ಭಾರತದ ಆರ್ಥಿಕತೆ ನೆಲಕಚ್ಚಿದ್ದು, ಉದ್ಯಮವು ಮೇಲೆ ಏಳಲಾರದೆ ನೆಲದೊಳಗೆ ಹೂತು ಹೋಗುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಮೊದಲೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಭಾರತದಲ್ಲಿ ಕರೋನಾ ಸೋಂಕು ವಿಪರೀತವಾದ ಬಳಿಕ ಭಾರತದ ಆರ್ಥಕತೆ ಒಡೆದ ಮಡಕೆಯಲ್ಲಿ ನೀರಿಟ್ಟಂತೆ ಆಗಿದೆ. ಆದರೆ ಇದೇ ಪರಿಸ್ಥಿತಿ 1991ರಲ್ಲೂ ಸೃಷ್ಠಿಯಾಗಿತ್ತು. ಆದರೆ ಅದನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದು ಹೇಗೆ..? ದೇಶದ ಇತಿಹಾಸದಲ್ಲಿ ನೆನಪಿನಲ್ಲಿ ಇಡುವಂತಹ ಕೆಲಸ ಮಾಡಿದ್ದು ಹೇಗೆ ಎನ್ನುವ ಬಗ್ಗೆ ಸ್ವತಃ ಆರ್ಥಿಕ ತಜ್ಞನಾಗಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಎಳೆಎಳೆಯಾಗಿ ಹಂಚಿಕೊಂಡಿದ್ದಾರೆ.
ದಿವಂಗತ ಮಾಜಿ ಪ್ರಧಾನಿ ಪಿ. ವಿ ನರಸಿಂಹರಾವ್ ಅವರ ಜನ್ಮ ಶತಮಾನೋತ್ಸವದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಪಿ.ವಿ ನರಸಿಂಹರಾವ್ ಈ ಮಣ್ಣಿನ ಶ್ರೇಷ್ಠ ಮಗ. ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ ಎನ್ನಬಹುದು ಎಂದಿದ್ದಾರೆ. ರಾವ್ ಪ್ರಧಾನಿಯಾಗಿದ್ದಾಗ ನಾನು ಹಣಕಾಸು ಸಚಿವನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಮೊದಲ ಬಾರಿಗೆ ಬಜೆಟ್ ಮಂಡಿಸಲು ಮುಕ್ತ ಅವಕಾಶ ಸಿಕ್ಕಿತ್ತು ಎಂದಿದ್ದಾರೆ. ಇನ್ನೂ ಆ ಬಜೆಟ್ನಲ್ಲಿ ರಾಜೀವ್ ಗಾಂಧಿ ಅವರ ಕನಸನ್ನು ನನಸು ಮಾಡುವ ಬಗ್ಗೆ ಸಾಕಷ್ಟು ಅಂಶಗಳನ್ನು ಸೇರಿಸಿದ್ದೆ. ಬಜೆಟ್ ಭಾಷಣದಲ್ಲೂ ನಾನೂ ಅದನ್ನೇ ಹೇಳಿದ್ದೆ. ರಾಜೀವ್ ಗಾಂಧಿ ನಮ್ಮ ಜೊತೆಗಿಲ್ಲ, ಆದರೆ ಅವರ ಕನಸು ನಮ್ಮ ಜೊತೆಗೆ ಜೀವಿಸುತ್ತದೆ ಎಂದಿದ್ದಾರೆ. ಅವರ 21ನೇ ಶತಮಾನದ ದೂರದೃಷ್ಟಿಯನ್ನು ಆ ಬಜೆಟ್ನಲ್ಲಿ ತಂದಿದ್ದೆವು ಎಂದಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪಿ.ವಿ ಎನ್.ರಾವ್ ಅವರ ಜನ್ಮಶತಮಾನೋತ್ಸವ ಉದ್ಘಾಟನೆ ಬಳಿಕ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಡಾ. ಮನಮೋಹನ್ ಸಿಂಗ್, 1991ರಲ್ಲಿ ಮಂಡಿಸಿದ ಬಜೆಟ್ ದೇಶದ ದಿಕ್ಕನ್ನು ಹಲವು ರೀತಿಯಲ್ಲಿ ಬದಲಾಯಿಸಿತು. ಭಾರತದ ಭದ್ರ ಬುನಾದಿಗೆ 29 ವರ್ಷದ ಹಿಂದಿನ ಬಜೆಟ್ ನಾಂಧಿ ಹಾಡಿತು ಎಂದು ನೆನಪಿಸಿಕೊಂಡಿದ್ದಾರೆ. ಆರ್ಥಿಕ ಸುಧಾರಣೆ ಹಾಗೂ ಉದಾರಿಕರಣಕ್ಕೆ ಅನುಕೂಲವಾಯಿತು. ಆರ್ಥಿಕತೆ ಏನು ಸಮಸ್ಯೆ ಆಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ಸರಿ ದಾರಿಗೆ ತರುವ ಸ್ವಾತಂತ್ರ್ಯ ನೀಡಿದ್ದರು. ರಾಜೀವ್ ಗಾಂಧಿ ಅವರ ಹಾಗೆ ಪಿ.ವಿ ನರಸಿಂಹರಾವ್ ಕೂಡ ಬಡವರ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು ಎಂದಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
