ಕೊರೋನಾ ಬೆನ್ನಿಗೆ ಎಲ್ಲಾ ರಾಜ್ಯಗಳನ್ನೂ ಇನ್ನಿಲ್ಲದಂತೆ ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಜಿಎಸ್ಟಿ ಪಾಲು. ಈಗಾಗಲೇ ಮಾರಣಾಂತಿಕ ಕೊರೋನಾ ವೈರಸ್ ಎಲ್ಲಾ ರಾಜ್ಯಗಳನ್ನೂ ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದೇಶದ ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಸ್ತಬ್ಧವಾಗಿದೆ. ಮೊದಲೇ ಖಾಲಿ ಖಜಾನೆಯೊಂದಿಗೆ ಅಧಿಕಾರಕ್ಕೇರಿದ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ಜಿಎಸ್ಟಿ ಪಾಲು ಎಂಬುದು ಬಿಸಿ ತುಪ್ಪವಾಗಿದೆ.
ನೋಟು ಅಮಾನ್ಯೀಕರಣದ ನಂತರ ಕೇಂದ್ರ ಸರ್ಕಾರ ಜಾರಿ ತಂದ ತೆರಿಗೆ ಸುಧಾರಣಾ ನೀತಿಯೇ ಈ ಜಿಎಸ್ಟಿ. ಜಿಎಸ್ಟಿ ಜಾರಿಯಿಂದ ರಾಜ್ಯದ ತೆರಿಗೆ ಹಕ್ಕು ಚ್ಯುತಿಯಾಗುತ್ತದೆ ಎಂಬ ವಿರೋಧ ಪಕ್ಷದ ವಿರೋಧದ ನಡುವೆಯೂ ಇದನ್ನು ಜಾರಿಗೊಳಿಸಲಾಗಿತ್ತು.
ಆರಂಭದಲ್ಲಿ ಜಿಎಸ್ಟಿ ಜಾರಿಗೆ ಬಂದರೆ ತೆರಿಗೆ ಸಂಗ್ರಹದ ಪ್ರಮಾಣ ಏರಲಿದೆ. ಈ ಮೂಲಕ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದೇ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಅಲ್ಲದೆ, ಜಿಎಸ್ಟಿಯಿಂದಾಗಿ ಹೊಸದಾಗಿ ತೆರಿಗೆ ಪಟ್ಟಿಗೆ ಸೇರಿದವರ ಸಂಖ್ಯೆಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಇದರ ಲಾಭ ಮಾತ್ರ ಈವರೆಗೆ ರಾಜ್ಯ ಸರ್ಕಾರಗಳಿಗೆ ಅದರಲ್ಲೂ ಬಹುಮುಖ್ಯವಾಗಿ ಕರ್ನಾಟಕಕ್ಕೆ ನ್ಯಾಯಯುತವಾಗಿ ಬಂದಂತೆ ಕಾಣಿಸುತ್ತಿಲ್ಲ.
ಈ ನಡುವೆ ಎಲ್ಲಾ ರಾಜ್ಯಗಳೂ ಕೊರೋನಾ ವಿರುದ್ಧ ಹೋರಾಟಕ್ಕೆ ಹಣವಿಲ್ಲದೆ ಪರಿತಪಿಸುತ್ತಿರುವ ಇಂತಹ ಸಂದರ್ಭದಲ್ಲಿ ಕೊನೆಗೂ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಜಿಎಸ್ಟಿ ಪಾಲನ್ನು ನೀಡಿದೆ. ಆದರೆ, ಜಿಎಸ್ಟಿ ಪಾಲಿನಲ್ಲಿ ರಾಜ್ಯಕ್ಕೆ ಎಂದಿನಂತೆ ಆಗಿರುವುದು ಮತ್ತದೇ ಅನ್ಯಾಯ.
ಉತ್ತರ ಪ್ರದೇಶಕ್ಕೆ ಜಿಎಸ್ಟಿ ಪಾಲಿನಲ್ಲಿ ಬರೋಬ್ಬರಿ 8,255 ಕೋಟಿ ನೀಡಿರುವ ಕೇಂದ್ರ ಸರ್ಕಾರ, ದಕ್ಷಿಣ ರಾಜ್ಯಗಳಾದ ತಮಿಳುನಾಡಿಗೆ 1,929 ಕೋಟಿ, ಆಂಧ್ರಪ್ರದೇಶಕ್ಕೆ 1,893 ಕೋಟಿ, ಕರ್ನಾಟಕಕ್ಕೆ 1,679 ಕೋಟಿ, ತೆಲಂಗಾಣಕ್ಕೆ 982 ಕೋಟಿ ಮತ್ತು ಕೇರಳಕ್ಕೆ 894 ಕೋಟಿ ಹಣ ನೀಡಿದೆ. ಈ ಮೂಲಕ ಕರ್ನಾಟಕ ಸೇರಿದಂತೆ ಎಲ್ಲಾ ದಕ್ಷಿಣ ರಾಜ್ಯಗಳಿಗೆ ಮತ್ತೊಮ್ಮೆ ತಾರತಮ್ಯವೆಸಗಿದೆ.
