ಅತ್ತ ಬಿಹಾರ ರಾಜ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢಾ ಬಿಜೆಪಿ ಯುದ್ದದೋಪಾದಿಯಲ್ಲಿ ಸಿದ್ಧತೆ ನಡೆಸಿದ್ದರೆ, ಇತ್ತ ಭಾರತ- ಚೀನಾದ ಗಡಿಯಲ್ಲಿ ಭಾರತದ 20 ಯೋಧರು ಪೀಪಲ್ ಲಿಬರೇಷನ್ ಆರ್ಮಿ(ಪಿಎಲ್ಎ) ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದಾರೆ. ಇದನ್ನು ಖಂಡಿಸಿರುವ ಪ್ರಧಾನಿ ನರೇಂದ್ರಮೋದಿ ಯುದ್ಧೋನ್ಮಾದ ಮಾತುಗಳನ್ನಾಡಿ, ಆಕ್ರೋಶಗೊಂಡಿರುವ ದೇಶದ ಜನರನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ. ಈ ನಡುವೆ ವಿದ್ಯುನ್ಮಾನ ಸುದ್ದಿವಾಹಿನಿಗಳ ಚರ್ಚೆಯ ಅಂಗಳದಲ್ಲಿ ಭಾರತ-ಚೀನಾ ಯುದ್ಧಕ್ಕೆ ಸಿದ್ಧತೆಯೇ ನಡೆಯುತ್ತಿದೆ.
ಇಡೀ ದೇಶದ ಜನತೆ ಇಂದಿಗೆ 490 ದಿನಗಳ ಹಿಂದೆ ಪುಲ್ವಾಮ ಸ್ಪೋಟದಲ್ಲಿ ವೀರಮರಣ ಹೊಂದಿದ 40 ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ತ್ಯಾಗವನ್ನು ಮರೆತೇ ಬಿಟ್ಟಂತಿದೆ. ಅತ್ಯಂತ ಗರಿಷ್ಠ ಸುರಕ್ಷತಾ ವಲಯಕ್ಕೆ ಕ್ವಿಂಟಾಲುಗಟ್ಟಲೆ (300 ಕೆಜಿ) ಆರ್ಡಿಎಕ್ಸ್ ಸ್ಪೋಟಕವು ತಲುಪಿದ್ದು ಹೇಗೆ ಎಂಬ ‘ಐದು ಟ್ರಿಲಿಯನ್ ಡಾಲರ್’ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. 2019 ಫೆಬ್ರವರಿ 14 ರಂದು ಹುತಾತ್ಮರಾದ ವೀರಯೋಧರ ಕುಟುಂಬದ ಸ್ಥಿತಿಗತಿಗಳೇನು ಎಂಬುದರ ಮಾಹಿತಿಯೂ ಲಭ್ಯವಿಲ್ಲ.
ಅದೇನೇ ಇರಲಿ ಪುಲ್ವಾಮಾ ದಾಳಿ ನಡೆದ ಎರಡು ತಿಂಗಳ ನಂತರ ಅಂದರೆ, 2019 ಏಪ್ರಿಲ್ 11ರಿಂದ ಮೇ 23ರ ನಡುವೆ ವಿವಿಧ ಹಂತಗಳಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿ ನೇತೃತ್ವದಲ್ಲಿ ಆಡಳಿತಾರೂಢಾ ಬಿಜೆಪಿ ಅಭೂತಪೂರ್ವ ಜಯಗಳಿಸಿದ್ದು ಈಗ ಇತಿಹಾಸ!
ಲಡಾಕ್ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ ಲಿಬರೇಷನ್ ಆರ್ಮಿಯ ಯೋಧರು ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಬಂದು ಉದ್ಧಟತನ ತೋರಿ, ನಿರ್ಮಾಣ ಚಟುವಟಿಕೆ ನಡೆಸುತ್ತಿರುವ ವಿಷಯವು ಮೇ ತಿಂಗಳ ಆರಂಭದಲ್ಲೇ ಚರ್ಚೆಗೆ ಬಂದಿತ್ತು. ಆ ಬಗ್ಗೆ ‘ಸರ್ಕಾರಿ ಸ್ನೇಹಿ’ಗಳಲ್ಲದ ಆಯ್ದ ಮಾಧ್ಯಮಗಳು ಚೀನಾ ಯೋಧರ ದುಸ್ಸಾಹಸವನ್ನು ವರದಿ ಮಾಡಿದ್ದವು. ಅಂತಹ ಮಾಧ್ಯಮಗಳ ವಿರುದ್ಧ ಕೆಂಗಣ್ಣು ಬೀರಿದ್ದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರವು ಗಡಿ ಭಾಗದ ಚಟುವಟಿಕೆ ಕುರಿತಂತೆ ಸರ್ಕಾರ ನೀಡಿದ ಮಾಹಿತಿ ಹೊರತಾಗಿ ಬೇರೆ ಮಾಹಿತಿ ಪ್ರಕಟಿಸದಂತೆ ಸೂಚನೆ ನೀಡಿತ್ತು.
