ಆರ್ ಎಸ್ ಎಸ್ ಮತ್ತು ಬಿಜೆಪಿಯ ನೀತಿಗಳನ್ನು, ಆಡಳಿತವನ್ನು ಪ್ರಶ್ನಿಸುವವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ನಿಂದಿಸುವುದು, ದೇಶದ್ರೋಹಿಗಳೆಂದು ಜರಿಯುವುದು ಮುಂತಾದ ನರೇಂದ್ರ ಮೋದಿ ಯುಗದ ವರಸೆಗಳು ಈಗ ಇನ್ನಷ್ಟು ಮೊನಚುಗೊಂಡಿವೆ. ಜರಿಯುವ, ನಿಂದಿಸುವ ಹಂತದಿಂದ ಮುಂದೆ ಹೋಗಿ, ದೇಶದ ಸಂವಿಧಾನದ ಬಲದ ಮೇಲೆ ತಮಗೆ ಸವಾಲೊಡ್ಡುವ ಜನರನ್ನು ಸುಳ್ಳು ಸಾಕ್ಷ್ಯಗಳ ಬಲದ ಮೇಲೆ ನೇರವಾಗಿ ದೇಶದ್ರೋಹದ ಕಾಯ್ದೆಯಡಿ ಜೈಲಿಗೆ ಹಾಕಲಾಗುತ್ತಿದೆ.
ಹಾಗೆ ನೋಡಿದರೆ ಇದು ತೀರಾ ಹೊಸ ಮಾದರಿಯೇನಲ್ಲ. 20018ರಲ್ಲಿ ಭೀಮಾ ಕೋರೆಗಾಂವ್ ಹೋರಾಟದ 200 ನೇ ವರ್ಷದ ವಿಜಯೋತ್ಸವ ಸಂದರ್ಭದಲ್ಲಿ ದಲಿತರ ಮೇಲೆ ದಾಳಿ ಮಾಡಿದ ಆರ್ ಎಸ್ ಎಸ್ ಮತ್ತು ಸಂಘಪರಿವಾರದ ಮಂದಿಯನ್ನು ಮುಕ್ತವಾಗಿ ಬಿಟ್ಟು, ಅವರ ಬದಲಿಗೆ, ಸ್ವತಃ ದಾಳಿಗೊಳಗಾದವರನ್ನೇ ಬಂಧಿಸಿ, ದಲಿತಪರ ಚಿಂತಕರನ್ನು, ಹೋರಾಟಗಾರರನ್ನು ಬಂಧಿಸಲಾಯಿತು. ನಂತರ ಬಂಧಿತರ ವಿರುದ್ಧ ಹಿಂಸೆಗೆ ಕುಮ್ಮಕ್ಕು ನೀಡಿದ, ಪ್ರಧಾನಿ ಹತ್ಯೆಗೆ ಸಂಚು ಮಾಡಿದ ಮತ್ತು ಆ ಮೂಲಕ ದೇಶದ ವಿರುದ್ಧವೇ ಸಂಚು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿ ‘ಅಂದಿನ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಗೃಹ ಖಾತೆಯ ಆಣತಿಯಂತೆ’ ಆರೋಪ ಪಟ್ಟಿ ಸಲ್ಲಿಸಲಾಯಿತು.
