ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದದಲ್ಲಿ ಇಬ್ಬರ ಜಗಳ, ಮೂರನೆಯವರಿಗೆ ಲಾಭ ಎನ್ನುವಂತಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಏಸು ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಿದಾಗ ದಿಗ್ಗನೆದ್ದು ಅದಕ್ಕೆ ವಿರೋಧ ವ್ಯಕ್ತಪಡಿಸಿ ವರದಿ ಸಲ್ಲಿಸಲು ಆದೇಶಿಸಿದ್ದ ಕಂದಾಯ ಸಚಿವ ಆರ್.ಅಶೋಕ್, ನಂತರದಲ್ಲಿ ಅಲ್ಲಿನ ತಹಸೀಲ್ದಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಅದರಂತೆ ಜಿಲ್ಲಾಡಳಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ವಿವಾದ ಆರಂಭವಾದಾಗ ಪ್ರಕರಣದ ಬಗ್ಗೆ ಭಾರೀ ಉತ್ಸುಕತೆ ತೋರಿಸಿದ್ದ ಸರ್ಕಾರ ಇದೀಗ ಏಕೋ ವಿಳಂಬ ನೀತಿ ಅನುಸರಿಸುತ್ತಿದೆ.
ಮೂಲಗಳ ಪ್ರಕಾರ ಈ ಪ್ರಕರಣ ಇದೀಗ ಡಿ.ಕೆ.ಶಿವಕುಮಾರ್ ವರ್ಸಸ್ ಸರ್ಕಾರದ ನಡುವಿನ ಪ್ರಕರಣಕ್ಕಿಂತ ಮುಖ್ಯವಾಗಿ ಕಂದಾಯ ಸಚಿವ ಆರ್.ಅಶೋಕ್ ಮತ್ತು ರಾಮನಗರ ಜಿಲ್ಲೆಯ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ನಡುವಿನ ಪ್ರಕರಣ ಎಂಬಂತೆ ಬದಲಾವಣೆಯಾಗಿದೆ. ಪ್ರಕರಣದಲ್ಲಿ ಸರ್ಕಾರ ಕಾನೂನು ಪ್ರಕಾರ ಮತ್ತು ಕೋರ್ಟ್ ಆದೇಶಗಳನ್ನು ಆಧರಿಸಿ ನಿರ್ಧಾರ ಕೈಗೊಂಡರೆ ಅಲ್ಲಿ ಏಸು ಪ್ರತಿಮೆ ನಿರ್ಮಾಣ ಕಷ್ಟಸಾಧ್ಯ. ಆ ರೀತಿ ಕ್ರಮ ಕೈಗೊಂಡರೆ ಅದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಹಿನ್ನಡೆಯಾಗಬಹುದು. ಆದರೆ, ಅದರ ಲಾಭವನ್ನು ಯೋಗೇಶ್ವರ್ ಪಡೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಕಂದಾಯ ಸಚಿವರು ಕಪಾಲ ಬೆಟ್ಟದ ವಿಚಾರದಲ್ಲಿ ಉತ್ಸುಕತೆ ತೋರುತ್ತಿಲ್ಲ.