ಈ ನಡುವೆಯೇ ಮೋದಿ ಸರ್ಕಾರವು ಚೀನಾದ ಬಗ್ಗೆ ತಟಸ್ಥ ನೀತಿ ತಳೆದರೂ ಆಡಳಿತಾರೂಢ ಪಕ್ಷದ ವಿವಿಧ ಘಟಕಗಳು ಮಾತ್ರ ‘ಬಾಯ್ಕಾಟ್ ಚೀನಾ’ ಅಭಿಯಾನ ಪ್ರಾರಂಭಿಸಿದ್ದವು. ಮೋದಿ ಕಟ್ಟಾಭಿಮಾನಿಗಳೂ ಅದಕ್ಕೆ ಸಾತ್ ನೀಡಿದ್ದರು.
‘ಬಾಯ್ಕಾಟ್ ಚೀನಾ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವವೇ ಬಲವಾದ ಪೆಟ್ಟುಕೊಟ್ಟಿತ್ತು. ಭಾರತ ಸರ್ಕಾರವೇ ಖುದ್ಧು ಟಿಕ್ಟಾಕ್ ಖಾತೆಯನ್ನು ಜೂನ್ 6 ರಂದು ತೆರೆದು ಅಧಿಕೃತವಾಗಿ ಪ್ರಕಟಿಸಿತು. ಅಲ್ಲಿಗೆ ‘ಚೀನಾ ಬಾಯ್ಕಾಟ್’ ಅನ್ನೋದು ಅಮಾಯಕ ಜನರನ್ನು ಹಾದಿ ತಪ್ಪಿಸುವ ಹತಾಶ ಪ್ರಯತ್ನ ಎಂಬುದು ಸಾಬೀತಾಯಿತು. ಈಗಲೂ ಮೋದಿ ಅಭಿಮಾನಿಗಳು ‘ಬಾಯ್ಕಾಟ್ ಚೀನಾ’ ಅಭಿಯಾನ ಮುಂದುವರೆಸಿದ್ದಾರಾದರೂ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತೆರೆದಿರುವ ಟಿಕ್‌ಟಾಕ್ ಖಾತೆಯನ್ನು ಸ್ಥಗಿತಗೊಳಿಸಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದರೆ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರಕ್ಕೆ ಚೀನಾ ವಿರುದ್ಧ ಸಂಘರ್ಷ ನಡೆಸುವುದು ಬೇಕಿಲ್ಲ!
ಅಷ್ಟಕ್ಕೂ ಚೀನಾ ದೇಶವು ನೆರೆಯ ಪಾಕಿಸ್ತಾನವಲ್ಲ. ಚೀನಾ ಆರ್ಥಿಕ ಮತ್ತು ಮಿಲಿಟರಿ ಶಕ್ತಿ, ತಂತ್ರಜ್ಞಾನ ಸೇರಿದಂತೆ ಎಲ್ಲದರಲ್ಲೂ ಅಮೆರಿಕಾಕ್ಕೆ ಸೆಡ್ಡು ಹೊಡೆಯುವ ಚಾತಿ ಇರುವ ದೇಶ. ಪಾಕಿಸ್ತಾನ ಮಿಲಿಟರಿಯಾಗಲೀ, ಆರ್ಥಿಕತೆಯಾಗಲೀ ಭಾರತಕ್ಕೆ ಸರಿಸಮನಲ್ಲ. ಪಾಕಿಸ್ತಾನ ಬೊಗಳುವ ನಾಯಿಯಾದರೆ, ಚೀನಾ ಬೊಗಳದೇ ಕಚ್ಚುವ ನಾಯಿ! ಹೀಗಾಗಿ ಬೊಗಳದೇ ಕಚ್ಚುವ ನಾಯಿಗಳನ್ನು ಉಷಾರಿನಿಂದ ನಿಭಾಯಿಸಬೇಕು.
