• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

ನೊಯ್ಡಾದ ಬೀದಿಗಳಿಂದ ಛತ್ತಿಸ್‌ಘಡದ ಅನಾಹುತದವರೆಗೆ ದುಡಿಮೆಗಾರರ ದುರವಸ್ಥೆ..

ಪ್ರತಿಧ್ವನಿ by ಪ್ರತಿಧ್ವನಿ
May 4, 2026
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ
Share on WhatsAppShare on FacebookShare on Telegram

ಮೂಲ : ರೆಜಿಮೋನ್‌ ಕುಟ್ಟಪ್ಪನ್‌

ADVERTISEMENT

ಕನ್ನಡಕ್ಕೆ: ನಾ ದಿವಾಕ̧ರ ಲೇಖಕರು..

 ( ಆಧಾರ : ಮೇ 1  2026 -ದ ಹಿಂದೂ ಪತ್ರಿಕೆಯ On May Day a workforce in India without a floor )

 ಭಾರತದ ಶ್ರಮಿಕರಿಗೆ ಈ ವರ್ಷದ ಮೇ ದಿನ ಸ್ಮರಣಾರ್ಹ ದಿನವಾಗಿ ಕಾಣಲಿಲ್ಲ. ಬದಲಾಗಿ ರೋಗ ಗುರುತಿಸುವ ಸಂದರ್ಭವಾಗಿ ಪರಿಣಮಿಸಿದೆ. ಕಳೆದ ತಿಂಗಳು ಹದಿನೈದು ದಿನಗಳ ಅಂತರದಲ್ಲಿ ನಡೆದ ಎರಡು ಘಟನೆಗಳು ಭಾರತದ ಶ್ರಮಜೀವಿಗಳ ಸ್ಥಿತಿಗತಿಗಳನ್ನು ಯಾವುದೇ ಅಧಿಕೃತ ಪರಿಷ್ಕರಣೆಗಿಂತಲೂ ಸ್ಪಷ್ಟವಾಗಿ ದೇಶದ ಮುಂದಿಟ್ಟಿವೆ.

 ಏಪ್ರಿಲ್‌ 10ರಂದು ನೊಯ್ಡಾದ ಎರಡನೆ ಹಂತದ  ಹೊಸೈರಿ ಸಂಕೀರ್ಣದಲ್ಲಿ ( Hosiery ಎಂದರೆ ಹೆಣೆದ ಉಡುಪುಗಳು, ಕಾಲು ಚೀಲ, ಕಾಲನ್ನು ಮುಚ್ಚಲು ಬಳಸುವ ಬಟ್ಟೆಗಳು) 300ಕ್ಕೂ ಹೆಚ್ಚು ಕಾರ್ಖಾನೆಗಳ  ಕಾರ್ಮಿಕರು ಹಠಾತ್ತನೆ ಬೀದಿಗಿಳಿದಿದ್ದರು. ಕನಿಷ್ಠ ವೇತನ 20 ಸಾವಿರ ರೂಗಳನ್ನು ನಿಗದಿಪಡಿಸುವುದು ಇವರ ಮುಖ್ಯ ಬೇಡಿಕೆಯಾಗಿತ್ತು.  ಏಪ್ರಿಲ್‌  14ರಂದು ಛತ್ತಿಸ್‌ಘಡದಲ್ಲಿರುವ  ವೇದಾಂತ ಒಡೆತನದ 1200 ಮೆಗಾವ್ಯಾಟ್‌ ಸಾಮರ್ಥ್ಯದ ಸಿಂಘಿಟರೈ ಉಷ್ಣ  ಸ್ಥಾವರದಲ್ಲಿ (Thermal plant) ಅಧಿಕ ಒತ್ತಡದ ಕೊಳವೆಯೊಂದು (High pressure tube) ಛಿದ್ರವಾದ ಪರಿಣಾಮ 20 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರು,  15ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದರು. ಒಂದು ಪ್ರತಿಭಟನೆ ಶ್ರಮದ ಬೆಲೆಯನ್ನು ಕುರಿತದ್ದಾಗಿತ್ತು ಮತ್ತೊಂದು ದುಡಿಮೆಯನ್ನು ನಿರ್ವಹಿಸುತ್ತಿರುವಾಗ ಬದುಕಿ ಉಳಿದಿರಲು ತೆರಬೇಕಾದ ಬೆಲೆಯನ್ನು ಕುರಿತದ್ದಾಗಿತ್ತು. ಎರಡೂ ಪ್ರಸಂಗಗಳಿಂದ ಉದ್ಭವಿಸುವ ಪ್ರಶ್ನೆ ಒಂದೇ ,  ಭಾರತದ ಕಾರ್ಮಿಕರ ಸುಧಾರಣೆಯ ಕ್ರಮಗಳ ವಾಸ್ತವ ಫಲಶ್ರುತಿ ಏನು ?

