ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಜೂನ್ 19ರಂದು ನಡೆಯುವ ಚುನಾವಣೆಗೆ ಈಗಾಗಲೇ ಮೂರೂ ಪಕ್ಷಗಳಿಂದ ಬಿರುಸಿನ ತಯಾರಿ ನಡೆಯುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್‌ಗೂ ಮೊದಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಈ ಆಯ್ಕೆ ಹಿಂದೆ ಹಲವು ಲೆಕ್ಕಾಚಾರಗಳು ಅಡಗಿವೆ.
ರಾಜ್ಯಸಭೆಯ ಒಟ್ಟು 245 ಸ್ಥಾನಗಳ ಪೈಕಿ 21 ಸ್ಥಾನಗಳು ಖಾಲಿ ಉಳಿದಿದ್ದು, ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ 75 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 39 ಸ್ಥಾನ, ತೃಣಮೂಲ ಕಾಂಗ್ರೆಸ್ 13, ಬಿಜೆಡಿ 09, ಎಐಡಿಎಂಕೆ 09, ಸಮಾಜವಾದಿ ಪಾರ್ಟಿ 08, ಟಿಆರ್‌ಎಸ್ 07, ಆರ್‌ಜೆಡಿ 05, ಸಿಪಿಎಂ 05, ಜೆಡಿಯು 05, ಬಿಎಸ್‌ಪಿ 04, ಎನ್‌ಸಿಪಿ 04, ನಾಮನಿರ್ದೇಶನ 04 ಸ್ಥಾನಗಳು ಇವೆ. ಇನ್ನುಳಿದಂತೆ ಸಣ್ಣಪುಟ್ಟ ಪಕ್ಷಗಳು ಕೆಲವು ಸ್ಥಾನಗಳನ್ನು ಹೊಂದಿವೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಹೊಂದಿದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಗುಲಾಂ ನಬಿ ಆಜಾದ್ ಅವರ ಅವರ ಅವಧಿ ಕೂಡ ಇದೇ ಜೂನ್ 8ಕ್ಕೆ ಅಂತ್ಯವಾಗಲಿದೆ. ಆ ಬಳಿಕ ರಾಜ್ಯಸಭೆಯಲ್ಲಿ ಪ್ರಬಲ ನಾಯಕನ ಅವಶ್ಯಕತೆಯಿದ್ದು, ಮಲ್ಲಿಕಾರ್ಜುನ ಖರ್ಗೆ ಆ ಸ್ಥಾನವನ್ನು ತುಂಬಲಿದ್ದಾರೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನದ್ದು.
ಖರ್ಗೆಗೆ ದೆಹಲಿ ರಾಜಕಾರಣದ ಅನುಭವ..!
5 ದಶಕಗಳ ಕಾಲ ರಾಜಕಾರಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಕಳೆದ ಲೋಕಸಭಾ ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಲೋಕಸಭಾ ನಿಯಮಗಳು ಹಾಗೂ ಕೇಂದ್ರ ಸರ್ಕಾರದ ಕಾರ್ಯಗಳ ಬಗ್ಗೆ ಚೆನ್ನಾಗಿ ಬಲ್ಲವರಾಗಿದ್ದಾರೆ. ಲೋಕಸಭಾ ಕಾಂಗ್ರೆಸ್ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸಂಸತ್‌ನಲ್ಲಿ ಸಮರ್ಥವಾಗಿ ನರೇಂದ್ರ ಮೋದಿ ನೇತೃತ್ವದ ತಪ್ಪು ಒಪ್ಪುಗಳನ್ನು ನೇರ ಮಾತುಗಳ ಮೂಲಕ ಚಾಟಿ ಬೀಸಬಲ್ಲವರಾಗಿದ್ದಾರೆ. ಉತ್ತರ ಕರ್ನಾಟಕದ ಕಲಬುರಗಿಯಿಂದ ಬಂದಿರುವ ಮಲ್ಲಿಕಾರ್ಜುನ ಖರ್ಗೆ ಹಿಂದಿ ಭಾಷೆ ಮೇಲೆ ಹಿಡಿತ ಹೊಂದಿದ್ದಾರೆ. ಇದೀಗ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಗುಲಾಂ ನಬಿ ಆಜಾದ್‌ರಿಂದ ತೆರವಾಗುವ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ನಾಯಕ ಎಂದರೆ ಮಲ್ಲಿಕಾರ್ಜುನ ಖರ್ಗೆ ಎಂದರೆ ತಪ್ಪಾಗಲಾರದು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಬಲ್ಲ ನಾಯಕ ಎನ್ನುವ ಅಂಶವೂ ಕಾಂಗ್ರೆಸ್ ಲೆಕ್ಕಾಚಾರಗಳಲ್ಲಿ ಮತ್ತೊಂದು.

