ಅವರು 1960ರ ದಶಕದಲ್ಲಿ ಸಾವಿರಾರು ಮೈಲುಗಳಷ್ಟು ದೂರವನ್ನು ಕ್ರಮಿಸಿ ನಿರಾಶ್ರಿತರಾಗಿ ಭಾರತವನ್ನು ತಲುಪಿದರು. ಭಾರತ ಸರ್ಕಾರವು ಅವರಿಗೆ ಗೌರವಪೂರ್ವಕವಾಗಿಯೇ ನೆಲೆಸಲು ಸೂಕ್ತ ಭೂಮಿಯನ್ನು ಒದಗಿಸಿಕೊಟ್ಟಿತು. ಅದನ್ನು ಸ್ವೀಕರಿಸಿದ ಅವರು ತಮಗೆ ನೀಡಿದ ಕಾಡು ಜಾಗವನ್ನು ಹಸನು ಮಾಡಿದರು. ಚೀನೀಯರ ದೌರ್ಜನ್ಯಕ್ಕೆ ಸಿಲುಕಿ ಜರ್ಝರಿತರಾಗಿದ್ದ ಇವರು ಹೊಸ ಮನೆಯಷ್ಟೆ ಅಲ್ಲ ಬದುಕನ್ನೂ ಕಟ್ಟಿಕೊಂಡರು. ನಮ್ಮ ದೇಶದ ಸಾವಿರಾರು ಜನರಿಗೂ ಕೆಲಸ ನೀಡಿ ದೇಶದ ಆರ್ಥಿಕ ವೃದ್ದಿಗೆ ಸಹಾಯ ಮಾಡಿದರು. ಅವರೇ ಟಿಬೆಟ್ ನಿಂದ ಬಂದಿರುವ ಟಿಬೇಟಿಯನ್ನರು. ಇಂದಿಗೆ 60 ವರ್ಷಗಳಾದವು ಟಿಬೇಟಿಯನ್ನರು ಇಲ್ಲಿನವರೇ ಆಗಿ ಹೋಗಿದ್ದಾರೆ. ಸಾಕಷ್ಟು ಜನರು ಕನ್ನಡವನ್ನೂ ಕಲಿತಿದ್ದಾರೆ. ಆಶ್ರಯ ನೀಡಿದ ದೇಶದ ಋಣ ತೀರಿಸಲು ಇಂದು ಟಿಬೇಟಿಯನ್ನರು ಮುಂದಾಗಿದ್ದಾರೆ.
ಇಂದು ಇಡೀ ದೇಶವೇ ಕರೋನಾ ಸೋಂಕಿನ ಭೀತಿಯಲ್ಲಿ ಲಾಕ್ ಡೌನ್ ಘೋಷಿಸಿದೆ. ದೇಶದ ಬಹುತೇಕ ಜಿಲ್ಲೆಗಳಲ್ಲಿ ಕರೋನಾ ಸೋಂಕಿತರು ಇದ್ದಾರೆ. ಆದರೆ ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆಯಲ್ಲಿರುವ ಟಿಬೇಟ್ ಕ್ಯಾಂಪ್ ಗಳಲ್ಲಿ 70 ಸಾವಿರ ನಿರಾಶ್ರಿತರು ವಾಸಿಸುತಿದ್ದು ಇಲ್ಲಿ ಒಂದೂ ಕೂಡ ಕರೋನಾ ಸೋಂಕು ಪ್ರಕರಣ ವರದಿ ಆಗಿಲ್ಲ. ಕೋವಿಡ್ 19 ರ ಕಾರಣದಿಂದಾಗಿ ಅವರು ತೊಂದರೆಯಲ್ಲಿದ್ದಾಗ ಸ್ಥಳೀಯರಿಗೆ ಸಹಾಯ ನೀಡುವಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ. ಬೈಲುಕೊಪ್ಪ ಟಿಬೆಟಿಯನ್ ಶಿಬಿರದಲ್ಲಿ ನೆಲೆಸಿರುವ ಸೆರಾ ಜೆ ಸೆಕೆಂಡರಿ ಶಾಲೆಯು ಪಿಎಂ ಕೇರ್ಸ್ ಫಂಡ್ಗೆ 1.5 ಲಕ್ಷ ರೂ. ಮತ್ತು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಸೆರಾ ಜೆ ಮಾಧ್ಯಮಿಕ ಶಾಲಾ ಆಡಳಿತ ಮಂಡಳಿಯು ಸೋಮವಾರ ಹಳೇಯೂರು, ದೊಡ್ಡಸ್ತೂರು, ಕೊಪ್ಪ, ಬೈಲ ಕೊಪ್ಪ, ರಾಣಿ ಗೇಟ್ ಸೇರಿದಂತೆ 23 ಗ್ರಾಮಗಳ ಬಡ ಗ್ರಾಮಸ್ಥರಿಗೆ ಸಾವಿರಕ್ಕೂ ಹೆಚ್ಚು ಪಡಿತರ ಕಿಟ್ಗಳನ್ನು ವಿತರಿಸಿದೆ.
