ಹಲವು ಸಮಾಲೋಚನೆಗಳ ನಂತರ ಯುರೋಪಿಯನ್ ಒಕ್ಕೂಟ ಮತ್ತು ಇಂಗ್ಲೆಂಡ್ ಒಂದು ಒಪ್ಪಂದಕ್ಕೆ ಬಂದಿದ್ದು ನೂತನ ಒಪ್ಪಂದವು 31 ಡಿಸೆಂಬರ್ 23 GMT ಜಾರಿಗೆ ಬರಲಿದೆ. 2016ರಲ್ಲಿ ಬ್ರಿಟನಿನ 52% ಜನಸಂಖ್ಯೆ ಬ್ರೆಕ್ಸಿಟ್ ಪರವಾಗಿ ಮತ ಚಲಾಯಿಸಿದ್ದು ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿತ್ತು. ಅದಾಗ್ಯೂ ಇತ್ತಂಡಗಳು ಕೆಲವು ವ್ಯವಹಾರಗಳನ್ನು 31 ಡಿಸೆಂಬರ್ 2020ರ ವರೆಗೆ ಹಾಗೆಯೇ ಉಳಿಸಿಕೊಂಡಿದ್ದವು.
ಆರ್ಥಿಕತೆ, ಸಾರ್ವಭೌಮತ್ವ, ವಲಸೆ, ಸ್ವಾವಲಂಬನೆ ಸಾಧಿಸಿಕೊಳ್ಳುವ ಉದ್ದೇಶವನ್ನಿಟ್ಟುಕೊಂಡು ಬ್ರಿಟಿಷರು ಯುರೋಪಿಯನ್ ಯೂನಿಯನ್ ತೊರೆಯುವ ನಿರ್ಧಾರ ಮಾಡಿದ್ದರು ಎಂದು ನಂಬಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2008ರಲ್ಲಿ ಆರಂಭವಾದ ಆರ್ಥಿಕ ಕುಸಿತವನ್ನು ತಡೆಯುವಲ್ಲಿ ಯುರೋಪಿಯನ್ ಒಕ್ಕೂಟ ವಿಫಲವಾಗಿತ್ತು. ಅದರಲ್ಲೂ ದಕ್ಷಿಣ ಯುರೋಪ್ ಪ್ರಾಂತ್ಯವು ಶೇಕಡಾ ಇಪ್ಪತ್ತರಷ್ಟು ನಿರುದ್ಯೋಗ ಪ್ರಮಾಣವನ್ನು ಹೊಂದಿತ್ತು. ಇದರ ನೇರ ಪರಿಣಾಮ ಬ್ರಿಟಿಷರ ಮೇಲಾಗುತ್ತಿದೆ ಎಂದು ಭಾವಿಸಿಕೊಂಡರು ಅಲ್ಲಿಯವರು. ಮೇಲಾಗಿ ಯುರೋಪಿಯನ್ ಯೂನಿಯನ್ನಲ್ಲಿ ಕೈ ಗೊಳ್ಳುವ ನಿರ್ಧಾರಗಳು ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದೆ ಎನ್ನುವ ಅಸಮಾಧಾನವೂ ಇತ್ತು.
ಮತದಾನದ ದಿನ ‘ಲೀವ್’ (ಯೂನಿಯನ್ ತೊರೆಯುವ ಕಡೆ ಒಲವಿರುವವರು) ಮತದಾರರನ್ನು ಮಾತಾಡಿಸಿದ ಸಮೀಕ್ಷೆಯೊಂದು ವರದಿ ಮಾಡಿರುವಂತೆ 33% ದಷ್ಟು ಲೀವ್ ಮತದಾರರು ಬ್ರೆಕ್ಸಿಟ್ನಿಂದ ಇಂಗ್ಲೆಡಿಗೆ ವಲಸೆಯನ್ನು ಮತ್ತು ಗಡಿಯನ್ನು ಸ್ವತಃ ನಿಯಂತ್ರಿಸುವ ಅವಕಾಶ ಸಿಗುತ್ತದೆ,ಹಾಗಾಗಿ ತಾವು ತೊರೆಯುವುದರ ಪರ ಎಂದಿದ್ದರಂತೆ. ಯುವ ಮತದಾರರು ಒಕ್ಕೂಟದಲ್ಲಿ ಉಳಿಯುವ ಒಲವು ತೋರಿದ್ದರೆ ಹೆಚ್ಚಿನ ಹಿರಿಯರು ತೊರೆಯುವಂತೆ ಮತ ಹಾಕಿದ್ದರು.