ಹಳ್ಳಿತಪ್ಪುತ್ತಿರುವ ಕಾಂಗ್ರೆಸ್ ಜಾತಿ ಅಸ್ತ್ರ..!
ಕಾಂಗ್ರೆಸ್ ತನ್ನ ಇತಿಹಾಸದಲ್ಲಿ ಹಿಂದುಳಿದ ವರ್ಗಗಳ ಪರವಾದ ಕಾನೂನುಗಳು, ಯೋಜನೆಗಳನ್ನು ಜಾರಿ ಮಾಡುತ್ತಲೇ ರಾಜಕಾರಣ ಮಾಡಿಕೊಂಡು ಬಂದಿರುವ ಪಕ್ಷ. ಇದೀಗ ಹಿಂದುಳಿದ ವರ್ಗದ ಮತಗಳು ನೇರವಾಗಿ ಕಮಲ ಪಕ್ಷದ ಬುಟ್ಟಿಯನ್ನು ಸೇರಿಕೊಂಡಿವೆ. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಜೊತೆ ಸೇರಿಕೊಂಡು ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಬಹುದು. ಜೊತೆಗೆ ರಾಷ್ಟ್ರಮಟ್ಟದಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಸಮರ್ಥವಾಗಿ ಮಾತನಾಡಬಲ್ಲವರಾಗಿದ್ದಾರೆ. ಇಡೀ ದೇಶದಲ್ಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಈ ಮೂಲಕವೂ ತಲುಪಬಹುದು. ರಾಜ್ಯಸಭೆಯಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಗಮನಸೆಳೆಯುವ ಚರ್ಚೆ ನಡೆಸಬಹುದು. ಕಳೆದು ಕೊಂಡಿರುವ ಮತಬ್ಯಾಂಕ್‌ಗೆ ಮತ್ತೆ ಕಾಂಗ್ರೆಸ್ ತನ್ನ ಕೈ ಹಾಕಬಹುದು ಎನ್ನುವ ಲೆಕ್ಕಾಚಾರವೂ ಅಡಗಿದೆ.
ಕಾಂಗ್ರೆಸ್ ಪಕ್ಷದ ಮೇಲಿನ ಖರ್ಗೆ ನಿಷ್ಠೆ..!
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಾ ಬಂದರೂ, ಸೋಲಿಲ್ಲದ ಸರದಾರ ಎನ್ನುವ ಖ್ಯಾತಿಯನ್ನು ಹೊಂದಿದ್ದಾಗಲೂ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಹಲವಾರು ಇರಬಹುದು.
ಕಾಂಗ್ರೆಸ್ ಸಂಪೂರ್ಣವಾಗಿ ಅಧಿಕಾರಕ್ಕೆ ಬಂದು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವ ಅವಕಾಶ ಇದ್ದಾಗಲು ಬೇರೊಬ್ಬರು ಆ ಸ್ಥಾನವನ್ನು ಅಲಂಕರಿಸಿದ ಉದಾಹರಣೆಗಳಿವೆ. ಆದರೂ ಮಲ್ಲಿಕಾರ್ಜುನ ಖರ್ಗೆ ಮಾತ್ರ ಪಕ್ಷದ ವಿರುದ್ಧ ಒಂದಕ್ಷರವನ್ನೂ ಆಡಿದವರಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಶಿರಸಾವಹಿಸಿ ಮಾಡ್ತೇನೆ. ಪಕ್ಷ ಒಂದಲ್ಲಾ ಒಂದು ದಿನ ಗುರುತಿಸುತ್ತದೆ ಎನ್ನುತ್ತಲೇ ಬಂದ ನಾಯಕ. ತನಗೆ ಅವಕಾಶ ಕೊಟ್ಟಾಗ ತಾನೇನು ಎಂಬುದನ್ನು ಸಾಬೀತು ಮಾಡಿರುವ ನಾಯಕ.
ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಗಳಿಸಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಗಳಿಸಲು ಅಶಕ್ತವಾಗಿದ್ದಾಗ, ಲೋಕಸಭೆಯಲ್ಲಿ ಎದ್ದು ನಿಂತು ಮೇಜು ಕುಟ್ಟಿ ಶಾಯಿರಿ ಹೇಳುತ್ತಾ ಮೋದಿಗೆ ಸವಾಲು ಹಾಕಿದ ನಾಯಕ. ಅದೇ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ಎಲ್ಲಾ ತಂತ್ರಗಾರಿಕೆಯನ್ನು ಮಾಡಿ ಸೋಲಿಸಿತು ಎನ್ನುವುದು ಗೊತ್ತಿಲ್ಲದ ಸಂಗತಿ ಏನಲ್ಲ. ಇದೇ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಾದರೂ ಇರಬೇಕು ಎನ್ನುವ ಕಾರಣಕ್ಕೆ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಮಹಾರಾಷ್ಟ್ರ ಸರ್ಕಾರ ರಚನೆ ಮಾಸ್ಟರ್..!
ಕಳೆದ ವರ್ಷ ಮಹಾರಾಷ್ಟ್ರ ವಿಧಾನಸಭೆ ನಡೆದು ಬಿಜೆಪಿ ಹಾಗೂ ಶಿವಸೇನೆ ಪ್ರಬಲ ಪಕ್ಷವಾಗಿ ಹೊರ ಹೊಮ್ಮಿದ್ದವು. ಎರಡೂ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಡಿಕೊಂಡವು. ಇದನ್ನೇ ಲಾಭವಾಗಿ ಪರಿವರ್ತನೆ ಮಾಡಿಕೊಂಡ ಕಾಂಗ್ರೆಸ್ ಹಾಗೂ ಎನ್‌ಸಿಪಿ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು, ಸರ್ಕಾರ ರಚನೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದವು. ಇದರ ನಡುವೆ ಎನ್‌ಸಿಪಿಯ ಅಜಿತ್ ಪವಾರ್ ಜೊತೆ ಸೇರಿಕೊಂಡು ದೇವೇಂದ್ರ ಫಡ್ನಾವಿಸ್ ನಡುರಾತ್ರಿ ಸಿಎಂ ಆದರೂ ಒಂದೇ ದಿನದಲ್ಲಿ ರಾಜೀನಾಮೆ ಕೊಡುವ ಪ್ರಸಂಗ ಎದುರಾಯ್ತು.
ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಉಸ್ತುವಾರಿಯಾಗಿ ನೋಡಿಕೊಂಡರೆ, ಎನ್‌ಸಿಪಿಯಿಂದ ಶರದ್ ಪವಾರ್ ಎರಡು ಗಟ್ಟಿ ಬಂಡೆಗಳಂತೆ ನಿಂತು ಶಿವಸೇನೆಯ ಉದ್ಧವ್ ಠಾಕ್ರೆಯನ್ನು ಮುಖ್ಯಮಂತ್ರಿ ಮಾಡಿ ಮಹಾ ವಿಕಾಸ್ ಅಘಡಿ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದರು. ಈ ಕಾರಣದಿಂದಲೂ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲಾಗಿದೆ ಎನ್ನಲಾಗ್ತಿದೆ. ಒಟ್ಟಾರೆ, ಕರ್ನಾಟಕದಿಂದ ಓರ್ವ ಪ್ರಬಲ ಅಭ್ಯರ್ಥಿ ರಾಜ್ಯಸಭೆಯಲ್ಲಿ ಎದ್ದು ನಿಂತು ಮಾತನಾಡುವುದನ್ನು ಜನರು ನೋಡಬಹುದು. ಅದು ಮಲ್ಲಿಕಾರ್ಜುನ ಖರ್ಗೆಯೇ ಆಗಿರುತ್ತಾರೆ ಎಂದರೆ ಸುಳ್ಳಲ್ಲ.