ದೇಶವು ಪ್ರಸಕ್ತ ಎದುರಿಸುತ್ತಿರುವ ಆರ್ಥಿಕ ಮಂದಗತಿಯು ಸಾಧರಣವಾದುದಲ್ಲಾ ಎಂದು ನರೇಂದ್ರ ಮೋದಿ ಸರ್ಕಾರದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಎಚ್ಚರಿಸಿದ್ದಾರೆ. ಭಾರತದ ವಾಸ್ತವಿಕ ಜಿಡಿಪಿಯು ಶೇ.2.5ರಷ್ಟಾಗಬಹುದು ಎಂದು ಈ ಹಿಂದೆ ಪ್ರತಿಪಾದಿಸಿದ್ದ ಅರವಿಂದ್ ಸುಬ್ರಮಣಿಯನ್, ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಅಂಕಿಅಂಶಗಳನ್ನು ದೇಶದ ಆರ್ಥಿಕತೆಯ ಸಮೃದ್ಧಿಯ ಸಂಪೂರ್ಣ ಸೂಚಕಗಳಾಗಿ ನಂಬುವುದರ ವಿರುದ್ಧವೂ ಎಚ್ಚರಿಕೆ ನೀಡಿದ್ದು, ಪ್ರಸ್ತುತ ಜಿಡಿಪಿ ಅಂಕಿ ಅಂಶಗಳನ್ನು ಸ್ವಲ್ಪ ಎಚ್ಚರಿಕೆಯಿಂದ ಅಳೆದುತೂಗಿ ನೋಡಬೇಕೆಂಬ ಅಂಶವನ್ನು ಜಾಗತಿಕವಾಗಿ ಒಪ್ಪಿಕೊಳ್ಳಲಲಾಗಿದೆ ಎಂದೂ ಹೇಳಿದ್ದಾರೆ.
ಅದರರ್ಥ ತೀವ್ರ ಆರ್ಥಿಕ ಮಂದಗತಿ ಎದುರಿಸುತ್ತಿರುವ ಭಾರತದ ಜಿಡಿಪಿಯು ಪ್ರಸಕ್ತ ಘೋಷಿತ ಶೇ.4.5ಕ್ಕಿಂತಲೂ ಸುಮಾರು ಶೇ.2ರಷ್ಟು ಕಡಮೆ ಆಗಲಿದೆ ಎಂಬುದು ಅರವಿಂದ್ ಸುಬ್ರಮಣಿಯನ್ ಅವರ ಪ್ರತಿಪಾದನೆ ಆಗಿದೆ.
ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರು ಮೋದಿ ಸರ್ಕಾರದ ಹಲವು ಆರ್ಥಿಕ ನೀತಿಗಳನ್ನು ಕಟುವಾಗಿ ವಿಮರ್ಶೆ ಮಾಡಿದ್ದವರು. ಸರಕು ಮತ್ತು ಸೇವಾ ತೆರಿಗೆಯನ್ನು ಶ್ಲಾಘಿಸುತ್ತಲೇ ಅದನ್ನು ಜಾರಿ ಮಾಡುತ್ತಿರುವ ರೀತಿ ಮತ್ತು ಹೆಚ್ಚಿನ ಹಂತಗಳ ತೆರಿಗೆದರ ಹಾಕುವುದರ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮೋದಿ ಸರ್ಕಾರದ ವಿವಾದಾತ್ಮಕ ನಿರ್ಧಾರವಾದ ಅಪನಗದೀಕರಣವನ್ನು ಅರವಿಂದ್ ಸುಬ್ರಮಣಿಯನ್ ಕಟುವಾಗಿ ವಿಮರ್ಶಿಸಿದ್ದರು. ತಮ್ಮ ಅವಧಿ ಮುಗಿಯುವ ಮುನ್ನವೇ ಹುದ್ದೆ ತೊರೆದು ಹೋಗಿದ್ದರು. ಹಲವು ಪ್ರಮುಖ ಆರ್ಥಿಕ ನಿರ್ಧಾರಗಳ ಜಾರಿಗೆ ಮುನ್ನ ತಮ್ಮೊಂದಿಗೆ ಸಮಾಲೋಚಿಸಲಿಲ್ಲ ಎಂಬ ಅಸಮಾಧಾನವೂ ಅವರಲ್ಲಿತ್ತು.
