ಕರೋನಾ ಸೋಂಕು ಭಾರತದಲ್ಲಿ ಮಿತಿ ಮೀರಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ಏರ್ಪಡಿಸಿದ್ದು, ಮುಂದಿನ ದಿನಗಳಲ್ಲಿ ಕರೋನಾ ವಿಚಾರವಾಗಿ ಏನು ಮಾಡುವುದು ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಈ ನಡುವೆ ದೇಶದ ಹಲವು ರಾಜ್ಯಗಳು ಸೋಂಕಿತರ ಅಂಕಿ ಸಂಖ್ಯೆಯನ್ನು ಮುಚ್ಚಿಡುತ್ತಿವೆಯಾ ಎನ್ನುವ ಅನುಮಾನ ದಟ್ಟವಾಗಿ ಕಾಡಲಾರಂಭಿಸಿದೆ.
ಸೋಂಕಿನ ಲೆಕ್ಕಾಚಾರದಲ್ಲಿ ಸುಳ್ಳು ಹೇಳಿತ್ತಾ ಚೀನಾ..?
ಚೀನಾ ದೇಶದ ವುಹಾನ್ನಲ್ಲಿ ಕರೋನಾ ವೈರಾಣು ಜನ್ಮ ತಾಳಿ ವಿಶ್ವದೆಲ್ಲೆಡೆ ಪಸರಿಸಿದೆ. ಕರೋನಾ ಸೋಂಕು ಇಡೀ ವಿಶ್ವದ ಆರ್ಥಿಕತೆಯನ್ನು ನುಂಗಿ ಹಾಕಿದೆ. ವಿಶ್ವದ ದೊಡ್ಡಣ್ಣ ಅಮೆರಿಕವೇ ಕರೋನಾ ವೈರಾಣು ನಿರ್ಮೂಲನೆ ಮಾಡಲಾಗದೆ ಪರದಾಡುತ್ತಿದೆ. ಸೋಂಕು ಹರಡುವುದನ್ನು ಸಾಧ್ಯವಾಗದೆ ಪರಿತಪಿಸುತ್ತಿದೆ. ಪರಿಸ್ಥಿತಿ ಹೀಗಿರುಇವಾಗ ಚೀನಾ ದೇಶದಲ್ಲಿ ಕರೋನಾ ವೈರಾಣು ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎನ್ನುವುದು ಅಮೆರಿಕದ ಆರೋಪ. ಸೋಂಕು ಚೀನಾ ದೇಶದಿಂದಲೇ ವಿಶ್ವಕ್ಕೆ ವ್ಯಾಪಿಸಿದೆ. ಹಾಗಿದ್ದರೂ ಸೋಂಕು ಇಷ್ಟು ಪ್ರಮಾಣದಲ್ಲಿ ಕಡಿಮೆ ಆಗಿರಲು ಸಾಧ್ಯವೇ ಇಲ್ಲ. ಚೀನಾ ದೇಶ ತನ್ನ ದೇಶದಲ್ಲಿ ವ್ಯಾಪಿಸಿರುವ ಅಂಕಿ ಸಂಖ್ಯೆಯನ್ನು ಮುಚ್ಚಿಟ್ಟು ತನ್ನ ದೇಶದಲ್ಲಿ ನಿಯಂತ್ರಣದಲ್ಲಿದೆ ಎಂದು ವಿಶ್ವವನ್ನು ನಂಬಿಸುವ ಯತ್ನ ಮಾಡ್ತಿದೆ ಎಂದು ಆರೋಪಿಸಿತ್ತು.
ರಾಜ್ಯ ಸರ್ಕಾರದ ಮಹಾನ್ ಎಡವಟ್ಟು ಏನು ಗೊತ್ತಾ..?