ನೋಯ್ಡಾ ಕಾರ್ಮಿಕರು ಒಂದು ಮೂಲಭೂತ ಬೇಡಿಕೆಯ ಮೇಲೆ ದಿನಗಳ ಕಾಲ ಪ್ರತಿಭಟನೆ ನಡೆಸಿದರು. ನಂತರ ಹಿಂಸೆ ಬಂದಿತು

 ನೊಯ್ಡಾ ಮುಷ್ಕರ ಆರಂಭವಾದದ್ದು ನಿರ್ಧಿಷ್ಟವಾಗಿ ಆರ್ಥಿಕ ಕುಂದುಕೊರತೆಗಳ ಸಲುವಾಗಿ.  ಏಪ್ರಿಲ್‌ 9ರಂದು ಹರಿಯಾಣ ಸರ್ಕಾರವು ಕನಿಷ್ಠ ವೇತನವನ್ನು ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಶೇಕಡಾ 35ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಹಾಗಾಗಿ ಅಕುಶಲ ಮಾಸಿಕ ವೇತನ (Unskilled monthly wages) 11,274 ರೂಗಳಿಂದ 15,220ಕ್ಕೆ ಏರಿಕೆಯಾಗಿತ್ತು. ನೊಯ್ಡಾದ ಗಡಿ ಪ್ರದೇಶದುದ್ದಕ್ಕೂ ಅಕುಶಲ ಕಾರ್ಮಿಕರು ದಿನಕ್ಕೆ 435 ರೂಗಳ ಕೂಲಿ ಪಡೆಯುತ್ತಿದ್ದರು. ಇದೇ ಕೆಲಸಕ್ಕೆ ಹರಿಯಾಣಾದ ಕಾರ್ಮಿಕರು 585 ರೂಗಳನ್ನು ಪಡೆಯುತ್ತಿದ್ದರು.  ಹೊಸೈರಿ ಸಂಕೀರ್ಣದಲ್ಲಿ ನಡೆದ ಪ್ರತಿಭಟನೆಗಳಲ್ಲಿ ವಿವಿಧ ಕಾರ್ಖಾನೆಗಳ ಕಾರ್ಮಿಕರಿದ್ದರು. ಎಲ್ಲರೂ ಬಿ ಬ್ಲಾಕ್‌ನಲ್ಲಿ ಜಮಾಯಿಸಿದ್ದೇ ಅಲ್ಲದೆ ಸಂಚಾರವನ್ನು ತಡೆಗಟ್ಟಿದ್ದರು. ಲಿಖಿತ ಆಶ್ವಾಸನೆ ಇಲ್ಲದೆ ಜಾಗ ಖಾಲಿ ಮಾಡಲು ನಿರಾಕರಿಸಿದರು.

 ಏಪ್ರಿಲ್‌ 13ರ ವೇಳೆಗೆ ಆಡಳಿತಗಾರರು 1,200 ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಇದರಲ್ಲಿ ಪ್ರಾಂತೀಯ ಸಶಸ್ತ್ರ ಪೊಲೀಸ್‌ ಪಡೆ (PAC) ಮತ್ತು ಕ್ಷಿಪ್ರ ಕಾರ್ಯಾಚರಣೆಯ ಪಡೆ (RAF) ಸಿಬ್ಬಂದಿಯೂ ಇದ್ದರು. ಈ ಪಡೆಗಳಿಂದ ಲಾಠಿಚಾರ್ಜ್‌ ನಡೆಯುತ್ತಿದ್ದಂತೆ, ಪ್ರತಿಭಟನಾಕಾರರ ಕಲ್ಲೆಸೆತವೂ ಆರಂಭವಾಯಿತು. 400 ಕಾರ್ಮಿಕರನ್ನು ಬಂಧಿಸಲಾಯಿತು. ಒತ್ತಡಕ್ಕೆ ಮಣಿದ ಉತ್ತರ ಪ್ರದೇಶ ಸರ್ಕಾರ ಶೇಕಡಾ 21ರಷ್ಟು ಮಧ್ಯಂತರ ಹೆಚ್ಚಳವನ್ನು ಘೋಷಿಸಿತು. ತತ್ಪರಿಣಾಮವಾಗಿ ಗೌತಮಬುದ್ಧ ನಗರದಲ್ಲಿ ಅಕುಶಲ ಕಾರ್ಮಿಕರಿಗೆ 13,690 ರೂ ಮತ್ತು ಕುಶಲ ಕಾರ್ಮಿಕರಿಗೆ 16,868 ರೂ ವೇತನ ನಿಗದಿ ಮಾಡಲಾಯಿತು.  ಕಾರ್ಮಿಕರು ಇದನ್ನು ತಿರಸ್ಕರಿಸಿ ಕನಿಷ್ಠ 20 ಸಾವಿರ ರೂಗಳನ್ನು ನಿಗದಿಪಡಿಸುವಂತೆ ಆಗ್ರಹಿಸಿದರು.

ವೇತನ ಮತ್ತು ಜೀವನ ನಿರ್ವಹಣೆಯ ನಡುವೆ

16,868 ಮತ್ತು 20,000 ರೂಗಳ ನಡುವಿನ ಅಂತರ ಹೆಚ್ಚೇನೂ ಅಲ್ಲ. ಚೌಕಾಸಿ ಮಾಡುವಂತಹ ಮೊತ್ತವೂ ಅಲ್ಲ. ವಾಸ್ತವವಾಗಿ ಈ ಅಂತರವು ಎನ್‌ಸಿಆರ್‌ (National Capital Region) ನಿವಾಸಿಗಳು ಬಾಡಿಗೆ, ಅಡುಗೆ ಅನಿಲ ಮತ್ತು ಶಾಲಾ ಶುಲ್ಕಗಳಿಗೆ ವೆಚ್ಚ ಮಾಡುವಷ್ಟೇ ಇದೆ. ಸರ್ಕಾರವು ಈ ಮೊತ್ತವನ್ನೇ ಘನತೆಯ ಕನಿಷ್ಠ ವೇತನ ಎಂದು ನೀಡಲು ಇಚ್ಚಿಸುತ್ತದೆ.

