ವಿಶ್ವ ಪತ್ರಿಕಾ ಸ್ವಾತಂತ್ರ ದಿನದಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನೀಡುವ ಖ್ಯಾತ ಡೆಚ್ ವೆಲ್ಲೆ ಫ್ರೀಡಂ ಆಫ್ ಸ್ಪೀಚ್ ಅವಾರ್ಡ್ಗೆ (Deutsche Welle Freedom of Speech Award) 14 ವಿವಿಧ ದೇಶದ ಪತ್ರಕರ್ತರೊಂದಿಗೆ ಭಾರತದ ಸಿದ್ದಾರ್ಥ್ ವರದರಾಜನ್ ಆಯ್ಕೆಗೊಂಡಿದ್ದಾರೆಂದು ಡಚ್ ವೆಲ್ಲೆ ಪ್ರಕಟಿಸಿದೆ.
ಮಾಧ್ಯಮದಲ್ಲಿ ಮಾನವಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮಹತ್ತರ ಬಧ್ಧತೆಯನ್ನು ತೋರಿಸಿದ ವ್ಯಕ್ತಿಗಳಿಗೆ ಡೆಚ್ ವೆಲ್ಲೆಯು 2015 ರಿಂದ ಪ್ರತಿ ವರ್ಷ ಫ್ರೀಡಂ ಆಫ್ ಸ್ಪೀಚ್ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.
Also Read: ಫೇಕ್ ನ್ಯೂಸ್ ಮಾಧ್ಯಮಕ್ಕೆ ಮನ್ನಣೆ, ನೈಜ ಪತ್ರಕರ್ತರ ಮೇಲೆ FIR!
ಸಾಂಕ್ರಾಮಿಕ ಕೋವಿಡ್-19 ಕುರಿತು ವರದಿ ಮಾಡಿ ಬೆದರಿಕೆಗೊಳಗಾದ, ಸಂಕಷ್ಟ ಎದುರಿಸಿದ, ಕಾಣೆಯಾದ ಎಲ್ಲಾ ಪತ್ರಕರ್ತರನ್ನು ಪ್ರತಿನಿಧಿಸಿ 17 ಮಂದಿಯನ್ನು ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆಯೆಂದು ಡಚ್ ವೆಲ್ಲೆ ಹೇಳಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಅಯೋಧ್ಯೆಯಲ್ಲಿ ಹಲವಾರು ಜನರೊಂದಿಗೆ ಸೇರಿ ರಾಮಲಲ್ಲಾ ಮೂರ್ತಿ ಸ್ಥಳಾಂತರ ಕಾರ್ಯಕ್ರಮ ಮಾಡಿದ್ದರು. ಈ ಕುರಿತು ದಿ ವೈರ್ ಮಾಡಿದ್ದ ವರದಿಯ ಲಿಂಕನ್ನು ಸಂಪಾದಕ ಸಿದ್ದಾರ್ಥ್ ವರದರಾಜನ್ ತನ್ನ ಟ್ವಿಟರ್ ಅಕಂಟಲ್ಲಿ ಹಾಕಿದ್ದರು. ಯೋಗಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರದಿ ಮಾಡಿದೆಯೆಂದು ಆರೋಪಿಸಿ ಉತ್ತರ ಪ್ರದೇಶ ಸರಕಾರ ವರದರಾಜನ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.
ವರದರಾಜನ್‌ರಂತೆ ಪ್ರಶಸ್ತಿಗೆ ಆಯ್ಕೆಯಾದವರೆಲ್ಲರೂ ಕೋವಿಡ್-19 ಕುರಿತು ವರದಿ ತಯಾರಿಸಿ ಸತ್ಯ ಬಹಿರಂಗಗೊಳಿಸಿರುವುದಕ್ಕೆ ತಮ್ಮ ದೇಶದ ಆಡಳಿತಾಧಿಕಾರಿಗಳಿಂದ ವಿವಿಧ ರೀತಿಯ ಕಿರುಕುಳಗಳಿಗೆ ಒಳಗಾಗಿದ್ದಾರೆ.
