‘ಕರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರವೇ ಮದ್ದು’ ಎಂದು ಪ್ರಧಾನಿ ನರೇಂದ್ರ ಮೋದಿ 2 ತಿಂಗಳ ಹಿಂದೆಯೇ ಘೋಷಣೆ ಮಾಡಿದ್ದರು. ಆ ಬಳಿಕ ಸಾಮಾಜಿಕ ಅಂತರಕ್ಕಾಗಿ ಲಾಕ್ಡೌನ್ ಘೋಷಣೆಯೂ ಆಗಿತ್ತು. ಅಂತರ್ ಜಿಲ್ಲೆ, ಅಂತಾರಾಜ್ಯ, ವಿದೇಶದಿಂದ ಬಂದ ಜನರನ್ನು ಕ್ವಾರಂಟೈನ್ ಮಾಡುವ ನಿರ್ಧಾರ ಅಂತಿಮವಾಗಿ ಲಾಕ್ಡೌನ್ ಮುಂದುವರಿದರೆ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತದೆ ಎನ್ನುವ ಕಾರಣಕ್ಕೆ ಲಾಕ್ಡೌನ್ ನಲ್ಲಿ ವಿನಾಯಿತಿ ಕೊಡಲಾಯಿತು. ಯಥಾಸ್ಥಿತಿ ಜನಜೀವನವೂ ಆರಂಭವಾಯಿತು. ಈ ನಡುವೆ ಕ್ವಾರಂಟೈನ್ ನಲ್ಲಿ ಕೇಂದ್ರಗಳಲ್ಲಿ ಜನರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಆರೋಪವೂ ಅಲ್ಲಲ್ಲಿ ಕೇಳಿಬಂತು. ಈ ನಡುವೆ ಗರ್ಭಿಣಿಯರನ್ನ ಕ್ವಾರಂಟೈನ್ ಮುಕ್ತಾಯ ಆಗುವ ತನಕ ಇಟ್ಟುಕೊಳ್ಳುವುದು ಉಚಿತವಲ್ಲ ಎನ್ನುವ ನಿರ್ಧಾರ ಮಾಡಿದ ಸರ್ಕಾರ, 48 ಗಂಟೆಗಳಲ್ಲಿ ತಪಾಸಣೆ ನಡೆಸಿ ಮನೆಯಲ್ಲೇ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಬೇಕು ಎಂದು ಆದೇಶ ಮಾಡಿತ್ತು. ಆದರೂ ರಾಜ್ಯದಲ್ಲಿ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಸಿಗದೆ ಹಿಂಸೆ ಅನುಭವಿಸುವಂತಾಗಿದೆ.
Quarantine guidelines for International/National/Local traveler.https://t.co/LowU4NuFqq@CMofKarnataka @BSYBJP @sriramulubjp @KarnatakaVarthe @BlrCityPolice @blrcitytraffic @NammaBESCOM @BMTC_BENGALURU @publictvnews @suvarnanewstv @tv9kannada pic.twitter.com/PDNr2qpBTm
— K'taka Health Dept (@DHFWKA) May 28, 2020

