ಸಂಕಷ್ಟದ ಹೊತ್ತಲ್ಲಿ ಸಂಕಷ್ಟದ ಹೊತ್ತಲ್ಲಿ ಅಸಲೀ ನಾಯಕತ್ವದ ಪರೀಕ್ಷೆಯಾಗುತ್ತದೆ ಎಂಬ ಮಾತಿನಂತೆಯೇ, ಕಠಿಣ ಕಾಲದಲ್ಲಿ ನಾಯಕನೊಬ್ಬ ಹುಟ್ಟುತ್ತಾನೆ ಎಂಬ ಮಾತೂ ಇದೆ. ಸದ್ಯ ದೇಶ ಎದುರಿಸುತ್ತಿರುವ ಕರೋನಾ ಮಹಾಮಾರಿಯ ಈ ಸಂಕಷ್ಟದ ಕಠಿಣ ಕಾಲ ಭಾರತೀಯರ ಪಾಲಿಗೆ ಆ ಎರಡೂ ಮಾತುಗಳ ಸತ್ಯದರ್ಶನ ಮಾಡಿಸುತ್ತಿದೆ.
ಒಂದು ಕಡೆ, ಅಧಿಕಾರದ ಚುಕ್ಕಾಣಿ ಹಿಡಿದು ಸೋಂಕು ತಡೆಯ ನಿಟ್ಟಿನಲ್ಲಿ ವಹಿಸಬೇಕಾದ ಮುಂಜಾಗ್ರತೆ ವಹಿಸದೇ, ಮಾಡಿಕೊಳ್ಳಬೇಕಾದ ಪೂರ್ವತಯಾರಿ ಮಾಡಿಕೊಳ್ಳದೆ, ಕೇವಲ ಘಂಟೆ ಬಾರಿಸುವ, ದೀಪ ಹಚ್ಚುವ ಟಾಸ್ಕುಗಳನ್ನು ಕೊಡುವ, ನಾವೇನೂ ಮಾಡಲಾಗದು, ಅನಿವಾರ್ಯ ಪರಿಸ್ಥಿತಿ ಎಂದು ಕ್ಷಮೆ ಕೋರುವ ನಾಯಕತ್ವ. ದಿಢೀರ್ ಲಾಕ್ ಡೌನ್ ಮುನ್ನ ಅದರಿಂದಾಗಿ ಬದುಕು ಕಳೆದುಕೊಳ್ಳುವ, ಬೀದಿ ಪಾಲಾಗುವ ಮಂದಿಯ ಬಗ್ಗೆ ಯೋಚನೆಯನ್ನೇ ಮಾಡದ, ಲಾಕ್ ಡೌನ್ ಜಾರಿ ಬಳಿಕವೂ ಬೀದಿಪಾಲಾದ ಜನರ ಜೀವ ಮತ್ತು ಹೊತ್ತಿನ ಊಟದ ಕಾಳಜಿ ವಹಿಸದ ನಾಯಕತ್ವ. ಮತ್ತೊಂದು ಕಡೆ, ಯಾವ ಅಧಿಕಾರ, ಸ್ಥಾನಮಾನವಿಲ್ಲದೆಯೂ ಸಂಕಷ್ಟದ ಹೊತ್ತಲ್ಲಿ ಜನ ಪರ ದನಿ ಎತ್ತುವ, ಸರ್ಕಾರದ ಹೊಣೆಗಾರಿಕೆ ನೆನಪಿಸುವ, ಎಲ್ಲಿ ಎಡವಿದ್ದೀರಿ ಎಂದು ಹೇಳುತ್ತಲೇ ಸರ್ಕಾರದ ಜೊತೆ ಸಂಕಷ್ಟ ಎದುರಿಸಲು ಜೊತೆಗಿದ್ದೇವೆ ಎಂಬುದು ಅಸಲಿ ನಾಯಕತ್ವ.