ಡಚ್ ವೆಲ್ಲೆ ಪ್ರಶಸ್ತಿಗೆ ಆಯ್ಕೆಯಾದ ಇತರರು:
ಅನಾ ಲಾಲಿಕ್, ಸರ್ಬಿಯಾ (Ana Lalic, Serbia)
Nova.rs ಅಂತರ್ಜಾಲ ಪತ್ರಿಕೆಯಲ್ಲಿ ಕೆಲಸ ಮಾಡುವ ಪತ್ರಕರ್ತೆ ಅನಾ ಲಾಲಿಕ್ ಸರ್ಬಿಯಾದ ನಗರ ನೊವಿ ಸಾದ್ನಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯ ಕುರಿತು ವರದಿ ಮಾಡಿರುವುದಕ್ಕೆ ಎರಡು ದಿನಗಳ ಕಾಲ ಬಂಧನಕ್ಕೊಳಗಾಗಿದ್ದರು.
ಬ್ಲಾಝ್ ಗಾಗ, ಸ್ಲೋವ್ನಿಯ (Blaž Zgaga, Slovenia)
ಸ್ವತಂತ್ರ ತನಿಖಾ ಪತ್ರಕರ್ತ ಹಾಗೂ ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ ಸದಸ್ಯ ಬ್ಲಾಝ್ ಗಾಗ ಸರಕಾರದಿಂದ ಕಿರುಕುಳ ಮತ್ತು ಅನಾಮಧೇಯ ಮಾರಣಾಂತಿಕ ಬೆದರಿಕೆಗಳನ್ನು ಎದುರಿಸಿದ್ದಾರೆ.
ಸೆರ್ಗೆಜ್ ಸಝುಕ್, ಬೆಲಾರಸ್ (Sergej Sazuk, Belarus)
ಅಂತರ್ಜಾಲ ಪತ್ರಿಕೆಯ ಪತ್ರಕರ್ತರಾಗಿರುವ ಸಝುಕ್ ಮಾರ್ಚ್ 25 ರಿಂದ ಎಪ್ರಿಲ್ 4 ರವರೆಗೆ ಬಂಧನಕ್ಕೊಳಗಾಗಿದ್ದರು. ಅವರನ್ನು ಬಂಧಿಸುವುದಕ್ಕಿಂತ ಮೊದಲು ಸಾಂಕ್ರಾಮಿಕ ರೋಗವನ್ನು ಸರ್ಕಾರ ನಿಭಾಯಿಸುವ ರೀತಿಯನ್ನು ಟೀಕಿಸಿದ್ದರು.
ಎಲೆನಾ ಮಿಲಶಿನಾ, ರಷ್ಯ (Elena Milashina, Russia)

ಎಪ್ರಿಲ್ 12 ರಂದು ತನಿಖಾ ಪತ್ರಕರ್ತೆ ಎಲೆನಾ, ಚೆಚೆನ್ ಅಥಾರಿಟೀಸ್ ಕರೋನಾ ಸ್ಪಂದಿಸಿರುವ ರೀತಿಯ ಬಗ್ಗೆ ವಿರುದ್ದವಾಗಿ ಲೇಖನ ಬರೆದಿದ್ದರು. ಈ ಕುರಿತು ಚೆಚೆನ್ ಅಧ್ಯಕ್ಷ ಕೊಲ್ಲುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದರು.
ಡಾರ್ವಿನ್ಸನ್ ರೊಜಸ್ (Darvinson Rojas, Venezuela)
ವೆನುಜುವೆಲಾದಲ್ಲಿ ಕೋವಿಡ್-19 ಹರಡುವ ಕುರಿತು ವರದಿ ಮಾಡಿದ್ದ ಫ್ರೀಲಾನ್ಸ್ ಪತ್ರಕರ್ತನನ್ನು ಅಮನವೀಯವಾಗಿ ಬಂಧಿಸಲಾಗಿತ್ತು.
