ದೇಶಾದ್ಯಂತ ಕರೋನಾ ಲಾಕ್ಡೌನ್ ಹೇರಿಕೆ ಆಗಿರೋದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದು ಕರೋನಾ ವಿರುದ್ಧ ಹೋರಾಡಲು ಅನಿವಾರ್ಯವಾದರೆ, ಇನ್ನೊಂದೆಡೆ ದೇಶಾದ್ಯಂತ ಕಳೆದ ಒಂದು ವರುಷದಿಂದ ಪ್ರಜಾಪ್ರಭುತ್ವ ಅಘೋಷಿತ ಲಾಕ್ಡೌನ್ ಪರಿಸ್ಥಿತಿಯಿಂದ ಕೂಡಿದೆ ಅನ್ನೋದು ದೇಶದ ಪ್ರಜ್ಞಾವಂತರನ್ನ ಕಾಡುತ್ತಲೇ ಇದೆ. ಈ ರೀತಿಯ ರಾಜಕೀಯ ಲಾಕ್ಡೌನ್ ವಿರುದ್ಧ ವಿಪಕ್ಷಗಳ ಪ್ರತಿರೋಧ ಇಲ್ಲದೇ ಇರೋದೆ ಇಂತಹ ಅಘೋಷಿತ ಲಾಕ್ಡೌನ್ ನಿಂದ ಪ್ರಜಾಪ್ರಭುತ್ವ ಬಳಲುವಂತಾಗಿದೆ. ಚುನಾವಣೆಯಿಂದ ಗೆದ್ದ ಮಾತ್ರಕ್ಕೆ ಮೋದಿ ಹಾಗೂ ಅಮಿತ್ ಶಾ ಜೋಡಿ ದೇಶದಲ್ಲಿ ಕೆಲವು ವಿಚಾರಧಾರೆಗಳಿಗೆ ನಿರ್ಬಂಧ ವಿಧಿಸಿದ್ದು ನಿಜ. ಇದು ಭಿನ್ನಾಭಿಪ್ರಾಯಕ್ಕೆ ಮಾತ್ರವಲ್ಲದೇ ಪ್ರಜಾಪ್ರಭುತ್ವಕ್ಕೇ ವಿಧಿಸಿದ ಲಾಕ್ಡೌನ್ ಅಂತಲೇ ಇದೀಗ ಪ್ರಗತಿಪರ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಅಲ್ಲದೇ ಭಿನ್ನಾಭಿಪ್ರಾಯವೇ ತಮ್ಮ ಧ್ವನಿ ಅಂತ ಆನ್ಲೈನ್ ಗಳಲ್ಲಿ ಕರೋನಾ ಲಾಕ್ಡೌನ್ ಸಮಯದಲ್ಲೂ ಅಭಿಯಾನವೂ ಆರಂಭಿಸಿದ್ದಾರೆ.
ಕರೋನಾ ಲಾಕ್ಡೌನ್ ಮಧ್ಯೆ ಪ್ರಜಾಪ್ರಭುತ್ವಕ್ಕೆ ಹೇರಲ್ಪಟ್ಟ ಲಾಕ್ಡೌನ್ ಬಗ್ಗೆ ಜನ ಮರೆತು ಬಿಟ್ಟಾರು ಅನ್ನೋದು ಸುಲಭವಾಗಿ ಭಾವಿಸುವಂತಿಲ್ಲ. ಕಾರಣ, ಮೋದಿ-ಅಮಿತ್ ಶಾ ಜೋಡಿ ತಂದ ಸಿಎಎ, ಎನ್ಆರ್ಸಿ, ಎನ್ಪಿಆರ್ ಗಳಿಂದಾಗುವ ಅನಾಹುತಗಳ ಬಗ್ಗೆ ಪ್ರತಿಭಟನಾಕಾರರು ಕರೋನಾ ಲಾಕ್ಡೌನ್ ಗಿಂತಲೂ ಭಯಾನಕ ಅನ್ನೋದನ್ನ ಮನಗಂಡಿದ್ದಾರೆ. ದೆಹಲಿಯ ಬೀದಿಗಳಲ್ಲಿ ಮುಸ್ಲಿಂ ಮಹಿಳೆಯರಿಂದಲೇ ಸ್ಫೋಟಗೊಂಡ ಆ ಹೋರಾಟಗಳೆಲ್ಲವೂ ಇನ್ನೂ ಅಪೂರ್ಣವಾಗಿಯೇ ಉಳಿದಿದೆಯೇ ಹೊರತು, ಅದ್ಯಾವುದಕ್ಕೂ ಪೂರ್ಣ ವಿರಾಮ ಹಾಕಿಲ್ಲ.
