ಮಧ್ಯಪ್ರದೇಶ ಉಪಚುನಾವಣೆಗಳಿಗೆ ತನ್ನ “ಸ್ಟಾರ್ ಪ್ರಚಾರಕ” ಸ್ಥಾನಮಾನವನ್ನು ಭಾರತ ಚುನಾವಣಾ ಆಯೋಗ (ECI) ರದ್ದುಪಡಿಸಿದ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ
ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ವಿವೇಕ್ ತಂಖಾ ಅವರು, ಕಮಲ್ ನಾಥ್ ಚುನಾವಣಾ ಆಯೋಗ ನಿರ್ಧಾರವನ್ನು ಪ್ರಶ್ನಿಸಿದ್ದಾರೆ ಮತ್ತು ಮನವಿಯ ಬಗ್ಗೆ ತುರ್ತು ವಿಚಾರಣೆಯನ್ನು ಕೋರಲಾಗುವುದು ಎಂದು ಸುದ್ದಿ ಸಂಸ್ಥೆ ಪಿಟಿಐ ಗೆ ಹೇಳಿದ್ದಾರೆ.
ಶುಕ್ರವಾರ, ಮಾದರಿ ನೀತಿ ಸಂಹಿತೆ (MCC) ಯ ಪುನರಾವರ್ತಿತ ಉಲ್ಲಂಘನೆಗಳನ್ನು ಉಲ್ಲೇಖಿಸಿ, ಆಯೋಗವು ಹೊರಡಿಸಿದ ಆದೇಶದಲ್ಲಿ, “ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಮತ್ತು ಅವರಿಗೆ ನೀಡಲಾದ ಸಲಹೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕಾಗಿ, ಆಯೋಗವು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸ್ಟಾರ್ ಪ್ರಚಾರಕ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುತ್ತದೆ” ಎಂದು ಹೇಳಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಕ್ಟೋಬರ್ 13 ರಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರನ್ನು “ಮಾಫಿಯಾ” ಮತ್ತು “ಮಿಲವತ್ ಖೋರ್” ಎಂದು ಕರೆದಿದ್ದಕ್ಕಾಗಿ ಕಮಲ್ ನಾಥ್ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕಾಂಗ್ರೆಸ್ ಅಭ್ಯರ್ಥಿಗಾಗಿ ಪ್ರಚಾರ ಮಾಡುವಾಗ ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಅವರನ್ನು “ಐಟಂ” ಎಂದು ಕರೆದಿದ್ದಕ್ಕಾಗಿ ಆಯೋಗವು ಅಕ್ಟೋಬರ್ 26 ರಂದು ಎಚ್ಚರಿಕೆ ನೀಡಿತ್ತು.
ನವೆಂಬರ್ 3 ರಂದು 28 ಮಧ್ಯಪ್ರದೇಶ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಮಾತನಾಡಿದ ಕಮಲ್ ನಾಥ್ “ಈ ಸ್ಟಾರ್ ಪ್ರಚಾರಕರು ಯಾವ ಹುದ್ದೆಯನ್ನು ಹೊಂದಿದ್ದಾರೆ? ಚುನಾವಣಾ ಆಯೋಗ ನನಗೆ ಯಾವುದೇ ಸೂಚನೆ ನೀಡಿಲ್ಲ, ಅಥವಾ ಅದರ ಬಗ್ಗೆ ನನ್ನನ್ನು ಏನು ಕೇಳಲಿಲ್ಲ. ಆದರೆ ಪ್ರಚಾರದ ಕೊನೆಯ ಎರಡು ದಿನಗಳಲ್ಲಿ ಇದನ್ನು ಏಕೆ ಮಾಡುತ್ತಿದ್ದಾರೆ ಎಂಬುದು ಅವರಿಗೆ ಮಾತ್ರ ತಿಳಿದಿದೆ.” ಎಂದು ಹೇಳಿದ್ದಾರೆ.
ಆದಾಗ್ಯೂ, “ಐಟಂ” ಪದವನ್ನು ಬಳಸುವುದನ್ನು ಸಮರ್ಥಿಸಿಕೊಂಡ ಕಮಲ್ ನಾಥ್ “ನಾನು ಲೋಕಸಭೆಯಲ್ಲಿ ಇಷ್ಟು ವರ್ಷಗಳ ಕಾಲ ಇದ್ದೆ. ಅಲ್ಲಿ ಅದನ್ನು ಅಜೆಂಡಾ ಶೀಟ್, ಐಟಂ ನಂಬರ್ 1, ಐಟಂ ನಂಬರ್ 2 ನಲ್ಲಿ ಉಲ್ಲೇಖಿಸಲಾಗಿದೆ… ಅದು ನನ್ನ ಮನಸ್ಸಿನಲ್ಲಿತ್ತು. ಯಾರನ್ನೂ ಅಗೌರವಗೊಳಿಸುವಂತೆ ನಾನು ಇದನ್ನು ಹೇಳಲಿಲ್ಲ ”ಎಂದು ನಾಥ್ ಪಿಟಿಐ ಹೇಳಿದ್ದಾರೆ. “ಆದರೂ, ಯಾರಾದರೂ ಅವಮಾನಕ್ಕೊಳಗಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ, 22 ಶಾಸಕರೊಂದಿಗೆ ಕಮಲ್ ನಾಥ್ ವಿರುದ್ಧ ಬಂಡಾಯ ಎದ್ದ ನಂತರ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕುಸಿದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ದಾರಿ ಮಾಡಿಕೊಟ್ಟಿತು.