ಮಹಮ್ಮದ ಮೊಸಾಯಿದ್, ಇರಾನ್ (Mohammad Mosaed, Iran)
ಸಾಂಕ್ರಾಮಿಕ ರೋಗದ ಎದುರಿಸುವ ಕುರಿತು ಸಾಕಷ್ಚು ಪೂರ್ವ ತಯಾರಿ ನಡೆಸದ ಸರಕಾರವನ್ನು ಟೀಕಿಸಿದ್ದ ಪತ್ರಕರ್ತನನ್ನು ಬಂಧಿಸಲಾಗಿದೆ One Free Press Coalition ಪ್ರಕಾರ ಅವರ ಸಾಮಾಜಿಕ ಜಾಲತಾಣ ಅಕೌಂಟನ್ನು ತಡೆಹಿಡಿಯಲಾಗಿದೆ.
ಬೀಟಿಫಿಕ್ ನ್ಗುಂಬ್ವಾಂಡ, ಝಿಂಬಾಬ್ವೆ (Beatific Ngumbwanda, Zimbabwe)
ಟೆಲ್ಝಿಮ್ ವಾರ ಪತ್ರಿಕೆಯ ವರದಿಗಾರನನ್ನು ಮಾನ್ಯತಾ ಪತ್ರ ಇದ್ದಾಗಿಯೂ ಲಾಕ್ಡೌನ್ ಉಲ್ಲಂಘಿಸಿದಕ್ಕಾಗಿ ಬಂಧಿಸಲಾಗಿತ್ತು,
ಡೇವಿಡ್ ಮುಸಿಸಿ, ಉಗಾಂಡ (David Musisi Karyankolo, Uganda)
ಟಿ.ವಿ ಪತ್ರಕರ್ತ ಡೇವಿಡ್ರಿಗೆ ಲಾಕ್ಡೌನ್ ಸಂಧರ್ಭದಲ್ಲಿ ಅಧಿಕಾರಿಯೊಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದರಿಂದ ಪತ್ರಕರ್ತ 10 ಗಂಟೆಗಳ ಕಾಲ ಕೋಮಕ್ಕೆ ತೆರಳಿದ್ದರು.
ನುರ್ಕಾನ್ ಬಯಸಾಲ್, ಟರ್ಕಿ (Nurcan Baysal, Turkey)
ಸರ್ಕಾರ ಕರೋನಾ ರೋಗಕ್ಕೆ ಸ್ಪಂದಿಸುವ ಕುರಿತು ಟೀಕಿಸಿದ್ದ ನುರ್ಕಾನ್ ಎರಡು ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ.
ಇಸ್ಮತ್ ಸಜಿಟ್, ಟರ್ಕಿ (İsmet Çiğit, Turkey)
ಕೋವಿಡ್ನಿಂದಾಗಿ ಮೃತಪಟ್ಟ ಇಬ್ಬರ ಕುರಿತು ವರದಿಗಳನ್ನು ತಯಾರಿಸಿದ ಬಳಿಕ ಇವರನ್ನು ಬಂಧಿಸಲಾಗಿತ್ತು.
ಫಾರಿಸ್ ಸಯೆಘ್, ಜೋರ್ಡಾನ್ (Fares Sayegh, Jordan)
ಜೋರ್ಡಾನಿನ ಸರ್ಕಾರ ಸಾಂಕ್ರಾಮಿಕ ರೋಗದ ಕುರಿತು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಕುರಿತು ಹಾಗೂ ಲಾಕ್‌ಡೌನ್ ಅನಾನುಕೂಲತೆಗಳ ಬಗ್ಗೆ ಜನರ ಅಭಿಪ್ರಾಯಗಳನ್ನು ವರದಿ ಮಾಡಿರುವುದಕ್ಕಾಗಿ ಫಾರಿಸ್ ಮತ್ತ ಅವರ ಸಹೋದ್ಯೋಗಿಗಳನ್ನು ಬಂಧಿಸಲಾಗಿತ್ತು.