ದಕ್ಷಿಣ ಕನ್ನಡದಲ್ಲಿ ಗರ್ಭಿಣಿಗೆ ʼಅಬಾರ್ಷನ್..ʼ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದ ಗರ್ಭಿಣಿಗೆ ಅಬಾರ್ಷನ್ ಆಗಿದ್ದು, ತಾಯಿಯಾಗುವ ಸಂಭ್ರಮ ಸೂತಕದಲ್ಲಿ ಅಂತ್ಯವಾಗಿದೆ. ದುಬೈನಿಂದ ಬಂದಿದ್ದ ಗರ್ಭಿಣಿಯನ್ನು ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಮೇ 12 ರಂದು ದುಬೈನಿಂದ ಬಂದ ವೇಳೆ ಗರ್ಭಿಣಿಯನ್ನು ಕರೋನಾ ತಪಾಸಣೆಯನ್ನೂ ಮಾಡಲಾಗಿತ್ತು. ವರದಿ ನೆಗೆಟೀವ್ ಕೂಡ ಬಂದಿತ್ತು. ಆದರೂ ಎರಡನೇ ಟೆಸ್ಟ್ ಆಗಲಿ ಎಂದು ಅಧಿಕಾರಿಗಳು ಹೇಳಿದ್ದರಿಂದ 2ನೇ ಪರೀಕ್ಷೆ ಕೂಡ ಮಾಡಿಸಲಾಗಿದ್ದು, ಅದೂ ಕೂಡ ನೆಗೆಟೀವ್ ಎಂದು ವರದಿ ಬಂದಿದೆ. ಕೆಲವು ಖಾಸಗಿ ಆಸ್ಪತ್ರೆಯಲ್ಲೂ ಗರ್ಭಿಣಿಗೆ ಚಿಕಿತ್ಸೆ ಸಿಗದ ಕಾರಣ 6 ತಿಂಗಳ ಗರ್ಭಿಣಿಗೆ ಅಬಾರ್ಷನ್ ಆಗಿದೆ. ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. 2ನೇ ಬಾರಿ ಕರೋನಾ ವರದಿ ನೆಗೆಟೀವ್ ಬಂದರೂ ಮನೆಗೆ ಯಾಕೆ ಕಳುಹಿಸಲಿಲ್ಲ ಎನ್ನುವ ಪ್ರಶ್ನೆ ಎದುರಾಗಿದೆ. ಒಂದು ವೇಳೆ ಕ್ವಾರಂಟೈನ್ ಕಡ್ಡಾಯ ಆದ ಮೇಲೆ ಅಧಿಕಾರಿಗಳು ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಿಸಬೇಕಿತ್ತು ಅಲ್ಲವೇ..?
ಉಡುಪಿ ಜಿಲ್ಲಾಡಳಿತದಿಂದಲೂ ಇದೇ ಎಡವಟ್ಟು ..!
ಉಡುಪಿಯಲ್ಲೂ ಕ್ವಾರಂಟೈನ್ ಆಗಿದ್ದ ಗರ್ಭಿಣಿಯನ್ನು 15 ದಿನಗಳು ಕಳೆದರೂ ಮನೆಗೆ ಕಳುಹಿಸಿರಲಿಲ್ಲ. ಈ ಬಗ್ಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೂ ಟ್ವಿಟರ್ ಮೂಲಕ ದೂರು ಸಲ್ಲಿಸಿದ್ದರು. ಕ್ವಾರಂಟೈನ್ ಅವಧಿ ಮುಗಿದಿದ್ದರೂ ಮನೆಗೆ ಕಳಿಸಿಲ್ಲ, ಮನೆಯ ಆಹಾರ ನೀಡುವುದಕ್ಕೂ ಜಿಲ್ಲಾಡಳಿತದಿಂದ ತಡೆ ಹಾಕಿದೆ ಎಂದು ಉಡುಪಿ ಡಿಸಿ ಜಿ.ಜಗದೀಶ್ ವಿರುದ್ಧ ದೂರು ನೀಡಿದ್ದರು. ಈ ಮಹಿಳೆ ಕೂಡ ದುಬೈನಿಂದ ವಾಪಸ್ ಆದ ಬಳಿಕ ಉಡುಪಿಗೆ ಆಗಮಿಸಿದ್ದರು, ಕ್ವಾರಂಟೈನ್ ಮಾಡಲಾಗಿತ್ತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನಿನ್ನೆ ಮುಖ್ಯಮಂತ್ರಿಗಳ ಗಮನ ಸೆಳೆದ ಬಳಿಕ ಕ್ವಾರಂಟೈನ್ ಕೇಂದ್ರದ ಅವಧಿ ಮುಗಿದಿದ್ದ ಗರ್ಭಿಣಿಯನ್ನು ಜಿಲ್ಲಾಡಳಿತ ಮನೆಗೆ ಕಳುಹಿಸಿಕೊಟ್ಟಿತ್ತು.
