ಇಡೀ ವಿಶ್ವವನ್ನೇ ನಡುಗಿಸಿರುವ ಭೀಕರ ಮಾರಿ ಕರೋನಾ ಸೋಂಕನ್ನು ಹೊಡೆದೋಡಿಸಲು ಇಡೀ ವಿಶ್ವವೇ ಒಂದಾಗಿದೆ. ಹತ್ತಾರು ದೇಶಗಳ ವೈದ್ಯಕೀಯ ಸಿಬ್ಬಂದಿಗಳು, ಪೋಲೀಸ್ ಸಿಬ್ಬಂದಿಗಳು, ಪೌರ ಕಾರ್ಮಿಕರು ಕರೋನಾ ಸೋಂಕನ್ನು ನಿರ್ಮೂಲನೆಗೊಳಿಸಲು ಹಗಲಿರುಳೂ ಶ್ರಮಿಸುತಿದ್ದಾರೆ. ಈ ಮುಂಚೂಣಿಯಲ್ಲಿರುವ ಸಿಬ್ಬಂದಿಗಳು ,ವೈದ್ಯರೂ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತಿದ್ದಾರೆ. ವಿಶ್ವ ಈವರೆಗೆ ಕಂಡಿರುವ ಭೀಕರ ಸೋಂಕುಗಳಿಗಿಂತಲೂ ಕರೋನಾ ಸೋಂಕು ಮಹಾ ಭಯಾನಕವಾದುದಾಗಿದೆ. ಎಕೆಂದರೆ ಈತನಕ ಮಾನವರನ್ನು ಕಾಡಿರುವ ಎಲ್ಲ ಖಾಯಿಲೆಗಳು ಕೂಡ ಇದನ್ನು ಗುಣಪಡಿಸಿದ ಸಿಬ್ಬಂದಿಗಳಿಗೆ ತಗುಲಿದ್ದು ತುಂಬಾ ಕಡಿಮೆ. ಆದರೆ ಈ ಭೀಕರ ಸೋಂಕು ರೋಗಿಗಳ ಸಂಪರ್ಕಕ್ಕೆ ಬಂದ ಎಲ್ಲರಿಗೂ ತಗುಲುತ್ತಿದೆ. ಹೀಗಾಗಿ ಇದರ ಚಿಕಿತ್ಸೆ ನೀಡಲೂ ವೈದ್ಯಕೀಯ ಸಿಬ್ಬಂದಿ ಭಯಪಡುತಿದ್ದಾರೆ.
ಈ ನಡುವೆ ದೇಶದಲ್ಲಿ ಭಾರೀ ಸುದ್ದಿ ಮಾಡಿದ ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಮರ್ಕಜ್ ನಲ್ಲಿ ತಬ್ಲಿಗಿ ಜಮಾತಿಗಳಿಗೆ ಕರೋನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಪತ್ತೆ ಆಯಿತು. ನಂತರ ಪೋಲೀಸರು ಧಾಳಿ ನಡೆಸಿ ಸೋಂಕಿತರನ್ನು ಬಲವಂತವಾಗಿ ಆಸ್ಪತ್ರೆಗಳಿಗೆ ದಾಖಲಿಸಿದರು. ಆಸ್ಪತ್ರೆಗಳಲ್ಲೂ ಕೂಡ ತಬ್ಲಿಗಿಗಳು ವೈದ್ಯಕೀಯ ಸಿಬ್ಬಂದಿಗಳು , ವೈದ್ಯರೊಂದಿಗೆ ದುರ್ವರ್ತನೆ ತೋರಿದರು , ಹಲ್ಲೆ ನಡೆಸಿದರು ಎಂದು ಪತ್ರಿಕೆಗಳಲ್ಲಿ ರಂಜಿತ ಪ್ರಚಾರ ನೀಡಲಾಯಿತು. ಇದರ ಬೆನ್ನಲ್ಲೇ ವಿವಿಧ ರಾಜ್ಯಗಳಲ್ಲೂ ಕರೋನಾ ವಿರುದ್ದ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲೆ ರೋಗಿಗಳು ಮತ್ತು ಅವರ ಸಂಬಂದಿಕರು ಹಲ್ಲೆ ನಡೆಸಿದ ಕುರಿತು ವರದಿ ಆಗತೊಡಗಿತು.