ಹೌದು, ಭಾರತದ ಪ್ರಧಾನ ಸೇವಕ ಮತ್ತು ಚೌಕಿದಾರ ಎಂದು ಹೇಳಿಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮೋದಿಯವರ ಬೆಂಬಲಿಗರು ಪಪ್ಪು ಎಂದು ಹೀಯಾಳಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವಿನ ವ್ಯತ್ಯಾಸದ ಚಿತ್ರಣ ಇದು.
ಕರೋನಾ ವಿರುದ್ಧ ಹೋರಾಟದ ಭಾಗವಾಗಿ ಪ್ರಧಾನಿ ಮೋದಿಯವರು ದೇಶವ್ಯಾಪಿ ಲಾಕ್ ಡೌನ್ ಘೋಷಿಸಿದ್ದು ಮಾರ್ಚ್ 24ರಂದು. ದೇಶದಲ್ಲಿ ಮೊಟ್ಟಮೊದಲ ಕರೋನಾ ಸೋಂಕು ದೃಢಪಟ್ಟಿದ್ದು ಜನವರಿ 30ರಂದು ಕೇರಳದಲ್ಲಿ. ಆದರೆ, ದೇಶದಲ್ಲಿ ವಿದೇಶಗಳಿಂದ ಆಗಮಿಸುವವರನ್ನು(ಎಲ್ಲಾ ಪ್ರವಾಸಿಗರು) ಎಲ್ಲಾ ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲು ಆರಂಭಿಸಿದ್ದು ಮಾರ್ಚ್ 4ರಿಂದ! ಆದರೆ, ಪ್ರಧಾನಿ ತಮ್ಮ ಲಾಕ್ ಡೌನ್ ಘೊಷಣೆ ವೇಳೆ, ದೇಶದಲ್ಲಿ ಮೊಟ್ಟಮೊದಲ ಪ್ರಕರಣ ದೃಢಪಡುವ ಮುಂಚೆಯಿಂದಲೇ ಎಲ್ಲಾ ವಿಮಾನನಿಲ್ದಾಣಗಳಲ್ಲಿ ತಪಾಸಣೆಗೊಳಪಡಿಸುವ ಮೂಲಕ ಭಾರತ ವಿಶ್ವದಲ್ಲೇ ಮುಂಜಾಗ್ರತೆಯ ವಿಷಯದಲ್ಲಿ ಮುಂಚೂಣಿಯಲ್ಲಿತ್ತು ಎಂದರು!
ಕರೋನಾ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ನಡೆ ಮತ್ತು ನುಡಿಯ ನಡುವಿನ ಕಂದಕದ ಕುರಿತು ಇದೊಂದು ನಿದರ್ಶನವಷ್ಟೇ. ವೈದ್ಯಕೀಯ ರಂಗವನ್ನು ಸಜ್ಜುಗೊಳಿಸುವ ವಿಷಯವಿರಬಹುದು, ವೈದ್ಯಕೀಯ ಸಿಬ್ಬಂದಿಗೆ ಜೀವರಕ್ಷಕ ಪಿಪಿಇ ಕಿಟ್ ವಿಷಯವಿರಬಹುದು, ಪರೀಕ್ಷಾ ಕಿಟ್ ವಿಷಯದಲ್ಲಿರಬಹುದು, ಲಾಕ್ ಡೌನ್ ನಿಂದಾಗಿ ಉಂಟಾದ ಬಡವರ ಸಂಕಷ್ಟ ಮತ್ತು ಉದ್ದಿಮೆ- ವ್ಯಾಪಾರಿಗಳು, ಕೃಷಿಕರ ಸಂಕಟವಿರಬಹುದು,.. ಸರ್ಕಾರ ಹೇಗೆ ಸರಿಯಾದ ಪೂರ್ವತಯಾರಿ ಇಲ್ಲದೆ, ಸಮರ್ಪಕ ಯೋಜನೆ ಇಲ್ಲದೆ, ಮುಂದಾಲೋಚನೆ ಮಾಡದೆ, ಜನರನ್ನು ಮತ್ತು ಕರೋನಾ ವಿರೋಧಿ ಸಮರದ ಮುಂಚೂಣಿ ಸೇನಾನಿಗಳನ್ನು ಅಪಾಯಕ್ಕೆ ನೂಕಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಆದರೆ, “ಕರೋನಾ ಭಾರತದ ಜನರಿಗೆ ದೊಡ್ಡ ಆಘಾತ ತರಲಿದೆ. ಸರ್ಕಾರ ಈ ಅಪಾಯದ ಬಗ್ಗೆ ಗಂಭೀರವಾಗಿಲ್ಲ. ಇದನ್ನು ನಿರ್ಲಕ್ಷಿಸಿದರೆ ನಾವು ದೊಡ್ಡ ಬೆಲೆ ತೆರಬೇಕಾಗುತ್ತದೆ” ರಾಹುಲ್ ಗಾಂಧಿ ಫೆ.7ರಂದೇ ಟ್ವೀಟ್ ಮಾಡಿದ್ದರು. ಆ ಬಳಿಕ ಅವರು ಪದೇ ಪದೇ ಆ ವಿಷಯದಲ್ಲಿ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಬೇಕಿದೆ ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸುತ್ತಲೇ ಇದ್ದರು. ಆ ಬಳಿಕ ಜನತಾ ಕರ್ಫ್ಯೂ ಮತ್ತು ಲಾಕ್ ಡೌನ್ ಘೊಷಣೆಯ ಸಂದರ್ಭದಲ್ಲಿಯೂ ಕರೋನಾ ವಿರುದ್ದದ ಹೋರಾಟದಲ್ಲಿ ಸರ್ಕಾರದ ಜೊತೆ ಪ್ರತಿಪಕ್ಷವಾಗಿ ಕೈಜೋಡಿಸುತ್ತೇವೆ ಎನ್ನುತ್ತಲೇ, ಲಾಕ್ ಡೌನ್ ನಿಂದಾಗಿ ನಷ್ಟಕ್ಕೀಡಾಗುವ, ಸಂಕಷ್ಟಕ್ಕೀಡಾಗುವವರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಣೆಯ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದರು.
ಇದೀಗ ಕಳೆದ ವಾರ ಕೂಡ ರಾಹುಲ್, “ಕರೋನಾ ವಿರುದ್ಧ ಹೋರಾಟದ ಹೊತ್ತಿನಲ್ಲಿ ರಾಜಕೀಯ ಮಾಡಲಾಗದು. ಪ್ರಧಾನಿ ಮೋದಿಯವರ ಕುರಿತು ನನಗೆ ಇರುವ ಆಕ್ಷೇಪಗಳಿಗೆ, ಅವರೊಂದಿಗಿನ ನನ್ನ ಜಗಳಕ್ಕೆ ಇದು ಸಮಯವಲ್ಲ. ಈಗ ನಾವು ರಾಜಕೀಯ ಭಿನ್ನಭಿಪ್ರಾಯ, ಜಗಳದಲ್ಲಿ ಮುಳುಗಿದರೆ ಕರೋನಾ ನಮ್ಮನ್ನು ಮುಗಿಸಿಹಾಕುತ್ತದೆ. ಹಾಗಾಗಿ, ಅಂತಹವನ್ನೆಲ್ಲಾ ಮೀರಿ ಒಟ್ಟಾಗಿ ಹೋರಾಡಬೇಕಿದೆ” ಎನ್ನುವ ಮೂಲಕ ದೇಶದ ಹಿತದ ವಿಷಯ ಬಂದರೆ ತಾವೆಷ್ಟು ವಿವೇಕದ ನಡೆ ಅನುಸರಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದೇ ಹೊತ್ತಿಗೆ, “ಸರ್ಕಾರ ಕೇವಲ ಲಾಕ್ ಡೌನ್ ಒಂದರಿಂದಲೇ ಈ ಮಹಾಮಾರಿಯನ್ನು ನಿಯಂತ್ರಿಸಿಬಿಡಬಹುದು ಎಂಬ ಭ್ರಮೆಯಲ್ಲಿರಬಾರದು. ಲಾಕ್ ಡೌನ್ ಮುಂದುವರಿದಷ್ಟೂ ದೇಶದ ಅರ್ಥವ್ಯವಸ್ಥೆ ಹಾಳಾಗುತ್ತದೆ. ಹಾಗಾಗಿ ರೋಗ ನಿಯಂತ್ರಣಕ್ಕೆ ವ್ಯಾಪಕ ವೈರಾಣು ಪರೀಕ್ಷೆಗೆ ಹೆಚ್ಚು ಒತ್ತು ನೀಡಬೇಕು. ಆ ಮೂಲಕ ಕ್ರಮೇಣ ಲಾಕ್ ಡೌನ್ ತೆರವಿನ ಅವಕಾಶ ಸೃಷ್ಟಿಸಿಕೊಳ್ಳುವುದು ಜರೂರು” ಎಂಬ ಮಾತನ್ನೂ ಹೇಳಿದ್ದರು.