ಎನ್ಡಿಟಿವಿಯ ಡಾ.ಪ್ರಣಯ್ ರಾಯ್ ಅವರಿಗೆ ನೀಡಿದ ಸುದೀರ್ಘ ಸಂದರ್ಶನದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಆಮೂಲಾಗ್ರ ಚರ್ಚಿಸಿರುವ ಸುಬ್ರಮಣಿಯನ್ ಅವರು ಈ ಹಿಂದೆ ಪ್ರತಿಪಾದಿಸಿದ್ದ 2011-2016ರ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಅಂಕಿಅಂಶಗಳು ಅತಿ ಉತ್ಪ್ರೇಕ್ಷಿತವಾಗಿದ್ದು ವಾಸ್ತವಿಕ ಜಿಡಿಪಿಗಿಂತ ಶೇ.2.5ರಷ್ಟು ಹೆಚ್ಚಿಗೆ ಇದೆ ಎಂದು ಪ್ರತಿಬಿಂಬಿಸಲಾಗಿದೆ ಎಂಬ ವಾದವನ್ನು ತಮ್ಮ ಸಂದರ್ಶನದುದ್ದಕ್ಕೂ ಪರೋಕ್ಷವಾಗಿ ಸಮರ್ಥಿಸಿದ್ದಾರೆ. ತೈಲೇತರ ಆಮದು ಮತ್ತು ರಫ್ತು ಕ್ರಮವಾಗಿ ಶೇ.6 ಮತ್ತು 1ರಷ್ಟು ಕುಸಿದಿರುವುದು, ಬಂಡವಾಳ ಸರಕುಗಳ ಉದ್ಯಮದ ಬೆಳವಣಿಗೆಯು ಶೇ.10ರಷ್ಟು ಮತ್ತು ಗ್ರಾಹಕ ಉಪಭೋಗ ಸರಕುಗಳ ಉತ್ಪಾದನೆ ಬೆಳವಣಿಗೆಯು ಎರಡು ವರ್ಷಗಳ ಹಿಂದೆ ಶೇ.5ರಷ್ಟು ಇದ್ದದ್ದು ಈಗ ಶೇ.1ಕ್ಕೆ ಕುಗ್ಗಿರುವ ಅಂಕಿಅಂಶಗಳು ವಾಸ್ತವಿಕ ಆರ್ಥಿಕ ಅಭಿವೃದ್ಧಿಯ ಉತ್ತಮ ಸೂಚಕಗಳಾಗಿವೆ ಎಂದೂ ಹೇಳಿದ್ದಾರೆ.
“ರಫ್ತು ಅಂಕಿಅಂಶಗಳು, ಗ್ರಾಹಕ ಸರಕುಗಳ ಅಂಕಿಅಂಶಗಳು, ತೆರಿಗೆ ಮೂಲದ ಆದಾಯದ ಅಂಕಿಅಂಶಗಳು ಸಹ ಇವೆ, ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಲೆಕ್ಕಹಾಕುವಾಗ ಈ ಎಲ್ಲಾ ಸೂಚಕಗಳನ್ನು ತೆಗೆದುಕೊಂಡು ನಂತರ ಮಂದಗತಿಯ ಆರ್ಥಿಕತೆ ವರ್ಷಗಳ ಅವಧಿಯಾದ 2000- 2002 ರವರೆಗೆ ತುಲನಾತ್ಮಕವಾಗಿ ಅವಲೋಕಿಸಿದಾಗ ಜಿಡಿಪಿ ಬೆಳವಣಿಗೆ ಶೇಕಡಾ 4.5 ರಷ್ಟಿದ್ದರೂ ಮೇಲ್ಕಂಡ ಎಲ್ಲಾ ಸೂಚಕಗಳು ಆಗ ಧನಾತ್ಮಕವಾಗಿದ್ದವು ಮತ್ತು ಪ್ರಸ್ತುತ ಈ ಸೂಚಕಗಳು ಒಂದೋ ಋಣಾತ್ಮಕ ಬೆಳವಣಿಗೆ ದಾಖಲಿಸಿವೆ ಇಲ್ಲವೇ ತೀರಾ ಅತ್ಯಲ್ಪ ಬೆಳವಣಿಗೆ ಸಾಧಿಸಿವೆ, ಇದು ಕೇವಲ ಸಾಧಾರಣ ಆರ್ಥಿಕ ಮಂದಗತಿಯಲ್ಲ ಇದು ಭಾರತದ ಆರ್ಥಿಕ ಮಹಾ ಮಂದಗತಿ ಎಂದು ಅರವಿಂದ್ ಸುಬ್ರಮಣಿಯನ್ ಬಣ್ಣಿಸಿದ್ದಾರೆ.
ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ 2018-19ನೇ ಸಾಲಿನಲ್ಲಿ ಶೇ.8ರಷ್ಟಿದ್ದ ಜಿಡಿಪಿ ನಂತರ ತ್ರೈಮಾಸಿಕಗಳಲ್ಲಿ ತ್ವರಿತವಾಗಿ ಕುಸಿತ ಕಂಡಿತ್ತು ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಗ್ಗಿಹೋಗಿದೆ.
“ಆರ್ಥಿಕತೆ ಪ್ರಮುಖ ಸೂಚಕಗಳು ತೀವ್ರ ಇಳಿಜಾರಿನಲ್ಲಿವೆ ಇಲ್ಲವೇ ಏರುಹಾದಿಯ ಆಜುಬಾಜಿನಲ್ಲಿವೆ, ಆರ್ಥಿಕತೆಯ ನೈಜ ವಲಯಗಳಿಗೆ ಹೋಲಿಸಿದಾಗ, ಉದ್ಯೋಗ ಸೃಷ್ಟಿಯನ್ನು ಉದ್ದೀಪಿಸುವ ಬೆಳವಣಿಗೆ, ಹೂಡಿಕೆ, ರಫ್ತು ಮತ್ತು ಆಮದು ಎತ್ತ ಸಾಗಿದೆ ಎಂಬುದು ಮತ್ತು ಸರ್ಕಾರವು ಸಾಮಾಜಿಕ ಕಾರ್ಯಕ್ರಮಗಳಿಗೆ ಎಷ್ಟು ಆದಾಯವನ್ನು ಖರ್ಚು ಮಾಡಬೇಕೆಂಬುದೂ ಸಹ ನಿರ್ಣಾಯಕ ಸಂಗತಿ. ನೈಜ ವಲಯದ ಆರ್ಥಿಕತೆ ನಿಧಾನವಾಗುತ್ತಿದೆ ಅಷ್ಟೇ ಅಲ್ಲಾ ಉದ್ಯೋಗ ಸೃಷ್ಟಿ, ಜನರ ಆದಾಯ, ಜನರ ವೇತನ ಮತ್ತು ಸರ್ಕಾರದ ತೆರಿಗೆ ಆದಾಯವೂ ತಗ್ಗುತ್ತಿದೆ ಎಂಬುದು ಎಂದು ನಿಮಗೇ ತಿಳಿದಿದೆ ” ಎಂದು ಸುಬ್ರಮಣಿಯನ್ ವಿವರಿಸಿದ್ದಾರೆ.
