ ಸೇರಿದಂತೆ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ಬೃಹತ್ ಪ್ರಮಾಣದ ಬಡ್ಡಿದರ ಕಡಿತಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ವ್ಯಕ್ತವಾಯಿತು. ನಾಲ್ವರು ಸದಸ್ಯರು ಹೆಚ್ಚಿನ ಬಡ್ಡಿದರ ಕಡಿತದ ಪರವಾಗಿ ಮತಚಲಾಯಿಸಿದ್ದಾರೆ.
ಗ್ರಾಹಕರಿಗೆ ಹೆಚ್ಚಿನ ಲಾಭ
ಆರ್ಬಿಐ ಕೈಗೊಂಡಿರುವ ಕ್ರಮಗಳಿಂದಾಗಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ. ಗೃಹ ಸಾಲ, ವಾಹನ ಸಾಲ, ಗೃಹೋಪಯೋಗಿ ವಸ್ತುಗಳ ಸಾಲ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿದರವು ಗಣನೀಯವಾಗಿ ತಗ್ಗಲಿದೆ. ಇದುವರೆಗೂ ಕುಸಿದಿದ್ದ ಬೇಡಿಕೆಯು ಕ್ರಮೇಣ ಚೇತರಿಸಿಕೊಳ್ಳುವ ನಿರೀಕ್ಷೆ ಮಾರುಕಟ್ಟೆಯಲ್ಲಿದೆ. ಕುಸಿದಿರುವ ವಾಹನಗಳ ಮಾರಾಟ, ಗೃಹೋಪಯೋಗಿ ವಸ್ತುಗಳು, ಮಾರಾಟವಾಗದೇ ಉಳಿದ ಲಕ್ಷಾಂತರ ವಸತಿ ಘಟಕಗಳಿಗೆ ಬೇಡಿಕೆಯನ್ನು ನಿರೀಕ್ಷಿಸಲಾಗಿದೆ. ಇದು ತಕ್ಷಣವೇ ಆಗದಿದ್ದರೂ ಕೋವಿಡ್-19 ಹಾವಳಿ ತಗ್ಗಿ, ಆರ್ಥಿಕತೆಯು ಸರಿದಾರಿಗೆ ಬಂದ ನಂತರ ಸಾಧ್ಯವಾಗಲಿದೆ. ಆದರೆ, ಎಲ್ಲಕ್ಕಿಂತ ಮಿಗಿಲಾಗಿ, ಆರ್ಥಿಕತೆ ಕುಸಿತದಿಂದ ಕಂಗಾಲಾಗಿರುವ ಗ್ರಾಹಕರಿಗೆ ಸಲೀಸಾಗಿ ಸಾಲ ಒದಗಿಸಲು ಆರ್ಬಿಐ ಬಡ್ಡಿದರ ತಗ್ಗಿಸುವುದರ ಜತೆಗೆ ನಗದು ಹರಿವು ಸಲೀಸಾಗುವಂತೆ ಮಾಡಿರುವುದು ನಿರ್ಣಾಯಕ ಕ್ರಮವಾಗಿದೆ. ಈ ಕ್ರಮಗಳಿಂದಾಗಿ ಪ್ರಸಕ್ತ ತ್ರೈಮಾಸಿಕ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಅದರ ಫಲ ಲಭ್ಯವಾಗದೇ ಇದ್ದರು 2020-21ರ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರ್ಥಿಕತೆಯ ಚೇತರಿಕೆಯು ನಿಚ್ಛಳವಾಗಿ ಪ್ರತಿಫಲಿಸಲಿದೆ.