ಕಪಾಲ ಬೆಟ್ಟ ಗೋಮಾಳವಾಗಿದ್ದರೂ ಇದರಲ್ಲಿ 10 ಎಕರೆ ಪ್ರದೇಶವನ್ನು ಖಾಸಗಿ ಟ್ರಸ್ಟ್‌ಗೆ ನೀಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ನಿರ್ಧರಿಸಿತ್ತು. ಡಿ.ಕೆ.ಶಿವಕುಮಾರ್ ಅವರೇ ಮುತುವರ್ಜಿ ವಹಿಸಿ ಆ ಜಾಗದ ಸ್ವಾಧೀನಕ್ಕೆ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಕಡಿಮೆ ಮಾಡಿಸಿದ್ದರು. ನಂತರ ಅಲ್ಲಿ ಖಾಸಗಿ ಟ್ರಸ್ಟ್ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾದಾಗ ಶಿವಕುಮಾರ್ ಅವರೇ ಅದಕ್ಕೆ ಚಾಲನೆ ನೀಡಿದ್ದರು. ಆದರೆ, ಈ ಜಾಗ ಗೋಮಾಳವಾಗಿದ್ದು, ಅದನ್ನು ಪ್ರತಿಮ ನಿರ್ಮಾಣದಂತಹ ಕೆಲಸಗಳಿಗೆ ಬಳಸುವಂತಿಲ್ಲ. ಮೇಲಾಗಿ ಈ ಪ್ರದೇಶ ಪಕ್ಕದಲ್ಲಿಯೇ ಇರುವ ಕಾವೇರಿ ವನ್ಯ ಜೀವಿಧಾನಕ್ಕೆ ಹೊಂದಿಕೊಂಡತೆ ಇದೆ. ವನ್ಯ ಜೀವಿ ಸಂರಕ್ಷಣೆ ಕಾಯ್ದೆಯಂತೆ ಪರಿಸರ ಸೂಕ್ಷ್ಮ ವಲಯ ಅಥವಾ ಬಫರ್ ಜೋನ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವ ಮುನ್ನಾ ರಾಜ್ಯ ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಜತೆಗೆ ಇದು ಬೆಂಗಳೂರು ಮಹಾನಗರದ ಪ್ರದೇಶಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಿದ್ದು, ಪ್ರಾಧಿಕಾರದ ಅನುಮತಿ ಪಡೆಯದೆ ಕಾಮಗಾರಿ ಆರಂಭಿಸಲಾಗಿದೆ ಎಂಬ ವಿವಾದ ಆರಂಭವಾಯಿತು.
ಕಂದಾಯ ಸಚಿವರು ಈ ವಿಚಾರದಲ್ಲಿ ಉದಾಸೀನ ತೋರುತ್ತಿರುವುದೇಕೆ?
ಇದರ ಬೆನ್ನಲ್ಲೇ ಸರ್ಕಾರ ಕಪಾಲ ಬೆಟ್ಟ ವಿವಾದ ಕುರಿತಂತೆ ಸರ್ಕಾರ ಜಿಲ್ಲಾಡಳಿತದಿಂದ ವರದಿ ಕೇಳಿತ್ತು. ಜಿಲ್ಲಾಡಳಿತ ಪರಿಶೀಲನೆ ನಡೆಸುವ ಮುನ್ನವೇ ಅಲ್ಲಿನ ತಹಸೀಲ್ದಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಕಂದಾಯಯ ಸಚಿವ ಆರ್.ಅಶೋಕ್ ಅವರೇ ಹೆಚ್ಚು ಆಸಕ್ತಿ ವಹಿಸಿ ಪ್ರಕರಣದ ಲಾಭ ಪಡೆಯಲು ಪ್ರಯತ್ನಿಸಿದ್ದರು. ಆ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಡಲು ಮುಂದಾಗಿದ್ದರು. ಅದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಿವಾದದ ಕುರಿತು ಆರಂಭಿಕ ಮಾಹಿತಿ ನೀಡಿ ಈ ಬಗ್ಗೆ ವರದಿ ತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಈ ಮಧ್ಯೆ ವಿವಾದ ಕೇಳಿಬರುತ್ತಿದ್ದಂತೆ ಏಸು ಪ್ರತಿಮೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಯಿತು.
ಆದರೆ, ಸಿ.ಪಿ.ಯೋಗೇಶ್ವರ್ ಈ ಪ್ರಕರಣದಲ್ಲಿ ಮಧ್ಯೆಪ್ರವೇಶಿಸಿ ರಾಜಕೀಯ ಲಾಭ ಪಡೆಯಲು ಮುಂದಾದರು. ಕನಕಪುರ, ಚನ್ನಪಟ್ಟಣ ಪ್ರದೇಶದಲ್ಲಿ ಡಿ.ಕೆ.ಶಿವಕುಮಾರ್ ಪ್ರಭಾವ ಕಡಿಮೆ ಮಾಡಲು ಇದನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದರು. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಕರೆಸಿ ಬೃಹತ್ ಜಾಥಾ ಮಾಡಿಸಿದರು. ಹೀಗಾಗಿ ಆರ್.ಅಶೋಕ್ ಅವರು ಉತ್ಸಾಹ ಕಳೆದುಕೊಂಡರು. ಪ್ರಕರಣದ ಕುರಿತು ಜಿಲ್ಲಾಡಳಿತ ವರದಿ ಸಲ್ಲಿಸಿದರೂ ಅದನ್ನು ಬಹಿರಂಗಗೊಳಿಸದೆ ಅಥವಾ ವರದಿ ಆಧರಿಸಿ ಕ್ರಮಕ್ಕೆ ಸೂಚನೆ ನೀಡದೆ ಮೌನಕ್ಕೆ ಶರಣಾದರು.
ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರವು ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ 10 ಎಕರೆ ಜಮೀನು ಮಂಜೂರು ಮಾಡಿದೆ. ಸಂಪುಟ ಸಭೆಯಲ್ಲಿಯೇ ಈ ಬಗ್ಗೆ ತೀರ್ಮಾನ ಆಗಿದೆ. ಸದ್ಯ ಆ ಜಾಗ ಖಾಸಗಿ ಟ್ರಸ್ಟ್ ಸ್ವತ್ತಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಅಲ್ಲಿ ಪ್ರತಿಮೆ ಮಾದರಿ ಹಾಗೂ ಒಂದಿಷ್ಟು ಕಲ್ಲುಗಳು ಇದ್ದವು. ಆದರೆ, ಯಾವುದೇ ಕಾಮಗಾರಿ ನಡೆದಿರಲಿಲ್ಲ. ಸರ್ಕಾರ ಏಸು ಪ್ರತಿಮೆ ನಿರ್ಮಾಣಕ್ಕೂ ಸೂಚಿಸಿಲ್ಲ, ಕಾಮಗಾರಿ ಸ್ಥಗಿತಕ್ಕೂ ಆದೇಶಿಸಿಲ್ಲ ಎಂದು ಈಗಾಗಲೇ ತಜಿಲ್ಲಾಡಳಿತ ವರದಿ ಸಲ್ಲಿಸಿದೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಭೂಮಿ ಮಂಜೂರು ಮಾಡಿದ ಕಾರಣ ಅದು ಅಕ್ರಮವೋ, ಸಕ್ರಮವೋ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿಲ್ಲ. ಅಂದರೆ, ಜಿಲ್ಲಾಡಳಿತದ ವರದಿ ಆಧರಿಸಿ ಸಚಿವ ಸಂಪುಟದಲ್ಲೇ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.
ಯೋಗೇಶ್ವರ್ ತಮಗೆ ಪಕ್ಷದಲ್ಲೇ ಪ್ರತಿಸ್ಪರ್ಧಿಯಾಗುವ ಆತಂಕ
ಒಕ್ಕಲಿಗ ಸಮುದಾಯದವರಾಗಿರುವ ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಬಿಜೆಪಿಯಲ್ಲೂ ಹಳೇ ಮೈಸೂರು ಭಾಗದ ಒಕ್ಕಲಿಗ ಮುಖಂಡ ಎನಿಸಿಕೊಂಡಿದ್ದಾರೆ. ಎಲ್ಲಿ ತಮಗೆ ಪ್ರತಿಸ್ಪರ್ಧಿಗಳಾಗುತ್ತಾರೋ ಎಂಬ ಕಾರಣಕ್ಕೆ ಈ ಭಾಗದಲ್ಲಿ ಮೊದಲಿನಿಂದಲೂ ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ನಾಯಕರು ಬೆಳೆಯಲು ಅಶೋಕ್ ಅವಕಾಶ ಮಾಡಿಕೊಡಲಿಲ್ಲ. ಆರ್.ಅಶೋಕ್ ಹಿರಿಯ ನಾಯಕರಾದರೂ ತಮ್ಮನ್ನು ಬೆಂಗಳೂರಿಗೆ ಮಾತ್ರ ಸೀಮಿತ ಮಾಡಿಕೊಂಡಿದ್ದರೇ ಹೊರತು ಇತರೆ ಭಾಗಗಳತ್ತ ಗಮನಹರಿಸಲಿಲ್ಲ. ಹೀಗಿದ್ದರೂ ಬೇರೆಯವರು ಒಕ್ಕಲಿಗ ನಾಯಕ ಸ್ಥಾನ ಪಡೆಯುವುದನ್ನು ಅವರು ಬಯಸುವುದಿಲ್ಲ.
ಇದೀಗ ಕಪಾಲ ಬೆಟ್ಟ ಹೋರಾಡದ ಮೂಲಕ ಯೋಗೇಶ್ವರ್ ಹಳೇ ಮೈಸೂರು ಭಾಗದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಂಡರೆ ಅದು ಅಶೋಕ್ ಅವರಿಗೆ ಪ್ರತೀಕೂಲವಾಗುತ್ತದೆ. ಯೋಗೇಶ್ವರ್ ಚನ್ನಪಟ್ಟಣದವರಾದರೂ ಮಂಡ್ಯ ಮೈಸೂರು ಜಿಲ್ಲೆಗಳಲ್ಲೂ ಪ್ರಭಾವ ಹೊಂದಿದ್ದಾರೆ. ಸೂಕ್ತ ಸ್ಥಾನಮಾನ ಮತ್ತು ಅವಕಾಶ ಸಿಕ್ಕಿದರೆ ಆ ಪ್ರಭಾವವನ್ನು ಬೆಂಗಳೂರಿಗೂ ವಿಸ್ತರಿಸಿಕೊಳ್ಳುವ ಛಾತಿ ಮತ್ತು ರಾಜಕೀಯ ನಿಪುಣತೆ ಯೋಗೇಶ್ವರ್ ಅವರಲ್ಲಿದೆ. ಹೀಗಾಗಿ ಕಪಾಲ ಬೆಟ್ಟ ವಿಚಾರದಲ್ಲಿ ಏಸು ಪ್ರತಿಮೆ ನಿರ್ಮಾಣವನ್ನು ತಡೆಹಿಡಿದು ಭೂಮಿಯನ್ನು ವಾಪಸ್ ಪಡೆದರೆ ಅದರಲ್ಲಿ ಸರ್ಕಾರಕ್ಕಿಂತ ಹೆಚ್ಚು ಮೌಲ್ಯ ಯೋಗೇಶ್ವರ್ ಅವರ ಹೋರಾಟಕ್ಕೆ ಸಲ್ಲುತ್ತದೆ. ಇದರ ಲಾಭ ಪಡೆದುಕೊಂಡು ಅವರು ಮೇಲೇರಬಹುದು. ಹೀಗಾಗಿ ಕಾಂಗ್ರಸ್ಸಿಗರಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಲಾಭವಾದರೂ ಪರವಾಗಿಲ್ಲ, ಬಿಜೆಪಿಯಲ್ಲಿ ತಮಗೆ ಮತ್ತೊಬ್ಬ ಒಕ್ಕಲಿಗ ನಾಯಕ ಪ್ರತಿಸ್ಪರ್ಧಿಯಾಗಬಾರದು ಎಂಬ ಒಂದೇ ಕಾರಣಕ್ಕೆ ಅಶೋಕ್ ಅವರು ಕಪಾಲ ಬೆಟ್ಟ ಕುರಿತಂತೆ ಜಿಲ್ಲಾಡಳಿತದಿಂದ ವರದಿ ಬಂದರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.