ಸೋಮವಾರ ನಡೆದ ಜಿಎಸ್‌ಟಿ ಮಂಡಳಿ ಸಭೆ ಯಾವುದೇ ತೀರ್ಮಾನಕ್ಕೆ ಬರಲು ವಿಫಲವಾಗಿದೆ. ಈಗಾಗಲೇ ಜಿಎಸ್‌ಟಿ ಸಂಗ್ರಹದಲ್ಲಿ ಕೊರತೆ ಆಗಿದ್ದು, ಕೇಂದ್ರದಿಂದ ಹೊಂದಿನ ಜಿಎಸ್‌ಟಿ ಬಾಕಿಯೂ ರಾಜ್ಯಗಳಿಗೆ ದೊರಕಬೇಕಿದೆ.
ಜಿಎಸ್‌ಟಿ ಭರ್ತಿ ಮಾಡುವ ಕುರಿತು ಯಾವುದೇ ಒಮ್ಮತದ ತೀರ್ಮಾನಕ್ಕೆ ಬರಲು ಎಲ್ಲಾ ರಾಜ್ಯಗಳು ಒಪ್ಪಿಗೆ ನೀಡಲಿಲ್ಲ. ಈಗಾಗಲೇ ಮೂರು ಬಾರಿ ಸಭೆ ನಡೆಸಲಾಗಿದ್ದು, 21 ರಾಜ್ಯಗಲು ತಾವೇ ಖುದ್ದಾಗಿ ಸಾಲ ಪಡೆಯಲು ಮುಂದಾಗಿವೆ. ಏನೇ ಆದರೂ, ಕೇಂದ್ರ ಸರ್ಕಾರ ಸಾಲ ಮಾಡಲು ಆಗುವುದಿಲ್ಲ, ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನು ದೇಶದಲ್ಲಿ ಮುಳುಗುತ್ತಿರುವ ಆರ್ಥಿಕತೆಯ ದೋಣಿಯನ್ನು ಮೇಲಕ್ಕೆತ್ತಲು ಕೇಂದ್ರ ವಿತ್ತ ಸಚಿವಾಲಯ ನಿರಂತರ ಪ್ರಯತ್ನ ಪಡುತ್ತಲೇ ಇದೆ. ಆದರೆ, ಈ ಹಿಂದೆ ಜಾರಿಗೆ ತಂದಿರುವ ನೋಟು ಬ್ಯಾನ್ ಹಾಗೂ ಜಿಎಸ್‌ಟಿಯ ದುರ್ಬಲ ನಿರ್ವಹಣೆಯಿಂದಾಗಿ ಭಾರತದ ಆರ್ಥಿಕತೆ ಆರಕ್ಕೇರದೇ ಮೂರಕ್ಕಿಳಿಯುತ್ತಲಿದೆ. ಈಗ ಹೊಸದಾಗಿ ಕೆಲವೊಂದು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಆರ್ಥಿಕತೆಯ ಪುನಶ್ಚೇತನಕ್ಕೆ ಪ್ರಯತ್ನಿಸುತ್ತಿದೆ.
Also Read: GST ಕೊರತೆಯ ಸಾಲ ಪಡೆಯಲು ಕೇಂದ್ರವೇ ಮುಂದಾಗುವುದು ಸೂಕ್ತ
ಹೊಸ ನಿಯಮಗಳಲ್ಲಿ ಸಾಮಾನ್ಯ ಗ್ರಾಹಕ ಬಳಕೆಯ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಹೆಚ್ಚಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಬಾರಿ ಕೇಂದ್ರ ಸರ್ಕಾರಿ ನೌಕರರಿಗೆ ಪ್ರವಾಸಿ ಭತ್ಯೆಯನ್ನು ನೀಡುವುದಿಲ್ಲ. ಇದಕ್ಕೆ ಬದಲಾಗಿ, ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಿಕೊಂಡ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಲು ಅಥವಾ ಸೇವೆಗಳನ್ನು ಪಡೆಯಲು ನಗದು ವೋಚರ್‌ಗಳನ್ನು ನೀಡುವ ಕ್ರಮಕ್ಕೆ ಕೇಂದ್ರ ಮುಂದಾಗಿದೆ.
ಇದರಿಂದಾಗಿ, ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಹೆಚ್ಚಳವಾಗಬಹುದು ಎಂಬ ಆಲೋಚನೆ ಕೇಂದ್ರ ಸರ್ಕಾರದ್ದು. ಒಟ್ಟು 73 ಸಾವಿರ ಕೋಟಿ ಮೌಲ್ಯದ ವಸ್ತುಗಳ ಖರೀದಿ ಈ ಬಾರಿ ಆಗಬಹುದು ಎಂಬುದು ಕೇಂದ್ರದ ಲೆಕ್ಕಾಚಾರ.