 ನಾಲ್ಕು ದಿನಗಳು ಕಳೆದ ಮೇಲೆ ಸಿಂಘಿಟರೈನಲ್ಲಿರುವ ಒಂದು ಕುಲುಮೆ (Furnace) ಸ್ಫೋಟಿಸಿತ್ತು. ಮುಖ್ಯ ಬಾಯ್ಲರ್‌ ಪರಿಶೀಲನಾ ಅಧಿಕಾರಿಗಳ ಪ್ರಾಥಮಿಕ ವರದಿ ಹಾಗೂ ಛತ್ತಿಸ್‌ಘಡದ ಸಕ್ತಿಯಲ್ಲಿರುವ ಫೊರೆನ್ಸಿಕ್‌ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ , ಕುಲುಮೆಯ ಸ್ಫೋಟಕ್ಕೆ ಅದರೊಳಗೆ ಅತಿಯಾದ ಇಂಧನ ಶೇಖರಣೆಯಾಗಿದ್ದೇ ಕಾರಣ ಎಂದು ಹೇಳಲಾಗಿತ್ತು. ಇದರಿಂದ ಒತ್ತಡ ಹೆಚ್ಚಾಗಿ ನಿರ್ಣಾಯಕವಾದ ಕೊಳವೆಗಳಿಗೆ ಹಾನಿ ಉಂಟುಮಾಡಿದೆ ಎಂದು ದಾಖಲಿಸಲಾಗಿತ್ತು. ಉಪಕರಣಗಳ ನಿರ್ವಹಣೆಯಲ್ಲಿ, ವೇದಾಂತ ಕಂಪನಿ ಮತ್ತು ಗುತ್ತಿಗೆದಾರ ಉದ್ದಿಮೆಯಾದ ಎನ್‌ಜಿಎಸ್‌ಎಲ್‌ (NTPC GE power services pvt ltd)  ಪದೇ ಪದೇ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಈ ವರದಿಯಲ್ಲಿ ದಾಖಲಿಸಲಾಗಿತ್ತು. ವೇದಾಂತ ಕಂಪನಿಯ ಚೇರ್‌ಮನ್‌ ಅನಿಲ್‌ ಅಗರ್ವಾಲ್‌ , ಘಟಕದ ನಿರ್ವಾಹಕ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು ಭಾರತೀಯ ನ್ಯಾಯ ಸಂಹಿತೆಯ (BIS) ಸೆಕ್ಷನ್‌  106(1) , 289 ಮತ್ತು 3(5) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ವೇದಾಂತದ ಅಧ್ಯಕ್ಷ ಅನಿಲ್ ಅಗರ್ವಾಲ್ ಸಾಮಾಜಿಕ ಕಾರಣಗಳಿಗಾಗಿ 75% ಸಂಪತ್ತನ್ನು ದಾನ ಮಾಡುತ್ತಾರೆ

 ಈ ಅಪಘಾತದಲ್ಲಿ ಮಡಿದವರು ವೇದಾಂತ ಕಂಪನಿಯ ಉದ್ಯೋಗಿಗಳಲ್ಲ. ಉಪ ಗುತ್ತಿಗೆದಾರನ ಪರವಾಗಿ ನೌಕರಿ ಮಾಡುತ್ತಿದ್ದವರು. ಇದೂ ಇಲ್ಲಿರುವ ಒಂದು ಮಾದರಿ.

 ಕಳೆದ ಮೂರು ವರ್ಷಗಳಲ್ಲಿ ಛತ್ತಿಸ್‌ಘಡ್‌ನಲ್ಲೇ 296 ಕೈಗಾರಿಕಾ ಅಪಘಾತಗಳು ಸಂಭವಿಸಿವೆ. ಕಾರ್ಖಾನೆ ಸಲಹಾ ಸೇವೆಗಳ ಮಹಾ ನಿರ್ದೇಶನಾಲಯ (DGFAS) ಮತ್ತು ಕಾರ್ಮಿಕ ಸಂಸ್ಥೆಗಳು ದಾಖಲಿಸಿರುವಂತೆ ದೇಶ ವ್ಯಾಪಿಯಾಗಿ 2018 ರಿಂದ 2020ರ ನಡುವೆ 3,331 ಕೈಗಾರಿಕಾ ದುರಂತಗಳು ಸಂಭವಿಸಿವೆ. ಅಂದರೆ ದಿನಕ್ಕೆ ಮೂರು ಅಪಘಾತಗಳು. ಆದಾಗ್ಯೂ ಇದೇ ಅವಧಿಯಲ್ಲಿ ಕಾರ್ಖಾನೆಗಳ ಕಾಯ್ದೆ (Factories Act) ಅನ್ವಯ ಕೇವಲ 14 ಜನರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.  2024ರಲ್ಲಿ ಕಾರ್ಖಾನೆಯ ಕೆಲಸದ ಸ್ಥಳಗಳಲ್ಲಿ 400 ಅಪಘಾತಗಳು ಸಂಭವಿಸಿರುವುದಾಗಿ ಜಾಗತಿಕ ಸಂಘಟನೆ IndustriALL  ದಾಖಲಿಸಿದೆ. ಇವುಗಳ ಪೈಕಿ ರಾಸಾಯನಿಕ ಕಾರ್ಖಾನೆಗಳಲ್ಲೇ 220 ದುರಂತಗಳು ಸಂಭವಿಸಿವೆ. 2025ರ ಜುಲೈನಲ್ಲಿ ತೆಲಂಗಾಣದ ಸಿಂಗಾಚಿ ಕೈಗಾರಿಕೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 44 ಜನರು ಮೃತಪಟ್ಟಿದ್ದರು. ಇವರಲ್ಲಿ ಬಹುತೇಕ ವಲಸೆ ಕಾರ್ಮಿಕರೇ ಇದ್ದರು.  ಈ ಘಟಕದಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಎಚ್ಚರಿಕೆ ನೀಡುವ ಉಪಕರಣಗಳಾಗಲೀ (Fire Alarms) , ಉಷ್ಣ ಮಾಪಕಗಳಾಗಲೀ (Heat sensors) ಇರಲಿಲ್ಲ ಎಂದು ರಾಜ್ಯ ಅಗ್ನಿಶಾಮಕ ಇಲಾಖೆ ದಾಖಲಿಸಿದೆ.

