ಐದು ತಿಂಗಳ ಬಲವಂತದ ತುರ್ತು ಪರಿಸ್ಥಿತಿಯ ನಂತರ ಜಮ್ಮು ಮತ್ತು ಕಾಶ್ಮೀರ ಜನತೆ ಮೊಬೈಲ್ ನಲ್ಲಿ ಪರಸ್ಪರ ಮಾತಾಡಿಕೊಳ್ಳಬಹುದಾಗಿದೆ. ಇಂಟರ್ನೆಟ್ ನೋಡಬಹುದಾಗಿದೆ, ನೆಟ್ ಫ್ಲಿಕ್ಸ್ ನಿಂದ ಮನೋರಂಜನೆಯನ್ನು ಪಡೆಯಬಹುದು. 300 ಕ್ಕೂ ಹೆಚ್ಚು ವೆಬ್ ಸೈಟ್ ಗಳನ್ನು ಬ್ರೌಸ್ ಮಾಡಿಕೊಳ್ಳಬಹುದು. ಆದರೆ, ರಾಜಕೀಯ ಪಕ್ಷಗಳಾದ ಪಿಡಿಪಿ ಮತ್ತು ಎನ್ ಸಿ ವೆಬ್ ಸೈಟ್ ಗಳನ್ನು ನೋಡುವಂತಿಲ್ಲ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370 ನೇ ವಿಧಿಯ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದಿದ್ದರಿಂದ ಕಣಿವೆ ರಾಜ್ಯದಲ್ಲಿ ಅಶಾಂತಿ ತಲೆದೋರಬಹುದೆಂಬ ನಿರೀಕ್ಷೆಯಿಂದ ಇಡೀ ರಾಜ್ಯದಲ್ಲಿ ದೂರವಾಣಿ ಸಂಪರ್ಕವನ್ನು ಸ್ಥಗಿತಗೊಳಿಸಿತ್ತು. ಈ ಮೂಲಕ ಕೇಂದ್ರ ಸರ್ಕಾರ ಅಲ್ಲಿನ ಜನರಿಗೆ ಸಂವಹನ ಹಕ್ಕನ್ನೇ ಮೊಟಕುಗೊಳಿಸಿತ್ತು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಾರದು. ಇಂಟರ್ನೆಟ್ ಈಗಿನ ಜನರ ಜೀವನದ ಅವಿಭಾಜ್ಯ ಅಂಗದಂತಾಗಿದೆ ಮತ್ತು ಅದರ ಸೇವೆಯನ್ನು ಪಡೆಯುವುದು ಅವರ ಹಕ್ಕೂ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಇಂಟರ್ನೆಟ್ ಸೇವೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಕಣಿವೆ ರಾಜ್ಯದ ಬಗ್ಗೆ ಅಷ್ಟೇನೂ ಒಲವಿರದ ಬಿಜೆಪಿ ಸರ್ಕಾರ ಇನ್ನಷ್ಟು ದಿನ ರಾಜ್ಯದ ಜನತೆಯನ್ನು ಸಂವಹನ ಸಂಪರ್ಕದಿಂದ ದೂರ ಇಡಲು ಬಯಸಿತ್ತು. ಆದರೆ, ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಇಂಟರ್ನೆಟ್ ಮತ್ತು ದೂರವಾಣಿ ಸೇವೆಯನ್ನು ಪುನರ್ ಸ್ಥಾಪಿಸಿದೆ.
ಇದಕ್ಕೂ ಮುನ್ನ ಕೇಂದ್ರ ಸರ್ಕಾರ ತನ್ನ ಅಧಿಕಾರಿ ವರ್ಗದ ಮೂಲಕ ರಾಜ್ಯದ ಜನತೆಗೆ ಇಂಟರ್ನೆಟ್ ಮತ್ತು ದೂರವಾಣಿ ಸೇವೆಯನ್ನು ಇತ್ತ ಕೊಟ್ಟಂಗೂ ಮಾಡಬೇಕು ಅತ್ತ ಮೊಟಕುಗೊಳಿಸಿದಂತೆಯೂ ಮಾಡಬೇಕು ಎಂಬುದರ ಬಗ್ಗೆ ಅಧ್ಯಯನ ನಡೆಸುವಂತೆ ಸೂಚಿಸಿತ್ತು. ಅದರನ್ವಯ ಕಳೆದ ವಾರ ಎರಡು ಜಿಲ್ಲೆಗಳಿಗೆ ಸೀಮಿತವಾಗಿ ಈ ಸೇವೆಗಳನ್ನು ಪುನಾರಂಭಿಸಲಾಗಿತ್ತು. ಒಂದು ವೇಳೆ ಇಡೀ ರಾಜ್ಯದಲ್ಲಿ ಸೇವೆಯನ್ನು ಪುನಾರಂಭಿಸದಿದ್ದಲ್ಲಿ ಸಾರ್ವಜನಿಕ ಟೀಕೆಗೆ ಗುರಿಯಾಗಬೇಕಾಗುತ್ತದೆ ಮತ್ತು ಸುಪ್ರೀಂಕೋರ್ಟಿನಿಂದ ಆಕ್ಷೇಪ ವ್ಯಕ್ತವಾಗುತ್ತದೆ ಎಂಬುದನ್ನು ಗಮನಿಸಿ ಸೀಮಿತ ಸೇವೆಗಳನ್ನು ನೀಡಿದೆ.
