ಆನ್ಲೈನ್ ಎಜುಕೇಷನ್ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರ ನೀಡಿರುವ ಅನುಮತಿಯಂತೆ 1-10ನೇ ತರಗತಿವರೆಗೆ ಆನ್ ಲೈನ್ ತರಗತಿಗಳು ನೀಡಲು ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಒದಗಿಸಲಾಗಿದೆ. ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಬೇಕೆ ಎಂದು ಪಾಲಕರೊಂದಿಗೆ ಸಂವಹನ ನಡೆಸಿ ನಿರ್ಧರಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ 30 ನಿಮಿಷಗಳಿಗೆ ಮೀರದಂತೆ ವಾರಕ್ಕೆ ಒಂದು ದಿನ ಆನ್ ಲೈನ್ ತರಗತಿ ಹಾಗೂ ಮಾರ್ಗದರ್ಶನ ನೀಡಲು ನೀಡಲು ತೀರ್ಮಾನಿಸಲಾಗಿದೆ. ತರಗತಿ ವೇಳೆ ವಿದ್ಯಾರ್ಥಿಗಳ ಪಾಲಕರ ಉಪಸ್ಥಿತಿ ಇರಬೇಕು ಎಂದು ಹೇಳಲಾಗಿದೆ.
ಇನ್ನು 1-5 ತರಗತಿ ವಿದ್ಯಾರ್ಥಿಗಳಿಗೆ 30-45 ನಿಮಿಷ 2 ಅವಧಿ ಮೀರದಂತೆ ಎರಡು ದಿನಕ್ಕೊಮ್ಮೆ, ಗರಿಷ್ಟ 3 ದಿನ ಸಿಂಕ್ರನೈಸ್ ವಿಧಾನದಲ್ಲಿ ಆನ್‌ಲೈನ್ ತರಗತಿ ನೀಡಲು ತೀರ್ಮಾನಿಸಲಾಗಿದೆ. 6-8 ತರಗತಿ ವಿದ್ಯಾರ್ಥಿಗಳಿಗೆ 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಸಿಂಕ್ರನೈಸ್ ವಿಧಾನದಲ್ಲಿ ಆನ್‌ಲೈನ್ ತರಗತಿಗಳನ್ನು ನೀಡಲಾಗುವುದು. 9-10 ವರೆಗಿನ ವಿದ್ಯಾರ್ಥಿಗಳಿಗೆ 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಸಿಂಕ್ರನೈಸ್ ವಿಧಾನದಲ್ಲಿ ಆನ್ ಲೈನ್ ಶಿಕ್ಷಣ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೇಖರ್ ಆದೇಶ ಮಾಡಿದ್ದಾರೆ.
ಕರೋನಾ ಸೋಂಕು ನಿಯಂತ್ರಣ, ಶಾಲೆ ಕಾಲೇಜುಗಳನ್ನು ಆರಂಭಿಸುವ ಕುರಿತು ತಜ್ಞ ವೈದ್ಯರ ಸಮಿತಿ ವರದಿ ನೀಡುವವರೆಗೆ ಸೀಮಿತ ಅವಧಿಗೆ ಈ ಆನ್‌ಲೈನ್ ಶಿಕ್ಷಣ ನೀಡುವಂತೆ ಆದೇಶಿಸಲಾಗಿದೆ.
ಅಲ್ಲಿಯವರೆಗೆ ಆನ್‌ಲೈನ್ ಶಿಕ್ಷಣ ನೀಡುವಂತೆ ಹೈಕೋರ್ಟ್ ಕೂಡಾ ಇಂಗಿತ ವ್ಯಕ್ತಪಡಿಸಿದೆ. ಅಲ್ಲದೆ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ವಿಧಿಸದಂತೆ ತಾಕೀತು ಮಾಡಲಾಗಿದೆ. ಆನ್‌ಲೈನ್ ಶಿಕ್ಷಣಕ್ಕೆ ತಗುಲುವ ವೆಚ್ಚವನ್ನು ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು ಆದೇಶದಲ್ಲಿ ತಿಳಿಸಲಾಗಿದೆ.