ರಾಜ್ಯಾದ್ಯಂತ ಸೋಂಕಿನ ಸಂಖ್ಯೆ ಒಮ್ಮೆಲೇ ಏರುಗತಿಯಲ್ಲಿ ಸಾಗಿದ್ರಿಂದ ಜನಸಾಮಾನ್ಯರು ದಿಗಿಲುಗೊಳ್ಳುವಂತೆ ಮಾಡಿತ್ತು. ಇದನ್ನರಿತ ಸರ್ಕಾರ ಸೋಂಕಿತರ ಪತ್ತೆ ಹಚ್ಚುವ ಕೆಲಸವನ್ನೇ ನಿಲ್ಲಿಸುವ ನಿರ್ಧಾರ ಮಾಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕರೋನಾ ಕ್ಲಸ್ಟರ್ ಆಗಿದ್ದ ಪಾದರಾಯನಪುರದಲ್ಲಿ ಸಾಮೂಹಿಕ ತಪಾಸಣೆಗೆ ನಿರ್ಧಾರ ಮಾಡಿತ್ತು. ಆ ಬಳಿಕ ಯಾರಿಗೆ ಸೋಂಕು ಕಾಣೀಸುತ್ತದೆಯೋ ಅಂತವರನ್ನು ಮಾತ್ರ ತಪಾಸಣೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದರು. ಆದರೆ ನಮ್ಮ ರಾಜ್ಯದಲ್ಲಿ ಶೇಕಡ 95ರಷ್ಟು ಜನರಲ್ಲಿ ಸೋಂಕು ಕಾಣಿಸಿಲ್ಲ ಎಂದು ಇದೇ ಸರ್ಕಾರದ ವರದಿಯೇ ಹೇಳುತ್ತಿದೆ. ಪರಿಸ್ಥಿತಿ ಹೀಗಿದ್ದ ಮೇಲೆ ಸೋಂಕಿನ ಲಕ್ಷಣ ಇದ್ದವರಿಗೆ ಮಾತ್ರ ಪರೀಕ್ಷೆ ಮಾಡುವ ನಿರ್ಧಾರ ಮಹಾ ಎಡವಟ್ಟಿಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳು ಇದೆ. ಸೋಂಕಿನ ಲಕ್ಷಣವಿಲ್ಲ ಎನ್ನುವ ಕಾರಣಕ್ಕೆ ತಪಾಸಣೆಯನ್ನೇ ಮಾಡದಿದ್ದರೆ, ಏಕಾಏಕಿ ಸೋಂಕು ವಿಪರೀತವಾಗಿ ವ್ಯಕ್ತಿ ಸಾಯಬಹುದು ಅಥವಾ ಸೋಂಕು ಲಕ್ಷಣವಿಲ್ಲದ ವ್ಯಕ್ತಿ ನೂರಾರು ಜನರಿಗೆ ಸೋಂಕು ಹರಡಿಸಲೂಬಹುದು.
ಕರ್ನಾಟಕದಲ್ಲೂ ಆಗುತ್ತಿದೆಯಾ ಕರೋನಾ ಕಳ್ಳ ಲೆಕ್ಕ..?
ಕರೋನಾ ಸೋಂಕಿನ ಪ್ರಮಾಣ ಹಾಗೂ ಸಾವುಗಳ ಸಂಖ್ಯೆ ಏರಿಕೆ ಆಗುತ್ತಿದ್ದ ಹಾಗೆ ಎಲ್ಲಾ ಸರ್ಕಾರಗೂ ಸುಳ್ಳು ಲೆಕ್ಕ ಕೊಡುವುದಕ್ಕೆ ಮುಂದಾಗಿವೆ ಎನ್ನುವ ಬಲವಾದ ಆರೋಪ ಕೇಳಿ ಬಂದಿದೆ. ಕರ್ನಾಟಕ ಸರ್ಕಾರ ಕೂಡ ಕಳ್ಳಲೆಕ್ಕದಿಂದ ಹೊರತಾಗಿಲ್ಲ ಎನ್ನುವ ಅನುಮಾನ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಗೊತ್ತಾಗುತ್ತಿದೆ. ಉಡುಪಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಒಂದು ದಿನ ಕಂದಾಯ ಸಚಿವ ಆರ್ ಅಶೋಕ್ ಅವರು 210 ಕೇಸ್ಗಳು ಒಂದೇ ದಿನ ಬಂದಿವೆ ಎಂದಿದ್ದರು. ಆದರೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಕೇವಲ 150 ಕೇಸ್ ಮಾತ್ರ ತೋರಿಸಿ ಇನ್ನುಳಿದ 60 ಕೇಸ್ಗಳನ್ನು