ಜುಲೈನಲ್ಲಿ ಸುಬ್ರಮಣಿಯನ್ ಅವರು ದೇಶದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿರುವ ಪ್ರಮುಖ ಆರ್ಥಿಕ ಸೂಚಕಗಳ ಗುಚ್ಚವನ್ನುಸೂಚಿಸಿದ್ದರು. ಈ ಕಾರಣಕ್ಕಾಗಿ ಆರ್ಥಿಕ ಬೆಳವಣಿಗೆಯ ದರಗಳು “ಕುಸಿದಿವೆ” ಎಂಬುದನ್ನು ತಿಳಿಸಿ, ಮತ್ತು “ಈ ಎಲ್ಲಾ ದೊಡ್ಡ ಆಘಾತಗಳ ಹೊರತಾಗಿಯೂ ಆರ್ಥಿಕ ಬೆಳವಣಿಗೆಯು ವಾಸ್ತವಿಕವಾಗಿ ಕುಸಿಯಬೇಕಿದ್ದ ಪ್ರಮಾಣಕ್ಕಿಂತ ತೀರಾ ಅತ್ಯಲ್ಪ ಪ್ರಮಾಣದಲ್ಲಿ ಅಂದರೆ ಇದು ಶೇಕಡಾ 7.7 ರಿಂದ 6.9 ಕ್ಕೆ ಇಳಿದಿದೆ. ಈ ಐದು ದೊಡ್ಡ ಪ್ರತಿಕೂಲ ಆಘಾತಗಳ ನಡುವೆಯೂ ಜಿಡಿಪಿ ಬೆಳವಣಿಗೆಯ ಮೇಲೆ ಅಷ್ಟು ಅತ್ಯಲ್ಪ ಕಡಿಮೆ ಪರಿಣಾಮ ಬೀರಿರುವುದು ನಿಜವಾಗಿಯೂ ಸಾಧ್ಯವೇ? ” ಎಂದು ಪ್ರಶ್ನಿಸಿದ್ದರು ಮತ್ತು ಆ ಮೂಲಕ ಭಾರತ ಸರ್ಕಾರದ ಅಂಕಿ ಅಂಶಗಳ ವಿಶ್ವಾಸಾರ್ಹತೆಯನ್ನೇ ಶಂಕಿಸಿದ್ದರು. ಆಗ ಕೇಂದ್ರ ಸರ್ಕಾರವು ಸುಬ್ರಮಣಿಯನ್ ಅವರ ಉತ್ಪಾದಕತೆ, ಉಪಭೋಗ ಮತ್ತಿತರ ಅಂಶಗಳ ಸಂಶೋಧನಾ ವಿಧಾನವನ್ನೇ ಟೀಕಿಸಿ, ಭಾರತವು ಸುಸ್ಥಿರ ಉಪಭೋಗಾಧಾರಿತ ಬೆಳವಣಿಗೆಯ ವಿಶಿಷ್ಟ ಮಾದರಿಯನ್ನು ರೂಪಿಸಿಕೊಂಡಿದೆ, ಇದು ಮೇಲ್ನೋಟಕ್ಕೆ ಕಾಣುವುದಕ್ಕಿಂತಲೂ ಹೆಚ್ಚಿನ ಗ್ರಾಹಕ ವಿಶ್ವಾಸದಲ್ಲಿ ಪ್ರತಿಬಿಂಬಿತವಾಗಿದೆ ಎಂದು ಹೇಳಿತ್ತು. ಇಷ್ಟಾದರೂ ಕಳೆದ ವರ್ಷದ ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದ್ದ ಸಮೀಕ್ಷೆ ಪ್ರಕಾರ, ಶೇ.48ರಷ್ಟು ಜನರು ಹಿಂದಿನ 12 ತಿಂಗಳಿಗೆ ಹೋಲಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಅಭಿಪ್ರಾಯ ಪಟ್ಟಿದ್ದರು.
ಅರವಿಂದ್ ಸುಬ್ರಮಣಿಯನ್ ಅವರು ಹೇಳಿದ್ದೇನು?