Also Read: ಕರೋನಾ ಭೀತಿ: ಸುಧಾ ಭಾರದ್ವಾಜ್- ಶೋಮಾ ಸೇನ್ ಬಿಡುಗಡೆಗೆ ಗಣ್ಯರ ದನಿ
ಇದು ದೇಶದ ದಲಿತ ಹೋರಾಟದ ಮೇಲೆ ಸರ್ಕಾರ ನಡೆಸಿದ ದಾಳಿ ಎಂದೇ ಹೋರಾಟಗಾರರು ಬಣ್ಣಿಸಿದರು. ಅಷ್ಟು ಸಾಲದು ಎಂಬಂತೆ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಸರ್ಕಾರದ ಸೂಚನೆಯಂತೆ ಪೊಲೀಸರು, ಆನಂದ್ ತೇಲ್ತುಂಬ್ದೆ ಸೇರಿದಂತೆ ಹಲವು ಚಿಂತಕರು ಮತ್ತು ಹೋರಾಟಗಾರರ ವೈಯಕ್ತಿಕ ಲ್ಯಾಪ್ ಟಾಪ್, ಇಮೇಲ್, ಮತ್ತು ಅವರ ಮೊಬೈಲ್ ಮುಂತಾದ ಸಾಧನಗಳನ್ನು ಹ್ಯಾಕ್ ಮಾಡಿ, ಅಲ್ಲಿ ಅವರ ವಿರುದ್ಧದ ಗಂಭೀರ ಆರೋಪಗಳಿಗೆ ಅನುಸಾರವಾಗಿ ಕೆಲವು ನಕಲಿ ದಾಖಲೆಗಳನ್ನು, ಸಾಕ್ಷ್ಯಗಳನ್ನು ಸೃಷ್ಟಿಸಿದರು. ಆ ಮೂಲಕ ಹೋರಾಟಗಾರರನ್ನು ಶಾಶ್ವತವಾಗಿ ಜೈಲಿನಲ್ಲಿಡಲು ಮತ್ತು ಅವರ ವಿರುದ್ಧ ಜನಾಭಿಪ್ರಾಯ ಮೂಡಿಸಲು ಸರ್ಕಾರವೇ ಸಂಚು ನಡೆಸಿತ್ತು ಎಂಬ ಆಘಾತಕಾರಿ ಸಂಗತಿಯನ್ನು ‘ದ ಕ್ಯಾರವಾನ್’ನಂತಹ ಪ್ರಮುಖ ಮಾಧ್ಯಮದ ಸರಣಿ ತನಿಖಾ ವರದಿಗಳು ಬೆಳಕಿಗೆ ತಂದಿದ್ದವು.
ಆದರೆ, ಎರಡು ವರ್ಷಗಳಾದರೂ, ಬಂಧಿತರ ವಿರುದ್ಧದ ಪೊಲೀಸರು ಹಾಕಿರುವ ಪ್ರಕರಣಗಳು ದಿನ ಕಳೆದಂತೆ ಗಂಭೀರ ಆಯಾಮ ಪಡೆದುಕೊಳ್ಳುತ್ತಲೇ ವಿನಃ, ಅದರಿಂದ ಹೊರಬರುವುದು ಆ ಹೋರಾಟಗಾರರಿಗೆ ಸಾಧ್ಯವೇ ಆಗಿಲ್ಲ. ಇದೀಗ ಕಳೆದ ಕೆಲವು ತಿಂಗಳಿಂದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ)ಕ್ಕೆ ಹಸ್ತಾಂತರಿಸಲಾಗಿದೆ ಮತ್ತು ನೇರವಾಗಿ ಅಮಿತ್ ಶಾ ಅವರೇ ಗೃಹ ಸಚಿವಾಲಯದ ಮೂಲಕ ಈ ಪ್ರಕರಣದ ಮೇಲೆ ಕಣ್ಣಿಟ್ಟಿದ್ದಾರೆ. ದೇಶವ್ಯಾಪಿ ಬೀದಿ ಹೋರಾಟಗಳು, ಆನ್ ಲೈನ್ ಅಭಿಯಾನಗಳು, ಕಾನೂನು ಹೋರಾಟಗಳು, ಮಾನವಹಕ್ಕು ಆಯೋಗಕ್ಕೆ ಮೊರೆ,.. ಯಾವುದೂ ಫಲ ಕೊಟ್ಟಿಲ್ಲ. ಅಷ್ಟರಮಟ್ಟಿಗೆ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವದ ಬಲದ ಮೇಲೆ ಹೋರಾಟಗಳನ್ನು ಕಟ್ಟುತ್ತೇವೆ, ಅನ್ಯಾಯಗಳನ್ನು ಪ್ರಶ್ನಿಸುತ್ತೇವೆ ಎನ್ನುವವರ ಎದೆನಡುಗಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.
Also Read: ಭೀಮಾ ಕೋರೆಗಾಂವ್ ಪ್ರಕರಣದ ಹಿಂದಿದೆ ಮಾಲ್ ವೇರ್ ಅಸ್ತ್ರದ ಪಿತೂರಿ!