ಇದಕ್ಕೂ ಜಾಸ್ತಿ, ದೇಶದ ಯೂನಿವರ್ಸಿಟಿಗಳ ಅಂಗಣವೂ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಆರಂಭಿಕ ವೇದಿಕೆಯಾಯಿತು. ಆ ನಂತರ ಇದು ಮಹಾನಗರಗಳ ಬೀದಿಗಳಿಗೂ ಬಂದವು. ಅಲಿಘರ್, ಅಲಹಾಬಾದ್, ಬನಾರಸ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ ಇನ್ನಿತರ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲೂ ಪ್ರತಿಭಟನೆಯ ಕಿಚ್ಚು ಹಚ್ಚಿದ್ದವು. ಆದರೆ ವಿದ್ಯಾರ್ಥಿ ಪ್ರತಿಭಟನಾಕಾರರನ್ನ ವ್ಯವಸ್ಥಿತವಾಗಿ ಕಟ್ಟಿ ಹಾಕುವ ಪ್ರಯತ್ನ ದೆಹಲಿಯಲ್ಲಿ ವ್ಯಾಪಕವಾಗಿ ನಡೆದು ಹೋಗಿದೆ. ವಿದ್ಯಾರ್ಥಿ ನಾಯಕರನ್ನ ಹೆಣ್ಣು-ಗಂಡು ಎಂದೂ ನೋಡದೇ ಅರೆಸ್ಟ್ ಮಾಡಿ ಜೈಲಿಗೆ ತಳ್ಳಲಾಗಿದೆ. ಆದರೆ ಹೀಗೆ ನಡೆದ ಹೋರಾಟಗಳೆಲ್ಲವೂ ರಾಜಕೀಯ ರಹಿತ ಅಥವಾ ಅಧಿಕಾರ ದಾಹ ರಹಿತ ಹೋರಾಟಗಳೇ ಆಗಿದ್ದವು.
ಇದೇ ಕಾರಣಕ್ಕಾಗಿ ಸಿಎಎ ವಿರೋಧಿ ಪ್ರಬಲ ಹೋರಾಟಕ್ಕೂ, ದೇಶದ ಹಲವು ಕಾಲೇಜು ಕ್ಯಾಂಪಸ್ಗಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧವಿದ್ದಂತೆ ಕಂಡು ಬರುತ್ತಿದೆ. ಕಾರಣ, ದೇಶದಲ್ಲಿ ಇಂತಹದ್ದೊಂದು ಕಾಯ್ದೆಯನ್ನ ಯಾಕೆ ವಿರೋಧಿಸಬೇಕು ಅನ್ನೋ ಸಂದೇಶ ಹೋಗಿದ್ದೇ ಇದೇ ಕ್ರಿಯಾಶೀಲ ಕ್ಯಾಂಪಸ್ ಗಳಿಂದ ಅನ್ನೋದರಲ್ಲಿ ಸಂಶಯವಿಲ್ಲ. ಇದು ಹಲವು ವಿದ್ಯಾರ್ಥಿ ನಾಯಕರನ್ನೂ ದೇಶಕ್ಕೆ ಪರಿಚಯಿಸುವಂತೆಯೂ ಮಾಡಿತ್ತು.