ಸೋವನ್ ರಿಥಿ, ಕಾಂಬೋಡಿಯ (Sovann Rithy, Cambodia)
ಕಾಂಬೋಡಿಯಾದ TVFB ಪತ್ರಕರ್ತ ಸೋವನ್ ರಥಿಯನ್ನು ಬಂಧಿಸಿದ್ದು ಆರೋಪ ಸಾಬೀತಾದರೆ ಎರಡು ವರ್ಷಗಳ ಕಾಲ ಚಾನೆಲಿನ ಪರವಾನಿಗೆ ತಡೆಹಿಡಿಯಲಾಗುವುದೆಂದು ಮಾಹಿತಿ ತಂತ್ರಜ್ಙಾನ ಸಚಿವಾಲಯ ಎಚ್ಚರಿಕೆ ನೀಡಿದೆ.
ಮರಿಯ ವಿಕ್ಟೋರಿಯ, ಫಿಲಿಪ್ಪೈನ್ಸ್ (Maria Victoria Beltran, The Philippines)
ಫಿಲಿಪ್ಪೈನಿನ ಸೆಬು ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಫೇಸ್ಬುಕ್ಕಿನಲ್ಲಿ ಪೋಸ್ಟ್ ಹಾಕಿದ ಕಲಾವಿದಯನ್ನು ಬಂದೀಸಲಾಗಿದೆ.
ಚೆನ್ ಕೂಷಿ, ಚೀನಾ (Chen Qiushi, China)
ನಾಗರಿಕ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಫೆಬ್ರವರಿ 6ರ ಬಳಿಕ ನಾಪತ್ತೆಯಾಗಿದ್ದಾರೆ. ಅದಕ್ಕೂ ಮೊದಲು ವುಹಾನ್ ನಗರದಲ್ಲಿ ವೈದ್ಯರನ್ನು ಮತ್ತು ನಾಗರಿಕರನ್ನು ಸಾಂಕ್ರಾಮಿಕ ರೋಗ ಹರಡಿದ ಕುರಿತು ಸಂದರ್ಶನ ನಡೆಸಿದ್ದರು.
ಲಿ ಝೆಹುವಾ, ಚೀನಾ (Li Zehua, China)
ಸಾಂಕ್ರಾಮಿಕ ರೋಗದ ಕುರಿತು ವರದಿ ಮಾಡಿದ್ದ ಲಿ ಏಕಾಏಕಿ ಫೆಬ್ರವರಿ 26 ರಂದು ಕಾಣೆಯಾಗಿದ್ದರು. ನಂತರ ಎಪ್ರಿಲ್ 22 ರಂದು ಯೂಟ್ಯೂಬ್ ಮೂಲಕ ಬಂದ ಲಿ ಅಧಿಕಾರಿಗಳು ತನ್ನನ್ನು ಅಧಿಕಾರಿಗಳು ಕ್ವಾರಂಟೈನ್‌ನಲ್ಲಿರಿಸಿದ್ದರು ಎಂದು ಹೇಳಿದ್ದಾರೆ.
ಫಾಂಗ್ ಬಿನ್, ಚೀನಾ (Fang Bin, China)
ಮಾಜಿ ಉದ್ಯಮಿ ಹಾಗು ನಾಗರಿಕ ಪತ್ರಕರ್ತ ಫಾಂಗ್ ತನ್ನ ತವರು ನಗರ ವುಹಾನ್ನಲ್ಲಿ ಆಸ್ಪತ್ರೆಯ ಹೊರಗಡೆ ಹಲವಾರು ಮೃತದೇಹಗಳನ್ನು ಇರಿಸಿದ ಚೀಲಗಳ ಬಗ್ಗೆ ವೀಡಿಯೋ ನಡೆಸಿದ್ದರು. ಅದು ಸಾಕಷ್ಟು ವೈರಲ್ ಆಗಿತ್ತು. ಫೆಬ್ರವರಿ 9ರ ಬಳಿಕ ಅವರು ಕಾಣೆಯಾಗಿದ್ದಾರೆ.
ಕೃಪೆ: ದಿ ವೈರ್