 ರಾಚನಿಕ ಬದಲಾವಣೆ

 ಇವೆಲ್ಲವೂ  ಪರಸ್ಪರ ಸಂಬಂಧ ಇಲ್ಲದ ಘಟನೆಗಳಲ್ಲ. 2025ರ ನವಂಬರ್‌ 21ರಂದು ಔಪಚಾರಿಕವಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಗೊಳಿಸಿದ ಆರ್ಥವ್ಯವಸ್ಥೆಯ ಕಾರ್ಯಾಚರಣೆಯ ನಿಯಮಗಳ ಫಲಶ್ರುತಿ. ಒಂದೇ ಬಾರಿಗೆ , ಯಾವುದೇ ಪರಿವರ್ತನೆಯ ಅವಧಿಯೂ (Transition period) ಇಲ್ಲದೆ ಈ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಲಾಯಿತು. ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆಯ ಸಂಹಿತೆ ಮತ್ತು ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ (OSHWC)̤.  ಈ ನಾಲ್ಕು ಸಂಹಿತೆಗಳು ಚಾಲ್ತಿಯಲ್ಲಿದ್ದ  29 ಕಾರ್ಮಿಕ ಕಾಯ್ದೆಗಳ ಸ್ಥಾನವನ್ನು ಆಕ್ರಮಿಸಿದವು. ಏತನ್ಮಧ್ಯೆ ಭಾರತದ ಅತ್ಯುನ್ನತ ತ್ರಿಸದಸ್ಯ ವೇದಿಕೆಯಾದ ಇಂಡಿಯನ್‌ ಲೇಬರ್‌ ಕಾನ್ಫರೆನ್ಸ್‌ 2015ರಿಂದಲೂ ಸಮಾವೇಶಗೊಂಡಿಲ್ಲ ಎನ್ನುವುದು ಗಮನಾರ್ಹ ಸಂಗತಿ.

 ಈ ಹೊಸ ಆಳ್ವಿಕೆಯಲ್ಲಿ ಲೇ ಆಫ್‌ ಮಾಡಲು, ಸಿಬ್ಬಂದಿಯನ್ನು ವಜಾ ಮಾಡಲು ಮತ್ತು ಘಟಕಗಳನ್ನು ಮುಚ್ಚಿಹಾಕಲು ಇರುವ ನಿಗದಿತ ಮಿತಿಯನ್ನು 100 ಕಾರ್ಮಿಕರಿಂದ 300 ಕಾರ್ಮಿಕರಿಗೆ ಸಡಿಲಗೊಳಿಸಲಾಯಿತು. ಕೈಗಾರಿಕಾ ಸಂಬಂಧಗಳ ಸಂಹಿತೆ 2020ರ ಅನುಸಾರ ಇದಕ್ಕಿಂತಲೂ ಕಡಿಮೆ ಗಾತ್ರದ ಉದ್ದಿಮೆಗಳು ಯಾವುದೇ ಆಡಳಿತಾತ್ಮಕ ವಿಚಾರಣೆ ಇಲ್ಲದೆಯೇ ಸಿಬ್ಬಂದಿಯನ್ನು ವಜಾಗೊಳಿಸಬಹುದು. ಒಂದು ಅಂದಾಜಿನ ಪ್ರಕಾರ ಭಾರತದ ಬಹುಪಾಲು ಕಾರ್ಖಾನೆಗಳು ಈ ವ್ಯಾಪ್ತಿಗೆ ಒಳಪಡುತ್ತವೆ.  ರಾಷ್ಟ್ರೀಯ ಔಷಧ ಗ್ರಂಥಾಲಯದ (National Library of Medicine) ಆರ್ಕೈವ್ಸ್‌ನಲ್ಲಿ ಲಭ್ಯವಿರುವ ಪರಿಷ್ಕರಣ ವರದಿಯ ಅನುಸಾರ ಇದು 1982ಕ್ಕೂ ಮುನ್ನ ಇದ್ದಂತಹ ಮಿತಿಯನ್ನೇ ಪುನರ್‌ ಸ್ಥಾಪಿಸುತ್ತದೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಕಾರ್ಖಾನೆಗಳ ಲೇ ಆಫ್‌ಗಳ ಪರಿಣಾಮವಾಗಿ ಐದು ಲಕ್ಷ ಕಾರ್ಮಿಕರು ಬೀದಿಪಾಲಾದ ಹಿನ್ನೆಲೆಯಲ್ಲಿ ರೂಪಿಸಲಾಗಿದ್ದ ರಕ್ಷಣಾ ನಿಯಮಗಳನ್ನು ಇದು ಅನೂರ್ಜಿತಗೊಳಿಸುತ್ತದೆ.

Indian Labour Conference, Ministry of Labour & Employment | Webcast Services of National Informatics Centre, Government of India

2020ರ OSHWC ಸಂಹಿತೆಯು ಕಾರ್ಖಾನೆಯ ಶಾಸನಾತ್ಮಕ ನಿರ್ವಚನೆಯನ್ನು ಪರಿಷ್ಕರಿಸಿ ವಿದ್ಯುತ್‌ ಬಳಸುವ ಕಾರ್ಖಾನೆಯ ಕಾರ್ಮಿಕರ ಸಂಖ್ಯಾ ಮಿತಿಯನ್ನು 10 ರಿಂದ 20ಕ್ಕೆ ಹೆಚ್ಚಿಸುತ್ತದೆ. ವಿದ್ಯುತ್ ಇಲ್ಲದ ಕಾರ್ಖಾನೆಗಳಲ್ಲಿ ಇದು 20 ರಿಂದ 40 ಕಾರ್ಮಿಕರಿಗೆ ನಿಗದಿಪಡಿಸಲಾಗಿದೆ. ತತ್ಪರಿಣಾಮವಾಗಿ  ಸಣ್ಣ ಪ್ರಮಾಣದ ಎಲ್ಲ ಕೆಲಸದ ಸ್ಥಳಗಳು, ಘಟಕಗಳು ಕಡ್ಡಾಯ ಮೇಲ್ವಿಚಾರಣೆ , ರಕ್ಷಣೆ ಮತ್ತು ಪರಿಶೀಲನೆಯ (Inspection) ವ್ಯಾಪ್ತಿಯಿಂದ ಹೊರತಾಗುತ್ತವೆ. ಈ ವ್ಯಾಪ್ತಿಯಲ್ಲೇ ಭಾರತದ ಬಹುತೇಕ ಜವಳಿ, ಉಡುಪು, ಲೋಹ, ಹೊಸೈರಿ  ಮತ್ತು ಆಹಾರ ಸಂಸ್ಕರಣೆಯ ಘಟಕಗಳು ಕಾರ್ಯನಿರ್ವಹಿಸುತ್ತವೆ. ಈ ತಾಂತ್ರಿಕ ಪುನರ್‌ ವರ್ಗೀಕರಣವು ಕಾರ್ಮಿಕರನ್ನು ಒಳಗೊಳ್ಳುವ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸುತ್ತಾರೆ. ಏಕೆಂದರೆ  ಭಾರತದ ಬಹುಪಾಲು ಉತ್ಪಾದನಾ ಘಟಕಗಳು (Manufacturing Units)  20ಕ್ಕೂ ಕಡಿಮೆ ಕಾರ್ಮಿಕರನ್ನು ಹೊಂದಿರುತ್ತವೆ.

ಇದೇ ರೀತಿ ಪರಿಶೀಲನೆಯ (Inspection)  ವಿಧಾನವನ್ನೂ ಸಡಿಲಗೊಳಿಸಲಾಗಿದೆ.  OSHWC ಸಂಹಿತೆಯು, ಈ ಹಿಂದೆ ಇದ್ದ ಅನಿರೀಕ್ಷಿತ ಪರಿಶೀಲನೆಯ ಬದಲು ಪರಿಶೀಲಕರು ಮತ್ತು ಸಹಾಯಕರು  ಎಂಬ ಹೊಸ ವಿಧಾನವನ್ನು ಅಳವಡಿಸಿದ್ದು, ಇದನ್ನು ವೆಬ್‌ ಆಧಾರಿತ ಶ್ರಮ ಸುವಿಧಾ ಪೋರ್ಟಲ್‌ ಮೂಲಕ ಮಂಜೂರು ಮಾಡಲಾಗುತ್ತದೆ ಹಾಗೆಯೇ ಪರಿಶೀಲನೆಯನ್ನು ಯಾದೃಚ್ಛಿಕಗೊಳಿಸಲಾಗುತ್ತದೆ (Randomised) . ಉದ್ಯೋಗದಾತರ ಸ್ವಯಂ ಪ್ರಮಾಣೀಕರಣವನ್ನೂ ಸಹ ಮಾನ್ಯ ಮಾಡಲಾಗುತ್ತದೆ.  ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ಇಂಡಿಯಾ ಲೇಬರ್‌ ಇನ್ಸ್‌ಪೆಕ್ಷನ್‌ ಟಿಪ್ಪಣಿಗಳಲ್ಲಿ ಹೇಳಿರುವಂತೆ ಈ ಹೊಸ ಬದಲಾವಣೆಯು ILO ಒಡಂಬಡಿಕೆಯ ಸಂಖ್ಯೆ 81ರ ಅನುಸಾರ ಜಾರಿಯಲ್ಲಿರುವ ಸ್ವತಂತ್ರ, ಅನಿರೀಕ್ಷಿತ ಪರಿಶೀಲನೆಯ ನಿಯಮಗಳನ್ನು ಉಲ್ಲಂಘಿಸುತ್ತದೆ.