ಈಗ ಈ ಭೀಮಾ ಕೋರೆಗಾಂವ್ ಪ್ರಕರಣದ ಮಾದರಿ ಸರ್ಕಾರದ ಕೈಗೆ ಹೊಸ ಅಸ್ತ್ರವಾಗಿ ಒದಗಿ ಬಂದಿದ್ದು, ದೇಶದ ಬೇರೆ ಬೇರೆ ಭಾಗದ ಮತ್ತು ಬೇರೆ ಬೇರೆ ಸ್ವರೂಪದ ಜನಪರ ಹೋರಾಟಗಳನ್ನು, ಪ್ರಜಾಸತ್ತಾತ್ಮಕ ಚಳವಳಿಗಳನ್ನು ಪರಿಣಾಮಕಾರಿ ಹತ್ತಿಕ್ಕುವ ಮೂಲಕ, ಸಂವಿಧಾನ ಮತ್ತು ಅಂಬೇಡ್ಕರ್ ಸಿದ್ಧಾಂತದ ಬಲದ ಮೇಲೆ ಜನಜಾಗೃತಿ ಮೂಡಿಸುವ, ಆಳುವ ಮಂದಿಯನ್ನು ಪ್ರಶ್ನಿಸುವ ಛಾತಿ ತೋರುವವರನ್ನು ಬಗ್ಗುಬಡಿಯಲಾಗುತ್ತಿದೆ. ಆರ್ ಎಸ್ ಎಸ್ ಮತ್ತು ಅದರ ಪರಿವಾರದ ಕಟ್ಟಾ ಹಿಂದುತ್ವವಾದ ಮತ್ತು ಅಲ್ಪಸಂಖ್ಯಾತರು, ದಲಿತರ ವಿರುದ್ಧದ ಅದರ ಕಾಯತಂತ್ರಗಳನ್ನು ಪ್ರಶ್ನಿಸುವ, ಅಂತಹದ್ದಕ್ಕೆ ಸವಾಲೊಡ್ಡುವವರನ್ನು ಗುರಿಯಾಗಿಸಿಕೊಂಡು ಭೀಮಾ ಕೋರೆಗಾಂವ್ ಪ್ರಕರಣದ ಮಾದರಿಯ ಕಾರ್ಯಾಚರಣೆ ಜಾರಿಗೆ ತರಲಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಭೀಮಾ ಕೋರೆಗಾಂವ್ ಪ್ರಕರಣ ಬಿಜೆಪಿ ಸರ್ಕಾರದ ಪಾಲಿಗೆ ಬಹಳ ಶಕ್ತಿಶಾಲಿ ಅಸ್ತ್ರ ಎಂಬುದು ಮನವರಿಕೆಯಾದ ಬೆನ್ನಲ್ಲೇ, ಅದನ್ನು ಈಗ ದೆಹಲಿಯ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ. ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾ ಮತ್ತು ಜೆ ಎನ್ ಯುನ ಇಬ್ಬರು ವಿದ್ಯಾರ್ಥಿಗಳಾದ ದೇವಾಂಗನಾ ಕಾಲಿತಾ ಮತ್ತು ನತಾಶಾ ನರ್ವಾಲ್ (ಪಿಂಜ್ರಾ ತೋಡ್ ಸಂಘಟನೆ ಕಾರ್ಯಕರ್ತರು) ಅವರ ಬಂಧನ ಇದಕ್ಕೆ ಇತ್ತೀಚಿನ ತಾಜಾ ನಿದರ್ಶನ ಎಂದು ದೆಹಲಿಯ ಸಮಾಜಶಾಸ್ತ್ರಜ್ಞೆ ನಂದಿನಿ ಸುಂದರ್ ವಿಶ್ಲೇಷಿಸಿದ್ದಾರೆ.