ಹಲ್ಲೆ ಪ್ರಕರಣಗಳು ಹೆಚ್ಚಾಗತೊಡಗಿದಂತೆ ಇದನ್ನು ಪ್ರತಿಭಟಿಸಲು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಏಪ್ರಿಲ್ ೨೨ ಹಾಗೂ ೨೩ ರಂದು ದೇಶಾದ್ಯಂತ ಎರಡು ದಿನಗಳ ಮುಷ್ಕರವನ್ನೂ ಆಯೋಜಿಸಿತು. ಕೂಡಲೇ ಎಚ್ಚೆತ್ತ ಕೇಂದ್ರ ಸರ್ಕಾರವು ಕಳೆದ ಏಪ್ರಿಲ್ ೨೨ ರಂದು ೧೮೯೭ ರ ಸಾಂಕ್ರಾಮಿಕ ಕಾಯ್ದೆಗೆ ತಿದ್ದುಪಡಿ ತಂದು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದರೆ ಗರಿಷ್ಟ ೭ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ೫ ಲಕ್ಷ ರೂಪಾಯಿ ದಂಡ ವಿಧಿಸುವುದಕ್ಕೆ ಕಾನೂನು ಮಾರ್ಪಡಿಸಿತು. ಈ ಕುರಿತು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಆಸ್ಪತ್ರೆಗಳಲ್ಲಿ ಆಸ್ತಿ ಪಾಸ್ತಿ ನಷ್ಟ ಮಾಡಿದರೆ ಅದರ ನಷ್ಟದ ಎರಡು ಪಟ್ಟು ದಂಡ ವಸೂಲಿ ಮಾಡಲೂ ಕಾಯ್ದೆಯಲ್ಲಿ ಅವಕಾಶವಿದೆ ಎಂದು ಹೇಳಿದರು. ಈ ಪ್ರಕಟಣೆಯ ನಂತರ ಅಸೋಸಿಯೇಷನ್ ಉದ್ದೇಶಿತ ಮುಷ್ಕರವನ್ನು ಕೈಬಿಟ್ಟಿತು.

ಸರ್ಕಾರ ಮುಂಚೂಣಿಯಲ್ಲಿರುವ ಕರೋನಾ ವಾರಿಯರ್ಸ್ ಎಂದೇ ಕರೆಯುವ ಈ ಸಿಬ್ಬಂದಿಗಳ ರಕ್ಷಣೆಗಾಗಿ ಕಾನೂನು ತಿದ್ದುಪಡಿ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ. ಆದರೆ ಇತ್ತೀಚಿನ ವರದಿಗಳ ಪ್ರಕಾರ ವೈದ್ಯಕೀಯ ಸಿಬ್ಬಂದಿಗಳಿಗೂ ಸೋಂಕು ತಗುಲಿರುವ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೇನು ಗೊತ್ತೆ ? ಕೇಂದ್ರ ಸರ್ಕಾರ ಈ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಸರಬರಾಜು ಮಾಡಿರುವ ಕಳಪೆ ಗುಣಮಟ್ಟದ ವೈಯಕ್ತಿಕ ಸುರಕ್ಷತಾ ಸಾಧನಗಳು ಎನ್ನಲಾಗಿದೆ. ಈ ಕುರಿತು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿರಿಯ ವೈದ್ಯರೇ ಸ್ವತಃ ಆರೋಪ ಮಾಡಿದ್ದಾರೆ.
ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ ಜೈ ಪ್ರಕಾಶ್ ನಾರಾಯಣ್ ಆಪಘಾತ ಕೇಂದ್ರವನ್ನು ಗೊತ್ತುಪಡಿಸಿದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ವಾರ್ಡ್ ಅಗಿ ಮಾರ್ಪಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೇ ಹೆಚ್ಚು ಸೋಂಕು ತಗುಲುತ್ತಿರುವುದು ವೈದ್ಯರ ಮತ್ತು ಸಿಬ್ಬಂದಿಗಳ ಆತಂಕಕ್ಕೇ ಕಾರಣವಾಗಿದೆ.
ಕಳೆದ ಎರಡು ದಿನಗಳಲ್ಲಿ ಏಮ್ಸ್ನ ಸುಮಾರು ೨೦೦ ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳು ಕರೋನಾ ಪಾಸಿಟಿವ್ ಹೊಂದಿರುವುದು ಪರೀಕ್ಷೆಯಿಂದ ಬೆಳಕಿಗೆ ಬಂದಿದೆ. ಇದರಲ್ಲಿ, ಒಬ್ಬ ಎಂಬಿಬಿಎಸ್ ವಿದ್ಯಾರ್ಥಿ, ಮೂವರು ನಿವಾಸಿ ವೈದ್ಯರು (residential doctors), ಎಂಟು ದಾದಿಯರು ಮತ್ತು ಐದು ಮೆಸ್ ವರ್ಕರ್ಗಳು ಸೇರಿದಂತೆ 50 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಇದ್ದಾರೆ. ಸೋಂಕು ತಗುಲಿರುವ ಇತರರೆಂದರೆ ಪ್ರಯೋಗಾಲಯದ ಸಿಬ್ಬಂದಿ, ತಂತ್ರಜ್ಞರು, ನೈರ್ಮಲ್ಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳೂ ಇದ್ದಾರೆ.

ಚಿಕಿತ್ಸೆ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ನಾವು ಕೋವಿಡ್ ೧೯ ಸೋಂಕಿನ ಬಗ್ಗೆ ಚಿಂತೆ ಮಾಡುತ್ತಿಲ್ಲ ಮತ್ತು ಆತಂಕಗೊಂಡಿಲ್ಲ . ನಾವು ಸರ್ಕಾರ ಮತ್ತು ಏಮ್ಸ್ ಆಡಳಿತದ ನಿರಾಸಕ್ತಿ ನಮ್ಮನ್ನು ಚಿಂತೆ ಗೀಡು ಮಾಡಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ಎದುರಿಸಬೇಕಾಗುತ್ತದೆ. ನಾವುಗಳು ಕಳೆದ ಮಾರ್ಚ್ನಿಂದಲೇ ಹಾಸ್ಟೆಲ್ ಆವರಣದ ಸುರಕ್ಷತೆ, ಕಳಪೆ ನೈರ್ಮಲ್ಯ, ಸರಿಯಾದ ಕ್ಯಾರೆಂಟೈನ್ ಪ್ರೋಟೋಕಾಲ್ ಕೊರತೆ ಮತ್ತು ಸಾಕಷ್ಟು ಪರೀಕ್ಷೆಯ ಅಗತ್ಯತೆಗಾಗಿ ಸರ್ಕಾರಕ್ಕೆ ಬರೆಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ ಎಂದು ಏಮ್ಸ್-ನವದೆಹಲಿಯ ಆರ್ಡಿಎ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ್ ರಾಜ್ಕುಮಾರ್ ಹೇಳುತ್ತಾರೆ.
ಉತ್ತಮ ಗುಣಮಟ್ಟದ N95 ಮಾಸ್ಕ್ ಗಳು ಮತ್ತು ಪಿಪಿಇ ಕಿಟ್ಗಳ ಇತರ ಘಟಕಗಳ ಕೊರತೆಯು ಏಮ್ಸ್ನ ವೈದ್ಯಕೀಯ ಸಿಬ್ಬಂದಿಗಳು ಎದುರಿಸುತ್ತಿರುವ ಮತ್ತೊಂದು ಸಮಸ್ಯೆಯಾಗಿದೆ. ಈಗ ಸರ್ಕಾರವು ಸರಬರಾಜು ಮಾಡುತ್ತಿರುವ N95 ಮಾಸ್ಕ್ ಗಳು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗದಿಪಡಿಸಿರುವ ಸುರಕ್ಷತಾ ಮಾನದಂಡಗಳನ್ನು ಹೊಂದಿಲ್ಲ , ಅಂತರರಾಷ್ಟ್ರೀಯ ಮಾನದಂಡಗಳಂತೂ ಇಲ್ಲವೇ ಇಲ್ಲ . ರೋಗಿಗಳ ಕಲ್ಯಾಣಕ್ಕಾಗಿ ನಮ್ಮ ಅವಿರತ ಸೇವೆಗಾಗಿ ಆಡಳಿತವು ಬೆದರಿಕೆಗಳನ್ನು ಹಾಕುತ್ತಿದೆ ಮತ್ತು ಏಮ್ಸ್ ಆಡಳಿತವು ಆರ್ಡಿಎ ಅಧಿಕಾರಿಗಳ ವೃತ್ತಿಜೀವನವನ್ನು ಅಪಾಯಕ್ಕೆ ತಳ್ಳುವ ಪ್ರಯತ್ನಗಳನ್ನು ಎದುರಿಸುತ್ತಿದೆ ಎಂದು ಡಾ.ಶ್ರೀನಿವಾಸ್ ಹೇಳಿದರು.
ಕಳೆದ ವಾರವಷ್ಟೆ ಕೋವಿಡ್ ಪಾಸಿಟಿವ್ ಹೊಂದಿದ್ದ ಏಮ್ಸ್ ನ ನೈರ್ಮಲ್ಯ ಮೇಲ್ವಿಚಾರಕರೊಬ್ಬರು ನಿಧನರಾದರು, ಮತ್ತೋರ್ವ ಆಸ್ಪತ್ರೆಯ ಕಾವಲುಗಾರ ಈ ಕಾಯಿಲೆಗೆ ಬಲಿಯಾದರು. ದಿನಕಳೆದಂತೆ ಏಮ್ಸ್ ನಲ್ಲಿ ವೈದ್ಯಕೀಯ ಸಿಬ್ಬಂದಿಗಳ ಸಾವುಗಳೂ ಹೆಚ್ಚಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಕೋವಿಡ್ ವಿರುದ್ದ ಹೋರಾಟಕ್ಕೆ ಸಜ್ಜುಗೊಳಿಸಿರುವ ಉಪಕರಣಗಳು ಕಳಪೆ ಎಂದು ನಿಸ್ಸಂದೇಹವಾಗಿ ಸಾಬೀತಾಗಿದ್ದು ಕೂಡಲೇ ಉತ್ತಮ ಉಪಕರಣಗಳನ್ನು ಒದಗಿಸಬೇಕಿದೆ. ಇಲ್ಲವಾದಲ್ಲಿ ಮುಂದೆ ಕೋವಿಡ್ ೧೯ ರೋಗಿಗಳನ್ನು ಉಪಚರಿಸಲು, ಚಿಕಿತ್ಸೆ ನೀಡಲು ಸಿಬ್ಬಂದಿಗಳು ಸಿಗುವುದಿಲ್ಲ.