ರಾಹುಲ್ ಅವರ ಈ ಹೇಳಿಕೆ ಬಹಳಷ್ಟು ಚರ್ಚೆಗೆ ಒಳಗಾಯಿತು. ಬಹುತೇಕ ಅವರ ಆ ಹೇಳಿಕೆ ಬಹಳ ಸಕಾಲಿಕ ಮತ್ತು ವಿವೇಕದ ಮಾತು ಎಂದು ಬಣ್ಣಿಸಿದರು. ಸಾಮಾಜಿಕ ಜಾಲತಾಣದಲ್ಲಿ ಬಹಳ ಜನಪ್ರಿಯವೂ ಆಯಿತು. ಆದರೆ, ಬಿಜೆಪಿಯ ಐಟಿ ಸೆಲ್ ಮತ್ತು ವಕ್ತಾರ ಸಂಬಿತ್ ಮಹಾಪಾತ್ರರಂಥವರು ಈ ಹೇಳಿಕೆಯನ್ನೂ ಅಪಹಾಸ್ಯ ಮಾಡಿದರು. ‘ಅಪಾಯಕಾರಿ ವೈರಾಣು ಮಣಿಸಲು ಕೇವಲ ಲಾಕ್ ಡೌನ್ ಒಂದೇ ಸಾಲದು’ ಎಂಬ ಹೇಳಿಕೆಯನ್ನು ತಿರುಚಿ, ‘ಲಾಕ್ ಡೌನ್ನಿಂದ ವೈರಾಣು ಮಣಿಸಲಾಗದು’ ಎಂದು ರಾಹುಲ್ ಹೇಳಿದ್ದಾರೆ ಎಂದು ಅಪಹಾಸ್ಯ ಮಾಡಲಾಯಿತು. ಆದರೆ, ರಾಹುಲ್ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಈ ಹಿಂದೆ ಭಾರತ ಲಾಕ್ ಡೌನ್ ಘೋಷಿಸಿದಾಗಲೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ರಾಪಿಡ್ ಟೆಸ್ಟ್ ಹೆಚ್ಚು ಪರಿಣಾಮಕಾರಿ, ಭಾರತ ಆ ಬಗ್ಗೆ ಹೆಚ್ಚು ಗಮನ ಹರಿಸದೇ ಹೋದರೆ ಅಪಾಯ ಕಟ್ಟಿಟ್ಟಬುತ್ತಿ ಎಂದಿತ್ತು. ರಾಹುಲ್ ಹೇಳಿಕೆಯ ಬಳಿಕವೂ ಡಬ್ಲ್ಯೂಎಚ್ಒ ಮತ್ತೊಮ್ಮೆ ಆ ಹೇಳಿಕೆಯನ್ನು ಪುನರುಚ್ಚರಿಸಿದೆ.