ಎನ್ ಡಿಟಿವಿ ಸುದ್ದಿತಾಣದಲ್ಲಿ ನಂದಿನಿ ಅವರು ಮಾಡಿರುವ ವಿಶ್ಲೇಷಣೆ ಪ್ರಕಾರ, “ಒಂದು ಘಟನೆಯನ್ನೇ ನೆಪವಾಗಿಟ್ಟುಕೊಂಡು ಸೈದ್ಧಾಂತಿಕವಾಗಿ ನಿಮಗೆ ತದ್ವಿರುದ್ಧ ದಿಕ್ಕಿನಲ್ಲಿರುವವರಲ್ಲಿ ಕೆಲಸವರನ್ನು ಮೊದಲು ಬಂಧಿಸುವುದು; ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೊದಲು ಐವರನ್ನು ಬಂಧಿಸಿದ ಮಾದರಿಯಲ್ಲಿ, ಅಥವಾ ಜಾಮಿಯಾ ವಿದ್ಯಾರ್ಥಿಗಳಾದ ಸಫೋರಾ ಝರ್ಗರ್ ಮತ್ತು ಮಿರಾನ್ ಹೈದರ್ ಅವರನ್ನು ಬಂಧಿಸಿದಂತೆ. ಕ್ರಮೇಣ ಅವರ ವಿಚಾರಣೆಯ ಮಾಹಿತಿಯನ್ನು ನಿಮಗೆ ಬೇಕಾದಂತೆ ತಿರುಚಿ, ಅದರ ಆಧಾರದ ಮೇಲೆ ಮತ್ತಷ್ಟು ಹೋರಾಟಗಾರರ ಬಂಧನಕ್ಕೆ ಜಾಲ ಬೀಸುವುದು, ದಲಿತರು, ಮಾವೋವಾದಿಗಳು ಮತ್ತು ಇಸ್ಲಾಮಿಸ್ಟರು ಅಥವಾ ಮತ್ತೆ ಇನ್ನಾರೂ ದೇಶದ ವಿರುದ್ಧ ಪರಸ್ಪರ ಕೈಜೋಡಿಸಿದ್ದಾರೆ ಎಂದು ದೊಡ್ಡ ಅಪಾಯದ ಚಿತ್ರಣ ಮೂಡಿಸುವುದು, ಆ ಮೂಲಕ ಹೋರಾಟಗಾರರ, ಚಳವಳಿಗಾರರ ಬಂಧನಕ್ಕೆ ವೇದಿಕೆ ಸಿದ್ಧಪಡಿಸುವುದು. ಆದರೆ ವಾಸ್ತವವಾಗಿ ತನಗೆ ದೊಡ್ಡ ಅಪಾಯವಿದೆ ಎಂದು ಈ ಸರ್ಕಾರ ಭಯಪಡುತ್ತಿರುವುದು ದೇಶದ ಸಂವಿಧಾನದ ಬಗ್ಗೆಯೇ. ಯಾಕೆಂದರೆ, ಅದೇ ಸಂವಿಧಾನದ ಹೆಸರಿನಲ್ಲಿಯೇ, ಅದರ ಬಲದ ಮೇಲೆಯೇ ಈ ಎಲ್ಲಾ ಹೋರಾಟಗಾರರು, ಚಳವಳಿಗಾರರು ಕೆಲಸ ಮಾಡುತ್ತಿರುವುದು. ಹಾಗಾಗಿ ಸರ್ಕಾರಕ್ಕೆ ಸಂವಿಧಾನ ಮತ್ತು ಸಂವಿಧಾನದ ಬಲದ ಮೇಲಿನ ದನಿಗಳನ್ನು ದಮನ ಮಾಡುವುದೇ ಮುಖ್ಯ”.
“ನವ ಬ್ರಾಹ್ಮಣಶಾಹಿ ವಿರುದ್ಧದ ದಲಿತರ ಹೊಸ ಪ್ರಜ್ಞೆಯ ಹೋರಾಟದ ಹೆಗ್ಗುರುತಾಗಿ ಸಂಘಟಿತವಾದ ಭೀಮಾ ಕೋರೆಗಾಂವ್ ಹೋರಾಟವನ್ನು ಸರ್ಕಾರದ ವಿರುದ್ಧದ ಸಂಚು ಎಂಬಂತೆ ಚಿತ್ರಿಸುವಲ್ಲಿ ಬಹುತೇಕ ಯಶಸ್ವಿಯಾಗಿರುವ ಬಿಜೆಪಿ ಸರ್ಕಾರ, ಇದೀಗ ಸಿಎಎ-ಎನ್ ಆರ್ ಸಿ ವಿರುದ್ಧದ ಹೋರಾಟವನ್ನು ಕೂಡ ಹಾಗೆಯೇ ಪ್ರತಿಬಿಂಬಿಸಲು ಹೊರಟಿದೆ. ಆ ದಿಸೆಯಲ್ಲಿ ನೋಡಿದರೆ, ಈ ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇರುವ ಕನಿಷ್ಟ ಆರು ಅಂಶಗಳನ್ನು ಗುರುತಿಸಬಹುದು” ಎಂದು ನಂದಿನಿ ಪಟ್ಟಿ ಮಾಡಿದ್ದಾರೆ.