 ಹೋರಾಟಗಳಿಗೆ ಕಡಿವಾಣ

 ಸಾಮೂಹಿಕ ಚಟುವಟಿಕೆಗಳನ್ನು ಕೈಗೊಳ್ಳಲು ಇರುವ ಪ್ರಕ್ರಿಯೆಯಲ್ಲೂ ಹಲವಾರು ಅಡ್ಡಗೋಡೆಗಳನ್ನು ರೂಪಿಸಲಾಗಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆಯ ಅನ್ವಯ 60 ದಿನಗಳ ಮುಂಚಿತ ನೋಟಿಸ್‌ ನೀಡದೆ ಯಾವ ಕಾರ್ಮಿಕರೂ ಮುಷ್ಕರ ಹೂಡುವಂತಿಲ್ಲ, ಹಠಾತ್‌ ಮುಷ್ಕರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಸಂಧಾನ ಪ್ರಕ್ರಿಯೆಗಳು ಮತ್ತು ನ್ಯಾಯಮಂಡಲಿಯ ಪ್ರಕ್ರಿಯೆಗಳು ಜಾರಿಯಾದರೆ ತದನಂತರ ಹಲವು ವಾರಗಳ ಕಾಲ ಮುಷ್ಕರವನ್ನು ನಿಷೇಧಿಸಲಾಗುತ್ತದೆ. ಶೇಕಡಾ 50ಕ್ಕಿಂತಲೂ ಹೆಚ್ಚು ಸಿಬ್ಬಂದಿಯ ಸಾಮೂಹಿಕ ಸಾಂದರ್ಭಿಕ ರಜೆ (Mass casual leave ) ಈಗ ಮುಷ್ಕರ ಎಂದು ಪರಿಗಣಿಸಲ್ಪಡುತ್ತದೆ. ಕಾರ್ಮಿಕ ಸಂಘಗಳು ಹೇಳುವಂತೆ ಈ ನಿಯಮಗಳು ಒಟ್ಟಾರೆಯಾಗಿ ಕಾನೂನುಬದ್ಧವಾದ ಕೈಗಾರಿಕಾ ಚಟುವಟಿಕೆಗಳನ್ನು ಸಂಘಟಿಸುವುದನ್ನೇ ಅಸಾಧ್ಯವಾಗಿಸುತ್ತವೆ. ಇದು ಸರ್ಕಾರದ ಉದ್ಯೋಗದಾತರ ಪರವಾದ ನೀತಿಯನ್ನು ಮತ್ತಷ್ಟು ದೃಢೀಕರಿಸುತ್ತದೆ.

Casual Leave Rules in India: Policy, Entitlements & Calculation - Hirist Blog

 ಪ್ರತಿಯೊಂದು ಕಾರ್ಯಾಚರಣೆಯ ಷರತ್ತುಗಳಲ್ಲೂ ಶಾಸನಾತ್ಮಕ ಮಿತಿಯನ್ನು ಹೆಚ್ಚಿಸುವ ಸುಧಾರಣಾ ಕ್ರಮವು ಕಾರ್ಮಿಕರ ರಕ್ಷಣೆಯನ್ನು ತರ್ಕಬದ್ಧವಾಗಿಸುವುದಿಲ್ಲ. ಬದಲಾಗಿ ಈ ರಕ್ಷಾ ಕವಚಗಳನ್ನು ಕಿತ್ತು ಹಾಕುತ್ತವೆ. ನಿಯಮಗಳನ್ನು ಅನುಷ್ಠಾನಗೊಳಿಸುವ ಅಧ್ಯಾಯಗಳು ನಿಯಮ ಪಾಲನೆಗಿಂತಲೂ ಹೆಚ್ಚಾಗಿ ಅನುಕೂಲತೆಗಳ ಚೌಕಟ್ಟಿನಲ್ಲಿ ಕಂಡುಬರುತ್ತವೆ.

 ಭಾರತೀಯ ಮಜ್ದೂರ್‌ ಸಂಘ (BMS) ಹೊರತುಪಡಿಸಿ ಹತ್ತು ಕೇಂದ್ರ ಕಾರ್ಮಿಕ ಸಂಘಗಳು 2025ರ ನವಂಬರ್‌ 26ರಂದು ಕರಾಳ ದಿನ ಆಚರಿಸಿ ಈ ಸಂಹಿತೆಗಳನ್ನು ದುಡಿಯುವ ವರ್ಗಗಳನ್ನು ವಂಚಿಸುವ ನಿಯಮಗಳು ಎಂದು ಖಂಡಿಸಿದವು.  ಈ ಕಾರ್ಮಿಕ ಸಂಘಗಳ ಆಕ್ಷೇಪಗಳು ಭಾವನಾತ್ಮಕವಲ್ಲ. ಕಾರ್ಖಾನೆಯ ಕಾನೂನಾತ್ಮಕ ವ್ಯಾಖ್ಯಾನವು ಅತಿ ಸಣ್ಣ ಹಾಗೂ ಅಪಾಯಕಾರಿ ಕೆಲಸದ ಸ್ಥಳಗಳನ್ನು ಹೊರತುಪಡಿಸಿದಾಗ, ಪರಿಶೀಲನೆಯ ಅಧಿಕಾರಿಗಳು ತಮ್ಮ ಭೇಟಿಯನ್ನು ಪೋರ್ಟಲ್‌ ಮೂಲಕ ಘೋಷಿಸುವಂತಾದಾಗ,  300ಕ್ಕೂ ಕಡಿಮೆ ಕಾರ್ಮಿಕರು ಇರುವ ಕಡೆ ವಜಾಮಾಡುವುದಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂದಾದಾಗ , ಮುಷ್ಕರಗಳಿಗೆ ಪ್ರಕ್ರಿಯೆಗಳ ಸಂಕೋಲೆಯಲ್ಲಿ ಬಿಗಿದು ಕಡಿವಾಣ ಹಾಕಿದಾಗ ನಿರೀಕ್ಷಿಸಬಹುದಾದ ಬೆಳವಣಿಗೆ ಎಂದರೆ ನೊಯ್ಡಾದಲ್ಲಿ ನಡೆದಂತಹ ಪ್ರತಿಭಟನೆಗಳು ಮತ್ತು ಸಿಂಘಟರೈನಲ್ಲಿ ಸಂಭವಿಸಿದಂತಹ ಅಪಘತಗಳು.