ದೇಶ ಕರೋನಾ ಸೋಂಕಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಹೊತ್ತಿನಲ್ಲಿ ಚೀನಾದ ಜತೆಗೆ ಯುದ್ಧವಾಗಲೀ ಅಥವಾ ಗಡಿಭಾಗದಲ್ಲಿ ಸಂಘರ್ಷ ನಡೆಸುವುದಾಗಿ ಜಾಣತನವಲ್ಲ. ಏಕೆಂದರೆ ಭಾರತ-ಚೀನಾ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಚೀನಾದ್ದೇ ಮೇಲುಗೈ. ಇಡೀ ದೇಶವನ್ನು ಸಂಪರ್ಕಿಸುವ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ಡ್ರಾಗನ್ ಸದೃಶ ಹಿಡಿತವನ್ನು ಭಾರತ ಬಿಡಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನೇರ ಚೀನಾದಲ್ಲೇ ತಯಾರಾದ ಅಥವಾ ಚೀನಾ ಬಿಡಿಭಾಗಗಳನ್ನು ಬಳಸಿ ದೇಶದಲ್ಲಿ ಸಿದ್ದಪಡಿಸಲಾದ ಮೊಬೈಲ್ ಗಳ ಮಾರುಕಟ್ಟೆ ಪ್ರಮಾಣ ಶೇ.75ರಷ್ಟಿದೆ. ಐಡಿಸಿ (ಇಂಟರ್ ನ್ಯಾಷನಲ್ ಡೇಟಾ ಕಾರ್ಪೊರೆಷನ್) ಅಂಕಿ ಅಂಶಗಳ ಪ್ರಕಾರ, ಉಳಿದ ಶೇ.25ರಷ್ಟು ಪೈಕಿ ಶೇ.15ರಷ್ಟು ಸ್ಯಾಮ್ಸಂಗ್ ಉಳಿದ 10ರಷ್ಟರ ಪೈಕಿ ಆಪಲ್ ಐಫೋನ್ ಸೇರಿದಂತೆ ದೇಶೀಯ- ವಿದೇಶಿಯ ಕಂಪನಿಗಳ ಮೊಬೈಲ್ ಸೇರಿವೆ. ಡ್ರಾಗನ್ ಹಿಡಿತ ದೇಶದ ಜನರ ಮನೆಯಂಗಳದಲ್ಲೂ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಸುಲಭ ದರದ ದೊಡ್ಡ ದೊಡ್ಡ ಸ್ಮಾರ್ಟ್ ಟೀವಿಗಳು ದೊಡ್ಡಪ್ರಮಾಣದಲ್ಲಿ ವಿಸ್ತರಿಸಿಕೊಳ್ಳುತ್ತಿವೆ. ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯು ಹೆಚ್ಚುತ್ತಲೇ ಇದೆ.
ಇದೆಲ್ಲಕ್ಕಿಂತಲೂ ಮುಖ್ಯವಾಗಿ ಭಾರತದಲ್ಲಿನ ಫಾರ್ಮಾ ಕಂಪನಿಗಳಿಗೆ ಸಾಕಷ್ಟು ಪ್ರಮಾಣದ ಕಚ್ಚಾ ವಸ್ತುಗಳು ಬರುವುದು ಚೀನಾದಿಂದಲೇ. ಹೀಗಾಗಿ ಚೀನಾದೊಂದಿಗಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಏಕೆಂದರೆ ಮೋದಿ ಘೋಷಿಸಿದ ‘ಮೇಕ್ ಇನ್ ಇಂಡಿಯಾ’ ಎಂಬ ಅತಿಅಬ್ಬರದ ಪ್ರಚಾರದ ಯೋಜನೆಯ ಪೈಕಿ ಚೀನಾದಿಂದ ಬಿಡಿಭಾಗಗಳನ್ನು ತರಿಸಿಕೊಂಡು ಇಲ್ಲಿ ಜೋಡಿಸುವ ಕೆಲಸ ನಡೆಯುತ್ತಿದೆ ಹೊರತು ಬಿಡಿಭಾಗಗಳನ್ನೇ ಇಲ್ಲಿ ಉತ್ಪಾದಿಸುತ್ತಿಲ್ಲ. ‘ಬಾಯ್ಕಾಟ್ ಚೀನಾ’ ಜಾರಿಗೆ ತಂದರೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಾರ್ಯಾರಂಭ ಮಾಡಿರುವ ಘಟಕಗಳು ಮುಚ್ಚುವ ಅಪಾಯ ಇದೆ.
