ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ದೆಹಲಿಯ ಪ್ರತಿಕೂಲ ವಾತಾವರಣವನ್ನೂ ಲೆಕ್ಕಿಸದೆ, ಚಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿಯ ರೈತ ಪ್ರತಿಭಟನಾಕಾರರಿಗೆ ಕರ್ನಾಟಕದ ರೈತ ಸಂಘಟನೆಗಳೂ ಬೆಂಬಲ ಘೋಷಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕಳೆದ ಒಂಭತ್ತು ದಿನಗಳಿಂದ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ಧರಣಿಯ ಭಾಗವಾಗಿ ಇಂದು ವಿಭಿನ್ನ ರೀತಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರದ ಕಾಯ್ದೆಗಳ ವಿರುದ್ಧದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ಗುರುವಾರ ಬೆಳಗ್ಗೆ 11:30 ಕ್ಕೆ ಅರೆಬೆತ್ತಲೆ ಧರಣಿ ನಡೆಸಿದ್ದು, ಕುರೂಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ʼದೇಶದ ಉದ್ದಾರ ಮಾಡುವ ಕಲ್ಪನೆ ಇಟ್ಟು ಬಂದ ಬಿಜೆಪಿ ಸರ್ಕಾರ ಇಂದು ರೈತ ವಿರೋಧಿ ನೀತಿಯನ್ನ ತಾಳುತ್ತಿದೆ. ಈ ದೇಶದಲ್ಲಿ ರೈತರು, ಸೈನಿಕರು ಬಹು ಮುಖ್ಯ ಎಂದು ಹೇಳುತ್ತಲೇ ರೈತ ವಿರೋಧಿ ಕಾನೂನು, ಕಾಯ್ದೆ ತರಲಾಗಿದೆʼ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ʼಸೈನಿಕರ ಜೊತೆ ದೀಪಾವಳಿ ಆಚರಿಸುತ್ತಿರುವುದು ಸ್ವಾಗತಾರ್ಹ ಆದರೆ, ರೈತರ ಜೊತೆ ಯಾಕೆ ಸಂಕ್ರಾಂತಿ ಆಚರಣೆ ಮಾಡುವುದಿಲ್ಲ? ಚಲನಚಿತ್ರ ನಟ, ನಟಿಯರಿಗೆ ಕೊಡುವ ಸಮಯ ನಮಗೆ (ರೈತರಿಗೆ) ಯಾಕೆ ಕೊಡುತ್ತಿಲ್ಲ?ʼ ಎಂದು ಅವರು ಪ್ರಶ್ನಿಸಿದ್ದಾರೆ.
ʼದಲ್ಲಾಳಿಗಳನ್ನ ಮುಂದೆ ಬಿಟ್ಟು ಭತ್ತ ಖರೀದಿ ಮಾಡುತ್ತೀರಿ. ರೈತರನ್ನು ಒಡೆದು ಆಳುವ ನೀತಿಗೆ ನಾವು ಬಿಡುವುದಿಲ್ಲ. ಹಾಗಾಗಿ, ಅರಬೆತ್ತಲೆ ಪ್ರತಿಭಟನೆ ಮಾಡುವ ಮೂಲಕ ರಾಜ್ಯ, ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದ್ದೇವೆʼ ಎಂದು ಶಾಂತಕುಮಾರ್ ತಿಳಿಸಿದ್ದಾರೆ.
ದೆಹಲಿಗೆ ಪ್ರಯಾಣ ಬೆಳೆಸಿದ ಕರ್ನಾಟಕದ ರೈತರು
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲವಾಗಿ ರಾಜ್ಯದಿಂದ ದೆಹಲಿಗೆ ರೈತರು ಹೊರಟಿದ್ದಾರೆ. 25ರಿಂದ 30 ಜನರ ರೈತರ ತಂಡವು ದೆಹಲಿಗೆ ಪ್ರಯಾಣ ಬೆಳೆಸಿದೆ. ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಪ್ರಯಾಣ ಕೈಗೊಂಡ ರೈತರು ಮೂರು ದಿನಗಳ ಕಾಲ ನಡೆಯಲಿರುವ ಹೋರಾಟದ ಭಾಗಿಯಾಗಲು ನಿರ್ಧರಿಸಿದ್ದಾರೆ.
ಗುರುವಾರ ಮಧ್ಯಾಹ್ನ 1.30 ರ ವಿಮಾನದಲ್ಲಿ ಒಂದು ತಂಡ ಹೊರಟಿದ್ದು, ರೈತರು ಒಟ್ಟು ಮೂರು ತಂಡವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.