ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದಂತಹ ಕರೋನಾ ಸಕ್ರಿಯ ಪ್ರಕರಣಗಳು ಇಂದು ಹಿಮ್ಮುಖ ಚಲಿಸಿದೆ. ಜೂನ್ 09 ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 3,248 ಇದ್ದಿದ್ದು ಇಂದು (ಜೂನ್ 10) 3,108 ಗೆ ಇಳಿಕೆಯಾಗಿದೆ. ಇಂದು 120 ಹೊಸ ಪ್ರಕರಣಗಳು ಕಂಡು ಬಂದಿದ್ದರೂ 257 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ. ಹಾಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.
ರಾಜ್ಯದಲ್ಲಿ ಇದುವರೆಗೂ 6,041 ಕರೋನಾ ಪಾಸಿಟಿವ್ ಕಂಡುಬಂದಿದೆ. ಒಟ್ಟು 2,862 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇಂದು ಮತ್ತೆ ಮೂರು ಮಂದಿ ಸೋಂಕಿನಿಂದ ಮೃತಪಟ್ಟಿದ್ದು ರಾಜ್ಯದಲ್ಲಿ ಕರೋನಾದಿಂದಾಗಿ 69 ಮಂದಿ ಸಾವನ್ನಪ್ಪಿದ್ದಾರೆ.

ಆದರೆ ಒಟ್ಟು ದೇಶೀಯ ಮಟ್ಟದಲ್ಲಿ ಕರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿಲ್ಲ. ಇಂದು ಮತ್ತೆ 9,987 ಮಂದಿಯಲ್ಲಿ ಕರೋನಾ ಸೋಂಕು ಕಂಡುಬಂದಿದ್ದು ಒಟ್ಟು ಕರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 77 ಸಾವಿರ ತಲುಪಿದೆ. ಇಂದು ದೇಶಾದ್ಯಂತ 271 ಮಂದಿ ಕರೋನಾದಿಂದಾಗಿ ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 7,745 ತಲುಪಿದೆ. ದೇಶದಲ್ಲಿ ಇದುವರೆಗೂ 1 ಲಕ್ಷದ 35 ಸಾವಿರ ಮಂದಿ ಕರೋನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.