ಲಾಕ್ಡೌನ್, ಕರೋನಾ ಸೋಂಕು ಮತ್ತು ಆಡಳಿತದ ವೈಫಲ್ಯ ಜನರ ಬದುಕನ್ನು ದುಸ್ತರವಾಗಿಸಿದೆ. ಕರೋನಾ ಸೋಂಕು ಅತೀ ಹೆಚ್ಚು ಬಾಧಿಸಿದ ಕ್ಷೇತ್ರಗಳಲ್ಲಿ ಮೊದಲನೆಯದಾಗಿ ನಿಲ್ಲುವುದು ಶಿಕ್ಷಣ. ಏಕೆಂದರೆ, ಮಕ್ಕಳ ಸುರಕ್ಷತೆಗಾಗಿ ಶಾಲೆಗಳನ್ನು ತೆರೆಯಲು ಸಾಧ್ಯವಾಗದೆ ಸರ್ಕಾರಗಳು ಕೂಡಾ ಯಾವುದೇ ದೃಢ ನಿರ್ಧಾರ ತಾಳಲಾಗದೇ ಅತ್ಯಂತ ಗೊಂದಲಮಯ ಪರಿಸ್ಥಿತಿಯಲ್ಲಿ ಇರುವಂತಹ ಕ್ಷೇತ್ರವಿದು. ಈ ಗೊಂದಲಗಳಿಗೆ ಖಾಸಗಿ ಶಾಲೆಗಳು ಮತ್ತು ಸರ್ಕಾರ ಕಂಡುಕೊಂಡ ಹಾದಿ ʼಆನ್ಲೈನ್ ಶಿಕ್ಷಣʼ.
ಖಾಸಗಿ ಶಾಲೆಗಳ ಲಾಬಿ ಹಾಗೂ ಕರೋನಾ ಸಂಕಷ್ಟದಲ್ಲೂ ನಷ್ಟವನ್ನು ಅನುಭವಿಸಲು ಸಿದ್ದರಿಲ್ಲದ ಖಾಸಗಿ ಶಾಲೆಗಳ ಒಡೆಯರ ಆನ್ಲೈನ್ ಶಿಕ್ಷಣ ನಿರ್ಧಾರ ಎಷ್ಟರ ಮಟ್ಟಿಗೆ ಅನಾಹುತಗಳನ್ನು ಸೃಷ್ಟಿಸುತ್ತಿದೆ ಎಂದರೆ ಈಗಾಗಲೇ ಹಲವು ಜೀವಗಳು ಪ್ರತಿಷ್ಟೆಯ ಹೆಸರಿನಲ್ಲಿ ಬಲಿಯಾಗಿವೆ. ಅರಗಿಸಿಕೊಳ್ಳಲಾಗದ ವಿಚಾರವೇನೆಂದರೆ, ಎಲ್ಲರೂ ಸಮಾನರು ಎಂಬ ಮಾತನ್ನು ಕಲಿಸಿಕೊಡಬೇಕಾದ ಶಿಕ್ಷಣ ಸಂಸ್ಥೆಗಳು ಇಂದು ಉಳ್ಳವರು ಮತ್ತು ಇಲ್ಲದವರ ಮಧ್ಯೆ ಸ್ಪಷ್ಟವಾದ ಖಂದಕನ್ನು ರೂಪಿಸುತ್ತಿವೆ.
ಆನ್ಲೈನ್ ಶಿಕ್ಷಣವನ್ನು ಭಾರತದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯಗೊಳಿಸಿದ ನಂತರ ನಡೆದ ಅನಾಹುತಕಾರಿ ಘಟನೆಗಳು ಒಂದೆರಡಲ್ಲ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ದಾಖಲಿಸುವುದಾದರೆ, ಕೇರಳದ ಮಲಪ್ಪುರಂನ ಹತ್ತನೇ ತರಗತಿಯ ದಲಿತ ವಿದ್ಯಾರ್ಥಿನಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಜೂನ್ 2ರಂದು ಆತ್ಮಹತ್ಯೆ ಮಾಡಿಕೊಂಡಳು. ಕೇರಳದಲ್ಲಿ ಆನ್ಲೈನ್ ತರಗತಿಗಳು ಆರಂಭವಾದ ನಂತರ ಮನೆಯಲ್ಲಿ ಸ್ಮಾರ್ಟ್ ಟಿವಿ ಅಥವಾ ಸ್ಮಾರ್ಟ್ ಫೋನ್ ಇಲ್ಲದೇ ಆತಂಕ ಹಾಗೂ ಮುಜುಗರಕ್ಕೆ ಒಳಗಾಗಿ ಆ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಳು.