ತೆರಿಗೆಯಲ್ಲಿ ಕರ್ನಾಟಕದ ಪಾಲು ಎಷ್ಟು ಗೊತ್ತೇ?
ಕೇಂದ್ರ ತೆರಿಗೆ ಇಲಾಖೆಯೇ ನೀಡುವ ಅಂಕಿಅಂಶಗಳ ಪ್ರಕಾರ ತೆರಿಗೆ ಸಂಗ್ರಹದಲ್ಲಿ ದೆಹಲಿ, ಮಹಾರಾಷ್ಟ್ರ ನಂತರದ 3ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ರಾಜಸ್ವದ ಪಾಲಾಗಿ ಕರ್ನಾಟಕ ಅಪಾರ ಪ್ರಮಾಣ ತೆರಿಗೆ ಹಣ ನೀಡುತ್ತಿದೆ. 14ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯದ ತೆರಿಗೆ ಪಾಲು ಶೇ.42ರಷ್ಟು. ಇವನ್ನೆಲ್ಲಾ ಲೆಕ್ಕ ಹಾಕಿ ನೋಡಿದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಪಾರ ಹಣವನ್ನು ಹಿಂದಿರುಗಿಸಬೇಕು.
ಆದರೆ, ಕೇಂದ್ರ ಸರ್ಕಾರವೋ ಕೇಂದ್ರದ ಅನುದಾನ ಅಡಿಯಲ್ಲಿ ರಾಜ್ಯಕ್ಕೆ ನೀಡಬೇಕಾದ ಸುಮಾರು 17,000 ಕೋಟಿ ರೂ. ಹಣವನ್ನು ಮನ್ನಾ ಮಾಡಿದೆ. ಅಲ್ಲದೆ, ರಾಜ್ಯದ ಜಿಎಸ್ಟಿ ಪಾಲು ಹಾಗೂ ಪ್ರವಾಹ ಪರಿಹಾರ ನಿಧಿಯನ್ನೂ ನ್ಯಾಯಯುತವಾಗಿ ನೀಡಿಲ್ಲದಿರುವುದು ವಿಪರ್ಯಾಸ.
ಕರ್ನಾಟಕಕ್ಕೆ ಕಳೆದ 5 ವರ್ಷದಲ್ಲಿ ಆಗಿರುವ ಜಿಎಸ್ಟಿ ನಷ್ಟ ಎಷ್ಟು ಗೊತ್ತೇ?
ಅಂಕಿಅಂಶಗಳ ಪ್ರಕಾರ 2019-20 ನೇ ವಾರ್ಷಿಕ ಸಾಲಿನಲ್ಲಿ ಜಿಎಸ್ಟಿ ತೆರಿಗೆ ರೂಪದಲ್ಲಿ ಕರ್ನಾಟಕಕ್ಕೆ ಸಂದಾಯವಾಗಬೇಕಿದ್ದ ನಮ್ಮ ಪಾಲಿನ ರೂ. 9,000 ಕೋಟಿ ತೆರಿಗೆ ಹಣ ಈಗಾಗಲೇ ಖೋತಾ ಆಗಿದೆ. ಇನ್ನೂ 2020-21 ನೇ ಸಾಲಿನಲ್ಲಿ 11,000 ಕೋಟಿಗೂ ಅಧಿಕ ಹಣ ಕಡಿಮೆಯಾಗಿದೆ. ಈ ನಡುವೆ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲವೇಕಾದ ನೆರೆ-ಬರ ಪರಿಹಾರ ಹಣವೂ ಸಂದಾಯವಾಗಿಲ್ಲ. ಇವನ್ನೆಲ್ಲಾ ಲೆಕ್ಕಾ ಹಾಕಿದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳೆದ 5 ವರ್ಷದ ಅವಧಿಯಲ್ಲಿ ಕನಿಷ್ಟ 60,000 ಕೋಟಿ ರೂ ರಾಜ್ಯದ ಪಾಲಿನ ಹಣ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.
ನಮ್ಮ ಹಣ ಉತ್ತರಪ್ರದೇಶ-ಗುಜರಾತ್ಗೆ ಏಕೆ?
ಕೇಂದ್ರಕ್ಕೆ ಕರ್ನಾಟಕ ತೆರಿಗೆ ಸಂಗ್ರಹ ರೂಪದಲ್ಲಿ ರೂ.100 ನೀಡಿದರೆ ರೂ.42 ಮಾತ್ರ ರಾಜ್ಯಕ್ಕೆ ವಾಪಾಸು ಬರುತ್ತಿದೆ. ಆದರೆ, ಉತ್ತಪ್ರದೇಶಕ್ಕೆ ರೂ.198, ಗುಜರಾತ್ಗೆ ರೂ.235 ವಾಪಾಸು ನೀಡಲಾಗುತ್ತಿದೆ. ಕರ್ನಾಟದಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿರುವ ಹಣವನ್ನು ಹೀಗೆ ಉತ್ತರಪ್ರದೇಶ-ಗುಜರಾತ್ಗೆ ನಾವೇಕೆ ಕೊಡಬೇಕು? ಎಂಬುದು ಪ್ರಮುಖ ಪ್ರಶ್ನೆ.