ಸ್ಥಳೀಯ ಆಡಳಿತವು ಸುಮಾರು 300 ವೆಬ್ ಸೈಟ್ ಗಳನ್ನು ಅಕ್ಸೆಸ್ ಮಾಡಲು ರಾಜ್ಯದ ಜನರಿಗೆ ಅವಕಾಶ ಮಾಡಿಕೊಡಬಹುದು ಎಂದು ವರದಿ ನೀಡಿದೆ. ಆದರೆ, ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಮುಂದುವರಿಸಿದೆ. ಅಂದರೆ, ಇಡೀ ಜಗತ್ತನ್ನು ಸಂಪರ್ಕಿಸುವ ಫೇಸ್ ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ಗಳನ್ನು ಅಕ್ಸೆಸ್ ಮಾಡುವಂತಿಲ್ಲ.
ಈ ಮೂಲಕ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಒಂದು ಸೌಲಭ್ಯ ಕೊಟ್ಟು ಮತ್ತೊಂದನ್ನು ಕಿತ್ತುಕೊಂಡಂತಾಗಿದೆ. ಸರ್ಕಾರ ಪಟ್ಟಿ ಮಾಡಿರುವ ಸುಮಾರು 300 ವೆಬ್ ಸೈಟ್ ಗಳನ್ನು ಹೊರತು ಪಡಿಸಿ ಯಾವುದೇ ಸಾಮಾಜಿಕ ಮಾಧ್ಯಮದ ಅಪ್ಲಿಕೇಷನ್ ನಲ್ಲಿ ಸಂವಹನ ನಡೆಸುವಂತಿಲ್ಲ. ಕೆಲವು ನಿರ್ದಿಷ್ಟ ಸಂಸ್ಥೆಗಳು, ಅಗತ್ಯ ಸೇವೆಗಳನ್ನು ಪೂರೈಸುವ ಆಸ್ಪತ್ರೆಗಳು, ಹೊಟೇಲ್ ಗಳು ಸೇರಿದಂತೆ ಇನ್ನಿತರೆ ಸಂಸ್ಥೆಗಳಿಗೆ ಇಂಟರ್ನೆಟ್ ಸೇವೆಯನ್ನು ನೀಡಲಾಗಿದೆ.
ಶನಿವಾರ ಬೆಳಗ್ಗೆಯಿಂದ ಈ ಸೇವೆಗಳು ಪುನಾರಂಭಗೊಂಡಿವೆಯಾದರೂ ಸಾರ್ವಜನಿಕರು ಸೇವೆಗಳನ್ನು ಪಡೆಯಲು ಪರದಾಟ ನಡೆಸಬೇಕಾಯಿತು.
ಇಂಟರ್ನೆಟ್ ಸೇವೆಯು ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಮೊಬೈಲ್ ಗಳಲ್ಲಿ ಲಭ್ಯವಿವೆಯಾದರೂ ಸರ್ಕಾರ ನಿಗದಿಪಡಿಸಿದ ಅರ್ಹತೆಯನ್ನು ಹೊಂದಿದ್ದರೆ ಮಾತ್ರ ಇಂಟರ್ನೆಟ್ ಅನ್ನು ಅಕ್ಸೆಸ್ ಮಾಡಲು ಸಾಧ್ಯವಾಗುತ್ತದೆ.
ಇನ್ನು ಆಡಳಿತಾರೂಢ ಬಿಜೆಪಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ, ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷದ ವೆಬ್ ಸೈಟ್ ಗಳನ್ನು ಸರ್ಕಾರ ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಿದೆ.
ಇಂಟರ್ನೆಟ್ ಸೇವೆಯನ್ನೇನೋ ಪುನಾರಂಭ ಮಾಡಿದೆ. ಆದರೆ, ಅದರ ಸ್ಪೀಡ್ ನೋಡಿದರೆ ಇಂಟರ್ನೆಟ್ ನೋಡುವುದೇ ಬೇಡ ಎನ್ನುವಂತಿದೆ. 2 ಜಿ ಸ್ಪೀಡ್ ಗೆ ಮಾತ್ರ ಸೀಮಿತಗೊಳಿಸಿರುವ ಸರ್ಕಾರ ಈ ಮೂಲಕ ಹೆಚ್ಚು ಇಂಟರ್ನೆಟ್ ಬಳಕೆಗೆ ಪರೋಕ್ಷವಾಗಿ ಕಡಿವಾಣ ಹಾಕಿದಂತಾಗಿದೆ.