“ಮನೆಯಲ್ಲಿರುವ ಟಿವಿ ಕೆಟ್ಟು ನಿಂತಿತ್ತು. ಲಾಕ್ಡೌನ್ ಆಗಿರುವುದರಿಂದ ಕೆಲಸವಿಲ್ಲದೇ ಅದನ್ನು ಸರಿಪಡಿಸಲು ಆಗಲಿಲ್ಲ. ಸ್ಮಾರ್ಟ್ ಫೋನ್ ಖರೀದಿಸುವ ಸಾಮರ್ಥ್ಯ ನನ್ನಲ್ಲಿಲ್ಲ,” ಎಂದು ಮೃತ ವಿದ್ಯಾರ್ಥಿನಿಯ ತಂದೆ ಕಣ್ಣೀರಿಡುತ್ತಿದ್ದರು.
ಇನ್ನು ಪಶ್ಚಿಮ ತ್ರಿಪುರದ ಓರ್ವ ವ್ಯಕ್ತಿ ತನ್ನ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಲಾಗದೇ, ತನ್ನದೇ ಕುಟುಂಬದ ಎದುರು ಮುಜುಗರ ತಾಳಲಾಗದೇ ನೇಣಿಗೆ ಶರಣಾಗಿದ್ದಾರೆ. ದಿನಗೂಲಿ ಮಾಡಿ ಸಂಸಾರ ಸಾಗಿಸುತ್ತಿದ್ದ ಬಡ ವ್ಯಕ್ತಿಯ ಜೀವಕ್ಕೆ ಮುಳುವಾಗಿದ್ದು ಅವನ ಹೆಂಡತಿ ಮತ್ತು ಮಗಳು. ಮಗಳ ಆನ್ಲೈನ್ ಶಿಕ್ಷಣಕ್ಕೆ ಒಂದು ಸ್ಮಾರ್ಟ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪ್ರತೀ ದಿನ ಚುಚ್ಚು ಮಾತಿನಿಂದ ತಿವಿದು ಮಾನಸಿಕವಾಗಿ ಬಳಲಿದ್ದ ವ್ಯಕ್ತಿಗೆ ಕೊನೆಗೆ ಸಾವೇ ಗತಿ ಎಂಬಂತೆ ತೋಚಿತ್ತು.
ಅಸ್ಸಾಂನ ಚಿರಾಂಗ್ನಲ್ಲಿ ಓರ್ವ 15 ವರ್ಷದ ಹುಡುಗ ಮನೆಯ ಅಂಗಳದ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಬಡ ಕುಟುಂಬದ ಹುಡುಗನ ತಂದೆಗೆ ಸ್ಮಾರ್ಟ್ಫೋನ್ ಖರೀದಿಸುವ ಶಕ್ತಿಯಿಲ್ಲ ಎಂಬ ಸತ್ಯ ಅರಿವಾಗಿ, ತನಗಿನ್ನು ಆನ್ಲೈನ್ ತರಗತಿ ಹಾಗೂ ಪರೀಕ್ಷೆಗಳು ಕೈಗೆಟಕುವುದಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಶ್ಚಿಮ ಬಂಗಾಳದ ಹೌರಾದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಕೋಣೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಂಗ್ಲ ಮಾಧ್ಯಮ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಬಾಲಕಿ ಸ್ಮಾರ್ಟ್ಫೋನ್ ಇಲ್ಲದೇ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಿರಲಿಲ್ಲ. ಈ ರೀತಿಯ ಇನ್ನೂ ಹಲವು ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ 17 ವರ್ಷದ ಯುವತಿಯೊಬ್ಬಳು ನೇಣಿಗೆ ಶರಣಾದಳು. ಯಾರು ಉತ್ತರ ನೀಡುತ್ತಾರೆ ಈ ಸಾವುಗಳಿಗೆ? ಆನ್ಲೈನ್ ಶಿಕ್ಷಣ ನೀಡಲು ಉತ್ತೇಜಿಸಿದ ಸರ್ಕಾರವೇ? ಇಲ್ಲ ಆನ್ಲೈನ್ ಶಿಕ್ಷಣ ನಮ್ಮಲ್ಲಿ ಕಡ್ಡಾಯ ಎಂದು ಅಬ್ಬರಿಸಿ ಬೊಬ್ಬಿರಿದು ಅದನ್ನೇ ಪ್ರತಿಷ್ಟೆಯಾಗಿ ನೋಡುತ್ತಿರುವ ಶಿಕ್ಷಣ ಸಂಸ್ಥೆಗಳೇ?