 ಮದರ್‌ಸನ್‌ ರುಮಿ ಮತ್ತು ರೀಚಾ ಗ್ಲೋಬಲ್‌ ಕಾರ್ಖಾನೆಗಳಿಂದ ಕಾರ್ಮಿಕರನ್ನು ಪೊಲೀಸರ ಲಾಠಿ ಪ್ರಹಾರಕ್ಕೆ ಎಳೆದುತರುವ ಒಂದು ಪ್ರಸಂಗ , ಮೇಲ್ಚಿಚಾರಣೆ ಮತ್ತು ನಿರ್ವಹಣೆಯ ಮುಂದೂಡುವಿಕೆಯಿಂದ ಸಂಭವಿಸುವ ಕುಲುಮೆಯ ಕೊಳವೆ ಸ್ಫೋಟ ಇವೆರಡೂ ಪ್ರತ್ಯೇಕ ಘಟನೆಗಳಲ್ಲ.  ಒಂದೇ ವ್ಯವಸ್ಥೆಯ ಎರಡು ಮಗ್ಗುಲುಗಳು.

 ಹಳೆಯ ಕಾಯ್ದೆಗಳು ಹೊಸ ವಾಸ್ತವಗಳು 

ಕಾರ್ಮಿಕ ಸುಧಾರಣೆಗಳಿಗಾಗಿ ಪ್ರಾಮಾಣಿಕವಾದ ಸಾರ್ವಜನಿಕ ಆಗ್ರಹ ಇದೆ.  1948ರ ಕಾರ್ಖಾನೆಗಳ ಕಾಯ್ದೆ ಭಾರತದ ಬಹುತೇಕ ರಾಜ್ಯಗಳಿಗಿಂತಲೂ ಹಳೆಯದು. 1923ರ ದುಡಿಮೆಗಾರರ ಪರಿಹಾರ ಕಾಯ್ದೆ ಸಂವಿಧಾನಕ್ಕೂ ಮುಂಚೆ ರಚನೆಯಾಗಿರುವುದು.  ವಸಾಹತುಶಾಹಿ ಭಾರತದ ಕೈಗಾರಿಕಾ ಆರ್ಥಿಕತೆಯ ಚೌಕಟ್ಟನ್ನು, ಸೆಣಬಿನ ಗಿರಣಿಗಳು, ಜವಳಿ ಗಿರಣಿಗಳು, ರೈಲ್ವೇ ಕಾರ್ಯಾಗಾರಗಳು ಇತ್ಯಾದಿಗಳನ್ನು ನಿಯಂತ್ರಿಸಲು ರೂಪಿಸಿದಂತಹ ಕಾನೂನುಗಳು ವರ್ತಮಾನದ ದುಡಿಮೆಗಾರರ ಮೇಲೆ ಆಳ್ವಿಕೆ ನಡೆಸಲಾಗುವುದಿಲ್ಲ. ಈ ಹೊಸ ದುಡಿಮೆಯ ವರ್ಗಗಳಲ್ಲಿ ಗಿಗ್‌ ಕಾರ್ಮಿಕರು, ಪ್ಲಾಟ್‌ಫಾರ್ಮ್‌ ನೌಕರರು, ಡಿಜಿಟಲ್‌ ಮಾಧ್ಯಮದ ಕಾರ್ಮಿಕರು ಅಪಾರ ಸಂಖ್ಯೆಯಲ್ಲಿದ್ದಾರೆ.  ಗಂಭೀರವಾಗಿ ಆಲೋಚನೆ ಮಾಡುವ ಯಾರೇ ಆದರೂ , ಭಾರತದ ಯಾವುದೇ ಕಾರ್ಮಿಕ ಸಂಘವಾದರೂ ಬಲವರ್ಧನೆ ಆಗಬೇಕಿತ್ತು ಎಂದೇ ಹೇಳಲು ಸಾಧ್ಯ. ಕಾನೂನು ಬದಲಾವಣೆಯಾಗಬೇಕೋ ಬೇಡವೋ ಎನ್ನುವುದಕ್ಕಿಂತಲೂ ಯಾವ ರೀತಿ ಬದಲಾವಣೆಯಾಗಿದೆ ಎನ್ನುವುದು ಮುಖ್ಯ ಪ್ರಶ್ನೆಯಾಗುತ್ತದೆ.

ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ಕಾರ್ಮಿಕ ಕಾನೂನು ಅನುಸರಣೆ: ಮಾರ್ಗದರ್ಶಿ

 ಬಲವರ್ಧನೆ ಎಂದರೆ ಸಡಿಲಗೊಳಿಸುವುದಲ್ಲ, ಸರಳೀಕರಣ ಎಂದರೆ ವಿನಾಯಿತಿ ಕೊಡುವುದು ಎಂದರ್ಥವಲ್ಲ.