ರಾಹುಲ್ ಅವರ ಆ ಪ್ರಬುದ್ಧ ನಡೆಗೆ ಕಟ್ಟರ್ ಹಿಂದುತ್ವವಾದಿ ಶಿವಸೇನಾದಂತಹ ಪಕ್ಷ ಮತ್ತು ಅದರ ಮುಖವಾಣಿ ಸಾಮ್ನಾದಲ್ಲಿಯೂ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಬಿಜೆಪಿ ಮತ್ತು ಅದರ ಟ್ರೋಲ್ ಪಡೆಯ ಪ್ರಯತ್ನಗಳ ಹೊರತಾಗಿಯೂ ರಾಹುಲ್ ಹೇಳಿಕೆ, ಪಕ್ಷಾತೀತವಾಗಿ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ದೇಶ-ವಿದೇಶದ ಮಾಧ್ಯಮಗಳು ಕರೋನಾ ಕಾಲದಲ್ಲಿ ಒಟ್ಟಾರೆ ರಾಹುಲ್ ಅವರ ನಡೆಯನ್ನು ಪ್ರಸಂಶಿಸಿ ಇದು ‘ರಾಹುಲ್ 2.0’ ಎಂದೂ, ದೇಶದ ಜನ ಸಂಕಷ್ಟದಲ್ಲಿರುವಾಗ ಒಬ್ಬ ಪ್ರತಿಪಕ್ಷ ನಾಯಕ ಹೇಗೆ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು ಎಂಬುದಕ್ಕೆ ರಾಹುಲ್ ಒಂದು ಮಾದರಿ ಎಂದು ಬಣ್ಣಿಸಿದವು. ‘ರಿಟರ್ನ್ ಆಫ್ ರಾಹುಲ್’ ಎಂದು ವಿಶ್ಲೇಷಿಸುವ ಮೂಲಕ, ಕರೋನಾ ಹೊತ್ತಲ್ಲಿ ಜನರ ದನಿಯಾಗುವ ಮೂಲಕ ಮತ್ತು ಜಾಗತಿಕ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಾ ಸರ್ಕಾರದ ಗಮನ ಸೆಳೆಯುವ ಮೂಲಕ ರಾಹುಲ್, ರಾಜಕೀಯ ರಂಗದಲ್ಲಿ ಕೆಲ ಕಾಲದ ಅಜ್ಞಾತವಾಸ(ಎಐಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಿದ ಬಳಿಕ ತೆರೆಮರೆಗೆ ಸರಿದಿದ್ದ ಹಿನ್ನೆಲೆಯಲ್ಲಿ)ದಿಂದ ಮರಳಿದ್ದಾರೆ ಎಂದೂ ಹೇಳಲಾಯಿತು.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದೇಶದ ಬಡವರು ಮತ್ತು ದುರ್ಬಲ ವರ್ಗದವರ ಪಡಿತರಕ್ಕೆ ಬಳಸಲು ದಾಸ್ತಾನು ಮಾಡಿದ್ದ ಅಕ್ಕಿಯನ್ನು ಸ್ಯಾನಿಟೈಸರ್ ಉತ್ಪಾದನೆಗೆ ಬಳಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಟುಮಾತುಗಳಲ್ಲಿ ಟೀಕಿಸಿದ್ದಾರೆ. “ಭಾರತದ ಬಡವರು ಯಾವಾಗ ಜಾಗೃತರಾಗುವುದು? ನೀವು ಹಸಿವಿನಿಂದ ಸಾಯುತ್ತಿದ್ದರೆ, ನಿಮ್ಮ ಹೊಟ್ಟೆ ತುಂಬಿಸಬೇಕಾದ ಅಕ್ಕಿಯನ್ನು ಅವರು ಶ್ರೀಮಂತರು ಕೈತೊಳೆಯಲು ಸ್ಯಾನಿಟೈಸರ್ ತರಾರಿಸಲು ಬಳಸುತ್ತಿದ್ದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರೋನಾದ ಸಂಕಷ್ಟದ ಹೊತ್ತಲ್ಲಿ ಆರಂಭದಿಂದಲೂ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಸಲಹೆ- ಸಹಕಾರ ನೀಡುತ್ತಲೇ ಬಂದಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಬಡವರ ಅಕ್ಕಿಯನ್ನು ಸ್ಯಾನಿಟೈಸರ್ ತಯಾರಿಕೆಗೆ ಬಳಸುವ ಸರ್ಕಾರದ ಕ್ರಮದ ವಿರುದ್ಧ ಸಿಡಿದುಬಿದ್ದಿರುವುದಕ್ಕೆ ಕಾರಣ, ಇಷ್ಟು ದಿನ ದೇಶದ ಮುಂದಿರುವ ಸೋಂಕಿನ ಅಪಾಯ ಮತ್ತು ಅದರಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಕುರಿತ ತಮ್ಮ ಸಲಹೆಗಳಿಗೆ, ಎಚ್ಚರಿಕೆಗಳಿಗೆ ಕಿವಿಗೊಡದೆ, ತನ್ನದೇ ಆದ ಉದಾಸೀನ ಧೋರಣೆ ಮುಂದುವರಿಸಿರುವುದು ಎಂದು ವಿಶ್ಲೇಷಿಸಲಾಗುತ್ತಿದೆ.
ಅದರ ಬೆನ್ನಲ್ಲೇ ರಾಹುಲ್ ತಾವು ಕೇವಲ ಸರ್ಕಾರದ ತಪ್ಪನ್ನು ಹೇಳುವುದಷ್ಟೇ ಅಲ್ಲದೆ, ಸ್ವತಃ ಸಂಕಷ್ಟದಲ್ಲಿರುವವರ ಜೊತೆ ದೇಶದ ಆರ್ಥಿಕತೆ ಮರು ಕಟ್ಟಲೂ ಕೈಜೋಡಿಸುತ್ತೇನೆ ಎಂಬುದನ್ನು ತೋರಿಸಲೋ ಎಂಬಂತೆ, ಬುಧವಾರ ಬೆಳಗ್ಗೆ ಸಂಕಷ್ಟದಲ್ಲಿರುವ ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಪುನಃಶ್ಚೇತನದ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಯಾವೆಲ್ಲಾ ಅಂಶಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಸಲಹೆ-ಸೂಚನೆಗಳನ್ನು ಆಹ್ವಾನಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ಉದ್ಯಮ ಚಟುವಟಿಕೆ ಸ್ಥಗಿತಗೊಂಡಿದ್ದು, ಕೋಟ್ಯಂತರ ಮಂದಿ ಕಾರ್ಮಿಕರು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ, ಉದ್ದಿಮೆದಾರರು ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕಾರ್ಮಿಕರಿಗೆ ಸರ್ಕಾರದ ಸೂಚನೆಯಂತೆ ವೇತನ ನೀಡಲಾಗದ ಸ್ಥಿತಿ ಇದೆ ಎಂದಿದ್ದಾರೆ. ಆದರೆ, ಉದ್ದಿಮೆದಾರರಿಗೆ ಕಾರ್ಮಿಕರ ವೇತನ ಕಡಿತ ಮಾಡಬೇಡಿ ಎಂದು ಮನವಿ ಮಾಡಿದ್ದು ಹೊರತುಪಡಿಸಿ ಕೇಂದ್ರ ಸರ್ಕಾರ ಈವರೆಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬೆಂಬಲಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಆ ಹಿನ್ನೆಲೆಯಲ್ಲಿ ರಾಹುಲ್ ಅವರ ಈ ಹೆಜ್ಜೆ ದೇಶದ ಕಾರ್ಮಿಕರು ಮತ್ತು ಸಣ್ಣ ಉದ್ದಿಮೆದಾರರ ಪರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ಎಂದೇ ಹೇಳಲಾಗುತ್ತಿದೆ.