85 ಬಹುಪಯೋಗಿ ವೆಬ್ ಸೈಟ್ ಗಳು, 60 ನ್ಯೂಸ್ ವೆಬ್ ಸೈಟ್ ಗಳು, 45 ಕ್ಕೂ ಹೆಚ್ಚು ಶೈಕ್ಷಣಿಕ ಸೈಟ್ ಗಳು, 14 ಬ್ಯಾಂಕಿಂಗ್ ಸೈಟ್ ಗಳು, 12 ಸರ್ಚ್ ಇಂಜಿನ್ ವೆಬ್ ಸೈಟ್ ಗಳು, 19 ಟ್ರಾವೆಲ್ ಸೈಟ್ ಗಳು, 18 ಎಂಟರ್ ಟೇನ್ಮೆಂಟ್ ಸೈಟ್ ಗಳು ಮತ್ತು 4 ಮೇಲ್ ವೆಬ್ ಸೈಟ್ ಗಳಾದ ಯಾಹೂ, ಔಟ್ ಲುಕ್, ಜಿಮೇಲ್ ಮತ್ತು ರೆಡಿಫ್ ಅನ್ನು ಮಾತ್ರ ಅಕ್ಸೆಸ್ ಮಾಡಲು ಅವಕಾಶವಿದೆ.
ಇದಲ್ಲದೇ ಇ-ಕಾಮರ್ಸ್ ವೆಬ್ ಸೈಟ್ ಗಳಾದ ಮಿಂತ್ರಾ, ಫ್ಲಿಪ್ ಕಾರ್ಟ್, ಅಮೆಜಾನ್, ಸ್ವಿಗ್ಗಿ, ಝೊಮಾಟೋ, ಜಿಯೋಚಾಟ್, ಫ್ಯಾಬ್ ಇಂಡಿಯಾ ಮತ್ತು ಪೇಟಿಎಂಗಳಿಗೂ ಅವಕಾಶವಿದೆ. ಮನೋರಂಜನೆಗಾಗಿ ನೆಟ್ ಫ್ಲಿಕ್ಸ್, ಅಮೆಜಾನ್ ಮತ್ತು ಹಾಟ್ ಸ್ಟಾರ್ ಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಇಮೇಲ್ ಸೌಲಭ್ಯವನ್ನು ಕೊಟ್ಟಿರುವ ಸರ್ಕಾರ ಸಾಮಾಜಿಕ ಮಾಧ್ಯಮದ ಮೇಲೆ ನಿಷೇಧ ಹೇರಿದೆ. ಹಾಗಾದರೆ ದುಷ್ಕೃತ್ಯಗಳನ್ನು ಎಸಗುವವರು ಇಮೇಲ್ ಮೂಲಕ ಮಾಡಲು ಸಾಧ್ಯವಿಲ್ಲವೇ? ಇಮೇಲ್ ಮೂಲಕ ವಿಡೀಯೋ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಹಂಚಿಕೊಳ್ಳಲು ಆಗುವುದಿಲ್ಲವೇ? ಈ ಸಾಮಾನ್ಯ ಪ್ರಜ್ಞೆಯೂ ಇಲ್ಲದ ರೀತಿಯಲ್ಲಿ ಸರ್ಕಾರದ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಇಂಟರ್ನೆಟ್ ಸೇವೆ ಇಲ್ಲದಿದ್ದರೂ ಉಗ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ದುಷ್ಕರ್ಮಿಗಳ ಸಂಪರ್ಕ ಸಾಧಿಸಿ ವಿಧ್ವಂಸಕ ಕೃತ್ಯಗಳನ್ನು ಎಸಗಿರುವುದಕ್ಕೆ ಹಲವಾರು ನಿದರ್ಶನಗಳು ಇವೆ. ಹೀಗಾಗಿ ಕೇವಲ ಸಾಮಾಜಿಕ ಮಾಧ್ಯಮದ ಮೇಲೆ ನಿಷೇಧ ಹೇರಿದ ತಕ್ಷಣಕ್ಕೆ ವಿಧ್ವಂಸಕ ಕೃತ್ಯಗಳಿಗೆ, ಅಪಪ್ರಚಾರಕ್ಕೆ ಕಡಿವಾಣ ಹಾಕಲಾಗುತ್ತದೆ ಎಂಬುದು ಕೇವಲ ಭ್ರಮೆಯಾಗುತ್ತದೆ.