ಎಲ್ಲಿಗೆ ತಲುಪಿತು ಶಿಕ್ಷಣದ ಗುಣಮಟ್ಟ? ಎಲ್ಲಿದೆ ಸಾಮಾಜಿಕ ನ್ಯಾಯ? ಸಮಾಜದಲ್ಲಿನ ಅಂತರವನ್ನು ನಿರ್ಮೂಲನೆ ಮಾಡಬೇಕೆಂಬ ಉದ್ದೇಶದಿಂದ ಎಲ್ಲರಿಗೂ ಉಚಿತ ಶಿಕ್ಷಣ ನೀಡುವ ಸರ್ಕಾರದ ಸಾರ್ವಜನಿಕ ಶಿಕ್ಷಣ ಅಭಿಯಾನದ ಆಶಯ ಈಡೇರಿತೆ? ಯಾವಾಗ ಸರ್ಕಾರ ಈ ಕುರಿತು ತನ್ನ ಗಮನ ಹರಿಸುವುದು?
ಭಾರತವು ಅಂತರ್ಜಾಲ ಬಳಕೆಯಲ್ಲಿ ಚೀನಾದ ನಂತರ ಎರಡನೇ ಸ್ಥಾನದಲ್ಲಿದ್ದರೂ, ಕೇವಲ 50% ಭಾರತೀಯರಿಗಷ್ಟೇ ಇಂಟರ್ನೆಟ್ ಸೌಲಭ್ಯ ಸಿಗುತ್ತಿದೆ. ಅಂದರೆ 130 ಕೋಟಿ ಜನರಲ್ಲಿ ಕೇವಲ 65 ಕೋಟಿ ಜನರಿಗೆ ಅಂತರ್ಜಾಲ ವ್ಯವಸ್ಥೆಯಿದೆ. ಉಳಿದ 50% ಜನರಿಗೆ ಅಂತರ್ಜಾಲದ ವ್ಯವಸ್ಥೆಗಳ ಕುರಿತ ಜ್ಞಾನವೇ ಇಲ್ಲದಿರುವಾಗ, ಕಡ್ಡಾಯ ಆನ್ಲೈನ್ ಶಿಕ್ಷಣ ಜಾರಿಗೆ ತಂದು ಬೆವರ ಜೀವ ಹಿಂಡುವ ಅಗತ್ಯವಿದೆಯೇ?
2019ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಅಂತರ್ಜಾಲ ಸೌಲಭ್ಯ ಹೊಂದಿರುವ ರಾಜ್ಯ ಎಂದರೆ ಅದು ದೆಹಲಿ (69%). ಅತೀ ಕಡಿಮೆ ಅಂತರ್ಜಾಲ ಸಂಪರ್ಕ ಹೊಂದಿರುವ ರಾಜ್ಯ ಒರಿಸ್ಸಾ (25%). ಕರ್ನಾಟಕದಲ್ಲಿ ಕೇವಲ 39% ಜನರಿಗೆ ಸಮರ್ಪಕವಾದ ಅಂತರ್ಜಾಲ ಸಂಪರ್ಕ ಸಿಗುತ್ತಿದೆ. ಹೀಗಿರುವಾಗ ಆನ್ಲೈನ್ ಶಿಕ್ಷಣ ಯಾವ ಮಟ್ಟದಲ್ಲಿ ಸಮರ್ಪಕವಾಗಿ ಸಿಗಲಿದೆ ಎಂಬ ಅಂಶವನ್ನು ಸರ್ಕಾರ ಗಮನಿಸಲೇಬೇಕಾಗಿದೆ.
ಹೀಗಾಗಿ, ಪ್ರತೀ ಬಾರಿಯೂ ಆನ್ಲೈನ್ ಶಿಕ್ಷಣವನ್ನು ಬೆಂಬಲಿಸುವ ಮುನ್ನ, ಆನ್ಲೈನ್ ಶಿಕ್ಷಣವು ಸಮಾಜದಲ್ಲಿ ಉಂಟು ಮಾಡುತ್ತಿರುವ ಖಂದಕವನ್ನು ಅಳಿಸುವತ್ತ ಗಮನಹರಿಸಬೇಕಿದೆ. ಶಿಕ್ಷಣವು ಸಮಾಜದಲ್ಲಿರುವ ತೊಡಕುಗಳನ್ನು ನಿವಾರಿಸಬೇಕೇ ಹೊರತು, ಹೊಸತೊಂದು ಸಮಸ್ಯೆಯನ್ನು ಸೃಷ್ಟಿಸಬಾರದು. ಸರ್ವರೂ ಸಮಾನರು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೇ ಹೊರತು, ಆರ್ಥಿಕ ಮಟ್ಟವನ್ನು ಅಳೆಯುವಂತಹ ಸಾಧನವಾಗಬಾರದು. ಮೊದಲೇ ಕರೋನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯೆಯೂ ಒಂದು ಹೊರೆ ಎಂದು ಅನ್ನಿಸಲು ಶುರುವಾದರೆ ಮತ್ತೆ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವು ಮರೀಚಿಕೆಯಾಗುವುದರಲ್ಲಿ ಎರಡು ಮಾತಿಲ್ಲ.