ಆ ಪೈಕಿ ಮೊದಲನೆಯದು; ಸಂವಿಧಾನಿಕವಾದ ಹೋರಾಟ, ಚಳವಳಿಯನ್ನು ಕಾನೂನುಬಾಹಿರ ಎಂಬಂತೆ ಚಿತ್ರಿಸುವುದು. ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಭೀಮಾ ಕೋರೆಗಾಂವ್ ಹೋರಾಟ, ದಲಿತರ ಸ್ವಾಭಿಮಾನದ ಹೋರಾಟವಾಗಿತ್ತು ಮತ್ತು ಆ ಸಂದರ್ಭದಲ್ಲಿ ಆರ್ ಎಸ್ ಎಸ್ ಮತ್ತು ಅದರ ಪರಿವಾರದ ಮಂದಿ ದಲಿತರ ಮೇಲೆ ದಾಳಿ ನಡೆಸಿದರು. ಆ ದಾಳಿಯಲ್ಲಿ ದಲಿತ ಯುವಕನೊಬ್ಬ ಜೀವ ಕಳೆದುಕೊಂಡ, ಪರಿಣಾಮವಾಗಿ ದೇಶವ್ಯಾಪಿ ಪ್ರತಿಭಟನೆಗಳು ನಡೆದವು ಎಂಬ ಮಾಹಿತಿಯನ್ನೆಲ್ಲಾ ಬದಿಗೆ ಸರಿಸಿ, ಅದೊಂದು ದಲಿತರ ಹಿಂಸಾ ಹೋರಾಟ, ದಂಗೆ, ದೇಶದ್ರೋಹಿ ಶಕ್ತಿಗಳ ಸಂಚಿನ ಭಾಗ ಎಂಬಂತೆ ಬಿಂಬಿಸಲಾಯಿತು. ಕ್ರಮೇಣ ಈಗ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದ ಚಿತ್ರ ಹೀಗೆ ಬಿಂಬಿಸಿದ್ದೇ. ಇದೇ ಮಾದರಿ, ಎನ್ ಆರ್ ಸಿ ಹೋರಾಟದ ವಿಷಯದಲ್ಲಿಯೂ ಮುಂದುವರಿದಿದೆ. ಹೋರಾಟದ ಸಂವಿಧಾನಿಕ ವಿಧಾನ, ಪ್ರಜಾಸತ್ತಾತ್ಮಕ ಶಾಂತಿಯುತ ಹೋರಾಟ, ಎಲ್ಲಾ ಜನಸಮುದಾಯಗಳ ಭಾಗವಹಿಸುವಿಕೆ ಮುಂತಾದ ಅಂಶಗಳನ್ನು ಮರೆಮಾಚುತ್ತಾ, ಕ್ರಮೇಣ ಅದೊಂದು ಹಿಂಸಾ ಉದ್ದೇಶದ ಸಂಚಿನ ಭಾಗ ಎಂಬಂತೆ ಬಿಂಬಿಸಲಾಗುತ್ತಿದೆ.
ಎರಡನೆಯದಾಗಿ, ಬಲಪಂಥೀಯ ಶಕ್ತಿಗಳು, ಆಳುವ ಪಕ್ಷದ ಹಿಂಬಾಲಕರು ಮತ್ತು ಪೊಲೀಸರು ನಡೆಸಿದ ಹಿಂಸೆಯ ಸಂತ್ರಸ್ತರನ್ನೇ ಹಿಂಸೆಗೆ ಕುಮ್ಮಕ್ಕು ನೀಡಿದವರು, ಗಲಭೆಕೋರರು ಎಂದು ಬಿಂಬಿಸುವುದು. ಭೀಮಾ ಕೋರೆಗಾಂವ್ ಮತ್ತು ಕಳೆದ ಫೆಬ್ರವರಿಯಲ್ಲಿ ಎನ್ ಆರ್ ಸಿ ಸಂಘರ್ಷದ ಮುಂದುವರಿಕೆಯಾಗಿ ಸಂಭವಿಸಿದ ದೆಹಲಿ ಹಿಂಸಾಚಾರದ ವಿಷಯದಲ್ಲಿ ಆದದ್ದು ಇದೇ. ಮೂಲ ದಾಳಿಕೋರರು, ಹಿಂಸೆಗೆ ಕುಮ್ಮಕ್ಕು ನೀಡಿದವರು ಮತ್ತು ಅದಕ್ಕೆ ಬೆಂಬಲವಾಗಿ ನಿಂತ ಪೊಲೀಸರ ವರ್ತನೆಗಳನ್ನು ಜಾಣ್ಮೆಯಿಂದ ಮರೆಮಾಚಿ, ಹಿಂಸೆಯ, ದಬ್ಬಾಳಿಕೆಯ, ದೌರ್ಜನ್ಯದ ಬಲಿಪಶುಗಳನ್ನೇ ವಿಲನ್ ಮಾಡಲಾಯಿತು.