ಇಂಗ್ಲೆಂಡ್ ಒಕ್ಕೂಟ ತೊರೆದ ಮೇಲೂ ಇತ್ತಂಡಗಳು ಒಂದು ಒಪ್ಪಂದಕ್ಕೆ ಬರುವಲ್ಲಿ ಸೋತಿದ್ದವು. ಇಂಗ್ಲೆಂಡ್ ಮತ್ತದರ ಸರ್ಕಾರ ಬ್ರೆಕ್ಸಿಟ್ನಿಂದ ತಮಗೆ ಲಾಭವಾಗಿದೆ ಎಂದು ಜಗತ್ತಿಗೆ ತೋರಿಸಲು ಬಯಸಿತ್ತು, ಇತ್ತ ಒಕ್ಕೂಟ ಇತರ ರಾಷ್ಟ್ರಗಳು ಒಕ್ಕೂಟ ತೊರೆಯುವಂತಹ ಯಾವ ಘಟನಾವಳಿಗಳೂ ನಡೆಯದಂತೆ ನೋಡಿಕೊಳ್ಳುತ್ತಿತ್ತು. ಎರಡೂ ಕಡೆಯ ರಾಜಕೀಯ ಮೇಲಾಟದಿಂದ ಒಪ್ಪಂದಕ್ಕೆ ಅಂಕಿತ ಬೀಳಲು ತಡವಾಗುತ್ತಿತ್ತು.
ಈಗ ಅಂತಿಮವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದು ಅದು 1250 ಪುಟಗಳನ್ನು ಹೊಂದಿದೆ. ಹೊಸ ಒಪ್ಪಂದದಲ್ಲಿ ಪ್ರಮುಖವಾಗಿ ತೆರಿಗೆ ವ್ಯವಸ್ಥೆ, ಮುಕ್ತ ವ್ಯಾಪಾರ ಮತ್ತು ಸರಕು ಸಾಗಾಣಿಕೆಯ ಬಗ್ಗೆ ಚರ್ಚಿಸಲಾಗಿದೆ. ಇಂಗ್ಲೆಂಡಿನ ಆರ್ಥಿಕತೆಯ ಪ್ರಮುಖ ಮೂಲವಾದ ಸೇವಾ ವಲಯದ ಬಗ್ಗೆ ಒಪ್ಪಂದದಲ್ಲಿ ಯಾವುದೇ ಪ್ರಸ್ತಾಪವಿಲ್ಲ.
ಇಂಗ್ಲೆಂಡ್ ಒಕ್ಕೂಟದ ಭಾಗವಾಗಿದ್ದಾಗ ಬ್ರಿಟಿಷ್ ಕಂಪೆನಿಗಳು ಇಯು (European Union) ದೇಶಗಳಿಂದ ತೆರಿಗೆ ಸಲ್ಲಿಸದೆ ಖರೀದಿ ಮತ್ತು ಮಾರಾಟ ಮಾಡಬಹುದಿತ್ತು. ಹೊಸ ಒಪ್ಪಂದದ ಪ್ರಕಾರವೂ ಈ ಸೌಲಭ್ಯ ಮುಂದುವರಿಯಲಿದೆ, ಆದರೆ ಖರೀದಿದಾರರು ಮತ್ತು ಮಾರಾಟದಾರರಲ್ಲಿ ಯಾರಿಗೂ ಅನ್ಯಾಯವಾಗಬಾರದು. ಎರಡೂ ಕಡೆಯವರು ಕೆಲವು ಸಾಮಾಜಿಕ ಮತ್ತು ಪರಿಸರ ಸಂಬಂಧಿತ ನಿಯಮಗಳಿಗೆ ಒಳಪಡಬೇಕು.
ಇಯು ದೇಶಗಳಲ್ಲಿ ಇಂಗ್ಲೆಂಡಿನ ಪ್ರಜೆಗಳಿಗೆ ಕೆಲಸ ಮಾಡಲು ಇದ್ದ ರಿಯಾಯಿತಿಯನ್ನು ತೆಗೆದುಹಾಕಲಾಗಿದೆ. ಇನ್ನು ಮುಂದೆ ಇಂಗ್ಲಿಷರು ಒಕ್ಕೂಟದ ಸದಸ್ಯ ದೇಶಗಳಲ್ಲಿ ಉದ್ಯೋಗ ಮಾಡಬೇಕೆಂದರೆ ಸಮರ್ಪಕ ವಿಸಾ ಇರಲೇಬೇಕು. ಒಪ್ಪಂದ ಸಿದ್ಧವಾಗುವ ಕೊನೆ ಕ್ಷಣದ ವರೆಗೂ ಮೀನುಗಾರಿಕಾ ನೀತಿಯ ರೂಪು ರೇಷೆಗಳ ಬಗ್ಗೆ ಉನ್ನತ ಮಟ್ಟದ ಚರ್ಚೆಗಳು ನಡೆದು ಕೊನೆಗೆ ಒಂದು ‘ಮಿತಿ’ಯೊಳಗೆ ಇತ್ತಂಡಗಳೂ ಮೀನುಗಾರಿಕೆ ನಡೆಸಬಹುದು ಎಂಬ ತೀರ್ಮಾನಕ್ಕೆ ಬರಲಾಯಿತು.