ರಾಹುಲ್ ಗಾಂಧಿ ಒಟ್ಟಾರೆ ಈ ಕರೋನಾ ಕಾಲಘಟ್ಟದಲ್ಲಿ ದೇಶದ ಪ್ರತಿಪಕ್ಷವೊಂದು ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಡುತ್ತಲೇ, ಕರೋನಾ ಸೋಂಕಿನ ಬಳಿಕ ದೇಶ ಎದುರಿಸಲಿರುವ ಭೀಕರ ಆರ್ಥಿಕ ಮುಗ್ಗಟ್ಟಿನ ಹೊತ್ತಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ದೂರದೃಷ್ಟಿಯ ಕೊರತೆ ಮತ್ತು ಜನಪರ ಕಾಳಜಿರಹಿತ ಕಾರ್ಪೊರೇಟ್ ಕಂಪನಿಗಳ ಪರ ಆಡಳಿತದ ಲೋಪಗಳನ್ನು ಬೆತ್ತಲು ಮಾಡುತ್ತಿದ್ದಾರೆ. ಜೊತೆಗೆ ಹೊಣೆಗೇಡಿತನ, ಕೆಲವೇ ಮಂದಿಯ ಹಿತಾಸಕ್ತಿ ರಕ್ಷಣೆಯ ನೀತಿ-ನಿಲುವುಗಳು, ಮತ್ತು ಆರ್ಥಿಕತೆಯ ಕುರಿತ ಅಂದಾದುಂದಿ ಆಡಳಿತಕ್ಕೆ ಪರ್ಯಾಯವಾಗಿ ಒಂದು ಮಾದರಿಯನ್ನು ದೇಶದ ಜನತೆಯ ಮುಂದಿಡುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷ ಗಾದಿಗೇರಲು ಕೂಡ ತೆರೆಮರೆಯಲ್ಲಿ ತಾಲೀಮು ಆರಂಭವಾಗಿದೆ. ಹೀಗೆ ಸಂಕಷ್ಟದ ಹೊತ್ತಲ್ಲಿ ಸಕ್ರಿಯವಾಗಿ ಮತ್ತು ರಚನಾತ್ಮಕವಾಗಿ ಕೆಲಸ ಮಾಡುವ ಮೂಲಕ ದೇಶದ ಜನತೆಗೆ ತಾವೆಷ್ಟು ಜನಪರ ಕಾಳಜಿಯ ಮತ್ತು ಪ್ರಬುದ್ಧತೆಯ ನಾಯಕ ಎಂಬುದನ್ನು ಮನವರಿಕೆ ಮಾಡುವ ಅವಕಾಶವಾಗಿ ಕರೋನಾ ಕಾಲವನ್ನು ಬಳಸಿಕೊಳ್ಳುತ್ತಿದ್ದು, ಎಐಸಿಸಿ ಅಧ್ಯಕ್ಷಗಾದಿಯ ತಮ್ಮ ಅರ್ಹತೆಯನ್ನು ಸಾಬೀತು ಮಾಡುತ್ತಿದ್ದಾರೆ ಎಂಬ ಮಾತುಗಳೂ ಕಾಂಗ್ರೆಸ್ ವಲಯದಲ್ಲಿವೆ.
ಅದೇನೇ ಇರಲಿ; ಸದ್ಯಕ್ಕಂತು ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸಂಕಷ್ಟದ ಹೊತ್ತಲ್ಲಿ ಜನರೊಂದಿಗೆ ನಿಲ್ಲುತ್ತಲೇ ಸರ್ಕಾರದ ಒಳ್ಳೆಯ ಕೆಲಸಗಳಿಗೆ ಬೆಂಬಲವಾಗಿ ನಿಲ್ಲುವುದು ಹೇಗೆ ಎಂಬುದಕ್ಕೆ ರಾಹುಲ್ ನಿದರ್ಶನವಾಗಿದ್ದಾರೆ ಮತ್ತು ಆ ಕಾರಣಕ್ಕೆ ಅವರನ್ನು ಪಪ್ಪು ಎನ್ನುತ್ತಿದ್ದವರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ ಎಂಬುದು ದಿಟ!