ಮರುದಿನದ ಬುಲೆಟಿನ್ನಲ್ಲಿ ಬಿಡುಗಡೆ ಮಾಡಿದ್ದರು. ಇನ್ನೊಂದು ದಿನ ವೈದ್ಯಕೀಯ ಶಿಕ್ಷಣ ಸಚಿವರೇ 300 ರಿಂದ 350 ಕೇಸ್ ಬರುತ್ತೆ ಎಂದಾಗಲೂ ಆರೋಗ್ಯ ಇಲಾಖೆಯ ಕರೋನಾ ಬುಲೆಟಿನ್ನಲ್ಲಿ ಅಂಕಿ ಸಂಖ್ಯೆ ಬದಲಾಗಿತ್ತು. ಇದೊಂದು ಉದಾಹರಣೆ ಮಾತ್ರ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಪರಿಸ್ಥಿತಿ ಬದಲಾಗಿಲ್ಲ. ಕರೋನಾ ಸಾವಿನ ಸಂಖ್ಯೆ ಕಳೆದ ಮೂರು ತಿಂಗಳಲ್ಲಿ ನಿಯಂತ್ರಣದಲ್ಲಿತ್ತು. ಆದರೆ ಕಳೆದ ನಾಲ್ಕು ದಿನಗಳಲ್ಲಿ 11 ಮಂದಿಗೆ ಕರೋನಾದಿಂದ ಸಾವು ಸಂಭವಿಸಿದೆ. ಇಲ್ಲಿಯವರೆಗೆ 32 ಜನ ಕರೋನದಿಂದ ಬೆಂಗಳೂರಿನಲ್ಲಿ ಸಾವು ಸಂಭವಿಸಿದೆ. ಇದನ್ನು ಬಿಬಿಎಂಪಿ ಅಧಿಕಾರಿ ಹಾಗೂ ಆಸ್ಪತ್ರೆಗಳು ಒಪ್ಪದೆ ಕೇವಲ 20 ಜನ ಸಾವನ್ನಪ್ಪಿದ್ದಾರೆ ಎನ್ನುವ ಮಾತು ಹೇಳುತ್ತಿವೆ.
ತಮಿಳುನಾಡಿನಲ್ಲೂ ಸೋಂಕು, ಸಾವು ಮುಚ್ಚಿಡಲಾಗ್ತಿದ್ಯಾ..?
ಕರ್ನಾಟಕದ ನೆರೆ ರಾಜ್ಯ ತಮಿಳುನಾಡಿನಲ್ಲಿ ಕರೋನಾ ರಣಕೇಕೆ ಹಾಕುತ್ತಿದೆ. ಭಾನುವಾರ ಒಂದೇ ದಿನ 1974 ಹೊಸ ಕೇಸ್ಗಳು ಪತ್ತೆಯಾಗಿದ್ದು, 45 ಸಾವಿರ ಗಡಿ ತಲುಪಿದೆ. ದೇಶದಲ್ಲಿ ಮಹಾರಾಷ್ಟ್ರದ ಬಳಿಕ ಸಾಕಷ್ಟು ಸೋಂಕಿತರು ಹಾಗೂ ಸಾವಿನ ಅಂಕಿ ಅಂಶ ಹೊಂದಿರುವುದು ತಮಿಳುನಾಡು. ಆದರೆ ತಮಿಳುನಾಡಿನಲ್ಲಿ ಅಧಿಕಾರಿಗಳು ಸುಮಾರು 200 ಸಾವುಗಳ ಲೆಕ್ಕಾಚಾರವನ್ನೇ ಕೈಬಿಟ್ಟಿದ್ದಾರೆ ಎನ್ನುವ ಆರೋಪ ಎದುರಾಗಿತ್ತು. ಆ ಬಳಿಕ ತಮಿಳುನಾಡು ಸರ್ಕಾರ ತನಿಖೆಗೆ ಆದೇಶ ಮಾಡಿದೆ. 44,661 ಜನ ಸೋಂಕಿತರನ್ನು ಹೊಂದಿರುವ ತಮಿಳುನಾಡು, 435 ಜನರನ್ನು ಕಳೆದುಕೊಂಡಿದೆ. 24,547 ಜನ ಗುಣಮುಖರಾಗಿದ್ದು, 19,679 ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲಿ ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದರೂ ಪ್ರತಿದಿನ ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.
![](https://pratidhvani.in/wp-content/uploads/2021/02/Stay_Home_2-79.jpg)
ಬ್ರೆಜಿಲ್ ನಲ್ಲೂ ಕರೋನಾ ಸೋಂಕಿನ ಲೆಕ್ಕಾಚಾರ ನಾಪತ್ತೆ..!
ವಿಶ್ವದ ಕರೋನಾ ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್ ಕೂಡಾ ಸಾವು ಹಾಗೂ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎನ್ನುವ ಅನುಮಾನಗಳು ಶುರುವಾಗಿವೆ. covid.saude.gov.br ವೆಬ್ಸೈಟ್ನಿಂದ ಸೋಂಕಿತರ ಲೆಕ್ಕಾಚಾರಗಳನ್ನು ಅಳಿಸಿ ಹಾಕಿದ್ದು ಸಾರ್ವಜನಿಕರಿಗೆ ಕರೋನಾ ಸೋಂಕಿನ ಲೆಕ್ಕಾಚಾರ ಸಿಗದಂತೆ ಮಾಡಿದೆ. ಈ ನಿರ್ಧಾರವನ್ನು ಸ್ವತಃ ಬ್ರೆಜಿಲ್ ಅಧ್ಯಕ್ಷ ಜೇಯ್ರ್ ಬೊಲ್ಸನಾರೋ ಸಮರ್ಥನೆ ಮಾಡಿಕೊಂಡಿದ್ದಾರೆ. 6 ಲಕ್ಷದ 72 ಸಾವಿರ ಗಡಿ ದಾಟಿದ ಬಳಿಕ ಅಧಿಕೃತವಾಗಿ ಅಂಕಿ ಸಂಖ್ಯೆ ಬಿಡುಗಡೆ ಮಾಡುವುದನ್ನೇ ಬ್ರೆಜಿಲ್ ನಿಲ್ಲಿಸಿಬಿಟ್ಟಿದೆ. ಮಾಧ್ಯಮಗಳಿಗೂ ಮಾಹಿತಿ ನೀಡದೆ ಸತಾಯಿಸುತ್ತಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಾಹಿತಿಯ ಪಾರದರ್ಶಕತೆ ಒಂದು ಪ್ರಬಲ ಸಾಧನವಾಗಿದೆ ಎಂದು ಮಾಧ್ಯಮಗಳು ಸರ್ಕಾರದ ವಿರುದ್ಧ ಗುಡುಗಿವೆ. ತೀವ್ರ ವಿರೋಧ ವ್ಯಕ್ತವಾದ ಬಳಿಕ ಹೊಸ ವೆಬ್ಸೈಟ್ನಲ್ಲಿ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿದೆಯಾದರೂ ಅಂಕಿಅಂಶಗಳ ಮೇಲೆ ಅನುಮಾನ ಮೂಡುತ್ತಿದೆ.
ಭಾರತದಲ್ಲೂ ಅಂಕಿ ಅಂಶಗಳ ಜೊತೆ ಕಣ್ಣಮುಚ್ಚಾಲೆ..?
ಭಾರತ ಸರ್ಕಾರ ಕೂಡ ಅಂಕಿ ಅಂಶಗಳನ್ನು ಮರೆ ಮಾಚುವ ಸಾಧ್ಯತೆಯಿದೆ. ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಹೋಗುತ್ತಿದ್ದು, ಅಂಕಿಸಂಖ್ಯೆ ಮುಚ್ಚಿಟ್ಟು ಜನರು ಹೆದರಬಾರದು ಎನ್ನುವ ಕಾರಣಕ್ಕೆ ಕಡಿಮೆ ಲೆಕ್ಕ ತೋರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರಗಳು ILI ನಿಂದ ಮೃತಪಟ್ಟವರನ್ನು ಕರೋನಾ ಸೋಂಕಿನಿಂದ ಮೃತಪಟ್ಟರು ಎನ್ನಲು ಸಾಧ್ಯವಿಲ್ಲ. ಅವರು ಈಗಾಗಲೇ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಸೋಂಕು ಕಾಣಿಸಿಕೊಂಡರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶ್ವಾಸಕೋಶಕ್ಕೆ ನೇರವಾಗಿ ಕರೋನಾ ಸೋಂಕು ದಾಳಿ ಮಾಡುವುದರಿಂದ ಪ್ರಾಣಾಪಾಯ ಹೆಚ್ಚು. ಆದರೆ ಸೋಂಕಿನಿಂದಲೇ ಸಾವು ಸಂಭವಿಸಿದೆ ಎನ್ನಲಾಗದು ಎನ್ನುವ ಮಾತುಗಳು ನಿಧಾನವಾಗಿ ಕೇಳಿ ಬರುತ್ತಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಅಂಕಿಸಂಖ್ಯೆ ಕಣ್ಣಾಮುಚ್ಚಾಲೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಬಗ್ಗೆ ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆ ವೇಳೆಗೆ ಭಾರತದಲ್ಲೂ ಸೋಂಕಿತರ ಲೆಕ್ಕಾಚಾರ ಮಿಸ್ ಆಗುವ ಸಾಧ್ಯತೆ ಹೆಚ್ಚಾಗಿದೆ.