ಭಾರತದ ಮೂಲ ಸಮಸ್ಯೆ ಇರುವುದು ಚೀನಾದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ. ಭಾರತದ ಚೀನಾದೊಂದಿಗಿನ ಆಮದು- ರಫ್ತಿನ ನಡುವೆ ಭಾರಿ ಅಂತರವಿದೆ. ಅಂದರೆ ಭಾರತ ರಫ್ತು ಮಾಡುವ ಪ್ರಮಾಣ ಅತ್ಯಲ್ಪ ಮತ್ತು ಆಮದು ಮಾಡಿಕೊಳ್ಳುವ ಪ್ರಮಾಣ ಅಗಾಧ. ಅಂಕಿ ಅಂಶಗಳ ಲೆಕ್ಕದಲ್ಲಿ ಹೇಳುವುದಾದರೆ 2018-19ನೇ ಸಾಲಿನಲ್ಲಿ ಭಾರತ- ಚೀನಾ ನಡುವಿನ ವ್ಯಾಪಾರ ವಹಿವಾಟಿನ ಪ್ರಮಾಣ 87.07 ಬಿಲಿಯನ್ ಡಾಲರ್. ಈ ಪೈಕಿ ಭಾರತವು 70.32 ಬಿಲಿಯನ್ ಡಾಲರ್ ಮೌಲ್ಯದ ಸರಕು ಸೇವೆಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಭಾರತವು ಚೀನಾಕ್ಕೆ ರಫ್ತು ಮಾಡಿರುವ ಸರಕು- ಸೇವೆಯ ಮೌಲ್ಯವು 16.75 ಬಿಲಿಟನ್ ಡಾಲರ್ ಮಾತ್ರ. ಅಂದರೆ ಚೀನಾದೊಂದಿಗೆ ಭಾರತವು 53.57 ಬಿಲಿಯನ್ ಡಾಲರ್ (ರುಪಾಯಿ ಲೆಕ್ಕದಲ್ಲಿ- 4,07,989.12 ಕೋಟಿ ರುಪಾಯಿಗಳು) ವ್ಯಾಪಾರ ಕೊರತೆ ಎದುರಿಸುತ್ತಿದೆ.
ಕೇಂದ್ರ ಸಚಿವ ಪಿಯುಶ್ ಗೋಯಲ್ ಫೆಬ್ರವರಿಯಲ್ಲಿ ರಾಜ್ಯಸಭೆಗೆ ನೀಡಿದ ಲಿಖಿತ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರವು ಚೀನಾದೊಂದಿಗೆ ವ್ಯಾಪಾರ ಸಮತೋಲನ ಸಾಧಿಸಲು ಎಲ್ಲಾ ಸಾಧ್ಯವಾದಕ್ರಮಗಳನ್ನು ಕೈಗೊಳ್ಳುತ್ತಿದೆ. ಅಕ್ಕಿ, ಸಾಸಿವೆ, ತಂಬಾಕು, ಮತ್ಯತೈಲ, ಮೆಣಸು ಮತ್ತಿತರ ಸರಕುಗಳನ್ನು ರಫ್ತು ಮಾಡಲು ಚೈನಾದೊಂದಿಗೆ ಒಪ್ಪಂದಮಾಡಿಕೊಳ್ಳಲಾಗಿದೆ. ಭಾರತವು ಚೀನಾಕ್ಕೆ ಮತ್ಸ್ಯೋತ್ಪಾದನೆ, ಪೆಟ್ರೋಕೆಮಿಕಲ್ಸ್, ಚಿನ್ನಾಭರಣ, ವಜ್ರಾಭರಣ, ಹವಳ ಮತ್ತಿತರ ಸಿದ್ಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಭಾರತದಲ್ಲಿ ಉತ್ಪಾದಿಸುವ ವಜ್ರಗಳ ಪೈಕಿ ಶೇ.36ರಷ್ಟನ್ನು ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ. ಕಚ್ಚಾ ವಜ್ರದ ಹರಳು ಆಮದು ಮಾಡಿಕೊಳ್ಳುವ ಭಾರತವು ಸಿದ್ದಪಡಿಸಿದ ವಜ್ರವನ್ನು ರಫ್ತು ಮಾಡುತ್ತಿದೆ. ಭಾರತ ಚೀನಾಕ್ಕೆ ಮಾಡುವ ರಫ್ತು ಸರಕುಗಳೆಲ್ಲವೂ ಉದ್ಯೋಗಾಧಾರಿತವಾಗಿದ್ದು, ಚೀನಾದೊಂದಿಗಿನ ವ್ಯಾಪಾರ- ವಹಿವಾಟು ಸಂಬಂಧ ಕಡಿದುಕೊಂಡರೆ, ಈಗಾಗಲೇ ನಿರುದ್ಯೋಗದಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಭಾರತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ. ಕಚ್ಚಾ ವಸ್ತುಗಳಿಲ್ಲದೇ ಔಷಧೋದ್ಯಮವೂ ಹಿನ್ನಡೆ ಎದುರಿಸಬೇಕಾಗುತ್ತದೆ. ಈ ಹಂತದಲ್ಲಿ ಚೀನಾಕ್ಕೂ ಭಾರತದೊಂದಿಗಿನ ವ್ಯಾಪಾರ-ವಹಿವಾಟು ಕಡಿದುಕೊಳ್ಳುವ ಇರಾದೆ ಇಲ್ಲ.
