ಮಂಡ್ಯ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಪಿತೂರಿ ಮಾಡುತ್ತಿರುವವರು ಕೇಂದ್ರದಿಂದ ಹಣ ತಂದು ಮಂಡ್ಯದ ಅಭಿವೃದ್ಧಿಗೆ ಕೆಲಸ ಮಾತ್ರ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ CM Siddaramaiah ವಾಗ್ದಾಳಿ ನಡೆಸಿದರು.
ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಗಗನಚುಕ್ಕಿ ಜಲಪಾತೋತ್ಸವ-2024ಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಕೊಡದ ಸುಳ್ಳಿನ ಸರದಾರರ ಷಡ್ಯಂತ್ರಗಳಿಗೆ ತಲೆ ಒತ್ತೆ ಇಡಬೇಡಿ ಎಂದು ಟಾಂಗ್ ನೀಡಿದರು.
ಕೇವಲ ಮಾತಾಡಿಕೊಂಡು ಕಾಲ ಕಳೆಯುವವರಿಗೆ ರೈತರು, ಹಿಂದುಳಿದವರು, ದಲಿತರ ಪರವಾದ ಕಾಳಜಿಯೇ ಇಲ್ಲ ಎನ್ನುವುದು ಸಾಬೀತು ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಸಿಎಂ ಕುಟುಕಿದರು.ಗಗನಚುಕ್ಕಿ-ಬರಚುಕ್ಕಿ ಜಲಪಾತಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಗೊಳಿಸಲಾಗುವುದು.ಅಗತ್ಯವಿದ್ದಷ್ಟು ಹಣ ನೀಡಿ ಪ್ರವಾಸಿಗರಿಗೆ ಮೀಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಅಗತ್ಯವಾದ ಆಕಷ್ಕವಾದ ನೂರಾರು ಸ್ಥಳಗಳಿವೆ. ಇವುಗಳ ಬೆಳವಣಿಗೆಗೆ ಎಷ್ಟು ಬೇಕಾದರೂ ಹಣ ಕೊಡಲು ಸರ್ಕಾರ ಸಿದ್ದವಿದೆ ಎಂದರು.ದೇಶಕ್ಕೆ ಅತಿ ಹೆಚ್ವು ತೆರಿಗೆ ನೀಡುವ ರಾಜ್ಯ ಕರ್ನಾಟಕ. ಪ್ರವಾಸೋದ್ಯಮ ಬೆಳವಣಿಗೆಗೆ ಪ್ರಕೃತಿದತ್ತವಾದ ಪೂರಕ ವಾತಾವರಣವಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ರಾಜ್ಯದ ಆರ್ಥಿಕ ಪ್ರಗತಿಯೂ ಆಗುತ್ತದೆ ಎಂದರು.
ವಿಸಿ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಲು ಕಾವೇರಿ ನಿಗಮದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸ್ಥಳದಲ್ಲೇ ಸೂಚನೆ ನೀಡಿದರು.ಇನ್ನು ನಮ್ಮ ಸರ್ಕಾರವು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕೇಳಿದಾಗೆಲ್ಲಾ ಅಗತ್ಯ ಅನುದಾನ ನೀಡುತ್ತಲೇ ಬಂದಿದೆ ಎಂದು ಒತ್ತಿ ಹೇಳಿದರು. ಇಂದಿನಿಂದ ಎರಡು ದಿನಗಳವರೆಗೆ ಗಗನಚುಕ್ಕಿ ಜಲಪಾತೋತ್ಸವ ಅದ್ದೂರಿಯಾಗಿ ನಡೆಯಲಿದೆ.