ಇಂಗ್ಲೆಂಡ್ ಇ.ಯು ಯ ಭಾಗವಾಗಿಲ್ಲದೇ ಇರುವುದರಿಂದ ಅದು ತನ್ನದೇ ಆದ ಸ್ವತಂತ್ರ ವ್ಯಾಪಾರ ನೀತಿಯನ್ನು ಹೊಂದಬಹುದು ಮತ್ತು ಇತರ ದೇಶಗಳೊಂದಿಗೆ ಈ ಸಂಬಂಧ ಸಮಾಲೋಚನೆಯನ್ನೂ ನಡೆಸಬಹುದು. ಈಗಾಗಲೇ ಇಂಗ್ಲೆಂಡ್ ದೇಶವು ಅಮೆರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜೊತೆ ಮಾತುಕತೆ ನಡೆಸುತ್ತಿದೆ.
ಇಯು ದೇಶಗಳ ಮತ್ತು ಇಂಗ್ಲೆಡಿನ ಗಡಿಯಲ್ಲಿ ಸದ್ಯಕ್ಕೆ ಯಾವ ತೆರಿಗೆಯನ್ನೂ ಪಾವತಿಸಬೇಕಿಲ್ಲ ಆದರೆ ಇಯು ತನ್ನ ಕಾರ್ಯಾಲಯದಲ್ಲಿ ಕಾಗದ ಪತ್ರಗಳು ಸಿದ್ಧ ಮಾಡಿಕೊಳ್ಳುತ್ತಿವೆ.

ಆರ್ಥಿಕ ಸೇವೆಗಳು ಮತ್ತು ಮಾಹಿತಿ ವಿನಿಮಯದ ಬಗ್ಗೆ ಇನ್ನೂ ಯಾವ ನಿರ್ಧಾರಕ್ಕೂ ಬರಲಾಗಲಿಲ್ಲ. ಅಲ್ಲದೆ ಈಗ ಅಂತಿಮವಾಗಿರುವ ನಿರ್ಧಾರಗಳೂ ಅಂತಿಮ ಎಂದು ಪರಿಗಣಿಸುವಂತಿಲ್ಲ. ಯಾವುದಾದರೂ ಒಂದು ಪಕ್ಷ ಒಪ್ಪಂದವನ್ನು ಉಲ್ಲಂಘಿಸಿದರೆ ಇನ್ನೊಂದು ಪಕ್ಷ ಇಡೀ ಒಪ್ಪಂದವನ್ನೇ ತಿರಸ್ಕರಿಸುವ ಸಾಧ್ಯತೆ ಇದೆ.
ವರ್ಷಾಂತ್ಯದ ಅತಿ ಮಹತ್ವದ ಒಪ್ಪಂದ ಇದಾಗಿದ್ದು ಇಂಗ್ಲೆಂಡ್ ಮತ್ತು ಇಡೀ ಪ್ರಪಂಚದ ಆರ್ಥಿಕತೆಯಲ್ಲಿ ಈ ಒಪ್ಪಂದ ಯಾವ ಪರಿಣಾಮ ಬೀರಲಿದೆ ಎಂದು ಈಗಲೇ ಊಹಿಸಲಾಗದು. ಈಗಾಗಲೇ ಇಂಗ್ಲೆಂಡಿನ ಸಚಿವ ಮೈಕಲ್ ಗೋವ್ ದೇಶದ ವ್ಯವಹಾರಗಳು ಮತ್ತು ಕಂಪೆನಿಗಳು ಎಲ್ಲಾ ಬಗೆಯ ‘ಬಂಪೀ ಮೂಮೆಂಟ್ಸ್'(ಏರಿಳಿತ)ಗಳಿಗೆ ಸಿದ್ಧವಾಗಿರಬೇಕು ಎಂದಿದ್ದಾರೆ. ಇಂಗ್ಲೆಂಡ್ ತನ್ನ ಜಿಡಿಪಿಯ ಶೇಕಡಾ ನಾಲ್ಕರಷ್ಟನ್ನು ಕಳೆದುಕೊಳ್ಳಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಸ್ಕಾಟ್ಲೆಂಡ್ ಇಂಗ್ಲೆಂಡ್ ಜೊತೆ ಇರಬೇಕೇ ಬೇಡವೇ ಎಂಬುವುದರ ಬಗ್ಗೆ ಮರು ವಿಮರ್ಶೆ ಮಾಡಲೂ ಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಜಾಗತಿಕ ಪರಿಸ್ಥಿತಿಯನ್ನು ಕ್ಷಣಮಾತ್ರದಲ್ಲಿ ಬದಲಾಯಿಸಬಲ್ಲ ಹವಾಮಾನ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ರೋಗದಂತಹ ಸಂದರ್ಭದಲ್ಲಿ ಒಪ್ಪಂದಗಳು ತಮ್ಮ ತಮ್ಮ ದೇಶಕ್ಕೆ ಅನುಕೂಲವಾಗುವಂತೆ ಬದಲಾಯಿಸಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