ಮೂರನೆಯದಾಗಿ ಯಾವುದೇ ದುರ್ಬಲ ಗುಂಪು ಅಥವಾ ಸಮುದಾಯ ತನ್ನ ಸಂವಿಧಾನಿಕ ಬಲದ ಮೇಲೆ ತನ್ನ ಹಕ್ಕುಗಳಿಗಾಗಿ ಹೋರಾಡಿದರೆ, ಆಳುವ ಸರ್ಕಾರಕ್ಕೆ ಸವಾಲೊಡ್ಡಿದರೆ ಅಂಥವರ ವಿರುದ್ಧ ಪೊಲೀಸ್ ಮತ್ತು ತನ್ನದೇ ಪಡೆಯ ಮೂಲಕ ಸೇಡು ತೀರಿಸಿಕೊಳ್ಳುವುದು. ದೇಶವನ್ನು ತನ್ನ ಮೂಗಿನ ನೇರಕ್ಕೆ ತರುವ, ಹಿಂದೂ ಮೇಲ್ಜಾತಿಗಳ ಸ್ವತ್ತಾಗಿ ಪರಿವರ್ತಿಸುವ ಆರ್ ಎಸ್ ಎಸ್ ಅಜೆಂಡಾವನ್ನು ಪ್ರಶ್ನಿಸುವವರನ್ನು ಹೀಗೆ ಬಗ್ಗುಬಡಿಯಾಗುತ್ತದೆ ಎಂಬುದಕ್ಕೆ ಭೀಮಾ ಕೋರೆಗಾಂವ್ ಮತ್ತು ಸಿಎಎ ಹೋರಾಟಗಳೆರಡೂ ಉದಾಹರಣೆಗಳಾಗಿ ನಿಂತಿವೆ.
ನಾಲ್ಕನೆಯದಾಗಿ 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ವಿಫಲಗೊಳಿಸಲು ಬ್ರಿಟಿಷರು ಬಳಸಿದ ಒಡೆದು ಆಳುವ ನೀತಿ. ಭೀಮಾ ಕೋರೆಗಾಂವ್ ಮತ್ತು ಸಿಎಎ ಹೋರಾಟಗಳೆರಡನ್ನೂ ಅವುಗಳ ಸಾಮುದಾಯಿಕ ಒಗ್ಗಟ್ಟಿನ ಹೋರಾಟದ ಸ್ವರೂಪದಿಂದ ಬೆಚ್ಚಿ, ಅವುಗಳನ್ನು ಕೆಲವು ಸಮುದಾಯದ, ಗುಂಪಿನ ಸಂಚು ಎಂಬಂತೆ ಬಿಂಬಿಸಲಾಯಿತು. ಶಾಹೀನ್ ಭಾಗ್ ಪರ ಚಂದ್ರಶೇಖರ ಆಜಾದ್ ರಂತಹ ದಲಿತ ನಾಯಕರಿಂದ ಹಿಡಿದು ದೇಶದ ಹಲವು ಸಮುದಾಯ, ವರ್ಗದ ಜನ ದನಿ ಎತ್ತಿದ ಬೆನ್ನಲ್ಲೇ ಅದನ್ನು ಇಸ್ಲಾಮಿಸ್ಟ್- ಮಾರ್ಕ್ಸ್ ವಾದಿ ಸಂಚು ಎಂಬಂತೆ ಬಿಂಬಿಸಲಾಯಿತು.
ಐದನೆಯದಾಗಿ, ಇಂತಹ ಹೋರಾಟಗಳಿಗೆ ದೊಡ್ಡ ಮಟ್ಟದ ತೀವ್ರತೆ ತರುವ ಯುವ ಸಮುದಾಯವನ್ನು ಹೋರಾಟಕ್ಕೆ ಪ್ರೇರೇಪಿಸುವ ವಿದ್ಯಾರ್ಥಿ ಸಂಘಟನೆಗಳನ್ನು ಬಗ್ಗುಬಡಿಯಲು ವಿದ್ಯಾರ್ಥಿಗಳು ಮತ್ತು ಸಮಾಜದ ನಡುವಿನ ಸಂಬಂಧವನ್ನು ಕಡಿದುಹಾಕುವ ತಂತ್ರಗಾರಿಕೆ. ಜೆಸಿಸಿ, ಪಿಂಜ್ರಾ ತೋಡ್, ಎಐಎಸ್ಎ ನಂತಹ ಸಮುದಾಯದಲ್ಲಿ ಪ್ರಭಾವ ಹೊಂದಿರುವ ಸಂಘಟನೆಗಳನ್ನು ಹಣಿಯಲು ಆರ್ ಎಸ್ ಎಸ್ ಮತ್ತು ಸಂಘಪರಿವಾರ ಬಳಸಿ ಅವುಗಳ ವಿರುದ್ಧ ವದಂತಿಗಳನ್ನು ಬಿತ್ತಲಾಯಿತು. ಜೊತೆಗೆ ಪೊಲೀಸರನ್ನು ಬಳಸಿ ವಿದ್ಯಾರ್ಥಿ ಹೋರಾಟವನ್ನು ದೇಶ ವಿರೋಧಿ ಚಟುವಟಿಕೆ ಎಂಬಂತೆ ಬಿಂಬಿಸಲಾಯಿತು.
ಆರನೆಯದಾಗಿ ಇಂತಹ ಹೋರಾಟಗಳಿಗೆ ಸ್ಪಷ್ಟ ಸ್ವರೂಪ ಮತ್ತು ಮಾರ್ಗದರ್ಶನ ಮಾಡುವ ಚಳುವಳಿ ನಾಯಕರ ಮೇಲೆ ಕ್ರಿಮಿನಲ್ ಪ್ರಕರಣ ಹೂಡಿ, ಗಂಭೀರ ಆರೋಪಗಳನ್ನು ಹೊರಿಸಿ ಅವರು ತಮ್ಮೆಲ್ಲಾ ಶಕ್ತಿ- ಸಂಪನ್ಮೂಲವನ್ನು ಕಾನೂನು ಹೋರಾಟಕ್ಕೇ ತೊಡಗಿಸಿಕೊಳ್ಳುವಂತೆ ಮಾಡುವುದು ಮತ್ತು ಆ ಮೂಲಕ ಚಳವಳಿಗೆ ಹಿನ್ನಡೆಯಾಗುವಂತೆ ನೋಡಿಕೊಳ್ಳುವುದು.
ಭೀಮಾ ಕೋರೆಗಾಂವ್ ಮತ್ತು ಸಿಎಎ ಹೋರಾಟಗಾರರ ಮೇಲೆ ಹೇರಿರುವ ಪ್ರಕರಣಗಳು ಮತ್ತು ಆ ಕುರಿತ ಎಫ್ ಐಆರ್ ಗಳನ್ನು ಗಮನಿಸಿದರೆ, ಈ ಎಲ್ಲಾ ಅಂಶಗಳನ್ನು ಹೇಗೆ ಒಂದು ಮಾಡಲ್ ಕೋಡ್ ರೀತಿಯಲ್ಲಿ ಬಿಜೆಪಿ ಸರ್ಕಾರ ಪಾಲನೆ ಮಾಡುತ್ತಿದೆ ಮತ್ತು ಆ ಮೂಲಕ ಜನಪರ ಹೋರಾಟಗಳನ್ನು ಬಗ್ಗುಬಡಿಯುವುದಷ್ಟೇ ಅಲ್ಲದೆ, ಮೇಲ್ಜಾತಿ- ಮೇಲ್ವರ್ಗದ ಸ್ವತ್ತಾಗಿ ದೇಶವನ್ನು ಬದಲಾಯಿಸುವ ಕಟ್ಟಾ ಹಿಂದುತ್ವದ ಅಜೆಂಡಾಕ್ಕೆ ಇರುವ ಸವಾಲುಗಳನ್ನು ನಿವಾರಿಸಿಕೊಳ್ಳಲಾಗುತ್ತಿದೆ ಎಂಬುದು ಮನದಟ್ಟಾಗದೇ ಇರದು ಎಂದು ನಂದಿನಿ ಸುಂದರ್ ವಿವರಿಸಿದ್ದಾರೆ.