ಆದರೆ, ಚೀನಾದೊಂದಿಗೆ ಯುದ್ಧ ಮಾಡಲು ಭಾರತ ಮುಂದಾಗಿ ವ್ಯಾಪಾರ-ವಹಿವಾಟು ಸಂಬಂಧ ಕಡಿದುಕೊಂಡರೆ ಹೆಚ್ಚಿನ ನಷ್ಟ ಭಾರತಕ್ಕಾಗುತ್ತದೆ. ಚೀನಾಕ್ಕಾಗುವ ನಷ್ಟದ ಪ್ರಮಾಣವು ಭಾರತಕ್ಕೆ ಹೋಲಿಸಿದರೆ ಕಡಮೆಯೇ. ವಿಶ್ವದಲ್ಲೇ ಎರಡನೇ ಬೃಹತ್ ಆರ್ಥಿಕ ಶಕ್ತಿಯಾಗಿರುವ ಚೀನಾದ ಜಿಡಿಪಿ 14.14 ಟ್ರಿಲಿಯನ್ ಡಾಲರ್. ಭಾರತದ ಜಿಡಿಪಿ ಮೌಲ್ಯವು 2.94 ಟ್ರಿಲಿಯನ್ ಡಾಲರ್. ಅಂದರೆ ಚೀನಾ- ಭಾರತದ ಜನಸಂಖ್ಯೆ ಹೆಚ್ಚು ಕಮ್ಮಿ ಸರಿಸಮನಾಗಿದೆ. ಆದರೆ, ಆರ್ಥಿಕತೆಯಲ್ಲಿ ಚೀನಾವು ಭಾರತದ ಐದು ಪಟ್ಟು ಬೃಹತ್ತಾಗಿದೆ. ಅಂದರೆ, ಚೀನಾದ ಆರ್ಥಿಕತೆ ಬಲಿಷ್ಠವಾಗಿದೆ. ಮಿಲಿಟರಿ ಲೆಕ್ಕದಲ್ಲೂ ಚೀನಾ ಅಮೆರಿಕಕ್ಕೆ ಸರಿಸಮನಾಗಿದೆ.
ಇವೆಲ್ಲವೂ ವಾಸ್ತವಿಕ ಸಂಗತಿಗಳು. ಈ ವಾಸ್ತವಿಕ ಸಂಗತಿಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಪ್ರಧಾನಿ ನರೇಂದ್ರ ಮೋದಿ ಚೀನಾದ ವಿರುದ್ಧ ಯುದ್ದೋನ್ಮಾದದ ಮಾತುಗಳನ್ನಾಡಿದರೂ ಯುದ್ಧ ಮಾಡುವುದಕ್ಕೆ ಮುಂದಾಗುವುದಿಲ್ಲ. ಬದಲಿಗೆ ಮಾತುಕತೆಯ ಮೂಲಕ ಗಡಿಯಲ್ಲಿ ಉದ್ಭವಿಸಿರುವ ಉದ್ವಿಘ್ನ ಪರಿಸ್ಥಿತಿ ಶಮನ ಮಾಡುವ ಚಾತುರ್ಯತೆ ತೋರಿಸುತ್ತಾರೆ. ಆ ಮೂಲಕ ಸದಾ ಶಾಂತಿ ಮಂತ್ರ ಪಠಿಸುವ ಭಾರತದ ಆಶಯವನ್ನು ಎತ್ತಿ ಹಿಡಿಯುತ್ತಾರೆ. ಈ ಉದಾತ್ತ ನಡವಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅವಧಿ ಮುಗಿಸುವ ಹೊತ್ತಿಗೆ ‘ಶಾಂತಿಗಾಗಿ ನೋಬೆಲ್’ ಪ್ರಶಸ್ತಿಗೂ ಭಾಜನರಾಗಲೂಬಹುದು!!!