ಬಿಹಾರ, ಉತ್ತರ ಪ್ರದೇಶಗಳೇನೋ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಆದರೆ, ಗುಜರಾತಿಗೇನಾಗಿದೆ? ಕರ್ನಾಟಕದ ಜನರೇಕೆ ಗುಜರಾತಿನ ಉದ್ಧಾರಕ್ಕೆ ಹಣ ನೀಡಬೇಕು? ಗುಜರಾತ್ ಮಾದರಿ ಹೇಳಕೊಂಡೇ ನರೇಂದ್ರ ಮೋದಿಯವರು ಪ್ರಧಾನಿಯಾದರು. ಹಾಗಿದ್ದರೆ ಗುಜರಾತ್ ಮಾದರಿ ಸುಳ್ಳೇ? ಎಂಬುದು ಮತ್ತೊಂದು ಪ್ರಶ್ನೆ. ಆದರೆ, ಈ ಯಾವ ಪ್ರಶ್ನೆಗೂ ಈವರೆಗೆ ಉತ್ತರ ಮಾತ್ರ ದಕ್ಕಿಲ್ಲ.
ಸಾಮಾನ್ಯವಾಗಿ ಒಂದು ಹಣಕಾಸು ಆಯೋಗದಿಂದ ಇನ್ನೊಂದು ಹಣಕಾಸು ಆಯೋಗಕ್ಕೆ ಬದಲಾದಾಗ ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು, ದುರಂತವೆಂದರೆ ವರ್ಷ ಕಳೆದಂತೆ ಕರ್ನಾಟಕದ ಪಾಲು ಮಾತ್ರ ಕಡಿಮೆಯಾಗುತ್ತಲೇ ಇದೆ ಎಂಬುದು ವಿರೋಧ ಪಕ್ಷಗಳ ನಿರಂತರ ಟೀಕೆ.
ಕೊರೋನಾ ಸಂದರ್ಭದಲ್ಲೂ ಕರ್ನಾಟಕ್ಕೆ ಅನ್ಯಾಯವೇಕೆ?
ಇತಿಹಾಸ ಕಾಣದ ನೆರೆ ಮತ್ತು ಬರದಿಂದಾಗಿ ಈಗಾಗಲೇ ಕರ್ನಾಟಕ ಕಂಗಾಲಾಗಿದೆ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಸ್ವತಃ ಸಿಎಂ ಬಿಎಸ್ವೈ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಈ ನಡುವೆ ಅಪ್ಪಳಿಸಿರುವ ಮಾರಣಾಂತಿಕ ಕೊರೋನಾ ವೈರಸ್ ಇಡೀ ರಾಜ್ಯದ ಹಣಕಾಸು ವ್ಯವಸ್ಥೆಯನ್ನೇ ಹಿಂಡಿ ಹಿಪ್ಪೆ ಮಾಡಿದೆ.
ಸರ್ಕಾರಿ ಮೂಲಗಳೇ ಹೇಳುವ ಪ್ರಕಾರ ರಾಜ್ಯದಲ್ಲಿ ಕೊರೋನಾ ವಿರುದ್ಧ ಹೋರಾಡುವಷ್ಟು ಹಣಕಾಸು ಸೌಲಭ್ಯ ಇಲ್ಲ. ಹೀಗಾಗಿ ರಾಜ್ಯ ಸರ್ಕಾರ ನೆಚ್ಚಿಕೊಂಡಿರುವುದು ಜಿಎಸ್ಟಿ ಹಣವನ್ನು ಮಾತ್ರ. ಆದರೆ, ಅದರಲ್ಲೂ ರಾಜ್ಯಕ್ಕೆ ನಿರಂತರವಾಗಿ ತಾರತಮ್ಯ ಎಸಗಲಾಗುತ್ತಿದೆ. ಈ ಬಾರಿಯ ಜಿಎಸ್ಟಿ ಪಾಲನ್ನೂ ನ್ಯಾಯಯುತವಾಗಿ ನೀಡಿಲ್ಲ. ಕರ್ನಾಟಕಕ್ಕೆ ಮಾತ್ರ ಏಕೆ ಈ ನಿರಂತರ ತಾರತಮ್ಯ? ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದಾಗ್ಯೂ ರಾಜ್ಯಕ್ಕೆ ಆದ ಲಾಭವೇನು? ಈ ಅನ್ಯಾಯಕ್ಕೆ ಕೊನೆ ಎಂದು? ಈ ಎಲ್ಲಾ ಪ್ರಶ್ನೆಗೆ ಉತ್ತರಿಸುವವರಾರು?