ತೈಲ ದರ ಇಳಿಕೆಯು ದೇಶಕ್ಕೆ ಅನುಕೂಲವಾಗಿದೆ. ಕೃಷಿ ಆದಾಯ ತಗ್ಗಿದೆ. ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಅಲ್ಪಾವಧಿ ವ್ಯತಿರಿಕ್ತ ಪರಿಣಾಮ ಬೀರಿದೆ. ಬ್ಯಾಂಕುಗಳ ದ್ವಿ ಲಾಭ-ನಷ್ಟ ಪಟ್ಟಿ ಈಗ ಇದು ನಾಲ್ಕು ಲಾಭ- ನಷ್ಟಪಟ್ಟಿಗೇರಿದೆ. ಮೂಲಭೂತ ಸೌಲಭ್ಯವಲಯಕ್ಕೆ ಬ್ಯಾಂಕುಗಳು ನೀಡಿದ ಸಾಲ ಮರುಪಾವತಿಯಾಗದೆ ಬ್ಯಾಂಕಿಂಗ್ ವ್ಯವಸ್ಥೆ ಕುಸಿದಿತ್ತು. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬ್ಯಾಂಕುಗಳಿಂದ ಪಡೆದ ಸಾಲವನ್ನು ಈಗ ರಿಯಲ್ ಎಸ್ಟೇಟ್ ವಲಯಕ್ಕೆ ನೀಡಿವೆ. ಆದರೆ, ಈ ಸಾಲಗಳು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪಾವತಿಯಾಗಿಲ್ಲ. ಹೀಗಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಿಲ್ಲ. ಹೀಗಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಖರೀದಿದಾರರಿಲ್ಲದೇ ಬಿಕ್ಕಟ್ಟು ಎದುರಿಸುತ್ತಿದೆ. ವಾರ್ಷಿಕ 2 ಲಕ್ಷ ಕೋಟಿ ಮೌಲ್ಯದಷ್ಟು ವಸತಿ ಘಟಕಗಳು ಮಾರಾಟವಾದರೆ, 8 ಲಕ್ಷ ಕೋಟಿ ಮೌಲ್ಯದಷ್ಟು ವಸತಿ ಘಟಕಗಳು ಮಾರಾಟವಾಗದೇ ಉಳಿದಿವೆ.
ರಿಯಲ್ ಎಸ್ಟೇಟ್ ವಲಯಕ್ಕೆ ಸಾಲ ನೀಡಿದಾಗ ಆ ವಲಯ ಚೇತರಿಸಿಕೊಳ್ಳುತ್ತದೆ. ಆದರೆ, ಭಾರತದಲ್ಲಿ ಹಾಗಾಗುತ್ತಿಲ್ಲ. ಈ ವಲಯಕ್ಕೆ ಒಟ್ಟಾರೆ ಸಾಲದಲ್ಲಿ ಶೇ.20ರಷ್ಟು ಸಾಲ ನೀಡಲಾಗುತ್ತಿದೆ. ಈ ಮೊತ್ತವು ಮಾರಾಟವಾಗದ ವಸತಿ ಘಟಕಗಳ ನಿರ್ವಹಣೆಗೆ ಬಳಸಲಾಗುತ್ತಿದೆ.
ವಾಣಿಜ್ಯ ಸಾಲ ನೀಡಿಕೆಯಲ್ಲಿ ತೀವ್ರ ಕುಸಿತವಾಗಿದೆ. 2018-19ರಲ್ಲಿ 22 ಲಕ್ಷ ಕೋಟಿ ರುಪಾಯಿ ಇದ್ದದ್ದು 2019-20ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಕೇವಲ 1 ಲಕ್ಷ ಕೋಟಿ ರುಪಾಯಿಗೆ ಕುಸಿದಿದೆ. ಇದು ಮಹಾ ಆರ್ಥಿಕ ಬಿಕ್ಕಟ್ಟು. ಐಎಲ್ಎಫ್ಎಸ್ ಮಹಾಪತನವು ಇದಕ್ಕೊಂದು ಪ್ರಮುಖ ಕಾರಣವಾಗಿದೆ. ಬ್ಯಾಂಕುಗಳು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಾಲ ನೀಡುವುದನ್ನು ಸ್ಥಗಿತಗೊಳಿಸಿವೆ. ಬ್ಯಾಂಕುಗಳ ನಿಷ್ಕ್ರಿಯ ಸಾಲ ತಗ್ಗುತ್ತಿದೆಯಾದರೂ ಅದು ಬೃಹತ್ ಪ್ರಮಾಣದಲ್ಲಿದೆ.
ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಲಿದೆಯೇ? ಕಂಪನಿಗಳು ಈಗ ಪಡೆಯುತ್ತಿರುವ ಸಾಲದ ಮೇಲಿನ ಬಡ್ಡಿಯು ಶೇ.10.5ರಷ್ಟಿದೆ. ಆದರೆ, ಕಂಪನಿಗಳ ವಾರ್ಷಿಕ ಗಳಿಕೆಯು ಕೇವಲ ಶೇ.6.1ರಷ್ಟಿದ್ದು, ವಾರ್ಷಿಕ ಶೇ.4.4ರಷ್ಟು ಕೊರತೆ ಬೀಳುತ್ತಿದೆ. ಸರ್ಕಾರದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ತೆರಿಗೆ ಮೂಲದ ಆದಾಯ ತಗ್ಗುತ್ತಿದೆ. ಆದರೆ, ಬಡ್ಡಿ ಪಾವತಿ ಪ್ರಮಾಣ ಹೆಚ್ಚುತ್ತಿದೆ.