ಮೇ ದಿನ ಆಚರಿಸುವ ಸಂದರ್ಭದಲ್ಲಿ,  ಯಾವುದೇ ಕಾರ್ಮಿಕ ನೀತಿಯು, ಕಾರ್ಮಿಕ ತನ್ನ ಬದುಕಿಗೆ ಅಗತ್ಯವಿರುವಷ್ಟು ಸಂಪಾದಿಸಿ ಜೀವನ ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆಯೇ ಎಂಬ ಸಾಧಾರಣ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. . ಏಪ್ರಿಲ್‌ 2026ರಲ್ಲಿ ನೊಯ್ಡಾ ಮತ್ತು ಸಿಂಘಿಟರೈನಿಂದ ಬಂದ ಉತ್ತರ ಒಂದೇ ಆಗಿದೆ. ನೊಯ್ಡಾದಲ್ಲಿ ಪೊಲೀಸರು, ಇಂಧನ ಬೆಲೆಗಳ ಹೆಚ್ಚಳದಿಂದ ಬದುಕಲು ಅವಶ್ಯವಾದ ಕೂಲಿ ದೊರೆಯುತ್ತಿಲ್ಲ ಎಂದು ಪ್ರತಿಭಟಿಸಿದ  ಕಾರ್ಮಿಕರ ಮೇಲೆ ಅಶ್ರುವಾಯು ಪ್ರಯೋಗಿಸಿದರು. ಸಿಂಘಿಟರೈನಲ್ಲಿ ಏಪ್ರಿಲ್‌ 14ರಂದು ಸಂಭವಿಸಿದ ಬಾಯ್ಲರ್‌ ಸ್ಫೋಟದಲ್ಲಿ, ಊಟ ಮಾಡುತ್ತಿದ್ದ ಕಾರ್ಮಿಕರು 600 ಡಿಗ್ರಿ ಶಾಖದ ಹವೆಯನ್ನು ಎದುರಿಸಬೇಕಾಯಿತು. 20 ಕಾರ್ಮಿಕರು ಮೃತಪಟ್ಟರು. ಎಲ್ಲರೂ ವ್ಯಾಪಾರ ಸಹಭಾಗಿಯ (Business Partner) ಮೂಲಕ ನೇಮಿಸಲ್ಪಟ್ಟ ಗುತ್ತಿಗೆ ಕಾರ್ಮಿಕರಾಗಿದ್ದರು ಯಾರೂ ನೇರ ಉದ್ಯೋಗಿಗಳಾಗಿರಲಿಲ್ಲ.  ಜೀವನ ನಿರ್ವಹಣೆಯನ್ನು ಸರಿದೂಗಿಸದ ವೇತನವಾಗಲೀ, ಅದನ್ನು ಕಾಪಾಡಲು ಸಾಧ್ಯವಾಗದ ಕೆಲಸದ ಸ್ಥಳವಾಗಲೀ ಒಂದೇ ಸ್ವರೂಪದ್ದಾಗಿರುತ್ತದೆ. ವೇತನವನ್ನು ಕಡಿಮೆ ಮಾಡುವ ಆದರೆ ಕೆಲಸದ ಸ್ಥಳದಲ್ಲಿ ರಕ್ಷಣೆಯನ್ನು ನೀಡದ ವ್ಯವಸ್ಥೆಯನ್ನು ತರ್ಕಬದ್ಧ ಎನ್ನಲಾಗುವುದಿಲ್ಲ ಹೊಸ ಸಂಹಿತೆಗಳು  ಯಾರನ್ನು ರಕ್ಷಿಸಬೇಕಿದೆಯೋ ಆ ಜನರ ವಿರುದ್ಧವೇ ಪುನಾರಚಿಸಲಾಗಿದೆ.

-೦-೦-೦-೦-

Tags: Bharatiya Majdoor SanghaBussiness PartnerGovernment of IndiaInspectionslabour lawsLabour RulesLabours LifeLabours StruggleManufacturing Unitsmay dayNA Divakar's ArticleNoida Labour Protestold Labour LawsPratidhvani
Previous Post

ಶೃಂಗೇರಿ ಷಡ್ಯಂತ್ರ ದೇಶ, ಪ್ರಜಾಪ್ರಭುತ್ವಕ್ಕೆ ಕಳಂಕ : ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ

Next Post

ಅಮೆರಿಕಾ–ಇರಾನ್ ಉದ್ವಿಗ್ನತೆಗೆ ಪರಿಹಾರ ಹುಡುಕಾಟ: ಶಾಂತಿ ಪ್ರಸ್ತಾಪ ಪರಿಶೀಲನೆ

Related Posts

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ
Top Story

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ...

Read moreDetails
ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

May 13, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
Next Post
ಅಮೆರಿಕಾ–ಇರಾನ್ ಉದ್ವಿಗ್ನತೆಗೆ ಪರಿಹಾರ ಹುಡುಕಾಟ: ಶಾಂತಿ ಪ್ರಸ್ತಾಪ ಪರಿಶೀಲನೆ

ಅಮೆರಿಕಾ–ಇರಾನ್ ಉದ್ವಿಗ್ನತೆಗೆ ಪರಿಹಾರ ಹುಡುಕಾಟ: ಶಾಂತಿ ಪ್ರಸ್ತಾಪ ಪರಿಶೀಲನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada