ಪಾದರಾಯನಪುರ ಗಲಭೆ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಎರಡಕ್ಕಿಂತ ಹೆಚ್ಚು ಎಫ್‌ಐಆರ್ ಗಳನ್ನ ದಾಖಲಿಸಬಹುದು ಅಂತಾ ಹೈಕೋರ್ಟ್ ತಿಳಿಸಿದೆ. ಪಾದರಾಯನಪುರ ಗಲಭೆ ಸಂಬಂಧ ಆರೋಪಿಗಳ ವಿರುದ್ಧ ನಾಲ್ಕು ಪ್ರತ್ಯೇಕ ಎಫ್‌ಐಆರ್ ಪ್ರಕರಣಗಳನ್ನು ದಾಖಲಿಸಿದ್ದನ್ನ ಪ್ರಶ್ನಿಸಿ ಹಾಗೂ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ನಿರಾಕರಿಸಿದ ನ್ಯಾಯಾಲಯವು ಅಂತಹ ಅವಕಾಶಗಳು ಇರುವುದಾಗಿ ಪಿಬಿ ಭಜಂತ್ರಿ ಇದ್ದ ನ್ಯಾಯಪೀಠವು ತಿಳಿಸಿದೆ.
ಎಪ್ರಿಲ್ 19 ರಂದು ಕೋವಿಡ್-19 ಸೋಂಕು ಸಾಧ್ಯತೆ ಹಿನ್ನೆಲೆ ಪಾದರಾಯನಪುರದಲ್ಲಿ ಮೊಕ್ಕಾಂ ಹೂಡಿದ್ದ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಕತ್ತಲಾಗುತ್ತಲೇ ನೂರಕ್ಕೂ ಅಧಿಕ ಮಂದಿಯಿದ್ದ ಗುಂಪೊಂದು ದಾಳಿ ನಡೆಸಿ ಸೊತ್ತುಗಳನ್ನು ಹಾನಿಗೈದಿತ್ತು. ಅದರಿಂದ ಸ್ಥಳದಲ್ಲಿದ್ದ ಪೊಲೀಸರು ನೀಡಿದ್ದ ದೂರಿನಂತೆ ಪ್ರತ್ಯೇಕ ನಾಲ್ಕು ಎಫ್‌ಐಆರ್ ಗಳು (FIR No. 71, FIR No. 72, FIR No. 73, ಮತ್ತು FIR No. 74) ದಾಖಲಾಗಿದ್ದವು. ಇದನ್ನ ಪ್ರಶ್ನಿಸಿದ್ದ ಅರ್ಜಿದಾರರು ಒಂದೇ ಘಟನೆಗೆ ನಾಲ್ಕು ಎಫ್‌ಐಆರ್ ದಾಖಲಿಸಿರುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದರೆ ನ್ಯಾಯಾಧೀಶರು ಘಟನೆ ಒಂದೇ ಆಗಿದ್ದರೂ ಸ್ಥಳ, ಸಮಯ ಹಾಗೂ ನಡೆದಿರುವ ಹಾನಿ ಎಲ್ಲವೂ ಪ್ರತ್ಯೇಕವಾಗಿ ನಡೆದದ್ದರಿಂದ ಈ ರೀತಿ ನಾಲ್ಕು ಎಫ್‌ಐಆರ್ ಗಳು ದಾಖಲಾಗಿವೆ ಎಂದಿದ್ದಾರೆ.

ಮೊದಲನೆಯದಾಗಿ ಘಟನೆ ಸಂಬಂಧ ಹೆಡ್ ಕಾನ್ ಸ್ಟೇಬಲ್ ವೊಬ್ಬರು ನೀಡಿದ್ದ ದೂರಿನನ್ವಯ FIR NO. 70/2020 ದಾಖಲಾದರೆ ನಂತರ ಎಸ್‌ಐ ಹಾಗೂ ಇನ್ನಿಬ್ಬರು ಪೊಲೀಸ್ ಸಿಬ್ಬಂದಿಗಳು ನೀಡಿದ ದೂರಿನಂತೆ ಪ್ರತ್ಯೇಕ ದೂರುಗಳನ್ನ ದಾಖಲಿಸಿದ್ದರು. ಅದರಂತೆ ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಹೈಕೋರ್ಟ್ ನಲ್ಲಿ ಆರೋಪಿಗಳ ಪರ ಅರ್ಜಿದಾರರು ನಾಲ್ಕು ಎಫ್‌ಐಆರ್ ಗಳಿಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ನಿರಾಕರಿಸಿದೆ. ನಾಲ್ಕು ಎಫ್‌ಐಆರ್ ಗಳಲ್ಲಿ ಒಂದೆ ರೀತಿಯ ಆರೋಪ ಪಟ್ಟಿ ಸಲ್ಲಿಕೆಯಾಗದೇ ಇರುವ ಕಾರಣ ಅದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಮತ್ತು ಒಂದಕ್ಕಿಂತ ಹೆಚ್ಚಿನ ಎಫ್‌ಐಆರ್ ಗಳು ದಾಖಲಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂದು ನಡೆದಿದ್ದ ಘಟನೆಯ ದೃಶ್ಯಗಳು ಮೊಬೈಲ್ ಹಾಗೂ ಸಿಸಿಟಿವಿಗಳಲ್ಲೂ ದಾಖಲಾಗಿದ್ದವು. ಇದೆಲ್ಲವನ್ನೂ ಆಧರಿಸಿ 126 ಮಂದಿಯ ಮೇಲೆ ದೂರು ದಾಖಲಾಗಿದ್ದವು. ಆದರೆ ಆರೋಪಿಗಳೆಲ್ಲರೂ ಈಗಾಗಲೇ ಹೈ ಕೋರ್ಟ್ ನೀಡಿರುವ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಅವರ ಮೇಲಿನ ಎಫ್‌ಐಆರ್ ಗೆ ತಡೆ ನೀಡಲು ಹೈ ಕೋರ್ಟ್ ನಿರಾಕರಿಸಿದೆ.
2015 ರಲ್ಲಿ ರಾಜ್ಯವು ಒಂದು ಸುತ್ತೋಲೆಯನ್ನು ಹೊರಡಿಸಿತ್ತು. ಅದರನ್ವಯ ಒಂದೇ ಘಟನೆಗೆ ಒಂದಕ್ಕಿಂತ ಹೆಚ್ಚು ಎಫ್‌ಐಆರ್ ದಾಖಲಿಸುವಂತಿಲ್ಲ ಎನ್ನುವ ಅಧಿಸೂಚನೆ ಹೊಂದಿತ್ತು.ಇದನ್ನ ಅರ್ಜಿದಾರ ಪರ ವಕೀಲರು ಮುಂದಿರಿಸಿದಾಗ, ವಿಶೇಷ ಸರಕಾರಿ ಅಭಿಯೋಜಕರು ವಿಎಂ ಶೀಲವಂತ್, ಈ ಘಟನೆಯಲ್ಲಿ ಅಂತಹ ಸಾಮ್ಯತೆ ಕಂಡು ಬರುವುದಿಲ್ಲ. ಬದಲಿಗೆ ಇಲ್ಲಿ ಅಪರಾಧಗಳು ವಿಭಿನ್ನವಾಗಿವೆ ಎಂದು ವಾದಿಸಿದರು. ಅಲ್ಲದೇ ಸುಪ್ರೀಂ ಕೋರ್ಟ್ ನಲ್ಲಿ ನಡೆದ ತೀರ್ಪನ್ನ ನೆನಪಿಸಿದ ಅವರು, ಮನೋಜ್ ಕುಮಾರ್ vs ಉತ್ತರಾಖಂಡ ರಾಜ್ಯ ಸರಕಾರ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಎಫ್‌ಐಆರ್ ದಾಖಲಿಸಿರುವುದನ್ನ ಸರಕಾರಿ ಅಭಿಯೋಜಕರು ಪ್ರಸ್ತಾಪಿಸಿದರು.
ಇದೆಲ್ಲವನ್ನ ಪರಿಗಣಿಸಿದ ಹೈ ಕೋರ್ಟ್ ನಾಲ್ಕು ಪ್ರತ್ಯೇಕ ಎಫ್‌ಐಆರ್ ಗಳಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಮಾತ್ರವಲ್ಲದೇ ಜುಲೈ 1 ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.