1991ರ ಸಮಯದಲ್ಲಿ ಭಾರತದ ಆರ್ಥಿಕತೆಯೂ ಬಹಳ ಸಂಕಷ್ಟಕ್ಕೆ ಸಿಲುಕಿತ್ತು. ವಿದೇಶ ವಿನಿಮಯ ಬಿಕ್ಕಟ್ಟು ಎದುರಾಗಿತ್ತು. ಎರಡು ವಾರಗಳ ರಫ್ತು ಮೊತ್ತಕ್ಕೆ ವಿದೇಶ ವಿನಿಮಯ ಮೀಸಲು ಕುಸಿದಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಪ್ರಪಾತಕ್ಕೆ ಕುಸಿದು ಬೀಳುವ ಪರಿಸ್ಥಿತಿಯಲ್ಲಿತ್ತು. 1991ರಲ್ಲಿ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳ ಕಠಿಣ ನಿರ್ಧಾರಗಳನ್ನ ತುರ್ತಾಗಿ ತೆಗೆದುಕೊಳ್ಳುವ ಅಗತ್ಯ ಇತ್ತು. ರಾಜಕೀಯವಾಗಿ ಇದು ಸವಾಲಿನ ಕೆಲಸ ಆಗಿತ್ತು. ಯಾಕೆಂದರೆ ಪಿ.ವಿ ನರಸಿಂಹರಾವ್ ಸರ್ಕಾರ ಅಲ್ಪಮತದ ಸರ್ಕಾರವಾಗಿತ್ತು. ಎಲ್ಲರನ್ನೂ ಓಲೈಸುವುದು ತಲನೋವಿನ ಕೆಲಸ ಆಗಿತ್ತು. ಆದರೆ, ನರಸಿಂಹರಾವ್ ಎಲ್ಲಾ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರ್ಥಿಕ ಸುಧಾರಣೆಗಳ ಬಗ್ಗೆ ಮನವೊಲಿಸುವಲ್ಲಿ ಯಶಸ್ವಿಯಾದರು ಎಂದಿದ್ದಾರೆ.
ಭಾರತಕ್ಕೆ ಕಠಿಣ ಹಾದಿ ಆರಂಭವಾಗಿತ್ತು. ಆದರೆ, ಭಾರತ ಜಾಗೃತವಾಗಿದೆ ಎಂದು ಇಡೀ ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಸಮಯ. ಆ ಬಳಿಕ ನಡೆದಿದ್ದು ಈಗ ಇತಿಹಾಸ. ಇದನ್ನು ಸ್ಮರಿಸುವಾಗ ನರಸಿಂಹ ರಾವ್ ಅವರನ್ನು ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ ಎಂದು ಕರೆಯುವುದು ಸರಿ ಎಂದಿದ್ದಾರೆ. ಪಿ.ವಿ ನರಸಿಂಹರಾವ್ ಅವರು ಆರ್ಥಿಕ ಸುಧಾರಣೆಗಳನ್ನು ಮಾತ್ರ ತರಲಿಲ್ಲ. ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಹೆಜ್ಜೆಗಳನ್ನು ಇಟ್ಟಿದ್ದರು. ಆಧುನಿಕ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಡಾ ಮನಮೋಹನ್ ಸಿಂಗ್ ಹೇಳಿದ್ದಾರೆ.

ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಪಿ.ವಿ ನರಸಿಂಹರಾವ್ ಮುಂದಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಭಾರತವನ್ನು ಪ್ರತಿನಿಧಿಸಲು ಭಾರತೀಯ ನಿಯೋಗದ ನಾಯಕನಾಗಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಿಯೋಜಿಸಿದ್ದರು. ಅದರಲ್ಲಿ ಯಶಸ್ವಿಯಾಗಲೂ ಕೂಡ ಸಾಧ್ಯವಾಯಿತು. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರನ್ನು ಕಾರ್ಮಿಕ ಮಾನದಂಡಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ನೀಡಲಾಗಿತ್ತ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ. ನರಸಿಂಹ ರಾವ್ ಅವರು ಭಾಷಾ ಪಾಂಡಿತ್ಯದ ಬಗ್ಗೆ ಮಾತನಾಡಿದ್ದು, 10 ಭಾರತೀಯ ಭಾ಼ೆಗಳು ಹಾಗೂ ನಾಲ್ಕು ವಿದೇಶಿ ಭಾಷೆಗಳಲ್ಲಿ ಪಾರಂಗತರಾಗಿದ್ದರೆ ಮತ್ತು ಸ್ವತಃ ವಿದ್ವಾಂಸರಾಗಿದ್ದರು. ಕಂಪ್ಯೂಟರ್ ಬಳಸುವುದರಲ್ಲಿ ಪ್ರವೀಣನಾಗಿದ್ದರ ಜೊತೆಗೆ ಪ್ರೋಗ್ರಾಮಿಂಗ್ ಕೂಡ ಮಾಡುತ್ತಿದ್ದರು. ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಸಿದ್ಧರಿರುತ್ತಿದ್ದರು ಎಂದು ಸ್ಮರಿಸಿದ್ದಾರೆ.