ಪಿರಿಯಾಪಟ್ಟಣದ ಶಾಸಕ ಕೆ ಮಹಾದೇವ್ ಅವರೇ ಇದನ್ನು ವಿತರಣೆ ಮಾಡುವಾಗ ಹಾಜರಿದ್ದರು. ಅಷ್ಟೇ ಅಲ್ಲ ಶಾಲೆಯು ಬೋಧನಾ ಸಿಬ್ಬಂದಿಯ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಹಾಯ ನೀಡುವಲ್ಲಿ ಶಾಲೆ ಯಾವಾಗಲೂ ಮುಂಚೂಣಿಯಲ್ಲಿದೆ. 2004 ರಲ್ಲಿ ಸುನಾಮಿ ದುರಂತದ ಸಮಯದಲ್ಲಿಯೂ ಕೂಡ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿ ಔದಾರ್ಯತೆ ಪ್ರದರ್ಶಿಸಿದ್ದಾರೆ. ದೇಶದಲ್ಲಿ ನೈಸರ್ಗಿಕ ವಿಕೋಪ ಎದುರಾದಾಗಲೆಲ್ಲ ಸಂತ್ರಸ್ಥರ ನೋವಿಗೆ ಈ ಶಾಲೆ ಸ್ಪಂದಿಸಿದೆ.
ಹಾಗೆಂದು ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇನೂ ಶ್ರೀಮಂತ ಕುಟುಂಬದಿಂದ ಬಂದವರೇನಲ್ಲ. ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ 600 ವಿದ್ಯಾರ್ಥಿಗಳು ಮತ್ತು 70 ರಷ್ಟು ಶಿಕ್ಷಕ ಮತ್ತು ಭೋಧಕೇತರ ಸಿಬ್ಬಂದಿಗಳು ಎಲ್ಲರೂ ಮದ್ಯಮ ವರ್ಗದವರೇ. ಬಹಳಷ್ಟು ವಿದ್ಯಾರ್ಥಿಗಳು ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ ರಾಜ್ಯಗಳಿಂದಲೂ ಬಂದಿದ್ದಾರೆ. 1970 ಕ್ಕೂ ಮೊದಲು ಸ್ಥಾಪನೆ ಆಗಿರುವ ಈ ಶಾಲೆ ಟಿಬೇಟಿಯನ್ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನೂ ನೀಡುತ್ತಿದೆ. ಈ ಕುರಿತು ಶಾಲೆಯ ಪ್ರಾಂಶುಪಾಲ ರಿಂಚನ್ ತ್ಸೆರಿಂಗ್ ಅವರನ್ನು ಮಾತಾಡಿಸಿದಾಗ ಇಡೀ ದೇಶವೇ ಸಂಕಷ್ಟದಲ್ಲಿರುವಾಗ ದೇಶವನ್ನು ಬೆಂಬಲಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ರೋಗವು ಜಗತ್ತಿನ ಎಲ್ಲ ಜನರಿಗೆ ಭಾರಿ ಸಂಕಷ್ಟವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಕೋವಿಡ್-19 ರ ವಿರುದ್ಧದ ಹೋರಾಟದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಮುಖಂಡ ದಲಾಯಿ ಲಾಮಾ ಭಾರತ ಸರ್ಕಾರದ ಜತೆ ಕೈ ಜೋಡಿಸಿದ್ದು ತಮ್ಮ ಶಾಲೆಯು ಸಂಕಷ್ಟದಲ್ಲಿರುವ ಬಡ ಜನರಿಗೆ ನೀಡುತ್ತಿರುವ ಕೊಡುಗೆಯನ್ನು ಕೂಡ ಲಾಮಾ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದರು.
ಇಲ್ಲಿನವರೊಂದಿಗೆ ಕಳೆದ 6 ದಶಕಗಳಿಂದ ಬೆರೆತು ಇಲ್ಲಿನವರೇ ಅಗಿರುವ ಟಿಬೇಟಿಯನ್ನರ ಆಚಾರ ವಿಚಾರ ಸಂಸ್ಕೃತಿಯು ವಿಭಿನ್ನವಾಗಿದ್ದರೂ ಕೂಡ ಸ್ಥಳೀಯರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಇವರು ಶಾಂತಿ ಪ್ರಿಯ ಜನಾಂಗ. ಇಂದಿಗೂ ಬೈಲಕೊಪ್ಪ ಪೋಲೀಸ್ ಠಾಣೆಯಲ್ಲಿ ದಾಖಲಾಗುವ ಮೊಕದ್ದಮೆಗಳ ಸಂಖ್ಯೆ ಕಡಿಮೆಯೇ ಇದೆ. ಇವರಲ್ಲಿ ಬಹುತೇಕರು ಉತ್ತಮ ಬದುಕನ್ನು ಅರಸಿಕೊಂಡು ನಗರ ಪ್ರದೇಶಗಳಲ್ಲಿ ವ್ಯಾಪಾರ ವ್ಯವಹಾರ ಮಾಡಿಕೊಂಡು ಇದ್ದರೆ ಸಾವಿರಾರು ಜನರು ಇಂದಿಗೂ ಹೊಲಗಳಲ್ಲಿ ಉಳುಮೆ ಮಾಡುತ್ತಾರೆ. ಕಷ್ಟ ಜೀವಿಗಳಾದ ಇವರು ಕೆಲಸಕ್ಕೆ ನಿಂತರೆ ನಮ್ಮ ಸ್ಥಳೀಯರ ಎರಡು ಪಟ್ಟು ದುಡಿಯಬಲ್ಲರು. ಕೊಡಗಿನ ಗಡಿ ಭಾಗದಲ್ಲಿರುವ ಕುಶಾಲನಗರದ ಅಭಿವೃದ್ದಿಗೆ ಟಿಬೇಟಿಯನ್ನರ ಕೊಡುಗೆ ಕೂಡ ಸಾಕಷ್ಟಿದೆ. ತಾವೇ ನಿರಾಶ್ರಿತರಾಗಿದ್ದರೂ ಇಲ್ಲಿನ ಜನರ ನೋವಿಗೆ ಮಿಡಿಯುವ ಟಿಬೇಟಿಯನ್ನರಿಗೆ ನಿಜಕ್ಕೂ ಧನ್ಯವಾದ ಹೇಳಲೇಬೇಕು.