ಬಿಕ್ಕಟ್ಟಿನಿಂದ ಹೊರಬರುವ ಮಾರ್ಗಗಳೇನು? ಏನು ಮಾಡಬಾರದು?
1-ವಿತ್ತೀಯ ಕೊರತೆ ಅಂಕಿಅಂಶಗಳು ವಾಸ್ತವಿಕತೆ ಪ್ರತಿಬಿಂಬಿಸುತ್ತಿಲ್ಲ. ವಾಸ್ತವಿಕ ವಿತ್ತೀಯ ಕೊರತೆ ಶೇ.5.5ರಷ್ಟಿದೆ. ಅದನ್ನು ಮುಚ್ಚಿಡಬಾರದು. 2- ಸರ್ಕಾರದ ವೆಚ್ಚವನ್ನು ಹಿಗ್ಗಿಸಬಾರದು. 3- ಈ ಹಂತದಲ್ಲಿ ಆದಾಯ ತೆರಿಗೆಯನ್ನು ಕಡಿತ ಮಾಡಬಾರದು. 4- ಜಿಎಸ್ಟಿ ದರಗಳನ್ನು ಏರಿಕೆ ಮಾಡಬಾರದು.
ಏನು ಮಾಡಬೇಕು?
1- ಭಾರತದ ಅಂಕಿಅಂಶಗಳ ಸಮಸ್ಯೆಯನ್ನು ಸರಿಪಡಿಸಬೇಕು. ಜಿಡಿಪಿ, ಬಜೆಟ್, ನಿಷ್ಕ್ರಿಯ ಸಾಲದ ಅಂಕಿಅಂಶಗಳು ವಾಸ್ತವಿಕತೆ ಪ್ರತಿಬಿಂಬಿಸಬೇಕು. 2- ಹಣಕಾಸು ವ್ಯವಸ್ಥೆಯನ್ನು ಸರಿಹಾದಿಗೆ ತರಬೇಕು. ನಿಷ್ಕ್ರಿಯ ಸಾಲವನ್ನು ಸ್ವತಂತ್ರ ಸಂಸ್ಥೆಯಿಂದ ಮೌಲ್ಯಮಾಪನ ಮಾಡಬೇಕು. ದಿವಾಳಿ ಸಂಹಿತೆಯನ್ನು ಬಲಪಡಿಸಬೇಕು. ಬ್ಯಾಡ್ ಬ್ಯಾಂಕ್ ವ್ಯವಸ್ಥೆ ರೂಪಿಸಬೇಕು. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆಯನ್ನು ತಗ್ಗಿಸಬೇಕು. ಸುಧಾರಿಸುತ್ತಿರುವ ಬ್ಯಾಂಕುಗಳಿಗೆ ಮಾತ್ರ ಬಂಡವಾಳ ಮರುಪೂರಣ ಮಾಡಬೇಕು. 3- ಕೃಷಿ ವಲಯವನ್ನು ಸುಧಾರಿಸಿ. ಸಬ್ಸಿಡಿ ರದ್ದು ಮಾಡಿ, ರೈತರಿಗೆ ನೇರವಾಗಿ ಹಣಪಾವತಿಸಿ. ಕೃಷಿ ಉತ್ಪನ್ನಗಳಿಗೆ ರಾಷ್ಟ್ರವ್ಯಾಪಿ ಏಕೀಕೃತ ಮಾರುಕಟ್ಟೆ ಸೃಷ್ಟಿಸಬೇಕು. ಪದೇ ಪದೇ ಕೃಷಿ ರಫ್ತುನೀತಿ ಬದಲಾವಣೆ ಮಾಡುವುದನ್ನು ಕೈಬಿಡಬೇಕು. ಜಲಸಂರಕ್ಷಣೆಯನ್ನು ಪ್ರೋತ್ಸಾಹಿಸಬೇಕು.