ಕಾನ್‌ಪುರ ಜಿಲ್ಲೆಯ ಬಿಕ್ರು ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್ ದುಬೆ ಎಂಬ ಕುಖ್ಯಾತ ಗ್ಯಾಂಗ್‌ಸ್ಟರ್‌ನನ್ನು ಬಂಧಿಸಲು ಡಿಎಸ್‌ಪಿ ನೇತೃತ್ವದ ತಂಡ ತೆರಳಿದೆ.
ಪೋಲಿಸರ ಆಗಮನ ನಿರೀಕ್ಷಿಸಿದ್ದ ಹಂತಕರು ರಸ್ತೆ ಮಧ್ಯೆ ಬುಲ್ಡೋಝರ್ ಯಂತ್ರ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆದಿದ್ದಾರೆ. ಪೋಲಿಸರು ವಾಹನದಿಂದ ಕೆಳಗಿಳಿದೊಡನೆ ಕಟ್ಟಡದ ಮೇಲಿನಿಂದ ಗುಂಡಿನ ದಾಳಿ ನಡೆಸಿದ್ದಾರೆ. ಪೋಲಿಸರು ಪ್ರತಿದಾಳಿ ನಡೆಸಿದರೂ, ಹಂತಕರು ಮೇಲ್ಮಹಡಿಯಲ್ಲಿದ್ದರಿಂದ ಹೆಚ್ಚಿನ ದಾಳಿ ಪೋಲಿಸರ ಮೇಲೆ ನಡೆದಿದೆ. ತತ್ಪರಿಣಾಮ ಡಿಎಸ್‌ಪಿ ದೇವೇಂದ್ರ ಮಿಶ್ರಾ, ಎಸ್‌ಐಗಳಾದ ಮಹೇಶ್ ಯಾದವ್, ಅನೂಪ್ ಕುಮಾರ್, ಬಾಬುಲಾಲ್ ಹಾಗೂ ಕಾನ್ಸ್ಟೇಬಲ್ ಸುಲ್ತಾನ್, ರಾಹುಲ್, ಜಿತೇಂದ್ರ ಮತ್ತು ಬಬ್ಲೂ ಮೃತಪಟ್ಟಿದ್ದಾರೆ. ಜತೆಗಿದ್ದ ಇತರೆ ಐದು ಪೋಲಿಸ್ ಸಿಬ್ಬಂದಿಗಳೂ ಗುಂಡೇಟು ತಗುಲಿ ಗಾಯಗೊಂಡಿದ್ದಾರೆ.
ಪೋಲಿಸರ ಮೇಲೆ ದಾಳಿ ನಡೆಸಿರುವ ತಂಡ ಬಳಿಕ ಸ್ಥಳದಿಂದ ಕಾಲ್ಕಿತ್ತಿದೆ. ಸ್ಥಳ ಪರಿಶೀಲನೆ ನಡೆಸಿದ ಪೋಲಿಸರು ಕಟ್ಟಡದ ಟೆರೇಸಿನಲ್ಲಿ AK 47 ಬಂದೂಕಿನ ಖಾಲಿ ಶೆಲ್‌ಗಳು ದೊರೆಕಿರುವುದಾಗಿ ಹೇಳಿದ್ದಾರೆ. ಶೆಲ್‌ಗಳ ಆಧಾರದಲ್ಲಿ AK 47 ಬಳಸಿ ಪೋಲಿಸರನ್ನು ಹತ್ಯೆಗೈಯಲಾಗಿದೆ ಎಂದು ಅಂದಾಜಿಸಲಾಗಿದೆ.
ಹಲವು ಹೈ ಪ್ರೊಫೈಲ್ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ವಿಕಾಸ್ ದುಬೆ, ರಾಜಕೀಯ ನೇತಾ, ಉದ್ಯಮಿಗಳನ್ನು ಸೇರಿದಂತೆ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ತನ್ನದೇ ಸ್ವಂತ ಪಡೆ ಕಟ್ಟಿಕೊಂಡಿದ್ದ ದುಬೆ ಮೇಲೆ ಅಪಹರಣ, ದರೋಡೆ, ಕೊಲೆ ಸೇರಿದಂತೆ ವಿವಿಧ ಪೋಲಿಸ್ ಸ್ಟೇಷನ್‌ಗಳಲ್ಲಿ ಸುಮಾರು 60 ಕ್ಕೂ ಅಧಿಕ ಪ್ರಕರಣಗಳಿವೆ. 2001 ರಲ್ಲಿ, ಶಿವ್ಲಿ ಪೊಲೀಸ್ ಠಾಣೆಯೊಳಗೆ ನುಗ್ಗಿ ಆಗ ರಾಜ್ಯ ಸಚಿವರಾಗಿದ್ದ ಸಂತೋಷ್ ಶುಕ್ಲಾ ಅವರನ್ನು ಕೊಲೆ ಮಾಡಿದ ಆರೋಪ ಕೂಡ ದುಬೆ ಮೇಲೆ ಇದೆ.