Another 7 months pregnant lady who has been sent for hotel quarantine has not been released even after 8 days in a hotel in udupi. Why can’t dist administration read the SOP issued by state Govt. She is in hotel shambavi udupi @dcudupi @Karnataka_DIPR
— Pramod Madhwaraj (@PMadhwaraj) May 27, 2020
ಗರ್ಭಿಣಿಯರ ಕರೋನಾ ತಪಾಸಣೆಯಲ್ಲೂ ಎಡವಟ್ಟು..!
ಗರ್ಭಣಿ ಮಹಿಳೆಯರು ಮೊದಲೇ ಸೂಕ್ಷ್ಮ ಮನಸ್ಸಿಗೆ ಜಾರಿರುತ್ತಾರೆ. ಆದರೆ ಗರ್ಭಿಣಿಯರ ಕರೋನಾ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಗಳು ಬೇಕಾಬಿಟ್ಟಿ ವರದಿ ಕೊಡುತ್ತಿರುವುದು ಗರ್ಭಿಣಿಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕಾರ್ಕಳದ 22 ವರ್ಷದ ಗರ್ಭಿಣಿಗೆ ಮೊದಲು ಪಾಸಿಟೀವ್ ಎಂದು ರಿಪೋರ್ಟ್ ಕೊಡಲಾಗಿತ್ತು. ಮೇ 24 ರಂದು ಪಾಸಿಟಿವ್ ಬಂದ ಬಳಿಕ ಚಿಕಿತ್ಸೆ ಕೊಡಲಾಗಿತ್ತು. ಆದರೆ ತುಂಬು ಗರ್ಭಿಣಿಯಾದ ಕಾರಣ ಮರುಪರೀಕ್ಷೆ ನಡೆಸಲಾಗಿತ್ತು. ಮರುಪರೀಕ್ಷೆಯಲ್ಲಿ ನೆಗೆಟೀವ್ ಎಂದು ವರದಿ ಬಂದಿದೆ. ಆ ಬಳಿಕ ಸೋಂಕಿತ ಗರ್ಭಿಣಿಗೆ ನೆಗೆಟಿವ್ ಎಂದೇ ಪರಿಗಣಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ಕೊಟ್ಟಿದ್ದಾರೆ.
ಮಲೆನಾಡಲ್ಲೂ ಆರೋಗ್ಯ ಅಧಿಕಾರಿಗಳ ಎಡವಟ್ಟು!
ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಇಲಾಖೆಯ ಮಹಾ ಎಡವಟ್ಟು ಮಾಡಿದೆ. ತರೀಕೆರೆ ಗರ್ಭಿಣಿಗೆ ಕರೋನಾ ಪಾಸಿಟಿವ್ ಎಂದು ರಿಪೋರ್ಟ್ ಕೊಡಲಾಗಿತ್ತು. ಆ ಬಳಿಕ ಗರ್ಭಿಣಿಗೆ ಕರೋನಾ ಚಿಕಿತ್ಸೆ ಕೂಡ ಶುರುಮಾಡಲಾಗಿತ್ತು. ಆದರೆ ಆ ಬಳಿಕ 5 ಬಾರಿ ಮರು ಪರೀಕ್ಷೆ ಯೂ ನೆಗೆಟಿವ್ ಎಂದು ವರದಿ ಬಂದಿದೆ. ಎಲ್ಲಾ ರಿಪೋರ್ಟ್ ಕೂಡ ನೆಗೆಟೀವ್ ಎಂದಾಗಿದೆ. ಆರೋಗ್ಯ ಇಲಾಖೆ ಮಹಾ ಪ್ರಮಾದಕ್ಕೆ ಹೊಣೆ ಯಾರು ಎಂದು ಜನಸಾಮಾನ್ಯರು ಕೇಳುವಂತಾಗಿದೆ. ಲ್ಯಾಬ್ ಮೆಷಿನ್ ಎಡವಟ್ಟಿನಿಂದ ಈ ರೀತಿ ಆಗಿರಬಹುದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಪ್ಪನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಇದೇ ರೀತಿ ಮೇ 22 ರಂದು ಕೂಡ ಮೂಡಿಗೆರೆ ವೈದ್ಯರಿಗೆ ಸೋಂಕು ಎಂದಿದ್ದ ವರದಿ ನೆಗೆಟಿವ್ ಎಂದಾಗಿತ್ತು.