ಒಂದೊಮ್ಮೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ವಿದ್ಯಾರ್ಥಿಗಳ ಪಾತ್ರ ಅನ್ನೋದು ಬಹುಮುಖ್ಯವಾದುದು. ಆದರೆ ಇಂದಿನ ವಿದ್ಯಾರ್ಥಿಗಳನ್ನ ಅದೆಷ್ಟೇ ಪಠ್ಯಪುಸ್ತಕಗಳಿಗಷ್ಟೇ ಕಟ್ಟಿಹಾಕುವ ಪ್ರಯತ್ನ ಪಟ್ಟರೂ, ಹೋರಾಟದ ಕಿಚ್ಚು, ಚಳವಳಿಯ ಮನೋಭಾವದಿಂದ ವಿದ್ಯಾರ್ಥಿಗಳು ದೂರವಾಗಿಲ್ಲ ಅನ್ನೋದಕ್ಕೆ ದೆಹಲಿ ಹಾಗೂ ಇನ್ನಿತರ ಯೂನಿವರ್ಸಿಟಿಗಳೇ ಸಾಕ್ಷಿಯಾಗುತ್ತಿದೆ. ಬಹುಶಃ ಇದು ಬಲಪಂಥೀಯ ಸರಕಾರವನ್ನೂ ಕಂಗೆಡಿಸಿ ಬಿಟ್ಟಿವೆ.
ಹೋರಾಟದ ವಿಧಾನಗಳೂ ಇಂದು ಬದಲಾಗುತ್ತಿವೆ. ಆನ್ಲೈನ್ ಮೂಲಕವೂ ನಿರಂತರ ಹೋರಾಟಗಳು ನಡೆಯುತ್ತಲೇ, ಪ್ರತಿಭಟನೆಗಳಿಗೂ ಡಿಜಿಟಲ್ ಟಚ್ ಬಂದಿವೆ. ಆದರೆ ಹೀಗೆ ಹೊರಟ ವಿದ್ಯಾರ್ಥಿಗಳನ್ನ ಅದ್ಯಾವ ಮಟ್ಟಿಗೆ ಆಳುವ ಬಲಪಂಥೀಯ ಸರಕಾರ ದಮನಿಸುತ್ತಿದೆ ಅಂದರೆ, UAPA ಯಂತಹ ಕಠಿಣ ಕಾಯ್ದೆಗಳನ್ನೂ ಹೇರುತ್ತಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಉಗ್ರರ ಪಟ್ಟ ಕಟ್ಟುವ ಪ್ರಯತ್ನ ಮಾಡುತ್ತಿದೆ. ಜೊತೆಗೆ ಅವರ ಶೈಕ್ಷಣಿಕ ಹಾಗೂ ಔದ್ಯೋಗಿಕ ಭವಿಷ್ಯಕ್ಕೂ ಕಲ್ಲು ಹಾಕುವ ಷಡ್ಯಂತ್ರವನ್ನ ಸರಕಾರ ಹೆಣೆಯುತ್ತಿದೆ. ಈ ಮೂಲಕ ಹೋರಾಟವೊmದನ್ನ ಮnಸಬಹುದು ಅನ್ನೋ ಅವರ ಲೆಕ್ಕಚಾರಗಳು ಅದೆಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಕಾರಣ, ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಪ್ರಜೆಗಳು ಬಯಸಿದಷ್ಟು ವರುಷಗಳ ಕಾಲ ಮಾತ್ರ ಸರಕಾರಕ್ಕೆ ಆಡಳಿತ ನಡೆಸಲು ಸಾಧ್ಯವಾದೀತು.. ಆದರೆ ಸರಕಾರ ಬದಲಿಸುವ ಜನತಂತ್ರದ ಮುಂದೆ ಯಾವ ತಂತ್ರಗಾರಿಕೆಯೂ ನಡೆಯದು ಅನ್ನೋದು ಸತ್ಯ.
ಆದ್ದರಿಂದ ಕರೋನಾ ಲಾಕ್ಡೌನ್ ನಿಂದ ಜನ ಸಹಜ ಸ್ಥಿತಿಗೆ ಬಂದರೂ, ಪ್ರಜಾಪ್ರಭುತ್ವಕ್ಕೆ ವಿಧಿಸಲಾದ ಲಾಕ್ಡೌನ್ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈಗಾಗಲೇ ಆನ್ಲೈನ್ ಗಳ ಮೂಲಕ ಆರಂಭವಾಗಿರುವ ಹೋರಾಟಗಳು ಮುಂದೆ ಕರೋನಾ ಲಾಕ್ಡೌನ್ ಸಂಪೂರ್ಣ ತೆರವಾಗುತ್ತಲೇ ಮತ್ತೆ ಬೀದಿಗೆ ಬಂದರೂ ಅಚ್ಚರಿಯಿಲ್ಲ ಎನ್ನುವಂತಾಗಿದೆ.