ಆರೋಗ್ಯ ಇಲಾಖೆ ಎಡವಟ್ಟಿನಿಂದ ಆಗುವುದೇನು..?
ಸಾಮಾನ್ಯ ವ್ಯಕ್ತಿಗಳ ವರದಿಯಲ್ಲಿ ಕೊಂಚ ಏರುಪೇರಾದರೂ ಗೊತ್ತಾಗುವುದಿಲ್ಲ. ಆದರೆ ಗರ್ಭಿಣಿಯರು ಸಣ್ಣ ಸಣ್ಣ ವಿಚಾರಕ್ಕೂ ಗಾಬರಿಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಕರೋನಾ ಸೋಂಕು ಬಂದಿದೆ ಎನ್ನುವ ಕಾರಣಕ್ಕೆ ಬೇರೆ ಚಿಕಿತ್ಸೆ ಕೊಟ್ಟರೆ ಹುಟ್ಟುವ ಮಗುವಿನ ಮೇಲೆ ದುಷ್ಪರಿಣಾಮ ಬೀರುವುದು ಬಹುತೇಕ ಖಚಿತ. ಅದೇ ಕಾರಣಕ್ಕೆ ಅಲ್ಲವೇ ಗರ್ಭಿಣಿ ಯಾವುದೇ ಮಾತ್ರೆ ಸೇವಿಸುವ ಅಥವಾ ಚಿಕಿತ್ಸೆ ತೆಗೆದುಕೊಳ್ಳುವ ಮುನ್ನ ಚಿಕಿತ್ಸೆ ಪಡೆಯುತ್ತಿರುವ ವೈದ್ಯರ ಸಲಹೆ ಅಗತ್ಯ ಎನ್ನುವುದು. ಇದೇ ಕಾರಣಕ್ಕೆ ಅಲ್ಲವೇ ಗರ್ಭಿಣಿಯರ ಕರೋನಾ ತಪಾಸಣೆಯನ್ನು ಕೇವಲ 48 ಗಂಟೆಗಳ ಅವಧಿಯಲ್ಲಿ ಮುಕ್ತಾಯ ಮಾಡಿ ಮನೆಯಲ್ಲೇ ಕ್ವಾರಂಟೈನ್ ಗೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರ ಸೂಚಿಸಿರುವುದು. ಆದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಅಧಿಕಾರಿಗಳು ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವುದು ಮಾತ್ರ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಬೆಂಗಳೂರಿನ ಬೆಳ್ಳಂದೂರಿನ ಕ್ವಾರಂಟೈನ್ ಕೇಂದ್ರಕ್ಕೆ ಮೇ 22 ರಂದು ಬಂದಿದ್ದ 6 ಮಂದಿ ಗರ್ಭಿಣಿಯರಿಗೆ 5 ದಿನಗಳು ಕಳೆದರೂ ಮನೆಗೆ ಕಳುಹಿಸದೇ ಇದ್ದದ್ದು ಸುದ್ದಿಯಾಗಿತ್ತು. ರಿಪೋರ್ಟ್ ಬಂದ ಬಳಿಕ ಪಾಸಿಟಿವ್ ಇದ್ದರೆ ಆಸ್ಪತ್ರೆ, ಇಲ್ಲದಿದ್ದರೆ ಹೋಂ ಕ್ವಾರಂಟೈನ್ ಮಾಡಬೇಕು ಎಂದು ಸರ್ಕಾರವೇ ಸೂಚಿಸಿದ್ದರೂ ಎಡವಟ್ಟಿನ ಮೇಲೆ ಎಡವಟ್ಟುಗಳು ಆಗುತ್ತಲೇ ಇದೆ. ಇದರಿಂದ ಆಗುವ ಅನಾಹುತವನ್ನು ಮುಂದಿನ ದಿನಗಳಲ್ಲಿ ಜನ ಅನುಭವಿಸಬೇಕಾಗಿದೆ.